ಹಿರಿಯರ ಕ್ರೀಡಾಕೂಟ; ಭಾಗವಹಿಸಲು ಕರೆ
ಕೋಲಾರ: ರಾಜ್ಯ ಮಾಸ್ಟರ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಡಿ. 21 ಮತ್ತು 22 ರಂದು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಹಿರಿಯರ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಬೇಕೆಂದು ಜಿಲ್ಲಾ ಸಮಿತಿ ಅಧ್ಯಕ್ಷ ಪಲ್ಲವಿ ಮಣಿ ಮನವಿ ಮಾಡಿದರು. ನಗರದ ಗುತ್ತಿಗೆದಾರರ ಭವನದಲ್ಲಿ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಹಿರಿಯ ಕ್ರೀಡಾಪಟುಗಳಿಗೆ ಜಿಲ್ಲಾ ಸಮಿತಿಯಿಂದಲೇ ನೋಂದಣಿ ಶುಲ್ಕ ಪಾವತಿಸಲಾಗುವುದಲ್ಲದೆ, ಟೀ ಷರ್ಟ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಚಿಸುವ ಕ್ರೀಡಾಪಟುಗಳು ಡಿ.20 ರಂದು ಮಧ್ಯಾಹ್ನ 3 ಗಂಟೆಗೆ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಜರಾಗಬೇಕು. 35 ರಿಂದ 84 ವರ್ಷದೊಳಗಿನ ಪುರುಷರು ಮತ್ತು 35 ರಿಂದ 79 ವರ್ಷದೊಳಗಿನ ಮಹಿಳೆಯರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ವಿವರಿಸಿದರು. ಈ ಕ್ರೀಡಾಕೂಟದಲ್ಲಿ ಆಯ್ಕೆಯಾಗುವ ಕ್ರೀಡಾಪಟುಗಳನ್ನು 2014 ಫೆಬ್ರವರಿ 27,28 ಮತ್ತು ಮಾರ್ಚ್ 1 ಮತ್ತು 2 ರಂದು ಕೊಯಮತ್ತೂರಿನಲ್ಲಿ ನಡೆಯಲಿರುವ 35 ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕಳುಹಿಸಿಕೊಡಲಾಗುವುದು ಎಂದರು. ರಾಮನಗರ ಕ್ರೀಡಾಕೂಟಕ್ಕೆ ಸಂಬಂಧಪಟ್ಟಂತೆ ವಿವರಗಳನ್ನು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಮೂರಾಂಡಹಳ್ಳಿ ವಿ. ಮಾರಪ್ಪರನ್ನು 9980885968 ರಲ್ಲಿ ಸಂಪರ್ಕಿಸಬಹುದು. ಸಂಘದ ಪೋಷಕ ಎನ್.ಎಸ್.ನಾರಾಯಣಮೂರ್ತಿ, ಗೌರವಾಧ್ಯಕ್ಷ ಮೂರಾಂಡಹಳ್ಳಿ ಇ. ಗೋಪಾಲಪ್ಪ, ಎಂ. ರಾಮಚಂದ್ರ, ಬಿ.ಎನ್. ವೀರಭದ್ರೇಗೌಡ, ಕೆ.ಟಿ. ಸುರೇಶ್ ಬಾಬು, ಕೆ.ಎಂ. ಸಂಜೀವಗೌಡ, ಕೆ.ಟಿ. ಪುಷ್ಪ, ಗೌಸ್ ಖಾನ್, ಆರ್. ನಾರಾಯಣಸ್ವಾಮಿ ಇದ್ದರು.
'ಬಾಲ್ಯವಿವಾಹದ ಬಗ್ಗೆ ಅರಿವು ಮೂಡಿಸಿ'
ಗೌರಿಬಿದನೂರು: ಗ್ರಾಮೀಣ ಜನರಿಗೆ ಬಾಲ್ಯವಿವಾಹಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ರೆಡ್ಡೆಪ್ಪ ಅಭಿಪ್ರಾಯಪಟ್ಟರು.
ತಾಪಂ ಆವರಣದ ಸಾಮರ್ಥ್ಯ ಸೌಧದದಲ್ಲಿ ರಾಜ್ಯ ಮಹಿಳಾ ಮಕ್ಕಳ ಅಭಿವೃದ್ಧಿಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಏರ್ಪಡಿಸಿದ್ದ ಬಾಲ್ಯ ವಿವಾಹ ತಡೆಗಟ್ಟುವ ಒಂದು ದಿನದ ಶಿಬಿರ ಉದ್ಘಾಟಿಸಿ ಮಾತನಾಡಿ, ಬಾಲ್ಯವಿವಾಹ ತಡಯಲು ಅಧಿಕಾರಿಗಳು ಎಚ್ಚೆತ್ತಿಕೊಂಡು ಕಾರ್ಯನಿರ್ವಹಿಸಬೇಕು ಎಂದರು. ತಹಸೀಲ್ದಾರ್ ಡಾ.ಎನ್. ಭಾಸ್ಕರ್ ಮಾತನಾಡಿ, ಅವರಿಗೆ ಆರಿವು ಮೂಡಿಸಿ ಅವರ ಮನಪರಿವರ್ತಿಸಬೇಕಾಗಿದೆ ಎಂದರು. ತ್ರಿಭುವನೇಶ್ವರಿ, ಬಾಲ್ಯವಿವಾಹಗಳಿಂದ ಉಂಟಾಗುವ ಕೆಟ್ಟ ಪರಿಣಾಮಗಳು, ಅಪರಾಧಕ್ಕೆ ಶಿಕ್ಷೆ ಮುಂತಾದ ವಿಷಯಗಳನ್ನು ತಿಳಿಸಿದರು. ಜಯಲಕ್ಷ್ಮಿ ಇದ್ದರು.
ಹೊಸ ಬಡಾವಣೆಯಲ್ಲಿ ಚರಂಡಿ ಅಭಿವೃದ್ಧಿ
ಕೋಲಾರ: ನಗರದ ಹೊಸ ಬಡಾವಣೆಯಲ್ಲಿ ಚರಂಡಿಗಳ ದುರಸ್ತಿ ಕಾರ್ಯ ಶರವೇಗದಲ್ಲಿ ನಡೆದಿದೆ. ಈ ಬಡಾವಣೆಯ ಚರಂಡಿ ಮತ್ತು ರಸ್ತೆಗಳ ಅವ್ಯವಸ್ಥೆ ಕುರಿತು ಕನ್ನಡಪ್ರಭದ ನ.11ರ ಪೌರ ಸಮಸ್ಯೆ ಅಂಕಣದಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಹಾಗೂ ವಾರ್ಡ್ ನಂ.12ರ ಸದಸ್ಯ ರವೀಂದ್ರ ಹಾಳಾಗಿದ್ದ ಚರಂಡಿಗಳ ಅಭಿವೃದ್ಧಿಗೆ ಕಾಮಗಾರಿ ಆರಂಭಿಸಿರುವುದಕ್ಕೆ ಬಡಾವಣೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಅನೇಕ ವರ್ಷಗಳ ಹಿಂದೆ ಕಲ್ಲು, ಮಣ್ಣು ಬಳಸಿ ನಿರ್ಮಿಸಿದ್ದ ಚರಂಡಿಗಳು ಹಾಳಾಗಿತ್ತು. ಚರಂಡಿಯಲ್ಲಿ ಕೊಳಚೆ ನೀರು ತುಂಬಿ ಜನತೆ ಸೊಳ್ಳೆಗಳ ಕಾಟದಿಂದ ನರಳುತ್ತಿದ್ದರು. ಪೌರ ಸಮಸ್ಯೆ ಅಂಕಣದಲ್ಲಿ ವರದಿ ಪ್ರಕಟವಾದ ಬಳಿಕ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಇದೇ ರೀತಿ ರಸ್ತೆಗಳ ಅಭಿವೃದ್ಧಿ ಕಾರ್ಯವೂ ಬೇಗನೆ ಮುಗಿಸಬೇಕೆಂದು ಬಡಾವಣೆಯ ನಾಗರಿಕರು ನಗರಸಭೆ ಅಧಿಕಾರಿಗಳನ್ನು ಮತ್ತು ವಾರ್ಡಿನ ಸದಸ್ಯ ರವೀಂದ್ರ ಅವರನ್ನು ಒತ್ತಾಯಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ
ಮುಳಬಾಗಲು; ಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಗೊಂಡ ಮುಳಬಾಗಲು ತಾಲೂಕು ಭೂಬ್ಯಾಂಕ್ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡರನ್ನು ತಾಲೂಕು ಭೂಬ್ಯಾಂಕ್ ಆವರಣದಲ್ಲಿ ಬ್ಯಾಂಕ್ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು ಸನ್ಮಾನಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಜಿ. ಗಟ್ಟಪ್ಪ, ನಿರ್ದೇಶಕರಾದ ಜಿ. ಹನುಮಂತರೆಡ್ಡಿ, ವಮ್ಮಸಂದ್ರ ವೆಂಕಟರಾಮಪ್ಪ, ವಕೀಲ ಬಿ. ನಾಗರಾಜ್, ಕೊಂಡಪಲ್ಲಿ ವೆಂಕಟಾರಾಮರೆಡ್ಡಿ, ಎಂ. ಶಂಕರಪ್ಪ, ಎಂ. ಶ್ರೀನಿವಾಸ್, ಟೆ.ಎನ್. ನಾರಾಯಣಗೌಡ, ರುಕ್ಮಿಣಿಯಮ್ಮ, ಜಿ. ರಾಮಲಿಂಗಾರೆಡ್ಡಿ, ಸದಸ್ಯೆ ಲಕ್ಷ್ಮಿದೇವಮ್ಮ ಇದ್ದರು.
ಕಿರುಕುಳ: ಅತ್ತೆ,ಮಾವ, ಪತಿ ವಿರುದ್ಧ ದೂರು
ಚಿಂತಾಮಣಿ: ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಗಂಡನ ಹಾಗೂ ಅತ್ತೆ ಮಾವಂದಿರ ಮೇಲೆ ಪೊಲೀಸರಿಗೆ ದೂರು ನೀಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿನ್ನಮಿಂದಪಲ್ಲಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ದಿನ್ನಮಿಂದಹಳ್ಳಿ ಗ್ರಾಮದ ಅಶ್ವಥಮ್ಮ ಎಂಬಾಕೆಯನ್ನು ಶ್ರೀನಿವಾಸಪುರ ತಾಲೂಕಿನ ಕುರುಮರಹಳ್ಳಿ ಗ್ರಾಮದಿಂದ ಮಂಜುನಾಥ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ಮಕ್ಕಳಿಲ್ಲವೆಂಬ ಕಾರಣಕ್ಕಾಗಿ 2 ನೇ ಹೆಂಡತಿ ಲಕ್ಷ್ಮಿ ಎಂಬಾಕೆಯನ್ನು ಅತ್ತೆ ರಾಮಕ್ಕ ಮಾವ ಪೆದ್ದಿರೆಡ್ಡಿ ಮೈದ ದೇವರಾಜ್ ಮಾತುಗಳನ್ನು ಕೇಳಿ ಮದುವೆ ಮಾಡಲಾಗಿತ್ತು.
ಆದರೆ ಹಲವು ದಿನಗಳಿಂದ ಅಶ್ವಥಮ್ಮನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಬಟ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ವರದಕ್ಷಿಣೆ ಕಿರುಕುಳ:
ಪ್ರಕರಣ ದಾಖಲು
ಕೆಜಿಎಫ್: ವರದಕ್ಷಿಣೆ ಕಿರುಕುಳಕ್ಕೆ ಬೇಸೆತ್ತ ಪತ್ನಿ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ನಗರದ ಆಂಡ್ರಸನ್ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಡ್ರಸನ್ಪೇಟೆಯ ಜೈನ್ ದೇವಸ್ಥಾನದ ರಸ್ತೆ ನಿವಾಸಿ ಮಂಜುನಾಥ್ಗೆ ರಮಾವತಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಚಿನ್ನದ ಒಡವೆ ಸೇರಿ ಒಟ್ಟು 80 ಸಾವಿರ ನೀಡಲಾಗಿತ್ತು. ನಂತರ ಸಲೂನ್ ಅಂಗಡಿಯನ್ನಿಟ್ಟುಕೊಳ್ಳಲು ತವರು ಮನೆಯಿಂದ ಹಣ ತರುವಂತೆ ರಮಾವತಿಯನ್ನು ಪೀಡಿಸಿ ಆಗಾಗ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ರಮಾವತಿ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಘಾತ: ನಾಲ್ಕು ಮಂದಿಗೆ ಗಾಯ
ಶಿಡ್ಲಘಟ್ಟ:ಕದಿರಿನಾಯಕನಹಳ್ಳಿ ಬಳಿ ಎರಡು ಮಿನಿ ಟಂಪೋಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನರು ಸಣ್ಣ ಪುಟ್ಟ ಗಾಯಗಳಿಂದ ಪಾರಾದ ಘಟನೆ ನಡೆದಿದೆ.
ಭಾನುವಾರ ರಾತ್ರಿ ಆಂಧ್ರದ ಕಡೆಯಿಂದ ಬರುತ್ತಿದ್ದ ಟಾಟಾ ಎಸಿ ವಾಹನಕ್ಕೆ ಶಿಡ್ಲಘಟ್ಟ ಕಡೆಯಿಂದ ಹೋಗುತ್ತಿದ್ದ ಟಾಟಾ ಮ್ಯಾಜಿಕ್ ವಾಹನ ಡಿಕ್ಕಿ ಹೊಡೆದಿದ್ದು ಗಾಡಿಗಳು ಜಖಂಗೊಂಡಿವೆ. ಶಿವಶಂಕರ್, ಪುರುಷೋತ್ತಮ್ ಸೇರಿದಂತೆ 4 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಲಿಂಡರ್ ಕಳವು
ಕೆಜಿಎಫ್: ಮನೆಯ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಅಡುಗೆ ಕೊಣೆಯಲ್ಲಿಟ್ಟಿದ್ದ ಸಿಲಿಂಡರ್ ಹಾಗೂ ಮೊಬೈಲ್ ಫೋನ್ ಕಳವು ಮಾಡಿರುವ ಘಟನೆ ಚಾಂಪಿಯನ್ರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಂಪಿಯನ್ರೀಫ್ ವ್ಯಾಪ್ತಿಯ ಚರ್ಚ್ ಕಾಂಪೌಂಡ್ ನಿವಾಸಿ ಮರಿಯಾಕ್ಸೇವಿಯರ್ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

