ನಕಲಿ ವೈದ್ಯರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಿ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಡಿ.12
ರಾಜ್ಯದ ವಿವಿಧೆಡೆ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದು ಜಿಲ್ಲೆಯಲ್ಲೂ ಸಹ ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಜಿ.ಪಂ. ಅಧ್ಯಕ್ಷ ಎಸ್.ಎನ್. ಚಿನ್ನಪ್ಪ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳು ಸಾಧಿಸಿರುವ ಪ್ರಗತಿಯನ್ನು ತಿಳಿದುಕೊಂಡು ಮಾತನಾಡಿದ ಅವರು, ನಕಲಿ ವೈದ್ಯರು ಅಮಾಯಕ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದು ಇದಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಜಿಲ್ಲೆಯ ಅಲ್ಲಲ್ಲಿ ನಕಲಿ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಚಿಂತಾಮಣಿ ತಾಲೂಕಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈಗಾಗಲೇ ಎಲ್ಲಾದರೂ ನಕಲಿ ವೈದ್ಯರು ಚಿಕಿತ್ಸೆ ನೀಡುತ್ತಿರುವುದು ಕಂಡು ಬರುತ್ತಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದರು. ಕಾರ್ಯಾಚರಣೆ ಸಂದರ್ಭದಲ್ಲಿ ನಕಲಿ ವೈದ್ಯರು ನಾಪತ್ತೆಯಾಗಿ ಆ ನಂತರ ಕೆಲ ದಿನಗಳು ಕಳೆದ ಮೇಲೆ ತಮ್ಮ ಹಳೆ ಚಾಳಿ ಮುಂದುವರೆಸುತ್ತಿದ್ದು ಸಮುದಾಯ ಸಹಕಾರದಿಂದ ಮಾತ್ರ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ನಕಲಿ ವೈದ್ಯರು ಥೈರಾಯಿಡ್ ಸೇರಿದಂತೆ ನೋವು ನಿವಾರಕ ಅಪಾಯಕಾರಿ ಎಂಜೆಕ್ಷನ್ ಕೊಡುವುದರಿಂದ ತಕ್ಷಣಕ್ಕೆ ಕಾಯಿಲೆ ವಾಸಿಯಾದಂತೆ ಕಂಡು ಬಂದರೂ ಮುಂದೆ ಜನ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದ ಅವರು, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಶೌಚಾಲಯ ಸ್ಥಿತಿಗತಿ: ನೈರ್ಮಲ್ಯ ಕಾಪಾಡುವ ಸಲುವಾಗಿ ಶೌಚಾಲಯಗಳನ್ನು ಕಟ್ಟಿಕೊಳ್ಳಲು ಸರ್ಕಾರ ಆರ್ಥಿಕ ನೆರವು ನೀಡುತ್ತಿದ್ದು ಗೌರಿಬಿದನೂರು ತಾಲೂಕಲ್ಲಿ ತ್ವರಿತಗತಿ ನಿರ್ಮಾಣ ಯೋಜನೆ ಕೈಗೊಂಡು ಪ್ರತಿ ಗ್ರಾಮಗಳಿಗೆ ತೆರಳಿ ಶೌಚಾಲಯವನ್ನು ಕಟ್ಟಿಸಿಕೊಳ್ಳಲು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 442 ಶೌಚಾಲಯಗಳ ನಿರ್ಮಾಣ ಪ್ರಗತಿ ಮತ್ತು 33 ಮುಕ್ತಾಯ ಕಂಡಿದೆ. ಅದೇ ಚಿಂತಾಮಣಿಯಲ್ಲಿ 511 ರಲ್ಲಿ ಪ್ರಗತಿ, ಬಾಗೇಪಲ್ಲಿ 55 ಪೂರ್ಣ, 800 ಪ್ರಗತಿಯಲ್ಲಿ, ಶಿಡ್ಲಘಟ್ಟ 665 ಪ್ರಗತಿ, 62 ಪೂರ್ಣ, ಚಿಕ್ಕಬಳ್ಳಾಪುರದಲ್ಲಿ 618 ಶೌಚಾಲಯಗಳಲ್ಲಿ 123 ಪ್ರಗತಿ, 59 ಪೂರ್ಣ, ಗುಡಿಬಂಡೆಯಲ್ಲಿ 550 ರಲ್ಲಿ 36 ಪೂರ್ಣ, 150 ರಲ್ಲಿ ಪ್ರಗತಿ,ಉಳಿದರಲ್ಲಿ ಕೆಲಸ ಪ್ರಾರಂಭಿಸಬೇಕಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸುರೇಖಾ ಮಾತನಾಡಿ, ಸರ್ಕಾರಿ ಎಲ್ಲಾ ಇಲಾಖೆಗಳಲ್ಲೂ ಫಲಾನುಭವಿಗಳಿಗೆ ಒದಗಿಸುವ ಆರ್ಥಿಕ ನೆರವಿನಲ್ಲಿ ಶೇ.33 ರಷ್ಟು ಹಣವನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಮನವಿ ಮಾಡಿದರು.
ಕೆಲಸ ಮಾಡೋದಿಲ್ಲ: ಅಂಗವಿಕಲರ ಕಲ್ಯಾಣ ಇಲಾಖೆಗೆ ವಿಕಲಚೇತನರಿಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸಲು ಅನುದಾನ ನೀಡಲಾಗಿದೆಯಾದರೂ ಹಣವನ್ನು ಖರ್ಚು ಮಾಡಲು ಮುಂದಾಗುತ್ತಲೇ ಇಲ್ಲ.ಕಳೆದ ವರ್ಷ 6 ಲಕ್ಷ ರು., ಈ ವರ್ಷ ಬಂದ 6 ಲಕ್ಷ ಕು. ಖರ್ಚು ಮಾಡಿಲ್ಲ. ಸರ್ಕಾರ ಹಣ ಕೊಡುತ್ತಿದ್ದರೂ ಖರ್ಚು ಮಾಡೋದಿಲ್ಲ ಅಂದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿ.ಪಂ.ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಕೂಡಲೇ ಅಂಗವಿಕಲರಿಂದ ಅರ್ಜಿಗಳನ್ನು ಪಡೆದುಕೊಳ್ಳಬೇಕು. ಪಟ್ಟಿ ತಯಾರಿಸಿ ಸವಲತ್ತು ಒದಗಿಸಬೇಕೆಂದು ಸೂಚನೆ ನೀಡಿದರು.
ಬಸವಾ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಬೇಗ ತಯಾರಿಸಿ ಕೊಡಬೇಕೆಂದ ಅವರು, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಇದುವರೆಗೂ ಫಲಾನುಭವಿಗಳನ್ನು ಆಯ್ಕೆ ಮಾಡದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಶಾಸಕರ ನೇತಣತ್ವದಲ್ಲಿ ಸಭೆಯನ್ನು ನಡೆಸಿ ಪಟ್ಟಿಯನ್ನು ತಯಾರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

