ಕೋಲಾರ

ಗ್ರಾಪಂ ಮುಂದೆ ರಸ್ತೆತಡೆ ಪ್ರತಿಭಟನೆ

Published On :

ಶಿಡ್ಲಘಟ್ಟ: ಹೊಸ ಪಡಿತರ ಚೀಟಿಗಳ ನೀಡಿ ಮೂರು ತಿಂಗಳು ಕಳೆದರೂ ಇದುವರೆಗೂ ಪಡಿತರ ಕೊಟ್ಟಿಲ್ಲ, ಹಲವು ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ವಾಹನಗಳನ್ನು ತಡೆದು ರಸ್ತೆತಡೆ ನಡೆಸಿದರು.
ತಾಲೂಕಿನ ಹಂಡಿಗನಾಳ ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದ ಮುಂಭಾಗದಲ್ಲಿ ರಸ್ತೆತಡೆ ನಡೆಸಿ, ಮೂರು ತಿಂಗಳ ಹಿಂದೆ ಫೋಟೊ, ಬಯೋ ಮೆಟ್ರಿಕ್, ಮಾಡಿಸಿ ಹೊಸ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದರೂ ಇದುವರೆಗೂ ಆಹಾರಧಾನ್ಯಗಳನ್ನು ವಿತರಣೆ ಮಾಡಿಲ್ಲ. ಹೊಸದಾಗಿ ಅರ್ಜಿಗಳನ್ನು ಸಲ್ಲಿಸಿ ಫೋಟೊ ತೆಗೆಸಿರುವ ಕುಟುಂಬಗಳಿಗೂ ಪಡಿತರ ಚೀಟಿಗಳನ್ನು ವಿತರಣೆ ಮಾಡಿಲ್ಲ. ಗ್ರಾಮದ ಅನೇಕ ಬಡ ಕುಟುಂಬದವರು ಕೂಲಿ ಕೆಲಸವನ್ನು ಬಿಟ್ಟು ಪಡಿತರ ಚೀಟಿಗಳಿಗೋಸ್ಕರ ತಾಲೂಕು ಕಚೇರಿಗೆ ಅಲೆಯುವಂತಾಗಿದೆ, ಪ್ರತಿದಿನವೂ ಸಮಜಾಯಿಷಿ ಹೇಳಿಕಳುಹಿಸುತ್ತಿರುವ ಅಧಿಕಾರಿಗಳು, ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳಕ್ಕೆ ಬೇಟಿ ನೀಡಿದ ಗ್ರಾಮಾಂತರ ಠಾಣೆಯ ಪಿ.ಎಸ್.ಐ.ಪಿ.ಬಿ.ಹನುಮಂತಪ್ಪ, ಇದು ರಾಜ್ಯದೆಲ್ಲೆಡೆ ಆಗಿರುವಂತಹ ಸಮಸ್ಯೆಯಾಗಿದ್ದು, ಹಂತ ಹಂತವಾಗಿ ಸಮಸ್ಯೆಯನ್ನು ಪರಿಹಾರ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಿಮಗೆ ಆಗಿರುವ ಸಮಸ್ಯೆಗೆ ಬೇರೆಯವರಿಗೆ ಸಂಚಾರಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ, ತಹಸೀಲ್ದಾರರ ಬಳಿಯಲ್ಲಿ ಚರ್ಚೆ ನಡೆಸಿ ಆಗಿರುವ ತೊಂದರೆಯನ್ನು ಸರಿಪಡಿಸಿಕೊಳ್ಳಿ ಎಂದು ಮನವೊಲಿಸಿ ರಸ್ತೆತಡೆಯನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಕೆರಳಿದ ಹನುಮಂತಪ್ಪ
ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಹೋದ ಗ್ರಾಮಾಂತರ ಠಾಣೆಯ ಪಿ.ಎಸ್.ಐ.ಹನುಮಂತಪ್ಪ ಅವರ ಮುಂದೆ ಗ್ರಾಪಂ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಯನ್ನು ಗ್ರಾಮಸ್ಥನೊಬ್ಬ ನಿಂದನೆ ಮಾಡಿದ್ದರಿಂದ ಕೆರಳಿದ ಪಿಎಸ್.ಐ.ಹನುಮಂತಪ್ಪ, ನಿಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿಕೊಳ್ಳಬೇಕಾದರೆ, ಹೋರಾಟ ಮಾಡಿ, ಸಂಬಂಧಿಸಿದ ಅಧಿಕಾರಿಗೆ ಮನವಿಯನ್ನು ಕೊಡಿ, ಯಾವ ಅಧಿಕಾರಿಯಿಂದ ನಿಮಗೆ ಅನ್ಯಾಯವಾಗಿದೆಯೋ ಅಂತಹ ಅಧಿಕಾರಿಯ ಮೇಲೆ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿ. ಅದನ್ನು ಬಿಟ್ಟು ಅಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಹೋರಾಟ, ಪ್ರತಿಭಟನೆಗಳ್ನು ಮಾಡುವ ಬಗ್ಗೆ ನಮಗೂ ಅರ್ಜಿ ಕೊಡಿ, ನಿಮಗೆ ರಕ್ಷಣೆ ಕೊಡುತ್ತೇವೆ. ಇದೇ ರೀತಿ ಮುಂದುವರೆದರೆ ಕಾನೂನಿನ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಏರುಧ್ವನಿಯಲ್ಲಿ ಎಚ್ಚರಿಸಿದ ನಂತರ ತಾಲೂಕು ಕಚೇರಿಯ ಮುಂದೆ ಸಂಬಂಧಿಸಿದ ಅಧಿಕಾರಿಗಳ ಹತ್ತಿರ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣವೆಂದು ರಸ್ತೆತಡೆ ವಾಪಸು ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.