ಹೊಸ ಕೆರೆ ಹಸ್ತಾಂತರಕ್ಕೆ ವಿರೋಧ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಚೇನಹಳ್ಳಿ ಹೋಬಳಿಯ ದಂಡಿಗಾನಹಳ್ಳಿ ಹೊಸ ಕೆರೆಯನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಿಕೊಳ್ಳಲು ಗೌರಿಬಿದನೂರು ಪುರಸಭೆಗೆ ಹಸ್ತಾಂತರಿಸುವ ಪ್ರಕ್ರಿಯೆ ವಿವಾದ ಸೃಷ್ಟಿಸಿದೆ.
ಗೌರಿಬಿದನೂರು ಪಟ್ಟಣದಿಂದ ಸುಮಾರು 23 ಕಿ.ಮೀ ದೂರದ ಸಣ್ಣ ನೀರಾವರಿ ಇಲಾಖೆಗೆ ಸೇರಿರುವ ದಂಡಿಗಾನಹಳ್ಳಿ ಹೊಸ ಕೆರೆಯನ್ನು ಸ್ಥಳೀಯ ಆಡಳಿತ ಗೌರಿಬಿದನೂರು ಪುರಸಭೆಗೆ ತ್ವರಿತವಾಗಿ ಹಸ್ತಾಂತರಿಸಬೇಕೆಂದು ಕೋರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದಿರುವುದು ವಿವಾದ ಉದ್ಭವಿಸಲು ಕಾರಣವಾಗಿದೆ.
ಸುತ್ತಮುತ್ತಲಿರುವ ಬೆಟ್ಟ ಗುಡ್ಡಗಳಿಂದ ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳಲು ದಂಡಿಗಾನಹಳ್ಳಿ ಬಳಿ ಚೆಕ್ ಡ್ಯಾಂ ನಿರ್ಮಿಸಿದ್ದು ಇಲ್ಲಿ ಸಂಗ್ರಹವಾಗುವ ನೀರಿನಿಂದ ಅಂತರ್ಜಲ ಮಟ್ಟ ಹೆಚ್ಚಳವಾಗುವುದರ ಜತೆಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ. ಈ ನಡುವೆ ಇಲ್ಲಿ ಸಂಗ್ರಹವಾಗುವ ಅಲ್ಪ ಪ್ರಮಾಣದ ನೀರು 23 ಕಿ.ಮೀ ದೂರ ಪೈಪ್ ಲೈನ್ ಅಳವಡಿಸಿ ಸರಬರಾಜು ಮಾಡಲು ಯೋಜನೆ ರೂಪಿಸಲು ಚಿಂತಿಸಲಾಗುತ್ತಿದೆ.
ಕಳೆದ ನ.18 ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಧಾನಸಭಾ ಉಪ ಸಭಾಪತಿ ಮತ್ತು ಗೌರಿಬಿದನೂರು ಶಾಸಕರೂ ಆಗಿರುವ ಎನ್.ಎಚ್. ಶಿವಶಂಕರರೆಡ್ಡಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿ ತ್ವರಿತವಾಗಿ ಯೋಜನಾ ವರದಿ ತಯಾರಿಸಲು ಕೆರೆಯನ್ನು ಗೌರಿಬಿದನೂರು ಪುರಭೆಗೆ ಒಪ್ಪಿಸಬೇಕೆಂದು ಕೋರಿದರು. ಇದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು, ಅದರಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೆರೆಯನ್ನು ಪುರಭೆಗೆ ಒಪ್ಪಿಸಬೇಕೆಂದು ಕೋರಿದೆ. ಈ ವಿದ್ಯಮಾನಗಳ ನಡುವೆ ಸ್ಥಳೀಯ ಗ್ರಾಪಂ ಮತ್ತು ಜನರ ಅಭಿಪ್ರಾಯಗಳನ್ನು ಅಧಿಕಾರಿಗಳು ತಿಳಿದುಕೊಳ್ಳದೆ ಯೋಜನೆ ಅನುಷ್ಠಾನಕ್ಕೆ ಕಾರ್ಯೋನ್ಮುಖರಾಗಿರುವುದು ಮಂಚೇನಹಳ್ಳಿ ಹೋಬಳಿಯ ಜನರಲ್ಲಿ ಆಕ್ರೋಶವನ್ನುಂಟು ಮಾಡಿದೆ.
ತೀವ್ರ ಆಕ್ರೋಶ: ಮೊದಲೇ ದಂಡಿಗಾನಹಳ್ಳಿ ಕೆರೆಯಲ್ಲಿ ನೀರು ಸಮರ್ಪಕವಾಗಿ ಸಂಗ್ರಹವಾಗುವುದಿಲ್ಲ. ಮಂಚೇನಹಳ್ಳಿಯ ಜನರಿಗೆ ನೀರು ಸಾಕಾಗುತ್ತಿಲ್ಲ. ಹೀಗಿರುವಾಗ ಸ್ಥಳೀಯವಾಗಿ ಯಾರ ಅಭಿಪ್ರಾಯವನ್ನು ಪಡೆದುಕೊಳ್ಳದೇ ಕೇವಲ ಗೌರಿಬಿದನೂರು ಶಾಸಕರು ತಮ್ಮ ರಾಜಕೀಯ ಲಾಭಕ್ಕಾಗಿ ನೀಡಿರುವ ಸೂಚನೆಯಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ದುರಾದೃಷ್ಟಕರ. ಗೌರಿಬಿದನೂರು ಪಟ್ಟಣಕ್ಕೆ ವಾಟದಹೊಸಹಳ್ಳಿ ಮತ್ತು ತಿಪ್ಪೇಗಾನಹಳ್ಳಿ ಕೆರೆಯನ್ನು ಆಯ್ಕೆ ಮಾಡಿ ಕುಡಿಯುವ ನೀರನ್ನು ಸರಬರಾಜು ಮಾಡಲಿ ಎಂಬುದು ಈ ಭಾಗದ ಜನರ ಒತ್ತಾಯ.
ಅಲ್ಲದೇ ಯೋಜನೆಗೆ ವಿರೋಧ ವ್ಯಕ್ತವಾಗುತ್ತದೆ ಎಂಬ ಭಾವನೆಯಲ್ಲಿ ಸ್ಥಳೀಯ ಗ್ರಾಪಂ ಆಡಳಿತ ಜನರಿಗೆ ತಿಳಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಅಧಿಕಾರಿಗಳು ಪ್ರಭಾವಕ್ಕೆ ಮಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತ ಅಧಿಕಾರಿಗಳು ಯೋಜನೆ ಅನುಷ್ಠಾನಕ್ಕೆ ಸೂಚನೆ ಕೊಟ್ಟಿರುವ ಜನಪ್ರತಿನಿಧಿಗಳು ಮತ್ತು ವಿರೋಧಿಸುತ್ತಿರುವ ಜನರ ನಡುವೆ ಸಿಲುಕಿದ್ದಾರೆ.
-ಎನ್. ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

