ಕಾಡಾನೆಗಳ ಉಪಟಳ ಮತ್ತೆ ಶುರು; ನಿದ್ದೆಗೆಟ್ಟ ರೈತರು
ಬಂಗಾರಪೇಟೆ: ಕಾಡಾನೆಗಳ ಉಪಟಳ ಕಳೆದ ಎರಡು ದಿನಗಳಿಂದ ತಣ್ಣಗಾಗಿದ್ದು ಕಳೆದ ರಾತ್ರಿಯಿಂದ ಮತ್ತೆ ತನ್ನ ಪ್ರತಾಪವನ್ನು ತೋರಿಸುತ್ತಿರುವುದರಿಂದ ರೈತರು ನೆಮ್ಮದಿಯಾಗಿರಲು ಆಗದೆ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
ತಿಂಗಳಿಂದ ಕಾಡಾನೆಗಳ ಹಾವಳಿ ಮಿತಿ ಮೀರಿ ರೈತರ ತೋಟಗಳಿಗೆ ದಾಳಿ ಮಾಡಿ ಕೈಗೆ ಸಿಕ್ಕ ಬೆಳೆಗಳನ್ನು ನಾಶಪಡಿಸುತ್ತಿದೆ, ಒಂದು ಕಡೆ ಅರಣ್ಯ ಇಲಾಖೆ ಸಿಬ್ಬಂದಿ ತಮ್ಮ ಶಕ್ತಿ ಮೀರಿ ಆನೆಗಳನ್ನು ಮರಳಿ ತಮಿಳುನಾಡಿನತ್ತ ಓಡಿಸಲು ಸರ್ವ ಪ್ರಯತ್ನದಲ್ಲಿದ್ದರೂ ಅದು ಫಲ ನೀಡುತ್ತಿಲ್ಲ. 30 ಆನೆಗಳ ಹಿಂಡು ಈಗ ಎರಡು ಗುಂಪುಗಳಾಗಿ ಬೇರ್ಪಟ್ಟಿರುವುದರಿಂದ ಇಲಾಖೆ ಸಿಬ್ಬಂದಿಗೆ ಹಿನ್ನಡೆಯಾಗಿದೆ. ಮಂಗಳವಾರವಷ್ಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೊಪ್ಪನಹಳ್ಳಿಯಲ್ಲಿ ಆನೆಗಳಿಂದ ರಕ್ಷಣೆ ಹೇಗೆ ಎಂಬ ಬಗ್ಗೆ ಜಾಗೃತಿ ಸಭೆಯನ್ನು ಹಮ್ಮಿಕೊಂಡು ರೈತರು ಆತಂಕಪಡುವುದು ಬೇಡ ಎಂದು ದೈರ್ಯ ತುಂಬುವ ಕೆಲಸ ಮಾಡಿದ್ದರು.
ಮಂಗಳವಾರ ರಾತ್ರಿಯೇ ಸುಮಾರು ಹತ್ತು ಆನೆಗಳು ಪೊಲೇನಹಳ್ಳಿ ಗ್ರಾಮದ ಬೆಳ್ಳೆಗೌಡ, ವೆಂಕಟಾಚಲಪತಿ, ವೆಂಕಟೇಶ್, ಗಂಟ್ಲಪ್ಪ ಮತ್ತಿತರರ ಹೊಲಗಳಿಗೆ ನುಗ್ಗಿ ಬತ್ತ, ಟೋಮೆಟೋ, ಕೋಸು ಮುಂತಾದ ವಾಣಿಜ್ಯ ಬೆಳೆಗಳನ್ನು ಸಂಪೂರ್ಣ ನಾಶಪಡಿಸಿದೆ. ಇದರಿಂದ ರೈತರು ಬರದಲ್ಲಿ ನೀರಿನ ಅಭಾವದಲ್ಲಿಯೂ ಕಷ್ಟಪಟ್ಟು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಬೆಳೆದಿದ್ದ ಫಸಲು ಆನೆಗಳ ಬಾಯಿಗೆ ಆಹುತಿಯಾಯಿತಲ್ಲ ಎಂದು ಸಂಕಟಕ್ಕೆ ಸಿಲುಕಿದ್ದಾರೆ. ಶಾಸಕರೇನೋ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗೆ ಆನೆಗಳಿಂದ ಆಗಿರುವ ಬೆಳೆ ಹಾನಿ ಬಗ್ಗೆ ಮಾಹಿತಿ ನೀಡಿದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಇನ್ನು ಪರಿಹಾರ ಇವರು ಕೊಡಿಸುವರೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ನಷ್ಟವಾದ ಮೇಲೆ ಪರಿಹಾರ ಕೊಟ್ಟರೆ ಸಾಲದು. ಅದಕ್ಕೆ ಬದಲಾಗಿ ಆನೆಗಳ ಹಾವಳಿಂದ ಶಾಶ್ವತ ಪರಿಹಾರ ನೀಡಿದರೆ ಉತ್ತಮ ಎಂದು ರೈತರು ಒತ್ತಾಯಿಸಿದ್ದಾರೆ. ತಿಂಗಳಾದರೂ ಆನೆಗಳನ್ನು ಸ್ಥಳಾಂತರಿಸಲು ಇಲಾಖೆಯಿಂದ ಸಾಧ್ಯವಾಗಿಲ್ಲ ಎಂದರೆ ಇವರು ಎಷ್ಟರ ಮಟ್ಟಿಗೆ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ತಿಳಿಯುತ್ತದೆ.ಇದೇ ರೀತಿ ಆನೆಗಳು ದಾಳಿ ಮಾಡುತ್ತಿದ್ದರೆ ರೈತರು ಗ್ರಾಮಗಳನ್ನು ತೊರೆಯುವ ಕಾಲ ದೂರವಿಲ್ಲ. ಆದ್ದರಿಂದ ಆದಷ್ಟು ಬೇಗನೆ ಇಲಾಖೆ ಆನೆಗಳಿಂದ ರೈತರಿಗೆ ಮುಕ್ತಿ ಸಿಗುವಂತೆ ಮಾಡಲಿ ಎಂದು ಪೊಲೇನಹಳ್ಳಿ ರೈತರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

