ಕೋಲಾರ

'ಕೃಷ್ಣ-ರಾಮನ ಜೀವನ ಶೈಲಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲಿ'

Published On :

ಕನ್ನಡಪ್ರಭ ವಾರ್ತೆ, ಗುಡಿಬಂಡೆ, ಆ. 28
ಪುರಾಣಗಳಲ್ಲಿ ಮಹಾನ್ ಪುರುಷರೆಂದು, ದೈವಾಂಶ ಸಂಭೂತರಾದ ಶ್ರೀ ಕೃಷ್ಣ ಹಾಗೂ ಶ್ರೀರಾಮ ನವರ ಜೀವನ ಶೈಲಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಬೇಕೆಂದು ಮಾಜಿ ಶಾಸಕ ಎನ್. ಸಂಪಂಗಿ ತಿಳಿಸಿದರು.
ಪಟ್ಟಣದ ಗಾಯತ್ರಿ ಪ್ರಸಾಧ ಭವನದಲ್ಲಿ ಸ್ಥಳೀಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ, ಚಿಕ್ಕಬಳ್ಳಾಪುರದ ಪರಮಹಂಸ ಪ್ರತಿಷ್ಟಾನ ಟ್ರಸ್ಟೆ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಾಂಸ್ಕೃತಿಕ ಸಮಾರಂಭವನ್ನು ಆಯೋಜಿಸಿ ಅವರು ಮಾತನಾಡಿದರು.
ಆಧುನಿಕತೆ ಬೆಳೆದಂತೆಲ್ಲಾ ಪುರಾಣ ಮಹಾನ್ ಪುರುಷರನ್ನು ಇಂದಿನ ಜನತೆ ಮರೆಯುತ್ತಿದ್ದು, ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಾಗಲೀ ಅಥವಾ ಬೇರೇ ಯಾವುದೋ ಕಾರ್ಯಕ್ರಮಗಳಲ್ಲಿ ಕೇವಲ ಮಹಾನ್‌ಪುರುಷರ ವೇಷಭೂಷಣಗಳನ್ನು ಧರಿಸಿ ಅಷ್ಟಕ್ಕೇ ಸೀಮಿತವಾಗದೇ, ಪೋಷಕರು ಮನೆಗಳಲ್ಲಿ ಮಕ್ಕಳಿಗೆ ಆದರ್ಶ ವ್ಯಕ್ತಿಗಳ ಜೀವನದ ಬಗ್ಗೆ ತಿಳಿಸಉವುದರ ಮೂಲಕ ಅವರೂ ಅಂತಹ ಆದರ್ಷ ಪುರುಷರಾಗಲು ಪ್ರಯತ್ನಪಡಬೇಕೆಂದರು.
ಗುಡಿಬಂಡೆ ತಾಲೂಕು ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆಯೇ ಅತಿ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೇ ಈ ಭಾಗ ನಂಜುಂಡಪ್ಪ ವರದಿ ಅಡಿಯಲ್ಲಿ ಗುರುತಿಸಲಾಗಿದೆ, ಇಲ್ಲಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಹೆಚ್ಚು ಒತ್ತನ್ನು ನೀಡಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರಗೋಡು ಜಲಾಶಯ ನಿರ್ಮಾಣ ಮಾಡಲಾಗಿತ್ತು, ಮುಂದಿನ ದಿನಗಳಲ್ಲಿ ತಾವು ಈ ಭಾಗದ ಕಲ್ಯಾಣಕ್ಕಾಗಿ ಮತಷ್ಟು ಶ್ರಮಿಸುವದಾಗಿ ಈ ವೇಳೆ ತಿಳಿಸಿದರು.
ಸಾನಿದ್ಯ ವಹಿಸಿದ್ದ ಶ್ರೀ ಕಾಳಿಕ ಮಹಾ ಮಠದ ಪೀಠಾದೀಶ್ವರ ಯೋಗಿಶ್ವರ ಶುಷಿ ಕುಮಾರ ಮಹಾಸ್ವಾಮಿಗಳು ಪೋಷಕರು ಮಕ್ಕಳಿಗೆ ನೀಡುವ ಆಸ್ತಿಯೆಂದರೇ ವಿದ್ಯೆಯೊಂದೇ. ಲೋಕದ ಡೊಂಕನ್ನು ತಿದ್ದಲು ಯಾರಿದಂದಲೂ ಸಾಧ್ಯವಿಲ್ಲ ಹಾಗೂ ನಿಂದಕರ ಮಾತಿಗೆ ತಲೆ ಆಡಿಸದೇ ಜೀವನದಲ್ಲಿ ಉನ್ನತ ಕಾರ್ಯಗಳನ್ನು ಮಾಡಿ ಜಗತ್ತಿನ ಕಲ್ಯಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕೆಂದರು.
ಈ ವೇಳೆ ಪಟ್ಟಣ ವ್ಯಾಪ್ತಿಯ ಶಾಲಾ ಮಕ್ಕಳು ಶ್ರೀ ಕೃಷ್ಣ, ರಾಧ ವೇಷಗಳನ್ನು ಧರಿಸಿ ನೋಡುಗರ ಗಮನ ಸೆಳೆದರು. ಇದರ ಜೊತೆಗೆ ನ್ಯೂ ಪಬ್ಲಿಕ್ ಹಾಗೂ ಸಾಯಿ ವಿದ್ಯಾನಿಕೇತನ ಶಾಲೆಯ ಪುಟಾಣಿಗಳಿಬ್ಬರು ಶ್ರೀ ಕೃಷ್ಣನ ಲೀಲೆಗಳಿಗೆ ಸಂಬಂಧಿಸಿದ ಗೀತೆಯೊಂದಕ್ಕೆ ನೃತ್ಯವನ್ನು ಪ್ರದರ್ಶಿಸಿದ್ದು, ವೇದಿಕೆಯ ಹಾಗೂ ವೇದಿಕೆ ಮುಂಭಾಗದ ಜನತೆಯನ್ನು ರಂಜಿಸಿತು.
ಈ ವೇಳೆ ಜಿ.ಪಂ. ಸದಸ್ಯ ಎಂ.ವಿ. ಕೃಷ್ಣಪ್ಪ, ಸಿಡಿಪಿಒ ಸಿದ್ದಲಿಂಗಪ್ಪ, ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ಗಾಯತ್ರಿ ಮಂದಿರ ಟ್ರಸ್ಟ್ ಅಧ್ಯಕ್ಷ ವಕೀಲ ರಾಮನಾಥ್, ಕಾರ್ಯದರ್ಶಿ ಎಸ್. ನರಸಿಂಹಮೂರ್ತಿ, ಜಿಲ್ಲಾ  ನಗರಾಭಿವೃದ್ಧಿ ಇಲಾಖೆಯ ವೆಂಕಟಾಚಲಪತಿ, ಪ.ಪಂ. ನೂತನ ಸದಸ್ಯರಾದ ಲಕ್ಷ್ಮೀಕಾಂತಮ್ಮ, ರಮೇಶ್, ವೆಂಕಟಲಕ್ಷ್ಮಮ್ಮ, ವಾಹಿನಿ ಸಂಸ್ಥೆಯ ಯೋಜನಾ ನಿರ್ದೇಶಕ ಹೆಚ್.ಆರ್. ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಡಗರದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಕ.ಪ್ರ.ವಾರ್ತೆ ಕೋಲಾರ ಆ.28
ನಗರದ ವಿವಿಧ ಕಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಚಿನ್ಮಯ ವಿದ್ಯಾಲಯ, ನಳಂದ ವಿದ್ಯಾ ಸಂಸ್ಥೆ, ಗೋಕುಲ ವಿದ್ಯಾ ಸಂಸ್ಥೆ, ಶುಭಲ ಶಾಲೆ, ಶಂಕರ ವಿದ್ಯಾಲಯ ಸೇರಿದಂತೆ ಹತ್ತಾರು ಶಾಲೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನಡೆಯಿತು.
ಚಿನ್ಮಯ ಶಾಲೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಹಾಗೂ ರಾಧೆ ವೇಷಧಾರಿಗಳಾಗಿ ಪಾಲ್ಗೊಂಡು ಗಮನ ಸೆಳೆದರು.
ಗಾಯತ್ರಿ ವೇದಸಂಸ್ಕೃತ ಪಾಠಶಾಲೆಯ ಗುರುಗಳಾದ ರಾಮಕೃಷ್ಣಭಟ್ಟರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಶ್ರೀಕೃಷ್ಣನ ಜನನ ವೃತ್ತಾಂತ, ಜೀವನ, ದುಷ್ಟರ ಸಂಹಾರ, ಭಗವದ್ಗೀತೆಯ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ವಿಜಯಕುಮಾರ್ ವಹಿಸಿದ್ದು, ಪ್ರಾಂಶುಪಾಲ ನಾರಾಯಣಸ್ವಾಮಿ ಹಾಗೂ ಶಿಕ್ಷಕ ವೃಂದದವರು ಭಾಗವಹಿಸಿದ್ದರು.
ವಿದ್ಯಾರ್ಥಿನಿಯರಾದ ಸಿ.ಎಸ್. ಶ್ರೀವಿದ್ಯಾ, ನವ್ಯ, ಚಂದನಾ, ಮೇಘನಾ, ಪ್ರಥ್ವಿರ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ನಗರದ ಕಠಾರಿ ಪಾಳ್ಯ, ಕಿಲಾರಪೇಟೆ, ಕುಂಬಾರರ ಪೇಟೆ ಹಾಗೂ ಸಿ. ಬೈರೇಗೌಡ ಬಡಾವಣೆಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.

ರಾಯಲ್ ವಿದ್ಯಾಸಂಸ್ಥೆಯಲ್ಲಿ ಗೋಕುಲಾಷ್ಟಮಿ
ಚಿಂತಾಮಣಿ: ರಾಯಲ್ ವಿದ್ಯಾಸಂಸ್ಥೆಯಲ್ಲಿ ಎಲ್‌ಕೆಜಿ ವಿದ್ಯಾರ್ಥಿಗಳು ರಾಧಾ-ಕೃಷ್ಣ ವೇಷ ಧರಿಸಿ ಮಕ್ಕಳ ಹಾಗೂ ಪೋಷಕರು ಮತ್ತು ನೋಡುಗರನ್ನು ರಂಜಿಸಿದರು. ಪಟ್ಟಣದಲ್ಲಿನ ರಾಯಲ್ ವಿದ್ಯಾಸಂಸ್ಥೆಯಲ್ಲಿ ಗೋಕುಲಾಷ್ಟಮಿಯನ್ನು ಸಡಗರದಿಂದ ಆಚರಿಸಲಾಯಿತು.
ಎಲ್‌ಕೆಜಿ ವಿದ್ಯಾರ್ಥಿಗಳು ರಾಧಾ-ಕೃಷ್ಣರ ಛದ್ಮ ವೇಷ ಧರಿಸಿ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರನ್ನು ಹಾಡಿನ ಕುಣಿತ ಹಾಗೂ ಮಡಿಕೆ ಹೊಡೆಯುವುದರ ಮೂಲಕ ನೋಡುಗರನ್ನು ಮನಸೆಳೆದರು.  ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಕೆ.ಆರ್. ಪ್ರೇಮಲತಾ ಮಾತನಾಡಿ, ಯುಗಯುಗಾಂತರಗಳಿಂದ ಧರ್ಮವನ್ನು ರಕ್ಷಿಸುತ್ತಾ ಬಂದಿರುವ ಪುರಾಣ ಪುಣ್ಯ ಪುರುಷನ ಜನ್ಮ ದಿನವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ರಾಯಲ್ ಸಂಸ್ಥೆಯ ಅಧ್ಯಕ್ಷ ಕೆ. ರಾಮಕೃಷ್ಣ ಮಾತನಾಡಿ, ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವುದರ ಮುಖಾಂತರ ಮಕ್ಕಳಲ್ಲಿ ಸಾಂಸ್ಕೃತಿಕ ಅರಿವು ಮೂಡುವುದಲ್ಲದೆ ಮುಂದಿನ ಪೀಳಿಗೆಗೆ ಇದರ ಪ್ರಾಮುಖ್ಯತೆ ಸಾರಿದಂತಾಗುವುದೆಂದರು.  ಉಪನ್ಯಾಸಕ ಕೆ.ಪಿ. ನಾಗಾರ್ಜುನರೆಡ್ಡಿ, ಶಿಕ್ಷಕರಾದ ಶಿ.ಮ. ಮಂಜನಾಥ್, ಕೆ. ಆಶಾ ಸೇರಿದಂತೆ ಶಾಲಾ ಸಿಬ್ಬಂದಿ, ಪೋಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.