ಬಸ್ ಬ್ರೇಕ್ಫೇಲ್; ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರ: ಬ್ರೇಕ್ಫೇಲ್ನಿಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದು ಜನಸಂದಣಿಯ ನಡುವೆ ರಸ್ತೆಯಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ.
ಬಾಗೇಪಲ್ಲಿ ಘಟಕಕ್ಕೆ ಸೇರಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸು (ಕೆಎ.04, ಎಫ್ 405) ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ವಾಹನ ಎದುರಿಗೆ ಬಂದದ್ದರಿಂದ ಬಸ್ ಚಾಲಕ ಬ್ರೇಕ್ ಹಾಕಿದ್ದಾನೆ. ಆದರೆ, ಇದು ಫೇಲಾಗಿರುವುದು ಗೊತ್ತಾಗಿದ್ದು ಬಸ್ಸನ್ನು ನಿಲ್ಲಿಸಲು ಚಾಲಕ ಸ್ವಲ್ಪ ಸಮಯ ಪರದಾಡಿದ್ದಾನೆ. ಆಸ್ಪತ್ರೆಗೆ ಹೊಂದಿಕೊಂಡಂತಿರುವ ನ್ಯಾಯಾಲಯದೊಳಗೆ ಬಸ್ ನುಗ್ಗಲು ಮುಂದಾಗುತ್ತಿದ್ದಂತೆ ಎಚ್ಚೆತ್ತ ಚಾಲಕ ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಇದರ ರಭಸಕ್ಕೆ ಕಂಬ ಜಖಂಗೊಂಡು ಬಾಗಿದ್ದು ಬಸ್ ನಿಂತಿದೆ. ಬಸ್ನ ಮುಂಭಾಗದ ಗಾಜು ಒಡೆದು ಹೋಗಿದೆ. ಈ ಮಧ್ಯೆ ಅಡ್ಡಾದಿಡ್ಡಾ ಸಂಚರಿಸುತ್ತಿದ್ದ ಬಸ್ ನೋಡಿ ಸಾರ್ವಜನಿಕರು ಭಯಭೀತರಾಗಿ ಓಡಿ ಹೋಗಿ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟರು. ಇದರ ಜತೆಗೆ ಕೆಲ ವಾಹನಗಳು ಇದ್ದಕ್ಕಿದ್ದಂತೆ ದಿಕ್ಕನ್ನು ಬದಲಾಯಿಸಿ ಅಪಘಾತದಿಂದ ಪಾರಾದವು. ಬಸ್ ಕಂಬಕ್ಕೆ ಡಿಕ್ಕಿ ಹೊಡೆದ ಶಬ್ದಕ್ಕೆ ನ್ಯಾಯಾಲಯದಲ್ಲಿ ವಕೀಲರು, ಸುತ್ತಮುತ್ತಲ ಜನರು ಓಡಿ ಬಂದರು. ಬಸ್ಸಿನಲ್ಲಿದ್ದ ಸುಮಾರು 10 ಪ್ರಯಾಣಿಕರನ್ನು ಕೆಳಗಿಳಿಸಿ ಕಳುಹಿಸಿದರಲ್ಲದೇ ಕೂಡಲೇ ಬೆಸ್ಕಾಂ ಇಲಾಖೆಗೆ ದೂರವಾಣಿ ಕರೆ ಮಾಡಿ ಆ ಭಾಗದಲ್ಲಿ ವಿದ್ಯುತ್ ನಿಲುಗಡೆ ಮಾಡುವಂತೆ ಕೋರಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಸ್ಕಾಂ ಸಿಬ್ಬಂದಿಯನ್ನೂ ಕರೆಸಿಕೊಂಡು ಕಂಬದಲ್ಲಿನ ವೈರುಗಳು ಕೆಳಗೆ ಬೀಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

