ಕೋಲಾರ

ಶವಸಂಸ್ಕಾರಕ್ಕೆ ಎಪಿಎಂಸಿ, ಎಚ್ಡಿಕೆ ಬಳಗದಿಂದ ಆರ್ಥಿಕ ಸಹಾಯ

Published On :

ಕ.ಪ್ರ.ವಾರ್ತೆ ಕೋಲಾರ ಆ.27
ತಾಲೂಕಿನ ಲಕ್ಷೀಸಾಗರ ಗೇಟ್ ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಗೆ ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದ ಬಡ ಕುಟುಂಬಕ್ಕೆ ಕೋಲಾರ ಎಪಿಎಂಸಿ ಆಡಳಿತ ಮಂಡಳಿ, ವರ್ತಕರ ಸಂಘ ಹಾಗೂ ಎಚ್.ಡಿ.ಕುಮಾರಸ್ವಾಮಿ ಬಳಗದಿಂದ 1 ಲಕ್ಷದ 5 ಸಾವಿರ ರು.ಗಳನ್ನು ನೀಡಲಾಯಿತು.
ಎಪಿಎಂಸಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರು ಕೋಲಾರ ಎಸ್.ಎನ್.ಆರ್ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕಡೆಯವರಿಗೆ ಸಾಂತ್ವನ ಹೇಳಿದರಲ್ಲದೆ, ಹಣವಿಲ್ಲದೆ ಶವಗಳನ್ನು ಸಾಗಿಸಲು ಪರದಾಡುತ್ತಿದ್ದ ಕಲ್ವಮಂಜಲಿ ಗ್ರಾಮದ ಮೃತರ ಕಡೆಯವರಿಗೆ ತಲಾ 15 ಸಾವಿರದಂತೆ ಒಟ್ಟು 1 ಲಕ್ಷದ 5 ಸಾವಿರ ರು.ಗಳನ್ನು ನೀಡಿದರು.
ತಾಲೂಕಿನ ಲಕ್ಷ್ಮೀಸಾಗರ ಗೇಟ್ ಬಳಿ ಸೋಮವಾರ ಸಂಜೆ ಲಾರಿ-ಟೆಂಪೋ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದರು.
ಕೂಲಿ ಕಾರ್ಮಿಕರಾದ ಕಲ್ವಮಂಜಲಿ ಗ್ರಾಮದ ವೆಂಕಟಮ್ಮ ಮತ್ತು ಮುನಿಯಪ್ಪ ಎಂಬುವರ ಪುತ್ರ ಹನುಮಂತ ಅವರ ಮದುವೆ ನಿಶ್ಚಿತಾರ್ಥಕ್ಕೆಂದು ಹೊಸಕೋಟೆಯ ಗೇರಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿತ್ತು.
ಮೃತಪಟ್ಟವರ ಪೈಕಿ ವರನ ತಂದೆ-ತಾಯಿ, ಅಕ್ಕ ಹಾಗೂ ಇಬ್ಬರು ಮಕ್ಕಳು, ಅಣ್ಣಂದಿರು ಮತ್ತು ಸ್ನೇಹಿತರು ಇದ್ದಾರೆ. ಇವರ ಅಂತ್ಯಕ್ರಿಯೆ ಮಾಡಲು ಹಣವಿಲ್ಲದೆ ಕಣ್ಣೀರು ಹಾಕುತ್ತಿದ್ದ ಸಂಬಂಧಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರಾದರೂ ಯಾವುದೇ ಪರಿಹಾರ ಸಿಗದಿದ್ದರಿಂದ ದುಃಖ ತಪ್ತರು ಕಣ್ಣೀರು ಸುರಿಸುತ್ತಿದ್ದರು.
ಈ ವಿಷಯವನ್ನರಿತ ಎಪಿಎಂಸಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಅವರು ತಕ್ಷಣ ಎಪಿಎಂಸಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಿ ಆರ್ಥಿಕ ಸಹಾಯಕ್ಕೆ ಮುಂದಾದರಲ್ಲದೆ ಎಪಿಎಂಸಿ ವರ್ತಕರು ಹಾಗೂ ಎಚ್.ಡಿ.ಕುಮಾರಸ್ವಾಮಿ ನೆಚ್ಚಿನ ಬಳಗದಿಂದ ಹಣ ಸಂಗ್ರಹಣೆ ಮಾಡಿ ಮೃತ ದೇಹಗಳ ಶವಸಂಸ್ಕಾರ ಮಾಡಲು ಹಣ ಒದಗಿಸಿದರು.
ಅದೇ ರೀತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳಿಗೂ ಹಣಕಾಸಿನ ನೆರವನ್ನು ಒದಗಿಸುವುದಾಗಿ ಎಪಿಎಂಸಿ ಅಧ್ಯಕ್ಷೆ ಭರವಸೆ ನೀಡಿದರು.
ಎಪಿಎಂಸಿ ಉಪಾಧ್ಯಕ್ಷ ವಡಗೂರು ರಾಮು, ನಿರ್ದೇಶಕರಾದ ಬಣಕನಹಳ್ಳಿ ನಟರಾಜ್, ವರ್ತಕರಾದ ಸತೀಶ್, ಪುಟ್ಟರಾಜು, ಮಂಜುನಾಥರೆಡ್ಡಿ, ವೆಂಕಟೇಶ್, ನರಸಾಪುರ ಗ್ರಾ.ಪಂ.ಉಪಾಧ್ಯಕ್ಷ ಹರೀಶ್ ಗೌಡ, ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಅಧ್ಯಕ್ಷ ಶ್ರೀಕಾಂತ ಗೌಡ, ಪ್ರಸಾದ್, ನಂಜುಂಡಗೌಡ, ವೇಮಗಲ್ ಪ್ರವೀಣ್ ಇದ್ದರು.

ಮೃತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಕೋಲಾರ:
ತಾಲೂಕಿನ ನರಸಾಪುರ ಸಮೀಪದ ಲಕ್ಷ್ಮೀಸಾಗರ ಗೇಟ್ ಬಳಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ವಿಶೇಷ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಮೃತರ ಕಡೆಯವರು ಮಂಗಳವಾರ ಜಿಲ್ಲಾ ಆಸ್ಪತ್ರೆಯ ಶವಾಗಾರ ಮುಂದೆ ಧರಣಿ ನಡೆಸಿದರು. ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟು 14 ಮಂದಿ ಗಾಯಗೊಂಡಿದ್ದು ಮೃತರ ಸಂಬಂಧಿಕರು ಕೂಲಿ ಕಾರ್ಮಿಕರು ಆಗಿರುವುದರಿಂದ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ಮೃತರ ಕಡೆಯವರಿಗೆ ಸಾಂತ್ವನ ಹೇಳಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ಒಂದೇ ಕುಟುಂಬದ 7 ಮಂದಿ ಮೃತರಾಗಿರುವುದರಿಂದ ಹಾಗೂ ಸತ್ತವರು ಪರಿಶಿಷ್ಟರಾಗಿರುವುದರಿಂದ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತೇನೆಂದು ಭರವಸೆ ನೀಡಿದರು.
ಕೋಲಾರ ತಹಸೀಲ್ದಾರ್ ಸೌಮ್ಯ ಎನ್. ಗೌಡ, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸುಧಾಕರ್, ಎಸ್ಸೈ ದೇವೇಂದ್ರಪ್ಪ ಈ ಸಂದರ್ಭದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.