31ರೊಳಗೆ ಉಳಿತಾಯ ಖಾತೆಗೆ ಗಡುವು
ಕ.ಪ್ರ.ವಾರ್ತೆ ಕೋಲಾರ ಡಿ. 7
ಬಡವರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ಮನೆಗೆ ಕನಿಷ್ಠ ಒಂದು ಉಳಿತಾಯ ಖಾತೆ ಇರಬೇಕೆಂಬ ಸದಾಶಯ ಹೊಂದಿರುವುದರಿಂದ ಅಧಿಕಾರಿಗಳು ಮನೆಗಳಿಗೆ ತೆರಳಿ ಉಳಿತಾಯ ಖಾತೆ ಮಾಡಿಸಬೇಕೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೀಡ್ ಬ್ಯಾಂಕಿನ ವ್ಯಾಪ್ತಿಗೆ ಸೇರಿದ ವಿವಿಧ ಬ್ಯಾಂಕುಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರ ಮತ್ತು ಜಿಲ್ಲಾಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 6 ಲಕ್ಷ ಕುಟುಂಬಗಳಿದ್ದು ಈಗಾಗಲೇ ಕಳೆದ ಒಂದು ವರ್ಷದ ಅವಧಿಯಲ್ಲಿ 8,400 ಉಳಿತಾಯ ಖಾತೆಗಳನ್ನು ಮಾಡಲಾಗಿದೆ. ತಾವು ಅನೇಕ ಸಭೆಗಳಲ್ಲಿ ಪ್ರತಿ ಕುಟುಂಬದಲ್ಲೂ ಕಡ್ಡಾಯವಾಗಿ ಒಬ್ಬರಿಗಾದರೂ ಉಳಿತಾಯ ಖಾತೆ ಮಾಡಿಸುವಂತೆ ಸೂಚಿಸುತ್ತಾ ಬಂದರೂ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಯಲ್ಲಿ 3,66,477 ಕುಟುಂಬಳಿದ್ದು 21 ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಸರ್ಕಾರ ಬಡವರ ಉಳಿತಾಯ ಖಾತೆಗೆ ಯಾವುದೇ ಭದ್ರತೆ ಇಲ್ಲದೆ ಕನಿಷ್ಠ 10 ಸಾವಿರ ರು.ಜಮಾ ಮಾಡಲು 10 ಸಾವಿರ ಕೋಟಿ ರು.ಗಳನ್ನು ಮೀಸಲಿಟ್ಟಿದೆ ಎಂದರು.
ಡಿ.31ಕ್ಕೆ ಗಡುವು; ಬಡವರು ಬ್ಯಾಂಕ್ ಖಾತೆ ಹೊಂದಿದ್ದಲ್ಲಿ 10 ಸಾವಿರ ರು. ಸಾಲ ಸಿಗುತ್ತದೆ. ಈ ಹಣವನ್ನು ಸದುಪಯೋಗ ಮಾಡಿಕೊಂಡು ಮತ್ತೆ ಮರು ಪಾವತಿ ಮಾಡಿದಲ್ಲಿ ಹೆಚ್ಚಿನ ಸಾಲ ಸೌಲಭ್ಯ ಪಡೆಯುವ ಮೂಲಕ ಆರ್ಧಿಕವಾಗಿ, ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುವುದರಿಂದ ಬ್ಯಾಂಕಿನ ಅಧಿಕಾರಿಗಳು ಜನತೆಯಲ್ಲಿ ಅರಿವು ಮೂಡಿಸಿ ಗುರುತಿಸಲ್ಪಟ್ಟಿರುವ ಕುಟುಂಬಗಳ ಪೈಕಿ ಶೇ.10ರಷ್ಟು ಕುಟುಂಬಗಳಾದರೂ ಕಡ್ಡಾಯವಾಗಿ ಉಳಿತಾಯ ಖಾತೆ ಮಾಡಿಸಲು ಪ್ರೇರಣೆ ನೀಡಬೇಕು. ಡಿ.31ಗೊಳಗೆ ನಿಗದಿ ಪಡಿಸಿದ ಗುರಿ ಸಾಧನೆ ಮಾಡಲೇಬೇಕೆಂದು ತಾಕೀತು ಮಾಡಿದರು.
ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಪ್ರತಿ ತಿಂಗಳು ದುಬಾರಿ ಬಡ್ಡಿ ಕಟ್ಟುವ ಬದಲು ವಾರ್ಷಿಕ ಕೇವಲ 10.5 ಬಡ್ಡಿ ವಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಜನತೆ ಸದುಪಯೋಗ ಮಾಡಿಕೊಂಡು ಮೂರು ವರ್ಷದ ಅವಧಿಯೊಳಗೆ ಸಾಲ ಮರು ಪಾವತಿ ಮಾಡಿದಲ್ಲಿ ಬ್ಯಾಂಕು ಉಳಿಯುತ್ತದೆ, ಜೊತೆಗೆ ಗ್ರಾಹಕ ಮತ್ತೊಮ್ಮೆ ಸಾಲ ಪಡೆಯುವುದಕ್ಕೆ ಸಹಾಯವಾಗುವುದರಿಂದ ಈ ಯೋಜನೆಯ ಬಗ್ಗೆ ಅಧಿಕಾರಿಗಳು ವ್ಯಾಪಕ ಪ್ರಚಾರದ ಜೊತೆಗೆ ಮನೆಗಳಿಗೆ ತಾವೇ ಹೋಗಿ ಉಳಿತಾಯ ಖಾತೆ ಮಾಡಿಸಬೇಕೆಂದು ಗಡುವು ನೀಡಿದರು.
ಡಿಸಿ ಎಚ್ಚರಿಕೆ: ಜಿಲ್ಲಾಧಿಕಾರಿ ಡಿ.ಕೆ. ರವಿ ಮಾತನಾಡಿ, ಉಳಿತಾಯ ಖಾತೆ ಮಾಡಿಸುವುದರಿಂದ ಬ್ಯಾಂಕುಗಳಲ್ಲಿ ವ್ಯವಹಾರ ಹೆಚ್ಚಾಗುತ್ತದೆ. ಅದೇ ರೀತಿ ಅಗತ್ಯವಿರುವ ಕಡೆ ಬ್ಯಾಂಕ್ಗಳನ್ನು ತೆರೆಯಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಒಂದು ಬ್ಯಾಂಕ್ ಸ್ಥಾಪನೆಯಾದಲ್ಲಿ ಸದರಿ ಗ್ರಾಪಂ ಒಂದರಿಂದಲೇ 1 ಕೋಟಿ ರು.ಉಳಿತಾಯ ಖಾತೆಯಲ್ಲಿ ಜಮಾ ಮಾಡಿಸಬಹುದಾಗಿದೆ ಜೊತೆಗೆ ಪಿಂಚಣಿ, ವೇತನ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಬಾಬ್ತಿನ ಹಣಕಾಸು ವ್ಯವಹಾರವನ್ನು ಬ್ಯಾಂಕ್ ಮುಖೇನ ಮಾಡಬಹುದಾಗಿರುವುದರಿಂದ ಬ್ಯಾಂಕರ್ಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು, ಒಂದು ವೇಳೆ ಸರ್ಕಾರದ ಆಶಯಗಳಿಗೆ ಸ್ಪಂಧಿಸದಿದ್ದರೆ ತಮಗಿರುವ ಅಧಿಕಾರ ಚಲಾಯಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆನರಾ ಬ್ಯಾಂಕಿನ ಮುಖ್ಯ ಪ್ರಬಂಧಕ ಸಂಪತ್ ಕುಮಾರ್, ಸುಂದರೇಶ್, ರೆಡ್ಡಯ್ಯ, ಶ್ರೀಧರ್, ಜಿಪಂ ಸಿಇಒ ಝಲ್ಫಿಖಾರ್ ಉಲ್ಲಾ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಜಿಪಂ ಸದಸ್ಯರಾದ ಅ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ರೂಪಕಲಾ, ಕುಮಾರ್, ಜಯದೇವ್, ಜಿಪಂ ಉಪ ಕಾರ್ಯದರ್ಶಿ ಬದನೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

