ಕೋಲಾರ

ಕಂದಾಯ ಅದಾಲತ್‌ಗೆ ಚಾಲನೆ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಡಿ.9
ಗ್ರಾಮೀಣ ಜನತೆ ತಮ್ಮ ಕೆಲಸಗಳಿಗಾಗಿ ಕಂದಾಯ ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಹಮ್ಮಿಕೊಂಡಿರುವ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಖಾತೆ ಬದಲಾವಣೆ, ದಾಖಲೆಗಳ ತಿದ್ದುಪಡಿ, ಸಾಮಾಜಿಕ ಭದ್ರತೆ ಕಾರ್ಯಕ್ರಮದಡಿ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರು ತಾಲೂಕು ಕಚೇರಿ, ನಾಡ ಕಚೇರಿ,ರಾಜಸ್ವ ನಿರೀಕ್ಷಕರ ಕಚೇರಿ, ಗ್ರಾಮಲೆಕ್ಕಿಗರ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಅಲೆಯುವುದನ್ನು ತಪ್ಪಿಸಿ, ಸಕಾಲದಲ್ಲಿ ಸರ್ಕಾರಿ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಕೋಲಾರ ತಾಲೂಕಿನಲ್ಲಿ ಸೋಮವಾರದಿಂದ 11 ದಿನಗಳ ಕಾಲ ವಿವಿಧ ಗ್ರಾಮಗಳಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಈ ಕಾರ್ಯಕ್ರಮದಿಂದ ಕಂದಾಯ ಇಲಾಖೆಗೆ ಸೇರಿದ ಕೆಲವರಿಗೆ ಕಷ್ಟವಾಗಬಹುದಾಗಿದೆಯಾದರೂ ಬಡ ರೈತಾಪಿ ಜನರಿಗೆ ಮತ್ತು ಸರ್ಕಾರದ ವಿವಿಧ ಯೋಜನೆಗಳಡಿ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಗ್ರಾಮೀಣ ಪ್ರದೇಶದ ಜನರಿಗೆ ವರದಾನವಾಗಿದೆ.
ಕಂದಾಯ ಇಲಾಖೆಯಲ್ಲಿನ ಕಾರ್ಯಭಾರದ ಒತ್ತಡ, ಸಿಬ್ಬಂದಿಯ ಕೊರತೆಯಿಂದ ಆಗುತ್ತಿರುವ ವಿಳಂಬ ತಪ್ಪಿಸಿ ಜನರ ಬಳಿಗೆ ಕಂದಾಯ ಇಲಾಖೆ ಹೋಗಿ ಜನತೆಯ ಸಮಸ್ಯೆ ಅರಿತು ತ್ವರಿತಗತಿಯಲ್ಲಿ ಸೇವೆ ನೀಡುವಂತಾಗಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಕಂದಾಯ ಅದಾಲತ್‌ನಿಂದಾಗಿ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸ ಸುಲಲಿತವಾಗಿ ನಡೆಯುವುದಕ್ಕೆ ಸಹಕಾರಿ ಆಗಿದೆ.
ಜಿಲ್ಲಾಧಿಕಾರಿ ಡಿ.ಕೆ.ರವಿ  ಅದಾಲತ್‌ಗೆ ಚಾಲನೆ ನೀಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸಹ ಅದಾಲತ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನತೆಯ ಸಮಸ್ಯೆ ನಿವಾರಣೆ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ನಡೆದ ಅದಾಲತ್‌ನಲ್ಲಿ ಬೆಳ್ಳೂರು, ಬೈರಸಂದ್ರ, ರಾಮಭದ್ರಪುರ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವಾರದಲ್ಲಿ ಆರ್‌ಟಿಸಿ:  ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.50 ಗಂಟೆಯವರೆಗೆ ಅದಾಲತ್ ನಡೆಯಿತು. ಜಿಲ್ಲಾಧಿಕಾರಿ ಡಿ.ಕೆ.ರವಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಜನರು ಖಾತೆ ಬದಲಾವಣೆ ಮತ್ತು ತಿದ್ದುಪಡಿಗಳಿಗಾಗಿ ಪರದಾಡುವುದನ್ನು ತಪ್ಪಿಸಲು ಅದಾಲತ್ ನಡೆಸಲಾಗುತ್ತಿದೆ. ದಾಖಲೆಗಳು ಸರಿಯಿದ್ದಲ್ಲಿ ಇಂದೇ ಸಮಸ್ಯೆಗಳನ್ನು ನಿವಾರಣೆ ಮಾಡಲಾಗುತ್ತದೆ. ಸರಿಪಡಿಸಲಾದ ದಾಖಲೆಗಳನ್ನು ಭೂಮಿ ತಂತ್ರಾಂಶಕ್ಕೆ ಅಳಪಡಿಸಿ ಒಂದು ವಾರದಲ್ಲಿ ಆರ್.ಟಿ.ಸಿ ಕೊಡಿಸಲಾಗುತ್ತದೆ ಎಂದು ತಿಳಿಸುವ ಮೂಲಕ ಕಂದಾಯ ಅದಾಲತ್ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಿಸಲು ಯತ್ನಿಸಿದ್ದಾರೆ.
ಬೆಳ್ಳೂರಿನಲ್ಲಿ ಒಟ್ಟು 231 ಪ್ರಕರಣಗಳನ್ನು ವಿಲೇವಾರಿ ಮಾಡಿ ಆದೇಶ ಪ್ರತಿ ನೀಡಲಾಗಿದ್ದು, ಇದರಿಂದ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. 33 ಐಹೆಚ್‌ಆರ್‌ಪಾವತಿದಾರ್ತು ಪ್ರಕರಣ, 5 ವಿಭಾಗವಾರು, 9 ಆರ್‌ಟಿಸಿ ತಿದ್ದುಪಡಿ, 184 ಆರ್‌ಟಿಸಿ 3ರ ತಿದ್ದುಪಡಿ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸಮಸ್ಯೆ ನಿವಾರಣೆ ಮಾಡಿದರು.
ಚೌಡದೇನಹಳ್ಳಿಯಲ್ಲಿ ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ಅದಾಲತ್ ನಡೆಸಿ ಒಟ್ಟು 61 ಪ್ರಕರಣಗಳನ್ನು ವಿಲೇವಾರಿ ಮಾಡಲಾಯಿತು. ಇದರಲ್ಲಿ 6 ಐಹೆಚ್‌ಆರ್, 5 ವಿಭಾಗವಾರು, 5 ಆರ್‌ಟಿಸಿ ಹಾಗೂ ಆರ್‌ಟಿಸಿ 3 ತಿದ್ದುಪಡಿಯ 45 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅರ್ಜಿದಾರರಿಗೆ ಆದೇಶ ಪತ್ರ ನೀಡಲಾಯಿತು.
ಎರಡು ಕಡೆ ನಡೆದ ಅದಾಲತ್ನ್‌ಲ್ಲಿ ಒಟ್ಟು 292 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ಕಂದಾಯ ಇಲಾಖೆಯಲ್ಲಿ ಧೂಳು ಹಿಡಿಯುತ್ತಿದ್ದ ಕಡತಗಳಿಗೆ ಮುಕ್ತಿ ದೊರಕಿಸಲಾಗಿದೆ.
ಕಂದಾಯ ಅದಾಲತ್‌ನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜು, ಕೋಲಾರ ಉಪ ವಿಭಾಗಾಧಿಕಾರಿ ಸಿ.ಎನ್. ಮಂಜುನಾಥ್, ತಹಸೀಲ್ದಾರ್ ನಾಗರಾಜು, ಹಕ್ಕು ದಾಖಲಾತಿಗಳ ಶಿರಸ್ತೇದಾರ್ ಎನ್. ನಾಗರಾಜು, ಭೂ ದಾಖಲೆಗಳ ಅಧಿಕಾರಿ ಕೇಶವಮೂರ್ತಿ ಹಾಗೂ ಕಂದಾಯ ಇಲಾಖೆಯ ವ್ಯಾಪ್ತಿಯ ಇನ್ನಿತರ ಅಧಿಕಾರಿಗಳು ಇದ್ದರು.
ಕಂದಾಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಖಾತೆ ಬದಲಾವಣೆ, ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳು ವಿಲೇವಾರಿ ಆಗದೆ ಜನತೆ ತೊಂದರೆ ಪಡುತ್ತಿದ್ದರು. ಜಿಲ್ಲಾಧಿಕಾರಿ ಕಂದಾಯ ಅದಾಲತ್‌ಗೆ ಚಾಲನೆ ನೀಡುವ ಮೂಲಕ ಸಮಸ್ಯೆ ತಪ್ಪಿಸಿದ್ದಾರೆ. ಈ ಕಾರ್ಯಕ್ರಮ ನಿರಂತರವಾಗಿ ಆದಾಗ ಮಾತ್ರ ರೈತಾಪಿ ಜನರ ಸಂಕಟ ನಿವಾರಣೆ ಆಗುತ್ತದೆ.
ಟಿ ಸಿ.ಜಿ.ಮುರಳಿ, ಚೌಡದೇನಹಳ್ಳಿ
ಕಂದಾಯ ಅದಾಲತ್‌ನಿಂದ ಬಡ ಜನರು ಅನಗತ್ಯವಾಗಿ ಸರ್ಕಾರಿ ಕಚೇರಿಗಳು ಅಲೆಯುವುದು ತಪ್ಪಿದಂತಾಗಿದೆ. ಹಳ್ಳಿಯ ಜನರು ತಮ್ಮ ಕೆಲಸ ಕಾರ್ಯಗಳಿಗೆ ತಾಲೂಕು ಕಚೇರಿ, ನಾಡ ಕಚೇರಿಗೆ ಅನೇಕ ಬಾರಿ ಸುತ್ತಬೇಕಾಗಿತ್ತು. ಜಿಲ್ಲಾಧಿಕಾರಿಗಳೇ ನಮ್ಮ ಬಳಿ ಬಂದು ಸಮಸ್ಯೆ ಅಲಿಸಿ ಪರಿಹಾರ ಕಲ್ಪಿಸುತ್ತಿರುವುದರಿಂದ ಒಳ್ಳೆಯದಾಗಿದೆ. ನನಗೆ ಸೇರಿದ 4.5 ಎಕರೆ ಭೂಮಿಯನ್ನು ಬೇರೆಯವರು ಉಪಯೋಗಿಸುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕಂದಾಯ ಅದಾಲತ್‌ನಲ್ಲಿ ನ್ಯಾಯ ಸಿಗುತ್ತದೆ ಎಂಬ ಕಾರಣಕ್ಕೆ ಬಂದಿರುವೆ.
- ಗೋಪಾಲರೆಡ್ಡಿ, ನಾಗನಾಳ ಗ್ರಾಮ, ಕೋಲಾರ ತಾಲೂಕು
ರೈತಾಪಿ ಜನರ ಪಾಲಿಗೆ ಕಂದಾಯ ಅದಾಲತ್ ಒಂದು ವರದಾನ. ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಜನತೆಯ ಸಮಸ್ಯೆ ನಿವಾರಣೆ ಮಾಡುವ ಕಾರ್ಯಕ್ರಮ ಇದಾಗಿರುವುದರಿಂದ ಗ್ರಾಮೀಣ ಜನತೆ ಸರ್ಕಾರಿ ಕಚೇರಿಗಳಿಗೆ ಸುತ್ತಾಡಿ ಜಿಗುಪ್ಸೆ ಅನುಭವಿಸುವುದು ತಪ್ಪಿಸಿದಂತಾಗಿದೆ. ಈ ಕಾರ್ಯಕ್ರಮ ಪ್ರತಿ ಮೂರು ಇಲ್ಲವೇ ಆರು ತಿಂಗಳಿಗೆ ಒಮ್ಮೆ ನಡೆದರೆ ಕಚೇರಿಗಳಲ್ಲಿ ಕೆಲಸದ ಒತ್ತಡ ತಪ್ಪುತ್ತದೆ.
- ಕೆ.ಎಸ್.ಗಣೇಶ್, ಅಧ್ಯಕ್ಷ, ಜಿಕಾಪಸಸಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.