ಸುಧಾಕರ್ ಬೆಂಬಲಿಗರ ವಿಜಯೋತ್ಸವ
ಚಿಂತಾಮಣಿ: ನಿಡುಗುರ್ಕಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭ್ಯರ್ಥಿಗಳು ಸ್ಪರ್ಧಿಸಿ ಮಾಜಿ ಶಾಸಕ ಎಂ.ಸಿ. ಸುಧಾಕರ್ ಬೆಂಬಲಿಗರು ಬಹುಮತ ಪಡೆದು ವಿಜಯೋತ್ಸವ ಆಚರಿಸಿದರು. ತಾಲೂಕಿನ ನಿಡುಗುರ್ಕಿ ಹಾಲು ಉತ್ಪಾದಕರ ಸಹಕಾರ ಸಂಘ ನಿ. 2013-14ರಿಂದ 2017-18ನೇ ಸಾಲಿನ ಅವಧಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಜಿ ಶಾಸಕ ಸುಧಾಕರ್ ಬೆಂಬಲಿತ ಸದಸ್ಯರು ಗೆದ್ದು ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಇದರಿಂದ ಗ್ರಾಮದಲ್ಲಿ ಮಾಜಿ ಶಾಸಕರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಚುಣಾವಣಾ ಅಧಿಕಾರಿಗಳಾಗಿ ಬಿ.ಆರ್. ಮಾಯಣ್ಣ, ಲಕ್ಷ್ಮಿನಾರಾಯಣ್, ಪ್ರದೀಪ್ ಕಾರ್ಯ ನೆರವೇರಿಸಿದರು. ಮುಖಂಡರಾದ ಮಂಜುನಾಥ್, ಸೊಣ್ಣಪ್ಪ,ಪಿಳ್ಳೇಗೌಡ, ಆಂಜಪ್ಪ, ವೆಂಕಟರೆಡ್ಡಿ, ನಾರಾಯಣಸ್ವಾಮಿ, ನರಸಿಂಹಯ್ಯ, ಶ್ರೀನಿವಾಸ್,ನಾಗರಾಜ್, ಮಂಜುನಾಥ್, ಮುನಿವೆಂಕಟಪ್ಪ, ಮೂರ್ತಿ, ಶ್ರೀನಿವಾಸ್, ಕೃಷ್ಣಪ್ಪ, ಗೋವಿಂದಪ್ಪ, ಸೀನಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ತಾಯಿ ಸಾವಿಗೆ ಜಿಗುಪ್ಸೆಗೊಂಡು
ಕುಡಿದು ಬಾವಿಗೆ ಬಿದ್ದು ಸಾವು
ಟೇಕಲ್: ತಾಯಿ ಮರಣದಿಂದ ಜಿಗುಪ್ಸೆ ಹೊಂದಿದ ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟೇಕಲ್ ಸಮೀಪದ ಮಿಟ್ಟಿಗಾನಹಳ್ಳಿಯಲ್ಲಿ ಜರುಗಿದೆ. ಮೃತ ವ್ಯಕ್ತಿ ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ ಸೀಗೇನಹಳ್ಳಿಯ ನಿವಾಸಿ ರಾಮಣ್ಣ (40) ಎಂದು ಗುರುತಿಸಲಾಗಿದೆ. ಮಿಟ್ಟಿಗಾನಹಳ್ಳಿಯ ನಿವಾಸಿ ಡಿಶ್ ವೆಂಕಟೇಶಪ್ಪನ ಸಂಬಂಧಿಯಾದ ಮೃತ ರಾಮಣ್ಣ ಇವರ ಬಳಿಯಲ್ಲಿಯೆ ಕಲ್ಲು ಕೆಲಸ ನಿರ್ವಹಿಸುತ್ತಿದ್ದ. ಗುರುವಾರವಷ್ಟೆ ಈತನ ತಾಯಿ ಗಂಗಮ್ಮ ಸತ್ತ ಸುದ್ದಿಯನ್ನು ವೆಂಕಟೇಶಪ್ಪನ ಹೆಂಡತಿ ಕುಟುಂಬದವರು ಈತನಿಗೆ ತಿಳಿಸಿ ಅಲ್ಲಿಗೆ ಬರುವಂತೆ ಹೇಳಿದ್ದರು. ಆದರೆ ತಾಯಿಯ ಸಾವಿನಿಂದ ಮನನೊಂದು ಕಂಠಪೂರ್ತಿ ಕುಡಿದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬದ ಮೂಲಗಳು ಹಾಗೂ ಪೊಲೀಸನವರು ತಿಳಿಸಿದ್ದಾರೆ. ಮಾಸ್ತಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಸ್ಥಳಕ್ಕೆ ಮಾಸ್ತಿ ಪಿಎಸ್ಐ ಸಲೀಂ ನಧಾಫ್ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವವನ್ನು ನೀಡಲಾಯಿತು.
ಬೀಗ ಮುರಿದು ಲಕ್ಷಾಂತರ ಬೆಲೆ ಚಿನ್ನಾಭರಣ ಕಳವು
ಕೆಜಿಎಫ್: ಮನೆ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಮೆಲ್ ನಗರದಲ್ಲಿ ನಡೆದಿದೆ. ಬೆಮೆಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್ನಗರದ 3ನೇ ಅಡ್ಡ ರಸ್ತೆಯ ನಿವಾಸಿ ಎನ್.ಆರ್.ಶ್ರೀನಿವಾಸ್ ಎಂಬುವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಕುಟುಂಬ ಸಮೇತ ಬೆಂಗಳೂರಿಗೆ ಹೋಗಿದ್ದರು. ಮಾರನೇ ದಿನ ರಾತ್ರಿ 9.30ಕ್ಕೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಬೆಡ್ರೂಂನಲ್ಲಿಟ್ಟಿದ್ದ ಸೂಟ್ಕೇಸ್ನ್ನು ಹೊಡೆದು ಸುಮಾರು 7.96 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, ಚಿನ್ನದ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಶ್ರೀನಿವಾಸ್ ಅವರು ಬೆಮೆಲ್ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸ್ ರಕ್ಷಣಾಧಿಕಾರಿ ಡಾ. ರೋಹಿಣಿಕಟೋಚ್ ಸೆಪಟ್, ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಭೆ ಇಂದು
ಗುಡಿಬಂಡೆ: ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಆ.27ರ ಬೆಳಿಗ್ಗೆ 11 ಗಂಟೆಗೆ ಲೋಕಾಯುಕ್ತರಿಂದ ಕುಂದುಕೊರತೆಗಳ ಸಭೆ ನಡೆಯಲಿದ್ದು, ತಾಲ್ಲೂಕಿನ ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ ಧೋರಣೆ ತೋರುತ್ತಿದ್ದಲ್ಲಿ ಅಥವಾ ಹಣಕ್ಕಾಗಿ ಒತ್ತಾಯಿಸುತ್ತಿದ್ದಲ್ಲಿ ಅಂತಹವಹರ ವಿರುದ್ಧ ದೂರನ್ನು ಸಲ್ಲಿಸಬಹುದೆಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಚಿಂತಾಮಣಿ: ಸರ್ಕಾರದಿಂದ ಸಿಗುವ ಸವಲತ್ತನ್ನು ಬಳಸಿಕೊಂಡು ಸಮಾಜದಲ್ಲಿ ಎಲ್ಲರಂತೆ ನಾವು ಎಂದು ಆತ್ಮಸ್ಥೈರ್ಯದಿಂದ ಬಾಳಬೇಕೆಂದು ತಾಪಂ ಅಧ್ಯಕ್ಷೆ ಮೀನಾ ಶ್ರೀರಾಮರೆಡ್ಡಿ ಕರೆ ನೀಡಿದರು.
ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಅಂಗವಿಕಲರ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಅಂಗವಿಕಲರಿಗೆ ತ್ರಿಚಕ್ರ ಸೈಕೆಲ್ಗಳನ್ನು ವಿತರಿಸಿ ಮಾತನಾಡಿದರು.
ನಂತರ ಮಾತನಾಡಿದ ತಾಪಂ ಉಪಾಧ್ಯಕ್ಷ ಸುಲ್ತಾನ್ ಷರೀಫ್ ಅಂಗವಿಕಲರ ಸೌಲತ್ತುಗಳು ಅರ್ಹರಿಗೆ ದೊರೆತಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ಅಸಮಾಧಾನ: ಪ್ರೋಟೋ ಕಾಲ್ ಪ್ರಕಾರ(ಶಿಷ್ಟಾಚಾರ) ಯಾವುದೇ ಸರ್ಕಾರಿ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಸಭೆಗೆ ಕರೆಯುವುದು ಅಥವಾ ಆಹ್ವಾನಿಸುವುದು ಸಾಮಾನ್ಯ. ವಿರೋಧ ಪಕ್ಷದ ತಾಪಂ ಆಡಳಿತ ಇರುವುದರಿಂದ ಬೇಕೆಂತಲೇ ಕಾರ್ಯಕ್ರಮವನ್ನು ಪಂಚಾಯ್ತಿ ಆಡಳಿತವೇ ನಡೆಸಿರುವುದರಿಂದ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಯಾವುದೇ ಅನುದಾನವಾಗಲಿ ಅಥವಾ ಸಭೆ ಸಮಾರಂಭಗಳಾಗಲಿ ಸ್ಥಳೀಯ ಶಾಸಕರನ್ನು ಆಹ್ವಾನಿಸುವುದು ಗೌರವವೆಂಬುದನ್ನು ಅಧಿಕಾರಿಗಳು ಮರೆಯಬಾರದೆಂದು ತಿಳಿಸಿದ್ದಾರೆ.
ಮಗು ಶಸ್ತ್ರಚಿಕಿತ್ಸೆಗೆ ನೆರವಾಗಲು ಮೊರೆ
ಕೋಲಾರ: ಇಪ್ಪತ್ತು ದಿನಕ್ಕೊಮ್ಮೆ ರಕ್ತ ಬದಲಿಸಬೇಕಾದ ತಲ್ಸ್ಸೇಮಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಸುಮಾರು 4 ವರ್ಷದ ಮಗುವಿನ ಶಸ್ತ್ರಚಿಕಿತ್ಸೆಗೆ 12 ಲಕ್ಷ ಅಗತ್ಯವಿದ್ದು ಸಹಾಯಕ್ಕಾಗಿ ಮಗುವಿನ ತಾಯಿ ಸುನೀತ ಮನವಿ ಮಾಡಿದ್ದಾರೆ. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪೇಟೆ ತಾಲೂಕಿನ ಕೂಡುಗಲ್ ಗ್ರಾಮದ ಬಡರೈತ ಕುಟುಂಬದ ಬಂದಿರುವ ತಮ್ಮ ಮಗು ತಲ್ಸ್ಸೇಮಿಯಾ ಎಂಬ ರೋಗದಿಂದ ನರಳುತ್ತಿದ್ದು, ಪ್ರತಿ 20 ದಿನಗಳಿಗೊಮ್ಮೆ ರಕ್ತ ಬದಲಿಸಲು ಮತ್ತು ಔಷಧಿಗಳಿಗೆ ತಮಗೆ 4ರಿಂದ 5 ಸಾವಿರ ವೆಚ್ಚವಾಗುತ್ತಿದ್ದು, ರಾಜ್ಯದಲ್ಲಿ ರಕ್ತ ಸಿಗದಿದ್ದ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಚಿತ್ತರೂ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ರಕ್ತ ಪಡೆದು ನೀಡಲಾಗುತ್ತಿದೆ ಎಂದರು. ಇತ್ತೀಚೆಗೆ ಚೆನ್ನೈನ ಅಪೋಲೋ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಶಸ್ತ್ರಚಿಕಿತ್ಸೆಯೊಂದನ್ನು ಮಾಡಿದರೆ ಸರಿಹೋಗಲಿದೆ ಎಂದು ತಿಳಿಸಿದ್ದಾರೆ. ತಮ್ಮ ಮೊದಲನೇ ಮಗಳಿಗೆ 9 ವರ್ಷ ಆಗಿದ್ದು, ಅವಳದ್ದೇ ಬೋನ್ ಮೇರೋ ವರ್ಗಾವಣೆ ಮಾಡಲು ಉದ್ದೇಶಿಸಲಾಗಿದೆ ಎಂದ ಅವರು, ಇದಕ್ಕೆ 12 ಲಕ್ಷ ರು.ಗಳ ಬೇಕಿದೆ. ಯಾರಾದರೂ ಆರ್ಥಿಕ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. ಸಿಂಡಿಕೇಟ್ ಬ್ಯಾಂಕಿನಲ್ಲಿ ಖಾತೆ ತೆರೆಯಲಾಗಿದ್ದು, ದಾನ ಮಾಡುವವರು ಖಾತೆ ನಂ.220173683 ಐಎಫ್ಸಿ ಕೋಡ್ 0001500. ಅಥವಾ ಚೆನ್ನೈ ಅಪೋಲೋ ಸ್ಪೆಷಲಿಸ್ಟ್ ಆಸ್ಪತ್ರೆ ರುಚಿತ 2447910 ಖಾತೆಗೆ ಹಣ ಜಮಾ ಮಾಡುವಂತೆ ಮನವಿ ಮಾಡಿದರು. ಹೆಚ್ಚಿನ ವಿವರಗಳಿಗೆ ಅಪೋಲೋ ಆಸ್ಪತ್ರೆಯನ್ನು 044-33151294 ಗೆ ಸಂಪರ್ಕಿಸಲು ಕೋರಿದ್ದಾರೆ. ಸುನೀತ ತಂದೆ ಮುನಿಸ್ವಾಮಿ, ವಿಹಿಂಪ ಮುಖಂಡ ಲೋಕೇಶ್, ದೇವೇಂದ್ರ ಇದ್ದರು.
'ಸ್ಥಳೀಯ ಬ್ಯಾಂಕ್ ಪಾತ್ರ ಮಹತ್ವ'
ಶಿಡ್ಲಘಟ್ಟ: ಯಾವುದೇ ದೇಶ ಅಭಿವೃದ್ಧಿಯಾಗಬೇಕಾದರೆ ಸ್ಥಳೀಯ ಬ್ಯಾಂಕುಗಳ ಪಾತ್ರ ಮಹತ್ವ ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ವಲಯ ವ್ಯವಸ್ಥಾಪಕ ರವೀಂದ್ರನಾಥ್ ಹೇಳಿದರು. ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಏರ್ಪಡಿಸಿದ್ದ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು 2007 ರಲ್ಲಿ 434 ಶಾಖೆಗಳಿದ್ದ ಬ್ಯಾಂಕು ಇಂದು 602 ಶಾಖೆಗಳಲ್ಲಿ ವ್ಯವಹರಿಸುತ್ತಿದೆ. ಒಟ್ಟು 13838 ಕೋಟಿಗಳ ವ್ಯವಹಾರವನ್ನು ಬ್ಯಾಂಕು ನಡೆಸುತ್ತಿದ್ದು, 50 ಲಕ್ಷ ಗ್ರಾಹಕರನ್ನು ಹೊಂದಿದೆ. ಶಿಡ್ಲಘಟ್ಟ ಶಾಖೆಯಲ್ಲಿ ಈಗ 35 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ ಎಂದರು. ಶಾಖೆಯ ವ್ಯವಸ್ಥಾಪಕ ವೆಂಕಟರಾಮಪ್ಪ ಮಾತನಾಡಿ ನಮ್ಮ ಬ್ಯಾಂಕಿನ ವ್ಯಾಪ್ತಿಗೆ ಬರುವಂತಹ ಯಾವುದೇ ಗ್ರಾಮಸ್ಥರು ಮಧ್ಯವರ್ತಿಗಳ ಮುಖಾಂತರ ಬಾರದೆ, ನೇರವಾಗಿ ಬಂದು ಸೌಲಭ್ಯಗಳನ್ನು ಪಡೆಯಬೇಕು. ಬ್ಯಾಂಕಿನಿಂದ ಎ.ಟಿ.ಎಂ. ಕಾರ್ಡ್ಗಳನ್ನು ಪಡೆದು ಸದುಪಯೋಗ ಪಡಿಸಿಕೊಳ್ಳಬಹುದು ಎಂದರು. ವಿವಿಧ ಯೋಜನೆಗಳಡಿಯಲ್ಲಿ ಸಾಲವನ್ನು ಮಂಜೂರು ಮಾಡಿರುವ ಫಲಾನುಭವಿಗಳಿಗೆ ಸಾಲದ ಪತ್ರಗಳನ್ನು ವಿತರಣೆ ಮಾಡಲಾಯಿತು. ವಿವಿಧ ಗ್ರಾಮಗಳ ಬ್ಯಾಂಕಿನ ಗ್ರಾಹಕರು, ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು.
ಚುಡಾಯಿಸಿದರೆ ರೌಡಿ ಪಟ್ಟಿಗೆ: ಜಯಚಂದ್ರ
ತುಮಕೂರು: ಮಹಿಳೆಯರನ್ನು ಚುಡಾಯಿಸಿದ ಪುರುಷರನ್ನು ಮುಲಾಜಿಲ್ಲದೆ ರೌಡಿ ಪಟ್ಟಿಗೆ ಸೇರಿಸಲಾಗುವುದು ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಎಚ್ಚರಿಕೆ ನೀಡಿದ್ದಾರೆ. ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಾಟಾಗಿದ್ದ ಕಾಂಗ್ರೆಸ್ ಸರ್ಕಾರ ಶತದಿನೋತ್ಸವ ಪೂರೈಸಿದ ಹಿನ್ನೆಲೆಯಲ್ಲಿ ನೂರು ದಿನ ನೂರಾರು ನಿರ್ಣಯ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು. ಮಹಿಳೆಯರ ಬಗ್ಗೆ ಅಸಭ್ಯವಾಗಿ ವರ್ತಿಸುವ ಪುರುಷರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಜಯಚಂದ್ರ, ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಪೊಲೀಸರಿಗೆ ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

