ಕೋಲಾರ

ನೊಂದ ಮಕ್ಕಳಿಗೆ ಸಮ್ಮೇಳನದ ಗೌರವ

Published On :

ಕೆಜಿಎಫ್: ಕೋಲಾರ ಜಿಲ್ಲಾಧ್ಯಂತ ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಪೈಕಿ ಜಿಲ್ಲಾಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ತಾವು ಆಯ್ಕೆಗೊಂಡಿರುವುದು ಸಂತಸ ತಂದಿದೆ ಎಂದು ಕೆಜಿಎಫ್ ಸೆಂತ್ ಜೋಸೆಫ್ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪಿ. ರಾಜಲಕ್ಷ್ಮಿ ಹೇಳಿದರು.
ತಮ್ಮ ಅಧ್ಯಕ್ಷೆ ಭಾಷಣದಲ್ಲಿ ಮಾತನಾಡಿ, ತಮ್ಮನ್ನು ಮೆರವಣಿಗೆಯ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಕರೆಯಂದಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನಂತೆಯೇ ಅದೆಷ್ಟೋ ಮಂದಿ ವಿದ್ಯಾರ್ಥಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಕ್ಕಳು, ಚಿಂದಿ ಹಾಯುವ ಮಕ್ಕಳು, ಭಿಕ್ಷೆ ಬೇಡುವ, ಅಂಗವಿಕಲರು, ಅವಿಧ್ಯಾವಂತರಲ್ಲಿಯೂ ಪ್ರತಿಭಾವಂತ ಮಕ್ಕಳಿದ್ದು ಅವರಿಗೆ ಇಂತಹ ಅವಕಾಶಗಳು ಸಿಗದೆ ನೊಂದಿರುವಂತಹ ಮಕ್ಕಳಿಗೆ ಈ ಸಮ್ಮೇಳನದ ಗೌರವ ಅರ್ಪಿಸುವುದಾಗಿ ಅವರು ಹೇಳಿದರು.
ಪೋಷಕರು ಗಮನಿಸಿ: ಭಾಷೆ ಮಾಧ್ಯಮದ ಬಗ್ಗೆ ಕನ್ನಡ ಇಂಗ್ಲಿಷ್ ಎಂಬುದು ಮಕ್ಕಳ ಕೈಯಲ್ಲಿಲ್ಲ. ಅದು ತಮ್ಮ ತಂದೆ ತಾಯಂದಿರು ಶಾಲೆಗೆ ಸೇರಿಸುವ ಮುನ್ನ ಕನ್ನಡ ತಾಯಿಯ ಭಾಷೆ, ಸಂಸ್ಕೃತಿ, ನೆಲ ಜಲ ಬಗ್ಗೆ ಅರಿತು ಮಕ್ಕಳಲ್ಲಿ ಹೆಚ್ಚಿಸುವ ಕೆಲಸವನ್ನು ಮಾಡಬೇಕಾಗಿದೆ. ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ದೇಶದಲ್ಲಿ ಉತ್ತಮ ಸ್ಥಾನಕ್ಕರೇರುವರು ಎಂಬ ಚಿಂತನೆ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮಗಳಲ್ಲಿ ವಿದ್ಯಾಭ್ಯಾಸ ಮಾಡಿದರೂ ಕನ್ನಡ ಕವಿಗಳು, ಸಾಹಿತಿಗಳು, ಪ್ರತಿಭಾ ಪುರಸ್ಕೃತರು ಮತ್ತಿತರೆ ಉನ್ನತ ವ್ಯಕ್ತಿಗಳಾಗುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಅದೇ ರೀತಿ ಕೆಜಿಎಫ್ ಚಿನ್ನದ ಗಣಿ ಗಡಿ ಪ್ರದೇಶದಲ್ಲಿ ಎಲ್ಲಾ ಬೇರೆ ಬೇರೆ ಭಾಷಿಗರು ವಾಸಿಸುತ್ತಿದ್ದು ಅವರನ್ನು ಕಡೆಗಣಿಸುವುದನ್ನು ಬಿಟ್ಟು ಅವರಲ್ಲಿ ಕನ್ನಡ ಭಾಷೆಯನ್ನು ಕಲಿಸಿ ಕನ್ನಡ ಪ್ರಿತಿಯನ್ನು ಬೆಳೆಸುವ ಕೆಲಸ ಕನ್ನಡಾಭಿಮಾನಿಗಳು ಹಾಗೂ ಭಾಷಿಗರು ಮಾಡಬೇಕು ಎಂದರು.
ಜಾಗೃತಿ ಮೂಡಿಸಿ: ನವೆಂಬರ್ ಒಂದರಂದು ಕನ್ನಡರಾಜ್ಯೋತ್ಸವ ಆಚರಣೆ ಮಾಡುವುದು, ಉತ್ಸವಗಳ ಮೆರವಣಿಗೆ ನಡೆಸುವ ಮಟ್ಟಿಗೆ ಕನ್ನಡ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಕನ್ನಡ ನಾಡಿನ ಬಗ್ಗೆ, ಸಾಹಿತ್ಯದ ಬಗ್ಗೆ, ಕಲೆ ಕವಿಗಳ ಬಗ್ಗೆ, ಲೇಖಕರ ಬಗ್ಗೆ ಕನ್ನಡ ನೀರು ಗಾಳಿ ಎಲ್ಲದರ ಬಗ್ಗೆ ಇತರೆ ಭಾಷಿಗರಲ್ಲಿ ಮತ್ತು ಇತರೆ ರಾಜ್ಯದವರಲ್ಲಿ ಮೂಡಿಸಬೇಕಿದೆ. ಕನ್ನಡದ ಅಭಿವೃದ್ಧಿ ರಾಜ್ಯದಲ್ಲೇ ಅಲ್ಲದೆ ಇತರೆ ರಾಷ್ಟ್ರದಲ್ಲೂ ಬೆಳೆಸಲು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರತಿಭಾವಂತರಿದ್ದಾರೆ: ಕೆಜಿಎಫ್‌ನ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಉತ್ತಮ ವಾತಾವರಣವಿಲ್ಲ, ವಿದ್ಯಾಭ್ಯಾಸ ಮಾಡಲು ಅವರಿಗೆ ಸಾಧ್ಯವಿಲ್ಲ. ಅಂತಹವರಲ್ಲಿ ನಮ್ಮ ಕನ್ನಡ ಸಂಘಟನೆಗಳು, ಕನ್ನಡಪರ ಹೋರಾಟಗಾರರು, ಕನ್ನಡ ಅಭಿಮಾನಿಗಳು ಹೆಚ್ಚಿನ ಅಗತ್ಯ ಕ್ರಮಗಳನ್ನು ಕೈಗೊಂಡು ಅವರಲ್ಲಿ ಕನ್ನಡದ ಅಭಿವೃದ್ಧಿ ಮತ್ತು ಕಂಪನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಮಕ್ಕಳು ಉತ್ತಮ ಪ್ರತಿಭೆ ಹೊಂದಿದ್ದು ಅವರಲ್ಲಿರುವ ಜ್ಞಾನಶಕ್ತಿ, ಪ್ರತಿಭೆಯನ್ನು ಪ್ರಪಂಚಕ್ಕೆ ತಿಳಿಸಲು ಮಕ್ಕಳ ಪೋಷಕರು, ಶಾಲಾ ಕಾಲೇಜಿನ ಶಿಕ್ಷಕರು ಇಂತಹ ಅವಕಾಶಗಳನ್ನು ಮಕ್ಕಳಿಗೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದೇ ರೀತಿ ಮಕ್ಕಳು ತಮ್ಮ ಶಿಕ್ಷಕರು ಮತ್ತು ತಂದೆ ತಾಯಿಗಳು ನಿಮ್ಮನ್ನು ನಿಂದಿಸಿದರೆ ಮತ್ತು ಶಿಕ್ಷಿಸಿದರೆ ಅದರಿಂದ ಬೇಸೆತ್ತು ತಮ್ಮ ಮುಂದಿನ ಉತ್ತಮ ಭವಿಷ್ಯವನ್ನು ಹಾಳುಮಾಡಿಕೊಳ್ಳದೆ ಹಾಗೂ ತಮ್ಮ ವಿದ್ಯಾಭ್ಯಾಸರ ಮೇಲೆ ಪರಿಣಾಮ ಬೀಳದಂತೆ ನಾವು ಮಾಡಿದ ತಪ್ಪಿನ ಬಗ್ಗೆ ಯೋಚಿಸಿದರೆ ಯಾವುದೇ ಅನಾಹುತಗಳು ನಡೆಯುವುದಿಲ್ಲ ಎಂದು ತಿಳಿಸಿದರು.
ನನ್ನಂತೆಯೇ ಎಲ್ಲಾ ಮಕ್ಕಳು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಂಡು ಕನ್ನಡ ಸಾಹಿತ್ಯಗಳ, ಕನ್ನಡ ಕವಿ ಕಲೆಗಳ, ಭಾಷಾ ಪ್ರೇಮವನ್ನು ಇತರರಿಗೂ ತಿಳಿಸಲು ಅವಕಾಶಸಿಗಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳ  ಬೇಡಿಕೆಗಳಿಗೆ ಸಹಕರಿಸಬೇಕು ಮತ್ತು ಸರ್ಕಾರಗಳು ಅವರ ಕುಂದು ಕೊರತೆಗಳನ್ನು ಅರಿತು ಮಕ್ಕಳಿಗೆ ಶಿಕ್ಷಣ ವಲಯದಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.