ಸುದ್ದಿ ಸಂಕ್ಷೇಪ
ನೂತನ ದೇಗುಲದ ಪ್ರತಿಷ್ಠಾಪನೆ
ಬಂಗಾರಪೇಟೆ: ತಾಲೂಕಿನ ಚಿಕ್ಕಅಂಕಂಡಹಳ್ಳಿ ಪಂಚಾಯ್ತಿಯ ಪಾಕರಹಳ್ಳಿ ಗ್ರಾಮದಲ್ಲಿ ನೆಲಸಿರುವ ಶ್ರೀ ಬಲಮುರಿ ಗಣಪತಿ, ಶ್ರೀ ಮಹೇಶ್ವರಿ ಅಮ್ಮನವರು, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ನಾಗದೇವತೆ, ಶ್ರೀ ಮುನೇಶ್ವರಸ್ವಾಮಿ ಹಾಗೂ ಶ್ರೀ ಸಪ್ತಮಾತೃಕೆಯರ ನೂತನ ಆಲಯದ ಗೋಪುರ ಬಿಂಬಗಳ ಪ್ರತಿಷ್ಟಾಪನಾ ಮತ್ತು ಕುಂಬಾಭಿಷೇಕ ಮಹೋತ್ಸವ 10ರಿಂದ 12ರವರೆಗೆ ನಡೆಯಲಿದೆ ಎಂದು ದೇವಾಲಯದ ಧರ್ಮಾಧಿಕಾರಿ ಮುನಿಯಪ್ಪಗೌಡ ತಿಳಿಸಿದರು. ಪುರಾತನ ದೇವಾಲಯವನ್ನು ಕಡೆಗಣಿಸಿರುವುದರಿಂದ ಭಕ್ತಾಧಿಗಳೇ ಸೇರಿ ಸುಮಾರು 1ಕೋಟಿ ರು. ವೆಚ್ಚದಲ್ಲಿ ಎರಡು ಎಕರೆ ಜಮೀನಿನಲ್ಲಿ ಜೀರ್ಣೋದ್ದಾರ ಕೈಗೊಂಡಿದ್ದಾರೆ. ಇಲ್ಲಿಗೆ ಬರುವ ಭಕ್ತಾಧಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. 10ರಂದು ವಿವಿಧ ಪೂಜೆಗಳು ನೆರವೇರಲಿದ್ದು, 11ರಂದು ಯಾಗಶಾಲಾ ಪ್ರವೇಶ, 12ರಂದು ನಾಡಿಸಂಧಾನ ಪೂರ್ವಕ ಸ್ಪರ್ಶಾಹುತಿ ಪೂಜಾ ಕಾರ್ಯಗಳಿವೆ. ಈ ಎಲ್ಲಾ ಕಾರ್ಯಗಳನ್ನು ಆಧಿಚುಂಚನಗಿರಿ ಮಠಾಧಿಪತಿ ನಿರ್ಮಾಲಾನಂದ ಸ್ವಾಮಿ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ಮುನಿಯಪ್ಪಗೌಡ ತಿಳಿಸಿದ್ದಾರೆ.
ತಾಯಲೂರಿನಲ್ಲಿ ಬಿಎಂಸಿ ಕೇಂದ್ರ ಸ್ಥಾಪನೆ
ಮುಳಬಾಗಲು: ಪ್ರತಿ ದಿನ 9 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಲಾಭದತ್ತ ಮುನ್ನಡೆ ಸಾಧಿಸಿದೆ ಎಂದು ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಹೇಳಿದರು. ತಾಲೂಕಿನ ತಾಯಲೂರು ಗ್ರಾಮದಲ್ಲಿ ಕೋಚಿಮುಲ್ನಿಂದ ಸ್ಥಾಪಿಸಿದ ಬಲ್ಕ್ ಮಿಲ್ಕ್ ಕೂಲರ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನಲ್ಲಿ ಹೆಚ್ಚುವರಿಯಾಗಿ ಬಿಎಂಸಿ ಕೇಂದ್ರಗಳನ್ನು ತೆರೆಯುವುದಾಗಿ, ರೈತರು ಕೋಚಿಮುಲ್ಗೆ ನೀಡುವ ಹಾಲಿನ ಗುಣ ಮಟ್ಟ ಶೇ.51 ರಷ್ಟು ಇದ್ದು ಇದನ್ನು ಶೇ.ನೂರಕ್ಕೆ ತರಲು ಸಂಘದ ಎಲ್ಲಾ ಪದಾಧಿಕಾರಿಗಳು ಸಹಕರಿಸಬೇಕು ಎಂದರು. ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಡಾ. ರವಿಶಂಕರ್ ಹೆಗಡೆ, ಬಿಎಂಸಿ ಉಪ ವ್ಯವಸ್ಥಾಪಕ ಹನುಮಂತಪ್ಪ, ಮುಳಬಾಗಲು ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಬಿ. ಶಿವರಾಜ್, ಸಂಘದ ಅಧ್ಯಕ್ಷ ಡಿ.ಆರ್. ರಾಮಕೃಷ್ಣಪ್ಪ ಇದ್ದರು.
ಮತದಾರರ ಪಟ್ಟಿ ಪರಿಷ್ಕರಣೆ
ಮುಳಬಾಗಲು: ಚುನಾವಣಾ ಅಯೋಗದ ನಿರ್ದೇಶನದಂತೆ ಮುಳಬಾಗಲು ವಿಧಾನಸಭೆ ಕ್ಷೇತ್ರದ ಭಾವಚಿತ್ರವುಳ್ಳ ಮತದಾರರ ಪಟ್ಟಿಗಳನ್ನು ಸಂಕ್ಷಿಪ್ತ ಪರಿಷ್ಕರಣೆ ಅರ್ಜಿಗಳನ್ನು ಸಲ್ಲಿಸುವಂತೆ ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಕೋರಿದ್ದಾರೆ. ಅರ್ಜಿಗಳನ್ನು ಡಿ.6ರವರೆವಿಗೂ ನೀಡಬಹುದು. ಮುಂದಿನ ವರ್ಷ ಜನವರಿಗೆ 18 ವರ್ಷ ತುಂಬಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ತೆಗೆಯಲು ನಮೂನೆ- 7 ಹೆಸರು ತಿದ್ದುಪಡಿಗೆ ನಮೂನೆ 8, ಹೆಸಲು ವರ್ಗವಣೆಗೆ ನಮೂನೆ 8ಎ ಸಲ್ಲಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಣ್ಣು ಸಂರಕ್ಷಣೆ ವಿಚಾರ ಸಂಕಿರಣ
ಚಿಂತಾಮಣಿ: ರೈತರು ಬೆಳೆಯುವ ಬೆಳೆ ಬಗ್ಗೆ ಮಾಹಿತಿ ಪಡೆದು ಬೆಳೆ ಇಡುವುದು ಸೂಕ್ತ ಎಂದು ರೇಷ್ಮೆ ಕೃಷಿ ಮಹಾ ವಿದ್ಯಾಲಯದ ಡಾ.ಕೆ. ಜಗದೀಶ್ವರ ಹೇಳಿದರು. ತಾಲೂಕಿನ ಬಾಗೇಪಲ್ಲಿ ರಸ್ತೆಯ ನಾಯನಹಳ್ಳಿ ಕ್ರಾಸ್ನಲ್ಲಿ ಕೃಷಿ ಇಲಾಖೆ, ರೇಷ್ಮೆ ಕೃಷಿ ಮಹಾ ವಿದ್ಯಾಲಯ ಮತ್ತು ಫ್ಯಾಕ್ಟ್ ಸಂಸ್ಥೆ ಆಯೋಜಿಸಿದ್ದ ಒಣಭೂಮಿ ಬೇಸಾಯ ಮತ್ತು ಮಣ್ಣು ಸಂರಕ್ಷಣೆ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಲ್ಪ ಪ್ರಮಾಣದ ಮಳೆಯಿಂದ ರೈತ ಆತಂಕ ಪಡುವ ಅವಶ್ಯಕತೆಯಿಲ್ಲದೆ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಪದ್ಧತಿಗಳ ಬಗ್ಗೆ ರೈತರು ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು ಎಂದರು. ಸಹಾಯಕ ಕೃಷಿ ನಿರ್ದೇಶಕ ಡಾ. ನಹೀಮ್ ಪಾಷಾ ಮಾತನಾಡಿ, ಗುಣಮಟ್ಟದ ಬಿತ್ತನೆ ಬೀಜದಿಂದ ಅಧಿಕ ಬೆಳೆ ಬೆಳೆಯಬಹುದು ಎಂದರು. ಫ್ಯಾಕ್ಟ್ ಏರಿಯಾ ವ್ಯವಸ್ಥಾಪಕ ಶ್ರೀಹರಿರಾಯ, ವೇಲುಮಣಿ, ಡಾ.ವಿ. ಶಂಕರನಾರಾಯಣ, ಡಾ. ರಾಮಕೃಷ್ಣ ನಾಯಕ್, ಡಾ. ರಾಜಣ್ಣ ಮಾಹಿತಿ ನೀಡಿದರು. ಕೃಷ್ಣ ಎಂ. ಭಟ್, ಜಿ. ಶಿವಣ್ಣ ರೈತರಿಗೆ ತರಕಾರಿ ಬೆಳೆಗಳ ಬಗ್ಗೆ ಮಾಹಿತಿ ನೀಡಿದರು.
ಮಕ್ಕಳಿಗೆ ಕವಿ, ಕಾವ್ಯ ಜಾಗೃತಿ
ಮುಳಬಾಗಲು: ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ಶಾಲೆಗೊಂದು ಕನ್ನಡ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ವೃಕ್ತವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ಕೃ. ಪದ್ಮನಾಭರಾವ್ ಹೇಳಿದರು. ಪಟ್ಟಣದ ಡಾ.ಡಿ.ವಿ. ಗುಂಡಪ್ಪ ಬಾಲಕರ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಕೆಜಿಎಫ್ನಲ್ಲಿ ಡಿ.5ರಂದು ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಅಸಕ್ತ ಮಕ್ಕಳನ್ನು ಆಯ್ಕೆ ಮಾಡಲಾಗುವುದು ಎಂದರು. ಪ್ರಧಾನ ಕಾರ್ಯದರ್ಶಿ ಶಂಕರ್ ಕೇಸರಿ, ಮಂಜುಕನ್ನಿಕಾ, ಕನ್ನಡ ಭಟ ವೆಂಕಟಪ್ಪ, ಯು.ವಿ. ನಾರಾಯಣಾಚಾರ್ ಇದ್ದರು.
ಕನ್ನಡ ರಾಜ್ಯೋತ್ಸವ
ಗೌರಿಬಿದನೂರು: 1979 ರಲ್ಲಿ ಅಂದಿನ ಮುಖ್ಯ ಮಂತ್ರಿ ದೇವರಾಜ್ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು ಎಂದು ವಿಶ್ವಕರ್ಮ ಸಂಘದ ಅಧ್ಯಕ್ಷ ಎಂ.ಎನ್. ರಾಧಾಕೃಷ್ಣ ಹೇಳಿದರು. ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ರಾಮಕೃಷ್ಣಾರೆಡ್ಡಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಭಾಷೆಯ ಜಾಗೃತಿಗಾಗಿ ಶ್ರಮಿಸಬೇಕು ಎಂದರು. ತಾಪಂ ಸದಸ್ಯೆ ಪದ್ಮ ಪ್ರಕಾಶ್, ಅಶ್ವತ್ಥರೆಡ್ಡಿ, ಅಶ್ವತ್ಥನಾರಾಯಣಪ್ಪ, ಸೋಮೇಗೌಡ, ಪ್ರಕಾಶ್, ಪದ್ಮರಾಜ್, ಬಾಲಕೃಷ್ಣ, ರಮೇಶ್ ನಾಯಕ್, ರವಿ, ರಾಮಕೃಷ್ಣಪ್ಪ ಇದ್ದರು.
ಕೆಪಿಸಿಸಿಗೆ ಆಯ್ಕೆ
ಚಿಂತಾಮಣಿ: ಹಿಂದುಳಿದ ವರ್ಗಗಗಳ ಜನರನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಲು ಪ್ರಾಮಾಣಿಕ ಸೇವೆ ಮಾಡುತ್ತೇನೆಂದು ಕೆಪಿಸಿಸಿ ಹಿಂದುಳಿದ ವಿಭಾಗದ ರಾಜ್ಯದ ನೂತನ ಪ್ರಧಾನ ಕಾರ್ಯದರ್ಶಿ ಎಸ್. ಮುದ್ದುಕೃಷ್ಣ ಯಾದವ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ನನ್ನನ್ನು ಪಕ್ಷದ ವರಿಷ್ಟರು ಸೂಚಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸುಭ್ರಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

