ಕೋಲಾರ

ಭರ್ಜರಿ ಮಡೆಸ್ನಾನಕ್ಕೆ ಸಿದ್ಧತೆ

Published On :

ಟಿ ಎನ್. ವೆಂಕಟೇಶ್
ಚಿಕ್ಕಬಳ್ಳಾಪುರ; ವ್ಯಾಪಕ ವಿರೋಧದ ನಡುವೆಯೂ ವಿವಾದಿತ ಸಾಂಪ್ರದಾಯಿಕ ಆಚರಣೆ ಮಡೆಸ್ನಾನ ಕಾರ್ಯಕ್ರಮಕ್ಕೆ ನಗರದಲ್ಲಿ ಭರ್ಜರಿ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಅನೇಕ ದಶಕಗಳಿಂದಲೂ ನಗರದಲ್ಲಿರುವ ಮುಜರಾಯಿ ಇಲಾಖೆಗೆ ಸೇರಿರುವ ಹಳೆಯ ಶ್ರೀ ಸುಬ್ರಮಣ್ಯೇಶ್ವರಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷ ಮಡೆಸ್ನಾನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ಕಾರ್ಯಕ್ರಮದ ಯಶಸ್ವಿಗೆ ವ್ಯವಸ್ಥಿತ ರೀತಿಯಲ್ಲಿ ಶ್ರಮಿಸಲಾಗುತ್ತಿದೆ.
ಭರ್ಜರಿ ಊಟಕ್ಕೆ ಸಿದ್ಧತೆ: ಡಿ.8 ರಂದು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾವ 4.30 ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಬೆಳಿಗ್ಗೆಯೇ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಆಚರಣೆಗಳಲ್ಲಿ ನಿರತರಾಗಲಿದ್ದಾರೆ. ಮಂಗಳಾರತಿಯೊಂದಿಗೆ ಬೆಳಿಗ್ಗೆ 10.30 ಕ್ಕೆ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ನೀಡಲಿದ್ದು, ನಗರದ ಸುಬ್ಬರಾಯನಪೇಟೆ, ಗರ್ಲ್ ಸ್ಕೂಲ್ ರೋಡ್, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಥ ಸಂಚರಿಸಲಿದೆ. ರಥೋತ್ಸವ ಮುಗಿದ ನಂತರ 108 ಬ್ರಾಹ್ಮಣ ಬ್ರಹ್ಮಚಾರಿಗಳು ದೇವರ ಮುಂದೆ ಕುಳಿತು ಅರ್ಚಿಸಲಿದ್ದು ಎಲ್ಲಾ ಆಚರಣೆಗಳು ಮುಗಿದ ನಂತರ ಮಧ್ಯಾಹ್ನ 12.30 ರ ಹೊತ್ತಿಗೆ ಪಂಕ್ತಿಯಲ್ಲಿ ಭೋಜನ ಹಾಕಲಾಗುತ್ತದೆ. ಮೊದಲ ಪಂಕ್ತಿಯಲ್ಲಿ ಕುಳಿತು ಜನರು ಊಟ ಮುಗಿಸಿದ ತಕ್ಷಣ ಪ್ರಮುಖ ವಿವಾದಿತ ಕೇಂದ್ರ ಬಿಂದು ಮಡೆಸ್ನಾನ ಆಚರಣೆ ನಡೆಯುತ್ತದೆ. ಮೂರು ವರ್ಷದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಅನೇಕರು ಎಂಜಲೆಲೆಗಳ ಮೇಲೆ ಉರುಳು ಸೇವೆ ಮಾಡಲಿದ್ದಾರೆ. ಮಡೆಸ್ನಾನ ಮುಗಿಯುತ್ತಿದ್ದಂತೆ ಸಿಕ್ಕ ಸಿಕ್ಕ ಎಂಜಲೆಲೆಗಳನ್ನು ಭಕ್ತರು ತಲೆಯ ಮೇಲಿಟ್ಟುಕೊಂಡು ಹೋಗಿ ಹೊರಗಡೆ ಬಿಸಾಡುತ್ತಾರೆ. ಕಾರ್ಯಕ್ರಮದ ಪ್ರಯುಕ್ತ ಸುಮಾರು 5 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಹೊಂದಿ ಭರ್ಜರಿ ಊಟದ ವ್ಯವಸ್ಥೆಕೈಗೊಂಡಿದ್ದು ಅನೇಕರು ಅಕ್ಕಿ, ಬೆಲ್ಲ, ಬೇಳೆ, ತರಕಾರಿ, ಎಣ್ಣೆ ಸೇರಿದಂತೆ ಅಡುಗೆ ಪದಾರ್ಥಗಳನ್ನು ದಾನವಾಗಿ, ಮತ್ತೆ ಹಲವರು ಆರ್ಥಿಕ ನೆರವನ್ನು ಒದಗಿಸಿದ್ದಾರೆ.
ವಿರೋಧಿಸುವವರು ವಿರೋಧಿಸಲಿ: ಮಡೆಸ್ನಾನ ವಿರೋಧಿಸುವವರು ವಿರೋಧಿಸಲಿ, ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಆಚರಣೆ ಎಷ್ಟೇ ವಿರೋಧ ಬಂದರೂ ಕೈ ಬಿಡುವುದಿಲ್ಲ. ವಿರೋಧಿಸುವವರಿಗೆ ದೇವರು ಒಳ್ಳೆಯದು ಮಾಡುವುದಿಲ್ಲ ಎಂದು ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯ ಷಷ್ಠಿ ಅನ್ನಸಂತರ್ಪಣಾ ಸಮಿತಿ ಸಂಚಾಲಕ ಕೆ.ಎಸ್. ಶಿವರಾಂ ಆಕ್ರೋಶ ವ್ಯಕ್ತಪಡಿಸಿದರು. ಇದು ಇಂದು ನಿನ್ನೆ ಪ್ರಾರಂಭವಾದ ಕಾರ್ಯಕ್ರಮವಲ್ಲ. ತಲಾಂತರಗಳಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ. ಬೇರೆಯವರ ನಂಬಿಕೆ ನಮಗೆ ಬೇಕಾಗಿಲ್ಲ. ಯಾರ ವಿರೋಧವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೂ ಇಲ್ಲ. ಯಾರನ್ನು ಬಲವಂತವಾಗಿ ಆಚರಣೆಯಲ್ಲಿ ಭಾಗವಹಿಸುವಂತೆ ಒತ್ತಾಯಿಸುತ್ತಿಲ್ಲ. ಹೀಗಿರುವಾಗ ವಿರೋಧವನ್ನು ವ್ಯಕ್ತಪಡಿಸುವುದು ಏತಕ್ಕೆ ಎಂದು ಪ್ರಶ್ನಿಸಿದರು.
ಬೇರೆಯವರಿಗೆ ಇಲ್ಲಿ ಊಟ ಮಾಡಿದ ಎಲೆ ಎಂಜಲೆಲೆ ಎನಿಸಬಹುದು. ಆದರೆ, ನಮಗೆ ಅದು ದೇವರ ಪ್ರಸಾದ. ಗಂಡ ಊಟ ತಿಂದ ತಟ್ಟೆಯಲ್ಲಿಯೇ ಹೆಂಡತಿ ಊಟ ತಿನ್ನುವುದು ಎಂಜಲು ತಟ್ಟೆಯಾಗುವುದಿಲ್ಲವಾ. ಒಂದು ವೇಳೆ ಮಡೆಸ್ನಾನವನ್ನು ಬಲವಂತವಾಗಿ ಮಾಡಿಸುತ್ತಿರುವುದು ಕಂಡ ಬಂದರೆ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದರು.

ಒಳ್ಳೆಯದೇ ಆಗಿದೆ
ಮಡೆಸ್ನಾನದಲ್ಲಿ ಭಾಗವಹಿಸುವ ಯಾರನ್ನೂ ಬೇಕಾದರೂ ಕೇಳಿ ಒಳ್ಳೆಯದಾಗಿದೆ ಎಂಬ ಉತ್ತರವೇ ಬರುತ್ತದೆ. ಇದರಿಂದಲೇ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಎನ್ನುವ ಸಂಚಾಲಕ ಎಸ್. ಶಿವರಾಂ, ಡಿ.8 ರಂದು ಮಡೆಸ್ನಾನ ಪದ್ಧತಿ ಇಲ್ಲಿ ನಡೆಯಲಿದ್ದು ರಕ್ಷಣೆ ನೀಡಬೇಕೆಂದು ಈಗಾಗಲೇ ಪೊಲೀಸ್ ಇಲಾಖೆಯನ್ನು ಕೋರಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ಆಚರಣೆಯಲ್ಲಿ ನಡೆಯುವ ಬೆಳವಣಿಗೆಗಳನ್ನು ಮುಂದೆ ಎದುರಿಸುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.


ಮಡೆಸ್ನಾನ ವಿರೋಧಿಸಿ ಪ್ರತಿಭಟನೆ
ಮಡೆಸ್ನಾನ ಆಚರಣೆ ವಿರೋಧಿಸಿ ಡಿ.8 ರಂದು ಜಿಲ್ಲಾ ಕೇಂದ್ರದಲ್ಲಿ ಸಿಪಿಐ(ಎಂ) ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಎಂಜಲೆಲೆ ಉರುಳು ಸೇವೆ ಮಾಡುವುದು ಮೂಢ ಪದ್ಧತಿ.ಪಂಕ್ತಿ ಭೋಜನ ಜಾತಿ ವ್ಯವಸ್ಥೆಗೆ ಹಿಡಿದ ಗನ್ನಡಿ. ಇಂತಹ ಆಚರಣೆ ನಿಲ್ಲಿಸಬೇಕೆಂದು ವ್ಯಾಪಕವಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಡಿ.8 ರಂದು ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ನಡೆಸಿ ಮಡೆಸ್ನಾನದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಸಿಪಿಐ(ಎಂ) ಮುಖಂಡ ಎಂ.ಪಿ. ಮುನಿವೆಂಕಟಪ್ಪ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.