ಮಡೆಸ್ನಾನ ನಿಷೇಧಕ್ಕೆ ಒತ್ತಾಯ
ಚಿಕ್ಕಬಳ್ಳಾಪುರ: ಮೂಢನಂಬಿಕೆ ಮತ್ತು ಅವೈಜ್ಞಾನಿಕ ಪದ್ಧತಿಯಾಗಿರುವ ಮಡೆಸ್ನಾನ ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿ ಸಿಪಿಎಂ ಪ್ರತಿಭಟನೆ ನಡೆಸಿತು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಸುಬ್ಬರಾಯನಪೇಟೆಯಲ್ಲಿರುವ ಹಳೆಯ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದ ಸಮೀಪ ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ, ಎಂಜಲೆಲೆ ಮೇಲೆ ಉರುಳುವುದರಿಂದ ಅನೇಕ ಕಾಯಿಲೆಗಳು ಬರುತ್ತವೆ. ಇದೊಂದು ಮೂಢನಂಬಿಕೆಯಾಗಿದೆ.ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಆಚರಣೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದಲ್ಲಿ ಮೂಢನಂಬಿಕೆ, ಕೆಟ್ಟ ಆಚರಣೆಗಳನ್ನು ನಿರ್ಮೂಲನೆ ಮಾಡುವುದಾಗಿ ಹೇಳುತ್ತಿದ್ದಾರೆ. ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಮಡೆಸ್ನಾನ ಪದ್ಧತಿಯನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ್ದು ಅವರು ಪ್ರಾಮಾಣಿಕರಾಗಿದ್ದರೆ ಮಡೆಸ್ನಾನ ಆಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿ, ಅಲ್ಲದೇ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿದರು.
ಮಡೆಸ್ನಾನ ಆಚರಣೆ ನಿಲ್ಲಿಸುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ವಾದಿಸಿದಾಗ ಪೊಲೀಸರೊಂದಿಗೆ ಮಡೆಸ್ನಾನ ಆಚರಣೆಯ ಸಂಘಟಕರು ಬಂದು ಸಮಾಧಾನಪಡಿಸಲು ಮುಂದಾದರು.
ವಿವಾದದ ಹಿನ್ನೆಲೆಯಲ್ಲಿ ಮಡೆಸ್ನಾನ ಆಚರಿಸಬಾರದೆಂದು ಈಗಾಗಲೇ ನಿರ್ಧರಿಸಲಾಗಿದೆ. ಹಾಗೆಯೇ ಮೈಕಿನ ಮೂಲಕ ಭಕ್ತರನ್ನು ಕೋರಲಾಗಿದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಎಂ.ಪಿ. ಮುನಿವೆಂಕಟಪ್ಪ, ಗೋಪಿನಾಥ್, ಸಾವಿತ್ರಮ್ಮ, ಸಿದ್ಧಗಂಗಪ್ಪ, ನಾಗರಾಜ್, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಜಯರಾಮರೆಡ್ಡಿ, ಬಾಬುರೆಡ್ಡಿ, ವರಲಕ್ಷ್ಮಿ, ಮಧುಲತಾ ಭಾಗವಹಿಸಿದ್ದರು.
ಆಲಯದ ಮುಂದೆ ಥಳಿತ: ಪ್ರತಿಭಟನೆ: ಮಡೆಸ್ನಾನ ಆಚರಣೆ ನಿಲ್ಲಿಸುತ್ತೇವೆ ಎಂಬ ಭರವಸೆ ನೀಡಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಪುರೋಹಿಶಾಹಿತ್ವ ವರ್ಗ ಯಾಮಾರಿಸಿದೆ ಎಂದು ಸಿಪಿಎಂ ಆರೋಪಿಸಿದೆ. ಮಡೆಸ್ನಾನ ಆಚರಣೆ ವಿರೋಧಿಸಿ ನಗರದ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಧಿಕ್ಕಾರ ಕೂಗಿದ ಮಹಿಳೆಯರನ್ನು, ಅಂಗವಿಕಲರನ್ನು ಮಡೆಸ್ನಾನ ಆಚರಣೆಯಲ್ಲಿ ಭಾಗಿಯಾಗಿದ್ದ ಕೆಲವರು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಆರೋಪಿಸಿ ಭಾನುವಾರ ಸಂಜೆ 5 ಗಂಟೆಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಮಾತನಾಡಿದ ಸಿಪಿಎಂ ಮುಖಂಡ ಎಂ.ಪಿ. ಮುನಿವೆಂಕಟಪ್ಪ, ದೇವಾಲಯ ಅವರಣದಲ್ಲಿ ಸಭ್ಯ ನಾಗರಿಕರೆನ್ನುವುದನ್ನು ಮರೆತು ಗೂಂಡಾಗಳಂತೆ ವರ್ತಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ಭರವಸೆ ಕೊಟ್ಟಿದ್ದು ಯಾವ ಪುರುಷಾರ್ಥಕ್ಕೆ. ಇದು ಯಾವ ಸಂಸ್ಕೃತಿ ಎಂದು ಪ್ರಶ್ನಿಸಿದ ಅವರು, ತಮ್ಮ ಎದುರೇ ಮಹಿಳೆಯರನ್ನು ಥಳಿಸುತ್ತಿದ್ದರು ಸಂಬಂಧಪಟ್ಟ ಪೊಲೀಸರು ಸುಮ್ಮನಿದ್ದರು ಎಂದು ಆರೋಪಿಸಿದರು. ಕೂಡಲೇ ಗೂಂಡಾಗಳಂತೆ ವರ್ತಿಸಿರುವವರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

