ಕೋಲಾರ

ಮೆರವಣಿಗೆಯಲ್ಲೂ ಪರಭಾಷೆ ಕಾರುಬಾರು

Published On :

 ಕೋಲಾರ: ಒಂದು ಕಾಲದಲ್ಲಿ ಮಿನಿ ಇಂಗ್ಲೆಂಡ್, ಮಿನಿ ಮದ್ರಾಸ್ ಎಂದೇ ಕರೆಯಲ್ಪಟ್ಟಿದ್ದ ಕೆಜಿಎಫ್ ನಗರದಲ್ಲಿ ಗೋಕಾಕ್ ಚಳವಳಿಯ ನಂತರ ಕನ್ನಡದ ಪರಿಸ್ಥಿತಿ ಸುಧಾರಣೆ ಆಗಬಹುದೆಂದು ನಂಬಿದ್ದ ಪ್ರಜ್ಞಾವಂತ ನಾಗರಿಕರಿಗೆ ನಿರಾಸೆಯ ಜೊತೆಗೆ ಅಸಮಾಧಾನ ಉಂಟಾಗಿದೆ.
ಇದಕ್ಕೆ ಕಾರಣ ಕೆಜಿಎಫ್‌ನಲ್ಲಿ ಓದುತ್ತಿರುವ ಶಾಲಾ ಮಕ್ಕಳಲ್ಲಿ ಕರ್ನಾಟಕದ ಆಡಳಿತ ಭಾಷೆಯಾಗಿರುವ ಕನ್ನಡಕ್ಕಿಂತ ಇಂಗ್ಲಿಷ್ ಮತ್ತು ತಮಿಳುಭಾಷೆಯ ಮೇಲಿನ ವ್ಯಾಮೋಹ ಕಡಿಮೆ ಆಗದಿರುವುದು.
ಕೆಜಿಎಫ್ ನಗರದಲ್ಲಿ ಎನ್ನಡ-ಎಕ್ಕಡ ಮಾತುಗಳ ಜೊತೆಗೆ ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವುದರಿಂದ ಈ ಮಕ್ಕಳಲ್ಲಿ ಅರಿವು ಮೂಡಿಸಲು ಕನ್ನಡದ ಕಟ್ಟಾಳುಗಳೆಂದು ಹೇಳಿಕೊಳ್ಳುವವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಚಿಂತನೆ ಮಾಡಿ ಕನ್ನಡದ ಕಲರವ ಹೆಚ್ಚಿಸಲು ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಫಲ ನೀಡದ ಶಿಫಾರಸ್ಸುಗಳು: ಕೆಜಿಎಫ್ ಗಡಿ ಭಾಗಕ್ಕೆ ಸೇರಿದ ಪ್ರದೇಶವೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಡಾ.ನಂಜುಂಡಪ್ಪ, ಬರಗೂರು ರಾಮಚಂದ್ರಪ್ಪ, ಸರೋಜಿನಿ ಮಹಿಷಿ, ಸಿದ್ದಲಿಂಗಯ್ಯ, ಡಾ. ವೆಂಕಟೇಶ್, ಮುಖ್ಯಮಂತ್ರಿ ಚಂದ್ರು, ಪಾಟೀಲ್ ಪುಟ್ಟಪ್ಪ ಸೇರಿದಂತೆ ಅನೇಕರ ವರದಿಗಳನ್ನು ಆಧರಿಸಿ ಕನ್ನಡದ ಅಭಿವೃದ್ಧಿಗೆ ಲಕ್ಷಾಂತರ ರು.ವಿನಿಯೋಗ ಮಾಡಿದ್ದರೂ ಅನೇಕ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಲಿಸಲು ಸಾಧ್ಯವಾಗುತ್ತಿಲ್ಲ.
ಗುರುವಾರ ಕೆಜಿಎಫ್ ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿವಿಧ ಖಾಸಗಿ ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಕನ್ನಡದ ಘೋಷಣೆಗಳನ್ನು ಕೂಗದೆ ಮಾರ್ಗದುದ್ದಕ್ಕೂ ಇಂಗ್ಲಿಷ್ ಮತ್ತು ತಮಿಳುಭಾಷೆಯಲ್ಲಿ ಮಾತನಾಡುತ್ತಾ ಸಾಗಿದ್ದು, ಹಾಗೂ ಮಕ್ಕಳೊಂದಿಗೆ ಬಂದಿದ್ದ ಶಿಕ್ಷಕರು ಸಹ ಕನ್ನಡದಲ್ಲಿ ಮಾತನಾಡದೆ ಪರಭಾಷೆಯ ಮೇಲೆ ವ್ಯಾಮೋಹ ತೋರಿಸುವ ಮೂಲಕ ಕೆಜಿಎಫ್‌ನಲ್ಲಿ ಕನ್ನಡದ ವಾತಾವರಣ ಹೆಚ್ಚಿಸಬೇಕೆಂದು ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡಪರ ಸಂಘಟನೆಗಳ ಮುಖಂಡರ ಆಶಯಗಳಿಗೆ ತಣ್ಣಿರು ಎರಚಿದರು.
ಸಿಡಿಮಿಡಿಗೊಂಡ ಅಧ್ಯಕ್ಷರು: ಶಾಲೆ, ಮನೆಗಳಲ್ಲಿ ಇಂಗ್ಲಿಷ್ ಮತ್ತಿತರ ಭಾಷೆ ಮಾತನಾಡುವುದನ್ನು ನಮ್ಮಿಂದ ತಡೆಯಲಾಗುತ್ತಿಲ್ಲ, ಕನಿಷ್ಠ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷ ಮೆರವಣಿಗೆಯಲ್ಲಾದರೂ ಒಂದಿಷ್ಟು ಕನ್ನಡದ ಮೇಲೆ ಪ್ರೀತಿ ತೋರಿಸಿ, ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೆ.ಜಿ. ನಾಗರಾಜ್ ಶಿಕ್ಷಕರು ಮತ್ತು ಮಕ್ಕಳಲ್ಲಿ ಮನವಿ ಮಾಡಿದರೂ ಕನ್ನಡದಲ್ಲಿ ಪ್ರತಿಕ್ರಿಯಿಸುವ ಪ್ರಯತ್ನವಾಗಲಿಲ್ಲ.
ಇದರಿಂದ ಬೇಸತ್ತ ಜೆ.ಜಿ. ನಾಗರಾಜು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿಯೇ ಬಿಟ್ಟರು. ಕನ್ನಡದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸದಿದ್ದರೆ ಮಕ್ಕಳ ಭವಿಷ್ಯ ಕಾಪಾಡುವವರು ಯಾರು ಎಂದು ಕಾರವಾಗಿ ಪ್ರಶ್ನಿಸಿದರಾದರೂ ಇವರ ಆಕ್ರಂದನ ಮತ್ತು ಅರಣ್ಯರೋಧನಕ್ಕೆ ಸ್ಪಂದನೆ ಸಿಗಲೇ ಇಲ್ಲ.
ವಿಚಿತ್ರ ಮತ್ತು ಅಚ್ಚರಿಯ ಸಂಗತಿ ಎಂದರೇ ಸಮ್ಮೇಳನಾಧ್ಯಕ್ಷೆಯಾಗಿರು ರಾಜಲಕ್ಷ್ಮೀ ಓದುತ್ತಿರುವ ಸೆಂಟ್ ಜೋಸೆಫ್ ಕಾನ್ವೆಂಟ್‌ನಿಂದ ಬಂದಿದ್ದ ಮಕ್ಕಳು ತಮ್ಮ ಹಿರಿಯ ಸಹಪಾಠಿಗೆ ಗೌರವ ತರುವುದಕ್ಕಾದರೂ ಸ್ವಲ್ಪ ಮಟ್ಟಿಗಾದರೂ ಕನ್ನಡದಲ್ಲಿ ಮಾತನಾಡಬೇಕೆಂದು ನಿರ್ಧರಿಸದೆ ಆಂಗ್ಲ ಭಾಷೆಯಲ್ಲೇ ಸಂಭಾಷಣೆ ನಡೆಸಿದ್ದು ಏಕೆ ಎಂಬುದು ಪ್ರಶ್ನೆ ಸಂಘಟಕರನ್ನು ಮಾತ್ರವಲ್ಲದೆ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಕನ್ನಡಿಗರನ್ನು ಕಾಡಿತು.
ಮಕ್ಕಳ ಅಸಹಾಯಕತೆ: ಕನ್ನಡ ಅರ್ಥವಾಗದೆ ವಿಲವಿಲನೆ ಒದ್ದಾಡುತ್ತಿದ್ದ ಮಕ್ಕಳು ಕಾರ್ಯಕ್ರಮದಿಂದ ಎದ್ದು ಹೋಗಲು ಸಾಧ್ಯವಾಗದ ರೀತಿಯಲ್ಲಿ ಕೆಲ ಶಿಕ್ಷಕರು ಅಡ್ಡಗೋಡೆಯಂತೆ ನಿಂತಿದ್ದರು. ಶಿಕ್ಷಕರ ಕೈಯಲ್ಲಿ ಕೋಲು ಕಂಡು ಭಯದಿಂದ ಕುಳಿತಿದ್ದರಾದರೂ ಅತಿಥಿಗಳ ಭಾಷಣ ಅಲಿಸುವಷ್ಟು ಶಕ್ತಿ ಮಕ್ಕಳಿಗೆ ಇರಲಿಲ್ಲ.
ಅತಿಥಿಗಳ ಭಾಷಣದ ನಂತರ ಹೊರ ಬಂದ ಕೆಲ ಮಕ್ಕಳನ್ನು ಪ್ರಶ್ನಿಸಿದಾಗ, ಶಾಲೆಗಳಲ್ಲಿ ಇಂಗ್ಲಿಷ್ ಮಾತನಾಡದಿದ್ರೆ ದಂಡ ಕಟ್ಟಬೇಕಾಗುತ್ತದೆ, ಮನೆಯಲ್ಲಿ ಮಾತೃಭಾಷೆ ತಮಿಳು, ತೆಲುಗು ಹಾಗಾಗಿ ನಮಗೆ ಕನ್ನಡ ಕಲಿಯಲು ಆಗುತ್ತಿಲ್ಲ. ರಾಜಲಕ್ಷ್ಮೀ ಅಕ್ಕ ನಮಗೆ ಕನ್ನಡ ಕಲಿಸುತ್ತಾರೆಯೇ ನೋಡಬೇಕೆಂದು ಸೆಂಟ್ ಜೋಸೆಫ್ ಶಾಲೆಯ ಮಕ್ಕಳು ಕನ್ನಡಪ್ರಭದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪಾ.ಶ್ರೀ. ಅನಂತರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.