ಮುಂದುವರಿದ ರೈತರ ಹೋರಾಟ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಡಿ. 5
ಮೈ ನಡುಗಿಸುತ್ತಿರುವ ಚಳಿಯ ನಡುವೆಯೂ ರೈತರು ನೂತನ ಜಿಲ್ಲಾಡಳಿತ ಭವನದ ಮುಂದೆ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
ಮುಂದಿನ ತಿಂಗಳ ಮೊದಲ ವಾರದಲ್ಲಿ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇನೆ ಎಂಬ ಜಿಲ್ಲಾಧಿಕಾರಿಗಳ ಭರವಸೆಗೆ, ಅಲ್ಲಿಯವರೆಗೂ ಪ್ರತಿಭಟನೆ ನಡೆಸಿಕೊಂಡಿರಬೇಕಾಹಾಗಾದರೆ ರೈತರಿಗೆ ಊಟ ತಿಂಡಿ ವ್ಯವಸ್ಥೆ ಮಾಡಿಕೊಡುವುದರ ಜತೆಗೆ ಜಾನುವಾರುಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಿ ಎಂದು ವ್ಯಂಗ್ಯಭರಿತ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
ಎನ್.ಹೆಚ್.7 ರ ಬೈಪಾಸ್ ರಸ್ತೆ ಮತ್ತು ಅಗಲೀಕರಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಕೃಷಿ ಭೂಮಿಗೆ ನೀಡಬೇಕಾದ ನ್ಯಾಯಯುತ ಪರಿಹಾರ ಸಂಪೂರ್ಣವಾಗಿ ಒದಗಿಸಲು ಜಿಲ್ಲಾಡಳಿತ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಮುಖಂಡರು ನೂತನ ಜಿಲ್ಲಾಡಳಿತ ಭವನದ ಮುಂದೆ ಕೈಗೊಂಡಿರುವ ಅಹೋ ರಾತ್ರಿ ಧರಣಿ ನಾಲ್ಕನೇ ದಿನವೂ ನಡೆಯಿತು.
ಎನ್.ಹೆಚ್.7 ಬಂದ್: ಪ್ರತಿಭಟನಾ ಮೆರವಣಿಗೆ ಹೊರಟ ರೈತರು ತಾಲೂಕಿನ ಹಾರೋಬಂಡೆ ಸಮೀಪ ಎನ್.ಹೆಚ್.7ನ್ನು ಕೆಲ ಸಮಯ ತಡೆದರು. ಇದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಧಿಕ್ಕಾರ ಕೂಗುತ್ತಿದ್ದ ರೈತರನ್ನು ಸಮಾಧಾನಪಡಿಸಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಪೊಲೀಸರು ಹೈರಾಣರಾದರು.
ನಮ್ಮ ಕೃಷಿ ಭೂಮಿಯಲ್ಲಿಯೇ ಎನ್.ಹೆಚ್.7 ನಿರ್ಮಾಣ ಮಾಡಲಾಗಿದೆ. ಇದೀಗ ಈ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ, ನಮಗೆ ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ ಎಂದು ಟೀಕಿಸಿದರು.
ಈಗಾಗಲೇ ಮೂರು ದಿನದಿಂದ ಜಿಲ್ಲಾಡಳಿತ ಭವನದ ಮುಂದೆ ಅಹೋ ರಾತ್ರಿ ಧರಣಿ ನಡೆಸುತ್ತಿದ್ದು ಜಿಲ್ಲಾಡಳಿತ ತ್ವರಿತವಾಗಿ ಸಭೆ ನಡೆಸಿ ಪರಿಹರಿಸಲು ಮುಂದಾಗಿಲ್ಲ. ಹೋರಾಟ ನಡೆಯುತ್ತಿರುವುದರ ನಡುವೆಯೂ ಮುಂದಿನ ತಿಂಗಳು ಸಭೆ ನಡೆಸುವ ಮಾತನ್ನು ಹೇಳುತ್ತಿದ್ದು ಇದನ್ನು ಕೇಳುವ ಸ್ಥಿತಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಭೈರೇಗೌಡ, ಮಳ್ಳೂರು ಹರೀಶ್, ಮನೋಹರ್, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್, ಬಾಬುರೆಡ್ಡಿ, ಸೋಮಶೇಖರ್, ಆನಂದಮೂರ್ತಿ, ಕರವೇ ಜಿಲ್ಲಾಧ್ಯಕ್ಷ ಚಲಪತಿ ಇದ್ದರು.
ಸ್ಥಳಕ್ಕೆ ಜೆಡಿಎಸ್ ಭೇಟಿ: ನೂತನ ಜಿಲ್ಲಾಡಳಿತ ಭವನದ ಮುಂದೆ ನಡೆಯುತ್ತಿರುವ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ. ನಾಗರಾಜ್, ಜಿಪಂ ಸದಸ್ಯ ಮುನೇಗೌಡ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ನೀಡಿದರು. 2007 ರಿಂದ ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ಹೋರಾಟ ತೀವ್ರವಾಗುವ ಮುಂಚೆ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಪ್ರಕರಣಗಳ ಇತ್ಯರ್ಥ
ರಾಷ್ಟ್ರೀಯ ಹೆದ್ದಾರಿ 7 ಕ್ಕೆ ಭೂ ಸ್ವಾಧೀನವಾಗಿರುವ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡ ಚಿಕ್ಕಬಳ್ಳಾಪುರ ಮತ್ತು ಬಾಗೇಪಲ್ಲಿ ತಾಲೂಕುಗಳ ವಿವಿಧ ಗ್ರಾಮಗಳ ರೈತರು ಹೆಚ್ಚುವರಿ ಪರಿಹಾರ ಕೋರಿ ಸಲ್ಲಿಸಿರುವ 362 ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಿಸಿಳ್ಳಲಾಗಿದೆ. ಉಳಿಕೆ ಪ್ರಕರಣಗಳನ್ನು ಮುಂದಿನ 3-4 ತಿಂಗಳೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಶಾಲ್. ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

