ಸೌಕರ್ಯಕ್ಕಾಗಿ ನಾಗರಿಕರಿಂದ ರಸ್ತೆ ತಡೆ
ಕ.ಪ್ರ.ವಾರ್ತೆ ಕೋಲಾರ ಡಿ. 3
ನಗರದ ಟೇಕಲ್ ರಸ್ತೆಯ ಅಭಿವೃದ್ಧಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಬೇಕು. ಟೇಕಲ್ ರಸ್ತೆಯಲ್ಲಿ ಹಾದು ಹೋಗುವ ರೇಲ್ವೆ ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಿಸಬೇಕು ಹಾಗೂ ನಗರೋತ್ಥಾನ 2ರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ಒತ್ತಾಯಿಸಿ ನಾಗರಿಕರು ಮಂಗಳವಾರ ಟೇಕಲ್ ರಸ್ತೆಯಲ್ಲಿನ ಮಿನಿ ಹೋಟೆಲ್ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಟೇಕಲ್ ರಸ್ತೆಯ ಅಭಿವೃದ್ಧಿ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕರೆದು 10 ತಿಂಗಳಾದರೂ ಕಾಮಗಾರಿ ಮುಗಿಸಿಲ್ಲ, ಕಾಮಗಾರಿ ಮುಗಿಸಲು ನೀಡಿದ್ದ ಅವಧಿ ಮುಗಿದಿದ್ದರೂ ಗುತ್ತಿಗೆದಾರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಪ್ರತಿಭಟನಾಕಾರರು ದೂರಿದರು.
ಟೇಕಲ್ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಶಾಲಾ-ಕಾಲೇಜಿನ ವಾಹನಗಳಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರಯಾಣಿಸುವುದಕ್ಕೆ ಭಯ ಪಡುತ್ತಿದ್ದಾರೆಂದು ಆರೋಪಿಸಿದರು.
ರಸ್ತೆ ಕಾಮಗಾರಿ ಮುಗಿಯುವ ತನಕ ಟೇಕಲ್ ರಸ್ತೆಯಲ್ಲಿ ಭಾರೀ ವಾಹನಗಳಾದ ಲಾರಿ, ಬಸ್ಸುಗಳ ಓಡಾಟ ನಿಲ್ಲಿಸಬೇಕು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು, ತಕ್ಷಣ ಗುತ್ತಿಗೆದಾರನಿಗೆ ನೋಟಿಸ್ ಜಾರಿ ಮಾಡಿ ಕಾಮಗಾರಿ ಆರಂಭಕ್ಕೆ ಸೂಚನೆ ನೀಡುವಂತೆ ನಾಗರಿಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮುನಿಬೈರಪ್ಪನವರಿಗೆ ಒತ್ತಾಯಿಸಿದರು.
ಮೇಲ್ಸೇತುವೆ ಬೇಕು: ಟೇಕಲ್ ರಸ್ತೆಯಲ್ಲಿ ರೇಲ್ವೆ ಮಾರ್ಗ ಹಾದು ಹೋಗಿದ್ದು, ಹೊಸ ರೈಲು ಮಾರ್ಗದ ಉದ್ಘಾಟನೆಯ ನಂತರ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈಗಾಗಲೇ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಮನವಿ ಸಲ್ಲಿಸಿ ರೇಲ್ವೆ ಮಾರ್ಗಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಕೋರಲಾಗಿದ್ದರೂ ಪ್ರಯೋಜನವಾಗಿಲ್ಲ. ರೇಲ್ವೆ ಅಧಿಕಾರಿಗಳಿಗೂ ಇಂದಿನ ಪ್ರತಿಭಟನೆಯ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಒಬ್ಬ ಅಧಿಕಾರಿ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಗೋಕುಲ್ ಕಾಲೇಜಿಗೆ ಹೋಗುವ ರಸ್ತೆಯ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದಕ್ಕೆ ಕಷ್ಟವಾಗುತ್ತಿರುವುದರಿಂದ ನಗರಸಭೆಯವರು ಬಾಕಿ ಕಾಮಗಾರಿಗೆ ಚಾಲನೆ ನೀಡಬೇಕು. ನಗರೋತ್ಥಾನ 2ರ ಅಡಿಯಲ್ಲಿ ನಡೆಯಬೇಕಾದ ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.
ಕೋಲಾರ ನಗರದಲ್ಲಿ ಹಾಗೂ ಎನ್.ಎಚ್ 4ರ ಬೈಪಾಸ್ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಈ ಭಾಗದ ಬಡಾವಣೆಗಳ ನೀರು ಹರಿದು ಹೋಗುವ ಕಾಲುವೆಗಳನ್ನು ಮುಚ್ಚಿ ಹಾಕಿರುವುದರಿಂದ ಮೋರಿ ನೀರು ಹಾಗೂ ಮಳೆ ನೀರು ಬಡಾವಣೆಗಳಿಗೆ ನುಗ್ಗಿ ಸಮಸ್ಯೆ ಆಗುತ್ತಿರುವುದರಿಂದ ಕಾಲುವೆಗಳನ್ನು ದುರಸ್ತಿಗೊಳಿಸಬೇಕು ಹಾಗೂ ದೊಡ್ಡ ಮೋರಿಯೊಂದನ್ನು ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.
ಪುರಪಿತೃಗಳ ದೂರು: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯ ರವೀಂದ್ರ, ಮುರಳಿಗೌಡ ಹಾಗೂ ರಾಧಾಕೃಷ್ಣ ಅವರು ನಾಗರಿಕರ ಬೇಡಿಕೆಗಳನ್ನು ಕಾಲ ಮಿತಿಯಲ್ಲಿ ಈಡೇರಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದಿಲ್ಲ. ಕೋರ್ಟ್ ಇರುವುದರಿಂದ ಬಂದಿಲ್ಲವೆಂಬ ಕಾರಣ ಕೊಡಲಾಗಿದೆ. ಹೀಗಾಗಿ ಇಲ್ಲಿಗೆ ಬಂದಿರುವ ಲೋಕೋಪಯೋಗಿ ಇಲಾಖೆಯ ಇಇ ಮುನಿಬೈರಪ್ಪ, ನಗರಸಭೆ ಆಯುಕ್ತ ಜಗದೀಶ್ ಹಾಗೂ ಡಿವೈಎಸ್ಪಿ ಅಶೋಕ್ ಕುಮಾರ್ ಜಿಲ್ಲಾಧಿಕಾರಿಗೆ ನಮ್ಮ ಹೋರಾಟದ ಬಗ್ಗೆ ತಿಳಿಸಿ ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪಯೋಗಿ ಇಇ ಮುನಿಬೈರಪ್ಪ, ಜಿಲ್ಲಾಧಿಕಾರಿ ಟೇಕಲ್ ರಸ್ತೆಯ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ಕರೆಯುವಂತೆ ಸೂಚಿಸಿದ್ದಾರೆ. ಅತಿ ಶೀಘ್ರವೇ ಸಭೆಯನ್ನು ಕರೆಯುತ್ತೇವೆ. ಈ ಭಾಗದ ಜನಪ್ರತಿನಿಧಿಗಳಿಗೂ ಸಭೆಗೆ ಆಹ್ವಾನ ನೀಡುತ್ತೇವೆ. ಅಂದಿನ ಸಭೆಯಲ್ಲಿ ಮುಕ್ತವಾಗಿ ಚರ್ಚಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸೋಣವೆಂದು ಹೇಳಿದರು.
ಟೇಕಲ್ ರಸ್ತೆಯಲ್ಲಿ ಭಾರೀ ವಾಹನಗಳ ಓಡಾಟ ತಕ್ಷಣದಿಂದ ನಿಲ್ಲಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ. ಒಂದು ವೇಳೆ ಯಾವುದಾದರೂ ಭಾರೀ ವಾಹನ ಓಡಾಡಿದಲ್ಲಿ ವಾಹನ ತಡೆದು ಪೊಲೀಸರಿಗೆ ದೂರು ನೀಡಿದಲ್ಲಿ ತಕ್ಷಣ ಸ್ಥಳಕ್ಕೆ ಬಂದು ವಾಹನ ಚಾಲಕನಿಗೆ ದಂಡ ವಿಧಿಸುವುದಾಗಿ ಡಿವೈಎಸ್ಪಿ ಅಶೋಕ್ ಕುಮಾರ್ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಾರ್ಡ್ ನಂ. 12, 13 ಮತ್ತು 14ರ ನಗರಸಭಾ ಸದಸ್ಯರಾದ ರವೀಂದ್ರ, ರಾಧಾಕೃಷ್ಣ, ಮುರಳಿಗೌಡ, ಹಿರಿಯ ನಾಗರಿಕರಾದ ಗೋವಿಂದಪ್ಪ, ಆಡಿಟರ್ ನಾರಾಯಣಗೌಡ, ಪಂಜಪ್ಪ, ಮಹಿಳಾ ಪ್ರತಿನಿಧಿ ಪ್ರಫುಲ್ಲಾ ಮಧುಕರ್, ಅಡಿಕೆ ನಾಗರಾಜ್, ಮಧು, ರಾಕೇಶ್, ಬಿಜೆಪಿ ಮುಖಂಡ ಶ್ರೀನಾಥ್, ವಿಜಯಕುಮಾರ್, ಅಚ್ಚುತ, ಮುರಳಿ, ರಘು, ಕೋಡಿಹಳ್ಳಿ ಕುಮಾರ್, ನಾಮಲ ಮಂಜು ಮತ್ತಿತರರು ಇದ್ದರು.
ಟೇಕಲ್ ರಸ್ತೆಯಲ್ಲಿ ಪ್ರತಿಭಟನೆಯಿಂದಾಗಿ ಅನೇಕ ಅಂಗಡಿಗಳು ಮುಚ್ಚಿದ್ದವು. ರಸ್ತೆ ಸಂಚಾರ ಸುಮಾರು ಎರಡೂವರೆ ಗಂಟೆಗಳ ಕಾಲ ಬಂದ್ ಆಗಿತ್ತು.
ಪ್ರತಿಭಟನೆಯಲ್ಲಿ ಆದರ್ಶ ಕಾಲೇಜು, ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಸಹ ಭಾಗವಹಿಸಿ ಬೆಂಬಲ ಸೂಚಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಚೆಕ್ ವಿತರಣೆ
ಮುಳಬಾಗಲು: ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ ಕಚೇರಿಯ ಅವರಣದಲ್ಲಿ ರೈತಸಂಜೀವಿನಿ ಯೋಜನೆಯಡಿ ತಾಲೂಕಿನ ಅಣ್ಣಿಹಳ್ಳಿ ಮಂಜುಳಾ ಅವರಿಗೆ ಸಮಿತಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ಐವತ್ತು ಸಾವಿರ ರು.ಗಳ ಚೆಕ್ ವಿತರಿಸಿದರು. ಸಮಿತಿ ಕಾರ್ಯಕಾರಣೆ ಸಮಿತಿಗೆ ನಿದೇಶಕರಾಗಿ ನಾಮಕರಣಗೊಂಡ ಮೋತಕಪಲ್ಲಿ ಗ್ರಾಮದ ಎಂ.ಎಸ್. ಶಿವಪ್ರಕಾಶ್, ಉತ್ತನೂರು ಗ್ರಾಮದ ಗೋವಿಂದ ಮತ್ತು ಪಟ್ಟಣದ ಸುಬ್ರಮಣ್ಯಂ ಅವರನ್ನು ಸ್ವಾಗತಿಸಲಾಯಿತು. ಉಪಾಧ್ಯಕ್ಷ ಕುಮಾರಾಚಾರಿ, ಮುಖಂಡ ಗೊಲ್ಲಹಳ್ಳ ಸತೀಶ್, ಆರ್. ಕೃಷ್ಣಪ್ಪ, ಕಾರ್ಯದರ್ಶಿ ಎಂ. ಕೃಷ್ಣನ್ ಇದ್ದರು.
40 ಲಾರಿಗಳ ವಶ
ಮುಳಬಾಗಲು: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 40 ಲಾರಿಗಳನ್ನು ಕಳೆದ ಎರಡು ದಿವಸಗಳ ಕಾಲ ಪಟ್ಟಣ ಮತ್ತು ನಂಗಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಡಿವೈಎಸ್ಪಿ ಟಿ. ಸಿದ್ದಪ್ಪ ತಿಳಿಸಿದ್ದಾರೆ. ತಾಲೂಕಿನ ವಿವಿಧ ಕಡೆ ಕಾರ್ಯಾಚರಣೆ ನಡೆಸಿ ಲಾರಿ ಮಾಲೀಕರಿಂದ ದಂಡವಾಗಿ ತಲಾ ಇಪ್ಪತ್ತು ಸಾವಿರ ರುಪಾಯಿ ವಸೂಲಿಮಾಡಲಾಗಿದೆ. ದಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ಗಳಾದ ಮೇಲ್ವಿನ್ ಫ್ರಾನ್ಸಿಸ್, ನಂಗಲಿ ಠಾಣೆಯ ಶ್ರೀಧರ್ ದಾಳಿಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

