ಹಣಗಳಿಕೆ ಆಮಿಷ: ಸಾವಿರಾರು ರು. ವಂಚನೆ
ಗುಡಿಬಂಡೆ: ಮನೆಯಲ್ಲೇ ಕುಳಿತು ಮೇಣದ ಬತ್ತಿ ತಯಾರಿ ಮಾಡುವ ಮೂಲಕ ಪ್ರತಿ ತಿಂಗಳೂ ಹತ್ತಾರು ಸಾವಿರ ರು.ಗಳನ್ನು ಗಳಿಸಬಹುದೆಂದು ಆಸೆ ಹುಟ್ಟಿಸಿ ವಂಚಕರಿಬ್ಬರು ಸಾರ್ವಜನಿಕರಿಂದ ಸಾವಿರಾರು ರು.ಗಳನ್ನು ದೋಚಿ ನಾಪತ್ತೆಯಾಗಿರುವ ಘಟನೆ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ವಿವರ: ಗೌರಿಬಿದನೂರು ತಾಲೂಕಿನವರೆಂದು ಹೇಳಲಾದ ರಾಜಣ್ಣ ಮತ್ತು ಆತನ ಹೆಂಡತಿ ರತ್ನಮ್ಮ ಎಂಬುವರು ಕೆಲದಿನಗಳ ಹಿಂದೆ ಪಟ್ಟಣಕ್ಕೆ ಬಂದು ಮಹಿಳೆಯೊಬ್ಬರನ್ನು ಭೇಟಿಯಾಗಿ ತಮ್ಮನ್ನು ಮೇಣದ ಬತ್ತಿ ವ್ಯಾಪಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ.
ನಂತರ ನಿರುದ್ಯೋಗಿಗಳಿಗೆ ಮೇಣದ ಬತ್ತಿ ತಯಾರಿಕೆಯಲ್ಲಿ ತರಬೇತಿ ನೀಡಿ ಹಣ ಗಳಿಕೆಗೆ ಅವಕಾಶ ಕಲ್ಪಿಸುವುದಾಗಿ ಹೇಳಿ ಆಸಕ್ತಿಯಿರುವ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸುವಂತೆ ಮಾಡಬೇಕೆಂದು ಮಹಿಳೆಗೆ ತಿಳಿಸಿದ್ದಾರೆ. ವಂಚಕ ದಂಪತಿ ಮಾತನ್ನು ನಂಬಿದ ಈ ಮಹಿಳೆ ತನಗೆ ಪರಿಚಯವಿರುವ ಹಲವು ಮಹಿಳೆಯರಿಗೆ ವಿಷಯ ಮುಟ್ಟಿಸಿದ್ದಾಳೆ. ಇದರಿಂದ ಉತ್ತೇಜಿತರಾದ ಮಹಿಳೆಯರು ಹಾಗೂ ಅಕ್ಕಪಕ್ಕದ ಮನೆಯವರು ತರಬೇತಿ ಪಡೆಯಲು ಮುಂದಾದರು ಎನ್ನಲಾಗಿದೆ.
ಹೀಗೆ ತರಬೇತಿ ನೀಡುವ ನೆಪದಲ್ಲಿ ಮಿಕಗಳನ್ನು ಬಲೆಗೆ ಕೆಡವಿಕೊಂಡ ರಾಜಣ್ಣ - ರತ್ನಮ್ಮ ದಂಪತಿ ಎರಡು ದಿನಗಳ ಬಳಿಕ ಮೇಣದ ಬತ್ತಿ ತಯಾರು ಮಾಡುವ ಯಂತ್ರ (ಅಚ್ಚು) ಹಾಗೂ ಕಚ್ಚಾ ಸಾಮಗ್ರಿ ಖರೀದಿಸಲು ಸುಮಾರು 18 ಸಾವಿರ ರು. ವೆಚ್ಚವಾಗಲಿದ್ದು, ಹಣ ಪಾವತಿಸಿದಲ್ಲಿ ಯಂತ್ರ ಖರೀದಿಸಿ ಕೊಡುವುದಾಗಿ ಹೇಳಿದ್ದಾರೆ.
ಸ್ವಯಂ ಉದ್ಯೋಗ ಕೈಗೊಳ್ಳುವ ಆಸೆಯಿಂದ ಹಲವರು ಸಾಲಸೋಲ ಮಾಡಿ ಹಣ ಕೊಟ್ಟು ಯಂತ್ರವನ್ನೇನೋ ಪಡೆದು, ಮೇಣದ ಬತ್ತಿ ತಯಾರಿಸಿ ಅಲ್ಪಸ್ವಲ್ಪ ಹಣ ಗಳಿಸಲು ಪ್ರಾರಂಭಿಸಿದರು. ಆದರೆ ಕೆಲವೇ ದಿನಗಳಲ್ಲಿ ವಂಚಕರ ಬಣ್ಣ ಬಯಲಾಯಿತು. ಮೊದ ಮೊದಲು ತಾವು ಕೊಟ್ಟ ಆಶ್ವಾಸನೆಯಂತೆ ಮೇಣದ ಬತ್ತಿ ಖರೀದಿಸಿ ಹಣ ನೀಡುತ್ತಿದ್ದ ರಾಜಣ್ಣ ದಂಪತಿ ಇದ್ದಕ್ಕಿದಂತೆ ನಾಪತ್ತೆಯಾದರು. ಆದರೆ ಈ ವೇಳೆಗಾಗಲೇ ಇದೇ ಹೆಸರಲ್ಲಿ ಜನರಿಂದ ಅಪಾರ ಹಣ ದೋಚಿದ್ದಾರೆಂಬ ಸಂಗತಿ ತಡವಾಗಿ ತಿಳಿದು ಮೋಸ ಹೋದವರು ಇದೀಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

