ಖಾಸಗಿ ಬಸ್ ಮಾಲೀಕರ ಪ್ರತಿಭಟನೆ
ಚಿಕ್ಕಬಳ್ಳಾಪುರ: ಕಾನೂನು ನಿಯಮಗಳನ್ನು ಮುಂದಿಟ್ಟುಕೊಂಡು ಅಧಿಕಾರಿಗಳು ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಬಸ್ಸುಗಳ ಮಾಲೀಕರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿ ಮುಂದೆ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಸುಮಾರು 30 ಕ್ಕೂ ಹೆಚ್ಚು ಬಸ್ಸುಗಳ ಸಮೇತ ಬಂದ ಮಾಲೀಕರು, ಚಾಲಕರು ಮತ್ತು ಸಿಬ್ಬಂದಿ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಕೂಗಿದರು. ಅನವಶ್ಯಕವಾಗಿ ಕಿರುಕುಳ ನೀಡುವುದನ್ನು ತಪ್ಪಿಸಬೇಕೆಂದು ಆಗ್ರಹಿಸಿದರು.
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಜಾರಿಗೆ ಬಾರದ ನಿಯಮ ಜಿಲ್ಲೆಯಲ್ಲಿ ಪಾಲನೆ ಮಾಡಲು ಮುಂದಾಗಿರುವ ಅಧಿಕಾರಿಗಳು ಖಾಸಗಿ ಬಸ್ಸುಗಳು ಸಂಚರಿಸಲು ಅನನುಕೂಲವಾಗುವಂತೆ ತೊಂದರೆ ನೀಡುತ್ತಿದ್ದಾರೆ. ಮಾರ್ಗಸೂಚಿಗಳನ್ನು ತಮ್ಮ ಇಷ್ಟಕ್ಕೆ ಬಂದಂತೆ ಅನುಷ್ಟಾನಗೊಳಿಸುವ ಅಧಿಕಾರಿಗಳ ವರ್ತನೆ ಖಾಸಗಿ ಬಸ್ಸುಗಳ ಮೇಲೆ ಬಿದ್ದಿದ್ದು ಮಾಲೀಕರ ಆದಾಯಕ್ಕೆ ಕತ್ತರಿ ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಧಿಕಾರಿಗಳು ಕಾನೂನಿನ ಹೆಸರಿನಲ್ಲಿ ಕಿರುಕುಳ ಕೊಟ್ಟರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಬೆಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ ಸೇರಿದಂತೆ ಹಲವೆಡೆ ಖಾಸಗಿ ಬಸ್ಸುಗಳು ಯಾವುದೇ ಕಿರುಕುಳಕ್ಕೆ ಗುರಿಯಾಗದೇ ಸಂಚರಿಸುತ್ತಿವೆ. ಆದರೆ, ಇದು ಇಲ್ಲಿನ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಯಲ್ಲಿ ಮಾತ್ರ ವಿಶೇಷ ಅಧಿಕಾರ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ಸುಗಳನ್ನು ಹೆಚ್ಚಿಗೆ ಓಡಿಸುವ ಮೂಲಕ ಖಾಸಗಿ ಬಸ್ಸುಗಳ ಆದಾಯಕ್ಕೆ ಹೊಡೆತ ನೀಡುತ್ತಿದೆ. ಮಾರ್ಗದ ಬದಲಾವಣೆ, ವಾಹನ ನಿಲುಗಡೆ ಮಿತಿ ಎಂಬ ಹೆಸರಿನಲ್ಲಿ ಕಿರುಕುಳ ನೀಡಿದರೆ ಖಾಸಗಿ ಬಸ್ಸುಗಳ ಮಾಲೀಕರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.
ಕೈ ಚೆಲ್ಲಿದ ಅಧಿಕಾರಿಗಳು: ಸರ್ಕಾರದ ಸೂಚನೆಯಂತೆ ನಡೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಇದನ್ನು ಪಾಲಿಸಬೇಕಾಗಿರುವುದು ಖಾಸಗಿ ಬಸ್ಸು ಮಾಲೀಕರ ಜವಾಬ್ದಾರಿಯಾಗಿದೆ. ಒಂದು ವೇಳೆ ಉಲ್ಲಂಘನೆ ಮಾಡಿದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದಾಗ ಆಕ್ರೋಶಗೊಂಡ ಖಾಸಗಿ ಬಸ್ಸುಗಳ ಮಾಲೀಕರು, ಬೇರೆ ಎಲ್ಲೂ ಅನುಷ್ಟಾನಕ್ಕೆ ಬಾರದ ಕಾನೂನುಗಳು ಇಲ್ಲಿ ಮಾತ್ರ ಇದೆ ಎಂದರೆ ಏನರ್ಥ ಎಂದು ವಾದಿಸಿದರು. ಈ ನಡುವೆ ಅಧಿಕಾರಿಗಳ ಮಾತಿನಿಂದ ಸಮಾಧಾನಗೊಂಡ ಮಾಲೀಕರು, ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

