ಮಾನವ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸಿ
ಚಿಕ್ಕಬಳ್ಳಾಪುರ: ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಿರಲು ಹೆಚ್ಚಿಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವಿಶಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿ.ಪಂ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಾನವ ಹಕ್ಕುಗಳ ಜಾಗೃತಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತವಹಿಸಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರು ತಮ್ಮ ಹಕ್ಕುಗಳು, ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಯಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಕುರಿತು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಕೆಲಸ ಹೆಚ್ಚಿಗೆ ನಡೆಯಬೇಕು. ಇದಕ್ಕಾಗಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನ್ಯಾ.ಎ.ಎಸ್. ಬೆಳ್ಳುಂಕೆ ಮಾತನಾಡಿ, ಸಂವಿಧಾನವು ಪ್ರಜೆಗಳಿಗೆ ಸರಿಸಮಾನವಾಗಿ ಹಕ್ಕುಗಳನ್ನು ಕೊಟ್ಟು ಹಾಗೆಯೇ ನಿರ್ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ತಿಳಿಸಿದೆ. ಇದನ್ನು ಚಾಚೂ ತಪ್ಪದೇ ಪಾಲಿಸಿದಾಗ ಮಾನವ ಹಕ್ಕುಗಳ ಸಂರಕ್ಷಣೆಯಾಗುತ್ತದೆ ಎಂದರು.
ಮೊದಲನೇ ಮತ್ತು ಎರಡನೇ ಮಹಾಯುದ್ಧಗಳ ಮಹಾಘೋರ ಮತ್ತು ನಷ್ಟದಿಂದಾದ ಪರಿಣಾಮವನ್ನು ಅರಿತು ಮನುಕುಲದ ಉಳಿವಿಗಾಗಿ ವಿಶ್ವಸಂಸ್ಥೆಯು 1948 ರ ಡಿ.10 ರಂದು ವಿಶ್ವ ಮಾನವ ಹಕ್ಕುಗಳ ಘೋಷಣೆ ಮಾಡಿದ್ದು ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಒಪ್ಪಿಸಿಕೊಂಡಿವೆ ಎಂದರು. ಭಾರತದಲ್ಲಿ 1993 ರಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮವನ್ನು ರಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಿ, ಸಂವಿಧಾನದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದಮ್ಮೆಗೆ ಅವಕಾಶ ಕಲ್ಪಿಸಿ ನಾಗರೀಕ ಹಕ್ಕುಗಳ ಸಂರಕ್ಷಣೆಗೆ ಮುಂದಾಗುವ ಮೂಲಕ ಮಾನವ ಹಕ್ಕುಗಳ ಉಳಿವಿಗೆ ಶ್ರಮಿಸಲಾಗುತ್ತಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಸಮುದಾಯ ಮತ್ತು ಸಮಾಜದ ಇತರೆ ವ್ಯಕ್ತಿಗಳ ಹಕ್ಕುಗಳನ್ನು ಕಸಿಯದೆ ಆತನೂ ಘನತೆಯಿಂದ ಜೀವಿಸುವ, ಸ್ವತಂತ್ರ, ಸಮಾನತೆಯ ಹಕ್ಕುಗಳನ್ನು ಹೊಂದುವ ವಾತಾವರಣ ನಿರ್ಮಾಣವಾಗಬೇಕೆಂದರು. ಎಸ್ಪಿ ಎನ್.ಶಿವಪ್ರಸಾದ್, ಮಾನವ ಹಕ್ಕುಗಳ ಉಳಿವಿಗಾಗಿ ಅನೇಕ ಮಹನೀಯರು, ಮಾನವತಾವಾದಿಗಳು ಶ್ರಮಿಸುತ್ತಿದ್ದು ಇದನ್ನು ತಿಳಿದುಕೊಂಡು ಪ್ರತಿಯೊಬ್ಬರೂ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಢಿಸಿ ಉತ್ತಮ ನಾಗರೀಕ ಸಮಾಜದ ಉಳಿವಿಗೆ ಮುಂದಾಗಬೇಕು. ಇದರಲ್ಲಿ ನ್ಯಾಯಾಂಗ ಇಲಾಖೆ ಹಾಗೂ ಪತ್ರಿಕೋದ್ಯಮದ ಪಾತ್ರ ಮಹತ್ತರವಾದುದು ಎಂದರು. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾರವರ ಆತ್ಮಕ್ಕೆ ಶಾಂತಿ ಕೋರಲಾಯಿತು. ನ್ಯಾಯಾಧೀಶರಾದ ಅಮರನಾರಾಯಣ, ರಾಜೇಶ್ವರಿ ಎನ್. ಹೆಗಡೆ, ಅನಿತಾ, ನಳಿನಿ, ಜಿ.ಪಂ. ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್. ಕವನ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ಜಿ.ವಿ. ವಿಶ್ವನಾಥ್, ತಮ್ಮೇಗೌಡ, ಹೆಚ್.ಪಾಪಿರೆಡ್ಡಿ ಇದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ಶಿಡ್ಲಘಟ್ಟ: ಕಾನೂನನ್ನು ಗೌರವಿಸಿದರೆ ಕಾನೂನು ನಿಮ್ಮನ್ನು ಗೌರವಿಸುತ್ತದೆ ಎಂದು ಹೆಚ್ಚುವರಿ ಸಿವಿಲ್ನ್ಯಾಯಾಧೀಶ ವಿಜಯ ದೇವರಾಜ್ ಅರಸ್ ಹೇಳಿದರು.
ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮೋಟಾರ್ ವಾಹನ ಕಾಯ್ದೆ, ವಾಹನ ವಿಮೆ, ವಾಹನ ಚಾಲನಾ ಪರವಾನಗಿ ಮುಖ್ಯವೆಂದು ತಿಳಿಸಿದರು. ವೀಣಾ ಅವರು ಬಾಲ್ಯ ವಿವಾಹ ಕಾಯ್ದೆ ಬಗ್ಗೆ ಮಾತನಾಡಿ, ಬಾಲ್ಯ ವಿವಾಹ ಪ್ರೋತ್ಸಾಹಿಸುವವರಿಗೆ ದಂಡ ಹಾಗೂ ಶಿಕ್ಷೆ ವಿದಿಸಲಾಗುವುದೆಂದು ತಿಳಿಸಿದರು.
ವಕೀಲ ಅಶೋಕ್ ಮಾತನಾಡಿ, ಸಮಾಜದಲ್ಲಿ ಬದುಕುವ ಎಲ್ಲರೂ ಸಾಮಾಜಿಕ ಪ್ರಾಣಿಗಳು, ಸಂವಿದಾನ ಮಾನವನಿಗೆ ಅವಶ್ಯಕತೆಯಿರುವ ಎಲ್ಲ ಹಕ್ಕುಗಳನ್ನು ಕೊಟ್ಟಿದ್ದು, ಮಾನವ ಹಕ್ಕುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರದಾನ ಸಿವಿಲ್ನ್ಯಾಯಾಧೀಶ ಎಸ್. ಮಹೇಶ್, ವಕೀಲರ ಸಂಘದ ಅಧ್ಯಕ್ಷ ಪಾಪಿರೆಡ್ಡಿ, ವಕೀಲ ಈ.ಡಿ. ಶ್ರೀನಿವಾಸ್, ಪ್ರಾಂಶುಪಾಲ ಎನ್. ಆನಂದ್, ಗ್ರಾಮಾಂತರ ಠಾಣೆಯ ಪಿಎಸ್ಐ ಹನುಮಂತಪ್ಪ ಇದ್ದರು.
ಮಾನವ ಹಕ್ಕುಗಳ ಅರಿವಿಗೆ ಕರೆ
ಚಿಂತಾಮಣಿ: ಪೌರ ಕಾರ್ಮಿಕರು ಕಾನೂನು ಸಲಹೆ ಸೂಚನೆಗಳನ್ನು ಪಾಲಿಸಬೇಕೆಂದು ಹಿರಿಯ ವಕೀಲ ಎ.ಎಸ್.ನಾಗರಾಜ್ ಹೇಳಿದರು. ನಗರಸಭೆ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ನಗರಸಭೆ ಸಂಯುಕ್ತ ಆಶ್ರಯದಲ್ಲಿ ನಡೆದ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರಿಗೆ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪೌರ ಕಾರ್ಮಿಕರು ದಿನ ನಿತ್ಯ ಕೆಲಸ ಕಾರ್ಯಗಳ ಒತ್ತಡಕ್ಕೆ ಒಳಗಾಗದೆ ಕಾನೂನು ಮತ್ತು ಮಾನವ ಹಕ್ಕುಗಳನ್ನು ತಿಳಿದುಕೊಳ್ಳಬೇಕೆಂದರು. ನಂತರ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಕೆಲವು ಆಸ್ತಿಗಳ ಪರಭಾರೆ ನಿಷೇಧ ಕಾಯ್ದೆ ಬಗ್ಗೆ ವಕೀಲ ಎಂ.ವಿಜಯ್ ಉಪನ್ಯಾಸ ನೀಡಿ ಪೌರ ಕಾರ್ಮಿಕರಿಗೆ ಅರಿವನ್ನು ಮೂಡಿಸಿದರು. ಸಹಾಯಕ ಸರ್ಕಾರ ಅಭಿಯಂತ್ರಕರಾದ ಬಿ.ಎಸ್.ರೆಹಮಾನ್, ವಕೀಲರ ಸಂಘದ ಅಧ್ಯಕ್ಷ ಎಸ್.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಎನ್.ವಿಶ್ವನಾಥಶೆಟ್ಟಿ, ಕೆ.ವಿ.ಸುಬ್ಬರಾಯಪ್ಪ, ಪಿ.ಸಿ.ನಾರಾಯಣರೆಡ್ಡಿ, ಮಂಜುನಾಥರೆಡ್ಡಿ ಸೇರಿದಂತೆ ನಗರಸಭೆ ಪ್ರಭಾರ ಅಧಿಕಾರಿ ಗಂಗಣ್ಣ ವೇದಿಕೆ ಮೇಲೆ ಉಪಸ್ಥಿತರಿದ್ದರು. ನೂರಾರು ಪೌರ ಕಾರ್ಮಿಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

