ಬಾವುಟಗಳ ತೆರವು ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಕೋಲಾರ ಡಿ. 7
ಕಳೆದ ಸೋಮವಾರ ನಡೆದ ಅಂತರಗಂಗೆ ಜಾತ್ರೆ ಪ್ರಯುಕ್ತ ಬಜರಂಗದಳದವರು ನಗರದ ಸರ್ಕಾರಿ ಬಸ್ ನಿಲ್ದಾಣ ವೃತ್ತದಲ್ಲಿ ಕಟ್ಟಲಾಗಿದ್ದ ಬಾವುಟಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದರಿಂದ ಕುಪಿತರಾದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ದೇವರ ಚಿತ್ರಗಳಿದ್ದ ಫ್ಲೆಕ್ಸ್ ಮತ್ತು ಬಾವುಟಗಳನ್ನು ಯಾವುದೇ ಮಾಹಿತಿ ನೀಡದೆ ತೆರವುಗೊಳಿಸಿದ್ದು, ನಗರಸಭೆ ಮತ್ತೆ ಯಥಾಪ್ರಕಾರ ಬಾವುಟಗಳನ್ನು ಕಟ್ಟಿಕೊಡಬೇಕೆಂದು ಒತ್ತಾಯಿಸಿ ಕಾರ್ಯಕರ್ತರು ರಸ್ತೆ ತಡೆ ಮಾಡಿದರು.
ವಿಷಾದ ವ್ಯಕ್ತಪಡಿಸಿದ ಆಯುಕ್ತ: ಸ್ಥಳಕ್ಕೆ ಬಂದ ನಗರಸಭೆ ಆಯುಕ್ತ ಜಗದೀಶ್ ಅವರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ನಾವು ನಗರಸಭೆಯ ಅನುಮತಿ ಪಡದೇ ಪ್ರಚಾರ ಸಮಗ್ರಿ ಬಳಸಿದ್ದೇವೆ. ಡಿ.20ರೊಳಗೆ ಬಾವುಟ ಹಾಗೂ ಫ್ಲೆಕ್ಸ್ಗಳನ್ನು ನಾವೇ ತೆರವುಗೊಳಿಸುವುದಾಗಿ ಹೇಳಿದ್ದೇವೆ. ಆದರೂ ಏಕಾಏಕಿ ಜೆಸಿಬಿ ತಂದು ಪ್ರಚಾರ ಸಮಗ್ರಿಗಳನ್ನು ನಾಶ ಮಾಡಿದ್ದಾರೆಂದು ಆರೋಪಿಸಿದರು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದನ್ನು ಗಮನಿಸಿದ ನಗರಸಭೆ ಆಯುಕ್ತ ಜಗದೀಶ್, ಸಿಗ್ನಲ್ ಲೈಟ್ಗಳಿಗೆ ಅಡ್ಡಿಯಾಗುತ್ತಿದೆ ಎಂಬ ದೂರಿನ ಮೇರೆಗೆ ಬಾವುಟಗಳನ್ನು ತೆಗೆಸಲಾಗಿದೆ. ಇದರಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ವಿಷಾಧಿಸುತ್ತೇನೆ, ಬೇಕಾದರೆ ಮತ್ತೆ ಬಾವುಟಗಳನ್ನು ಕಟ್ಟಿಸಿಕೊಡುವುದಾಗಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು.
ಮಾತಿನ ಚಕಮಕಿ: ಈ ವೇಳೆಗೆ ಬಸ್ ನಿಲ್ದಾಣ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರಿಂದ ಸಂಚಾರ ನಿಯಂತ್ರಣಕ್ಕಾಗಿ ಬಂದ ಪೊಲೀಸರು ರಸ್ತೆಗೆ ಅಡ್ಡಲಾಗಿಟ್ಟಿದ್ದ ವಾಹನಗಳನ್ನು ತೆಗೆಯಲು ಮುಂದಾದಾಗ ಕುಪಿತರಾದ ಪ್ರತಿಭಟನಾಕಾರರು ನಮಗೆ ನ್ಯಾಯ ಸಿಗಬೇಕು, ಅನುಮತಿ ಇಲ್ಲದೆ ನಗರದ ಅನೇಕ ಕಡೆ ಫ್ಲೆಕ್ಸ್ಗಳನ್ನು ಇಡಲಾಗಿದೆ. ಮೊದಲು ಅಲ್ಲಿ ಕ್ರಮ ಜರುಗಿಸಿ ನಂತರ ನಮಗೆ ಬುದ್ಧಿ ಹೇಳಿ ಎಂದಾಗ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಲಾಠಿ ಪ್ರಹಾರ: ಈ ಸಂದರ್ಭದಲ್ಲಿ ಕೆಲ ಉದ್ರಿಕ್ತರು ಜೆಸಿಬಿಯ ಮೇಲೆ ಕಲ್ಲು ತೂರಾಡಿದ್ದರಿಂದ ಜೆಸಿಬಿಯ ಗಾಜುಗಳು ಪುಡಿ ಪುಡಿ ಆಯಿತು. ಪೊಲೀಸರು ಲಾಠಿ ಪ್ರದರ್ಶಿಸಿ ಗುಂಪನ್ನು ಚದುರಿಸಿದರು. ಬಸ್ ನಿಲ್ದಾಣ ವೃತ್ತದಲ್ಲಿ ಕೆಲ ನಿಮಿಷ ಬಿಗುವಿನ ವಾತಾವಣ ಕಂಡು ಬಂದಿತು. ಡಿವೈಎಸ್ಪಿ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತಂದರು. ಸಿಪಿಐ ಶಿವಕುಮಾರ್ ತಮ್ಮೊಂದಿಗೆ ಉದ್ದಟತನದಿಂದ ವರ್ತಿಸಿದ್ದಾರೆಂದು ಬಜರಂಗದಳದ ಮುಖಂಡರಾದ ಬಾಬು, ಬಾಲಾಜಿ, ಅಪ್ಪಿ, ಮಂಜುನಾಥ್ ದೂರಿದರು.
ಏನೇ ಸಮಸ್ಯೆಯಿದ್ದರೂ ಮಾತುಕತೆಯ ಮೂಲಕ ನಿವಾರಣೆ ಮಾಡಿಕೊಳ್ಳೋಣ, ಬೀದಿಯಲ್ಲಿ ನಿಂತು ಪ್ರತಿಭಟಿಸುವುದು ಸಲ್ಲದು ಎಂದು ಡಿವೈಎಸ್ಪಿ ಅಶೋಕ್ ಕುಮಾರ್ ಸಮಾಧಾನ ಹೇಳಿದ ನಂತರ ಪರಿಸ್ಥಿತಿ ತಿಳಿಯಾಯಿತು.
ರೌಡಿ ಪಟ್ಟಿಗೆ ಸೇರಿಸಲು ಸೂಚನೆ: ಜೆಸಿಬಿ ಮೇಲೆ ಕಲ್ಲು ತೂರಾಡಿ ಜಖಂಗೊಳಿಸಿರುವವರನ್ನು ಪತ್ತೆ ಮಾಡಿ ರೌಡಿ ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಮೀಲ್ ಅವರು ನಗರಠಾಣೆ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

