ಬಿಸಿಯೂಟ ನೌಕರರಿಗೆ ಭದ್ರತೆ ನೀಡಿ
ಕ.ಪ್ರ.ವಾರ್ತೆ , ಚಿಕ್ಕಬಳ್ಳಾಪುರ , ಆ. 25
ಶಾಲೆಗಳಲ್ಲಿ ಬಿಸಿಯೂಟ ನೌಕರರು ಯಾವುದೇ ಭದ್ರತೆಯಿಲ್ಲದೇ ಕಾರ್ಯ ನಿರ್ವಹಿಸುತ್ತ ಅನಾಹುತಗಳಿಗೆ ಸಿಲುಕಿಕೊಳ್ಳುತ್ತಿದ್ದರೂ ಗಮನಹರಿಸುವಂತಹ ಕೆಲಸವಾಗುತ್ತಿಲ್ಲ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ 2 ನೇ ಜಿಲ್ಲಾ ಸಮ್ಮೇಳವನ್ನುದ್ದೇಶಿಸಿ ಅವರು ಮಾತನಾಡಿದರು.
ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಅನಾಹುತ ಸಂಭವಿಸಿದರೆ ಯಾರು ನೋಡುವುದಿಲ್ಲ, ಅದೇ ವಿಮಾನ ಅಪಘಾತದಲ್ಲಿ ಮೃತರಾದರೆ ಸರ್ಕಾರ 70-80 ಲಕ್ಷ ಪರಿಹಾರ ನೀಡುತ್ತದೆ. ಇತ್ತೀಚೆಗೆ ಗೌರಿಬಿದನೂರಿನಲ್ಲಿ ಮಹಿಳೆಯೊಬ್ಬರು ಬಿಸಿಯೂಟ ತಯಾರಿಸುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದು ಇದುವರೆಗೂ ಸರ್ಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಸರ್ಕಾರದ ನೌಕರರಿಗೆ ನಿವೃತ್ತಿ ವೇತನ ದೊರೆಯುತ್ತದೆ, ಆದರೆ, ಬಿಸಿಯೂಟ ನೌಕರರಿಗೆ ಯಾವುದೇ ಭದ್ರತೆಯಿಲ್ಲ, ಕನಿಷ್ಠ ವೇತನವೂ ಇಲ್ಲ ಎಂದರು.
ಬಿಸಿಯೂಟ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದಲ್ಲಿ ಶಿಕ್ಷಣ ಹದಗೆಡುತಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಬಡವರ ಮಕ್ಕಳು ಶಾಲೆಗೆ ಬರಬೇಕು, ಅಪೌಷ್ಟಿಕತೆ ಹಾಗೂ ಹಸಿವಿನಿಂದ ಹಲವು ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂದು ಸರ್ಕಾರ ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಜಾರಿ ಮಾಡಿತು. ಅದಕ್ಕೆ ಬೇಕಾದ ಹಣವನ್ನು ಸರ್ಕಾರ ಬಜೆಟ್ನಲ್ಲಿ ಮೀಸಲಿಟ್ಟಿದ್ದು, ಆದರೆ ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಬಗ್ಗೆ ಯೋಚಿಸಲಿಲ್ಲ ಎಂದು ಆರೋಪಿಸಿದರು.
1948 ರಲ್ಲಿ ಕೇಂದ್ರ ಸರ್ಕಾರ ಕನಿಷ್ಠ ವೇತನ ಕಾಯ್ದೆ ರೂಪಿಸಿದೆ. ಕನಿಷ್ಠ ಕೂಲಿ, ಉದ್ಯೋಗ ಭದ್ರತೆ, ನಿವಣತ್ತಿ ವೇತನ ನೀಡಬೇಕು ಎಂದು ಕಾನೂನು ರಚನೆ ಮಾಡಿದೆ.ಆದರೆ, ಕಾರ್ಯ ರೂಪಕ್ಕೆ ಬಂದಿಲ್ಲ. 2005 ರಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಸೇರಿಕೊಂಡ ಕಾರ್ಮಿಕರಿಗೆ 300 ರು. ವೇತನ ನೀಡಲಾಗುತ್ತಿತ್ತು. ಆದರೆ ಹೋರಾಟದ ಹಿನ್ನೆಲೆಯಲ್ಲಿ ಇತ್ತೀಚೆಗೆ 1 ಸಾವಿರ ಮಾಡಲಾಗಿದೆ. ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿದ ಬಜೆಟ್ನಲ್ಲಿ ಬಿಸಿಯೂಟ ನೌಕರರಿಗೆ ಪ್ರಯೋಜನವಾಗುತ್ತದೆ ಎಂಬ ಆಶಾ ಭಾವನೆಯನ್ನು ಹೊಂದಿದ್ದೆವು. ಆದರೆ ಒಂದು ಬಿಡಿಗಾಸನ್ನು ಮೀಸಲಿಡಲಿಲ್ಲ ಎಂದು ಟೀಕಿಸಿದರು.
ಇಂದು ಹಲವಡೆ ಮಕ್ಕಳ ಹಾಜರಾತಿ ಕಡಿಮೆ ಇದೆ ಎಂದು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದರಿಂದ ಶಾಲೆಯ ಶಿಕ್ಷಕರು ಬೇರೆಡೆಗೆ ವರ್ಗಾವಣೆಯಾಗುತ್ತಾರೆ. ಅಲ್ಲಿನ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 500-600 ಮಂದಿ ಕೆಲಸ ಕಳೆದುಕೊಂಡಿದ್ದಾರೆ ಎಂದ ಅವರು,ಅಕ್ಷರ ದಾಸೋಹ ನೌಕರರು ಸಂಘಟಿತರಾಗಿ ಉದ್ಯೋಗ ಭದ್ರತೆ, ಕನಿಷ್ಠ ವೇತನಕ್ಕಾಗಿ ಹೋರಾಟ ಮಾಡಬೇಕು ಎಂದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ, ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರಾಜಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಾತಿಮಸ್ತಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಿದೇವಮ್ಮ, ನಾಗರತ್ನ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚನ್ನರಾಯಪ್ಪ, ಮುಖಂಡ ಬಿ.ಎನ್. ಮುನಿಕೃಷ್ಣಪ್ಪ, ಮಂಜುಳ, ವೆಂಕಟಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

