ಸರ್ಕಾರಿ ಶಾಲೆಗಳೇ ಶ್ರೇಷ್ಠ: ರಾಜಲಕ್ಷ್ಮಿ
ಪಾ.ಶ್ರೀ. ಅನಂತರಾಮ್
ಕೋಲಾರ: ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳೇ ಶ್ರೇಷ್ಠ. ನನಗೆ ಸ್ವಂತ ನಿರ್ಧಾರ ಕೈಗೊಳ್ಳುವ ಶಕ್ತಿ, ವಿವೇಕ ಇದ್ದಿದ್ದರೆ ಖಂಡಿತ ಸರ್ಕಾರಿ ಶಾಲೆಗೆ ಸೇರುತ್ತಿದೆ.
ಇದು ಕೆಜಿಎಫ್ನಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಕೆಜಿಎಫ್ನ ಚಾಂಪಿಯನ್ ರಿಫ್ನಲ್ಲಿರುವ ಸಂತ ಜೋಸೆಫ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪಿ. ರಾಜಲಕ್ಷ್ಮೀಯ ಮನದಾಳದ ಮಾತು.
ಕನ್ನಡಪ್ರಭ ನಡೆಸಿದ ವಿಶೇಷ ಸಂದರ್ಶನದಲ್ಲಿ ರಾಜಲಕ್ಷ್ಮೀ ಹರಳು ಉರಿದಂತೆ ಮಾತನಾಡಿದಳು. ಕನ್ನಡ ನಾಡು-ನುಡಿಯ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಪ್ರತಿಪಾದಿಸಿದಳು.
ಟಿ ನಿನ್ನ ಮಾತೃ ಭಾಷೆ ತಮಿಳು, ಕನ್ನಡ ಕಲಿಯಲು ಹೇಗೆ ಸಾಧ್ಯವಾಯಿತು
ತಂದೆ, ತಾಯಿ ಜೀವನಕ್ಕಾಗಿ ಬೆಂಗಳೂರಿಗೆ ವಲಸೆ ಬಂದಾಗ ಅವರೊಂದಿಗೆ ಬರಬೇಕಾಯಿತು. ಪುಟ್ಟ ಹುಡುಗಿಯಿಂದ ಈವರೆಗೂ ನಾನು ಕನ್ನಡವನ್ನು ಪ್ರೀತಿಸುತ್ತಿದ್ದೇನೆ, ಮುಂದೆಯೂ ಕನ್ನಡತಿಯಾಗಿಯೇ ಮುಂದುವರೆಯುತ್ತೇನೆ.
ಟಿ ಕನ್ನಡ ಶಾಲೆಗೆ ಸೇರದಿರುವುದಕ್ಕೆ ಕಾರಣವೇನು?
ಅಪ್ಪ, ಅಮ್ಮ ತೀರಿಕೊಂಡ ಬಳಿಕ ಅನಾಥಳಾಗಿದ್ದ ನನಗೆ ದಾನಿಗಳು ಕರ್ನಾಟಕದಲ್ಲಿ ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಖಾಸಗಿ ಶಾಲೆ ಸೇರುವುದು ನನ್ನ ನಿರ್ಧಾರವಲ್ಲ, ದೇವರು ಮತ್ತು ದಾನಿಗಳ ಹಂಬಲ. ಇಂಗ್ಲಿಷ್ ಶಾಲೆಯಲ್ಲಿ ಓದುತ್ತಿದ್ದರೂ ಕನ್ನಡಕ್ಕೆ ಮೊದಲ ಆಧ್ಯತೆ ನೀಡಿದ್ದೇನೆ, ಕನ್ನಡ ಈಗ ನನಗೆ ಜೀವನಾಡಿ ಆಗಿದೆ.
ಟಿ ರಾಜ್ಯದಲ್ಲಿ ಕನ್ನಡ ಬೆಳೆಯಬೇಕಾದರೆ ಏನಾಗಬೇಕು
ಕನ್ನಡ ಬೆಳೆಸುವುದು ಕೇವಲ ಸರ್ಕಾರದ ಕೆಲಸವಲ್ಲ, ರಾಜ್ಯದಲ್ಲಿ ನೆಲಸಿರುವ ಪ್ರತಿಯೊಬ್ಬರ ಕರ್ತವ್ಯ. ಅಧಿಕಾರಿಗಳು, ಶಿಕ್ಷಕರು, ಸಂಘ ಸಂಸ್ಥೆಗಳ ಮುಖಂಡರು ಮಕ್ಕಳಿಗೆ ಕನ್ನಡ ಕಲಿಸಬೇಕು, ಕಾನ್ವೆಂಟ್ನಲ್ಲಿ ಮಕ್ಕಳನ್ನು ಓದಿಸಿದರೂ ಕನ್ನಡ ಭಾಷೆಯನ್ನು ಮೊದಲ ವಿಷಯವಾಗಿ ಕಲಿಯುವುದಕ್ಕೆ ಪ್ರೇರಣೆ ನೀಡಿದಾಗ ಮಾತ್ರ ಕನ್ನಡ ಭಾಷೆ ಶೈಕ್ಷಣಿಕ ರಂಗದಲ್ಲಿ ಗಟ್ಟಿಯಾಗಿ ಉಳಿಯುತ್ತದೆ.
ಟಿ ಕನ್ನಡ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲವೆಂಬ ಟೀಕೆಗಳಿಗೆ ನಿಮ್ಮ ಉತ್ತರವೇನು
ಕನ್ನಡ ಶಾಲೆಗಳಲ್ಲಿ ಇರುವ ನೂನ್ಯತೆಯನ್ನು ಸರಿಪಡಿಸಬೇಕಾದ ಹೊಣೆ ಸರ್ಕಾರ ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸಬೇಕು, ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡದಂತೆ ಪಾರದರ್ಶಕತೆ ಕಾಯ್ದುಕೊಳ್ಳಬೇಕು, ಶಿಕ್ಷಕರು ಶಾಲೆಗೆ ಬರುವ ಪ್ರತಿಯೊಬ್ಬ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡರೆ ಕನ್ನಡ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವುದರಲ್ಲಿ ಅನುಮಾನವಿಲ್ಲ, ಜಿಲ್ಲೆಯಲ್ಲಿ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನೇಕ ಕನ್ನಡ ಶಾಲೆಗಳು ಉತ್ತಮ ಫಲಿತಾಂಶ ಪಡೆದಿರುವುದೇ ಸಾಕ್ಷಿ.
ಟಿ ಮಕ್ಕಳ ಶೈಕ್ಷಣಿಕ ಹಕ್ಕಿನ ನಿಮ್ಮ ಅಭಿಪ್ರಾಯ
ಪ್ರತಿಯೊಬ್ಬ ಮಗುವಿಗೂ ಕಡ್ಡಾಯವಾಗಿ ಶಿಕ್ಷಣ ನೀಡಲೇಬೇಕು, ಅದರಲ್ಲೂ ಹೆಣ್ಣು ಮಕ್ಕಳಿಗೆ ಈಗ ಶಿಕ್ಷಣ ಅತ್ಯಗತ್ಯ. ಈ ಕುರಿತು ನಾನು ಸಮ್ಮೇಳನದಲ್ಲಿ ಹೆಚ್ಚಿನ ಒತ್ತು ನೀಡಬೇಕೆಂದು ನಿರ್ಧರಿಸಿದ್ದೇನೆ.
ಟಿ ಮೀಸಲಾತಿ ಬಗ್ಗೆ ಏನಂತಿರಿ
ತುಳಿತಕ್ಕೆ ಒಳಗಾದವರಿಗೆ ಮೀಸಲಾತಿ ಬೇಕೇ ಬೇಕು. ಅದರೆ, ಸಂವಿಧಾನ ಕಲ್ಪಿಸಿರುವ ,ಸೌಲಭ್ಯ ದುರುಪಯೋಗವಾಗಬಾರದು. ಎಲ್ಲಾ ಜಾತಿಯ ಬಡವರಿಗೆ ಮೀಸಲಾತಿ ಸಿಗಬೇಕು. ಈ ಬಗ್ಗೆ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಆದರೆ, ಸರ್ಕಾರಕ್ಕೆ ನನ್ನ ಮನವಿ ಏನೆಂದರೆ, ಬಡವರನ್ನು ಜಾತಿಯ ಆಧಾರದ ಮೇಲೆ ನೋಡಬೇಡಿ ಎಂಬುದು.
ಟಿ ಮುಂದೇನಾಗಬೇಕೆಂಬ ಹಂಬಲವಿದೆ
ನನ್ನಪ್ಪನ ಹಾಗೂ ಹಿರಿಯ ಆಶಯದಂತೆ ಐಎಎಸ್ ಮಾಡಿ ಕರ್ನಾಟಕದಲ್ಲೇ ಸೇವೆ ಮಾಡಬೇಕೆಂಬ ಆಸೆಯಿದೆ. ಬಡತನ ಏನೆಂಬುದು ಅರ್ಥವಾಗಿದೆ, ನನ್ನಂತೆಯೇ ಸಾವಿರಾರು ಮಂದಿ ತಂದೆ-ತಾಯಿಯನ್ನು ಕಳೆದುಕೊಂಡವರಿದ್ದಾರೆ. ನಿಜ ಹೇಳಬೇಕಾದರೆ ನನಗೆ ಈಗ ಅನಾಥ ಪ್ರಜ್ಞೆ ಕಾಡುತ್ತಿಲ್ಲ, ಶಿಕ್ಷಕರು, ಸ್ನೇಹಿತರು, ಸಮಾಜ ಮುಖಿಗಳ ಆಶೀರ್ವಾದ ಸಿಕ್ಕಿದೆ. ನನ್ನ ಕನಸು ಈಡೇರಿದರೆ ಬಡವರಿಗಾಗಿ ನನ್ನ ಜೀವನ ಮೂಡುಪಾಗಿಡುತ್ತೇನೆ. ನನಗೆ ಸ್ವಾಮಿ ವಿವೇಕಾನಂದ, ಮದರ್ ಥೆರೇಸಾ ಅವರಂತೆ ಬಡವರ ಸೇವೆ ಮಾಡಬೇಕೆಂಬ ಆಸೆಯಿದೆ, ಅದಕ್ಕಾಗಿ ಹೆಚ್ಚಿನ ಜ್ಞಾನ ಸಂಪಾದನೆ ಮಾಡಲು ಶ್ರಮಿಸುತ್ತೀದ್ದೇನೆ.
ಟಿ ವಿದ್ಯಾರ್ಥಿಗಳಿಗೆ ಕಿವಿಮಾತು ಏನು
ನಾನು ಮೊದ್ಲೆ ಹೇಳಿದಂತೆ ಚಿಕ್ಕವಳು, ಕಿವಿಮಾತು ಹೇಳುವಷ್ಟು ಆರ್ಹತೆ ಇಲ್ಲ. ಆದರೂ ಸ್ನೇಹಿತಳಾಗಿ, ಹಿತೈಷಿಯಾಗಿ ಹೇಳುವುದೆಂದರೆ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು, ಗುರಿ ಸಾಧನೆಗಾಗಿ ಶ್ರಮಪಡಬೇಕು, ವಿದ್ಯಾರ್ಥಿಯ ಜೀವನ ಮುಗಿದ ಮೇಲೆ ಆಸೆಗಳನ್ನು ಹೊರ ಹಾಕಿದರೆ ಪ್ರಯೋಜನವಾಗುವುದಿಲ್ಲ.
ಟಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಏನನಿಸುತ್ತದೆ
ಸಂತೋಷವಾಗಿದೆ, ನನ್ನಗಿಂತ ಸ್ನೇಹಿತರಿಗೆ, ಶಿಕ್ಷಕರಿಗೆ, ಶಾಲೆಯ ಆಡಳಿತ ಮಂಡಳಿಗೆ ಖುಷಿಯಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರು ಇದ್ದಾರೆ. ಆದರೆ, ನನಗೆ ಅವಕಾಶ ಸಿಕ್ಕಿರುವುದು ಪುಣ್ಯ. ಸಾಕಷ್ಟು ಪರೀಕ್ಷೆಗಳನ್ನು ನಡೆಸಿ ಅದರಲ್ಲಿ ತೇರ್ಗಡೆಯಾದ ಮೇಲೆ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ನೆಲ, ಜಲ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಏಕೆ ಅಳವಡಿಸಿಕೊಳ್ಳಬೇಕೆಂಬುದರ ಕುರಿತು ನನ್ನ ಭಾಷಣದಲ್ಲಿ ತಿಳಿಸಲಿದ್ದೇನೆ.
ಟಿ ಸರ್ಕಾರಕ್ಕೆ ಏನಾದರೂ ತಿಳಿಸುವುದು ಇದೆಯೇ
ಖಂಡಿತ. ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ ಕಡ್ಡಾಯ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವುದರ ಜೊತೆಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಮುಂದಾಗಬೇಕಾಗಿದೆ. ಸಮ್ಮೇಳನದ ಬಳಿಕ ನಾನು ಸರ್ಕಾರಕ್ಕೆ ಪತ್ರ ಮುಖೇನ ಮತ್ತು ಮಾಧ್ಯಮಗಳ ಮೂಲಕ ಅಭಿಪ್ರಾಯಗಳನ್ನು ತಿಳಿಸುತ್ತೇನೆ, ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ರಂಗದ ಅಭಿವೃದ್ಧಿಗಾಗಿ ದನಿ ಎತ್ತುವಂತೆ ಜನಪ್ರತಿನಿಧಿಗಳು ಮತ್ತು ಜನತೆಯ ಸಹಕಾರ ಕೋರುತ್ತೇನೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡು ಕಾರ್ಯಕ್ರಮ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡದ ತೇರನ್ನು ಯಶಸ್ವಿಯಾಗಿ ಎಳೆಯಲು ಕೈಜೋಡಿಸಿದಲ್ಲಿ ಮಾತ್ರ ಸಂಘಟಕರ ಶ್ರಮ ಸಾರ್ಥಕವಾಗುತ್ತದೆ ಎಂದು ಮಾತು ಮುಗಿಸಿದ ರಾಜಲಕ್ಷ್ಮೀ ತರಗತಿಗೆ ಹೋಗಿ ಪಾಠದತ್ತ ಗಮನ ಹರಿಸಿದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

