ಕೋಲಾರ

ಗ್ರಂಥಾಲಯ ಸೆಸ್ ವಸೂಲಿಗೆ ಕ್ರಮ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಡಿ.13
ಸ್ಥಳೀಯ ಸಂಸ್ಥೆಗಳು ಉಳಿಸಿಕೊಂಡಿರುವ ಗ್ರಂಥಾಲಯಗಳ ಸೆಸ್ ವಸೂಲಿಗೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಗ್ರಂಥಾಲಯ ಇಲಾಖೆಯ ಸಚಿವ ಕಿಮ್ಮನೆ ರತ್ನಾಕರ್ ಕ್ರಮ ಕೈಗೊಂಡಿದ್ದಾರೆ ಎಂದು ರಾಜ್ಯ ಗ್ರಂಥಾಲಯ ಇಲಾಖೆ ನಿರ್ದೇಶಕ ಎಂ.ಎಂ.ಬಡ್ನಿ ತಿಳಿಸಿದರು.
ನಗರದ ಕೀಲುಕೋಟೆ ನಗರಸಭೆ ಶಾಖಾ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸುವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೀಲುಕೋಟೆ ಶಾಖಾ ಗ್ರಂಥಾಲಯದಂತೆ ಜಿಲ್ಲೆಯ ಎಲ್ಲಾ ಕಡೆ ಗ್ರಂಥಾಲಯಗಳು ಅಭಿವೃದ್ಧಿ ಕಾಣಬೇಕು ಎಂದರು. ನಗರಸಭೆ, ಪುರಸಭೆಗಳಿಂದ ಗ್ರಂಥಾಲಯಕ್ಕೆ ಬರಬೇಕಾಗಿರುವ ಸೆಸ್ ಪಾವತಿಗೆ ಸೂಚಿಸುವಂತೆ ಗ್ರಂಥಾಲಯ ಸಚಿವರು ಪೌರಾಡಳಿತ ಸಚಿವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.
ಕೋಲಾರ ಜಿಲ್ಲೆಯೊಂದರಿಂದಲೇ 62 ಲಕ್ಷ ಸೆಸ್ ಬಾಕಿ ಇರುವ ಕುರಿತು ಪ್ರಸ್ತಾಪಿಸಿದ ನಿರ್ದೇಶಕರು, ಸೆಸ್ ವಸೂಲಿ ಸಮರ್ಪಕವಾಗಿ ನಡೆದರೆ ಓದುಗರಿಗೆ, ಸ್ವರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ ಎಂದರು.
ಕೋಲಾರ ಜಿಲ್ಲಾ ಕೇಂದ್ರ ಗ್ರಂಥಾಲಯ, ಟಮಕ ನಗರಶಾಖಾ ಗ್ರಂಥಾಲಯ, ಬೆಳ್ಳೂರು, ನರಸಾಪುರ ಪಂಚಾಯಿತಿ ಗ್ರಂಥಾಲಯಗಳಿಗೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.
ಕೀಲುಕೋಟೆ ಶಾಖಾ ಗ್ರಂಥಾಲಯಕ್ಕೆ ನಿವೇಶನ ಕುರಿತು ಇರುವ ಸಮಸ್ಯೆ ತಿಳಿದುಕೊಂಡ ನಿರ್ದೇಶಕರು, ಆದಷ್ಟು ಶೀಘ್ರ ನಿವೇಶನ ಪಡೆದುಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶ ಪಡೆಯಲು ತಿಳಿಸಿದರು.
ಜಿಲ್ಲೆಯಲ್ಲಿ 14 ಹುದ್ದೆಗಳು ಖಾಲಿ ಇದೆ. ಪ್ರಮುಖವಾಗಿ ಗ್ರಂಥಾಲಯ ಉಪನಿರ್ದೇಶಕರ ಹುದ್ದೆಯೇ ಖಾಲಿ ಇದ್ದು, ಪ್ರಭಾರಿ ಅಧಿಕಾರಿ ಕಾರ್ಯನಿರ್ವಹಿಸುವಂತಾಗಿದೆ ಎಂದು ಗ್ರಂಥಾಲಯ ಇಲಾಖೆಯ ವಿಶೇಷಾಧಿಕಾರಿ ಎಚ್.ಆರ್.ಚನ್ನಕೇಶವ ನಿರ್ದೇಶಕರ ಗಮನಕ್ಕೆ ತಂದರು. ಗಣೇಶ್, ಮೇಲ್ವಿಚಾರಕರ ಸಂಘದ ಅಧ್ಯಕ್ಷ ಹಾಗೂ ಕೀಲುಕೋಟೆ ಗ್ರಂಥಪಾಲಕ ಸುಬ್ರಮಣಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.