ಕೋಲಾರ

ಸಂಸ್ಕಾರ ಕಲಿಕೆಗೆ ಗೀತಾ ಪಠಣ ಸಹಕಾರಿ

Published On :

ಕನ್ನಡಪ್ರಭ ವಾರ್ತೆ  ಕೋಲಾರ   ಡಿ.9
ಭಗವದ್ಗೀತಾ ಪಠಣದಿಂದ ಮಕ್ಕಳಲ್ಲಿ ಸಂಸ್ಕಾರ, ಮೌಲ್ಯಗಳು ಬೆಳೆಯಲು ಸಹಕಾರಿಯಾಗಲಿದೆ ಎಂದು ಚಿನ್ಮಯ ಸಾಂದೀಪನಿ ಆಶ್ರಮದ ಸ್ವಾಮಿ ದತ್ತಪಾದಾನಂದರು ಅಭಿಪ್ರಾಯಪಟ್ಟರು.
 ತಾಲೂಕಿನ ಚಿನ್ಮಯ ಸಾಂದೀಪನಿ ಆಶ್ರಮದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಅನುಗ್ರಹ ಭಾಷಣದಲ್ಲಿ ತಿಳಿಸಿದರು.
 ಇಂದು ಶಿಕ್ಷಣ ಮೌಲ್ಯಗಳನ್ನು ಕಲಿಸುವತ್ತ ಸಾಗುತ್ತಿಲ್ಲ ಎಂದ ಅವರು, ಸುಶಿಕ್ಷಿತರೇ ಹೆಚ್ಚು ತಪ್ಪು ಮಾಡುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ವಿಷಾದಿಸಿ, ಶಿಕ್ಷಣ ಮೌಲ್ಯ ಕಲಿಸುವಂತಿರಬೇಕು ಎಂದರು.
 ಚಿನ್ಮಯ ಮಿಷನ್ ಮನೆ-ಮನೆಗಳಲ್ಲೂ ಭಗವದ್ಗೀತಾ ಪಠಣ ನಡೆಯುವಂತೆ ಮಾಡುವಲ್ಲಿ ಮಕ್ಕಳನ್ನು ಆಯ್ಕೆ ಮಾಡಿಕೊಂಡಿದೆ, ಇದರಿಂದಾಗಿ ಮಕ್ಕಳ ಭಾಷಾ ಪ್ರೌಢಿಮೆ ಹೆಚ್ಚುತ್ತಿದೆ, ಅವರಲ್ಲಿ ಸಂಸ್ಕಾರ ಬೆಳೆಯುತ್ತಿದೆ, ನಿರರ್ಗಳವಾಗಿ ಮಾತನಾಡುವ ಧೈರ್ಯ ನೀಡುತ್ತಿದೆ ಎಂದರು.
ಮಕ್ಕಳಿಗೆ ಬಹುಮಾನಗಳ ಪ್ರಾಯೋಜಕತ್ವ ನೀಡಿ ಬಹುಮಾನ ವಿತರಿಸಿದ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಚಂದ್ರಮೌಳಿ, ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಹಬಾಳ್ವೆಗೆ ಗೀತಾ ಪಠಣ ಸಹಕಾರಿಯಾಗಿದೆ ಎಂದರು.
 ಮಕ್ಕಳಿಗೆ ಚಿಕ್ಕಂದಿನಿಂದಲೇ ತಪ್ಪು ಮಾಡಿದರೆ ಉಳಿಗಾಲವಿಲ್ಲ, ಕೆಟ್ಟದ್ದನ್ನು ಮಾಡಿದವರು ಯಾರು ಸಾಧಕರಾಗಲಿಲ್ಲ ಎಂಬುದನ್ನು ತಿಳಿಸಿಕೊಡುವ ಮೂಲಕ ಅವರಲ್ಲಿ ಸಾಮಾಜಿಕ ಮೌಲ್ಯಗಳ ಪಾಠವನ್ನು ಗೀತೆ ಕಲಿಸಿಕೊಡುತ್ತಿದೆ ಎಂದರು.
6153 ಚಿಣ್ಣರು ಭಾಗಿ: ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಚಿನ್ಮಯ ಮಿಷನ್ ಕಾರ್ಯದರ್ಶಿ ಚಂದ್ರಪ್ರಕಾಶ್, ಸ್ಪರ್ಧೆಗಳಲ್ಲಿ ಜಿಲ್ಲೆಯ 36 ಶಾಲೆಗಳ 6153 ಸ್ಪರ್ಧಿಗಳು ಪಾಲ್ಗೊಂಡಿದ್ದು, ಇವರಲ್ಲಿ ಜಿಲ್ಲಾ ಮಟ್ಟಕ್ಕೆ 724 ಮಂದಿಯನ್ನು ಆಯ್ಕೆ ಮಾಡಲಾಗಿತ್ತು ಎಂದರು.
 ಚಿನ್ಮಯ ಮಿಷನ್ ಉಪಾಧ್ಯಕ್ಷ ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಚಿನ್ಮಯ ಶಾಲೆಯ ಪ್ರಾಂಶುಪಾಲ ಇದ್ದರು. ಗೀತಾ ಕಂಠಪಾಠ ಸ್ಪರ್ಧೆಗಳಲ್ಲಿ ನಗರದ ಆರ್.ವಿ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದ್ದು, ಪಾಂಡುರಂಗಯ್ಯ ಶ್ರೇಷ್ಠಿಯವರು ನೀಡುವ ರೋಲಿಂಗ್‌ಶೀಲ್ಡ್ ನೀಡಿ ಪುರಸ್ಕರಿಸಲಾಯಿತು.ಎಲ್ಲಾ ಐದು ಹಂತಗಳಲ್ಲಿ ಪಾಲ್ಗೊಂಡ ಚಿಣ್ಣರಿಗೆ ಪ್ರತಿ ಹಂತಕ್ಕೆ ನಗದು ಬಹುಮಾನ ನೀಡಲಾಯಿತು.
ವಲ್ಲಿಯಮ್ಮ, ದತ್ತತ್ರೇಯ ಕುಲಕರ್ಣಿ, ರವಿಶಂಕರ್, ಸುಧಾಮಣಿ, ನರಸಿಂಹಪ್ರಸಾದ್, ಅನಂತಪದ್ಮನಾಭ್ ಶ್ರೀನಿವಾಸ್, ರವೀಂದ್ರ ಭಟ್, ಸುರೇಶ್, ವೀಣಾ, ಶೈಲಜ, ಕನಕಮ್ಮ, ಮಮತಾ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.