ಪಾರ್ಥೇನಿಯಂ ಕಾಡಾಗಿರುವ ಆಸ್ಪತ್ರೆ ಆವರಣ
ಕ.ಪ್ರ.ವಾರ್ತೆ , ಕೋಲಾರ , ಡಿ.13
ಬಡವರ ಆಸ್ಪತ್ರೆ ಎಂದೇ ಕರೆಯಲ್ಪಡುವ ನಗರದ ನರಸಿಂಹರಾಜ ಜಿಲ್ಲಾಸ್ಪತ್ರೆ ವರಣ ಪಾರ್ಥೇನಿಯಂ ಕಳೆಗಳಿಂದ ಅವರಿತಗೊಂಡಿರುವುದರಿಂದ ರೋಗಿಗಳು ಸೊಳ್ಳೆಗಳ ಕಾಟದಿಂದ ತತ್ತರಿಸುವಂತಾಗಿದೆ.
ಆಸ್ಪತ್ರೆಯ ಜಿಲ್ಲಾ ಸರ್ಜನ್ ಆಗಿ ಕೆಲವು ದಿನಗಳ ಹಿಂದೆಯಷ್ಟೇ ಬಂದಿರುವ ಡಾ. ರಮೇಶ್ ಬಾಬು ಆಸ್ಪತ್ರೆಯ ಅಭಿವೃದ್ಧಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆಯಾದರೂ ಸಿಬ್ಬಂದಿಯ ಕೊರತೆಯಿಂದ ಆಸ್ಪತ್ರೆಯ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ.
ಕನ್ನಡಪ್ರಭದ ಕ್ಯಾಮೆರಾ ಆಸ್ಪತ್ರೆಯ ಆವರಣದಲ್ಲಿ ಸಂಚರಿಸಿದ ಬಳಿಕ ಆಸ್ಪತ್ರೆಯ ಮುಂಭಾಗ ಒಂದಿಷ್ಟು ಪಾರ್ಥೇನಿಯಂ ಕಳೆ ನಾಶಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಆಸ್ಪತ್ರೆಯ ಹಿಂಭಾಗ ರಾಶಿಗಟ್ಟಲೆ ಪಾರ್ಥೇನಿಯಂ ಹಾಗೂ ಇನ್ನಿತರ ಗಿಡಗಂಟೆಗಳು ಬೆಳೆದಿದ್ದು ಸಮರೋಪಾದಿಯಲ್ಲಿ ಕಳೆ ನಾಶ ಮಾಡದಿದ್ದರೆ ಮತ್ತೆ ಪಾರ್ಥೇನಿಯಂ ಗಿಡಗಳು ಬೆಳೆಯುತ್ತವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆಯುಷ್ ಆಸ್ಪತ್ರೆ, ಶವಾಗಾರ, ಮಕ್ಕಳ ವಿಭಾಗ, ಅಂಗವಿಕಲರ ಪುನರ್ವಸತಿ ಕೇಂದ್ರ, ರಕ್ತನಿಧಿ ವಿಭಾಗ ಮುಂತಾದ ಕಡೆ ಗಿಡಗಂಟೆಗಳು ಬೆಳೆದಿದ್ದು ಹಾವು-ಹೆಗ್ಗಣಗಳ ಕಾಟದಿಂದ ಸಾರ್ವಜನಿಕರು ಆಸ್ಪತ್ರೆಗೆ ಬರುವುದಕ್ಕೆ ಭಯಪಡುವಂತಾಗಿದೆ.
ಆಸ್ಪತ್ರೆಯಲ್ಲಿ ಡಿ. ಗ್ರೂಪ್ ನೌಕರರ ಕೊರತೆ ಇರುವುದರಿಂದ ನಗರಸಭೆಯ ಸಹಕಾರ ಪಡೆದು ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಬೇಕು, ಯಾವುದಾದರೊಂದು ಭಾನುವಾರ ಇಲ್ಲವೇ ಎರಡನೇ ಶನಿವಾರ ಆಸ್ಪತ್ರೆಯ ವೈದ್ಯರು, ದಾದಿಯರು ಜೊತೆಗೆ ವಿವಿಧ ಕಾಲೇಜುಗಳ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳನ್ನು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮದಾನ ಶಿಬಿರ ನಡೆಸಿದಲ್ಲಿ ಆಸ್ಪತ್ರೆಯ ಆವರಣ ಸಂಪೂರ್ಣವಾಗಿ ಸ್ವಚ್ಛಗೊಳ್ಳುವ ಮೂಲಕ ಪರಿಸರ ಕಾಪಾಡಿದಂತಾಗುತ್ತದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಬಂಗಾರಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಶ್ರಮದಾನ ನಡೆಸುವ ಮೂಲಕ ಆಸ್ಪತ್ರೆಯ ಪರಿಸರ ಕಾಪಾಡಿದ್ದರು. ಅದೇ ರೀತಿ ಜಿಲ್ಲಾ ಆಸ್ಪತ್ರೆಯಲ್ಲೂ ನಡೆಯಬೇಕು, ಇಲ್ಲಿನ ಕೆಲ ವೈದ್ಯರು ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸಿ ಹಣ ಪಡೆಯುತ್ತಿರುವುದಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲೂ ಮೇಲ್ವಿಚಾರಣೆಯ ನೆಪದಲ್ಲಿ ಹಣ ಪಡೆಯುತ್ತಿದ್ದಾರೆ. ಈ ವೈದ್ಯರು ತಮ್ಮ ಪಾಪ ನಿವಾರಣೆಗಾದರೂ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರೆ ಒಳ್ಳೆಯದಾಗುತ್ತದೆ ಎಂಬ ಒತ್ತಾಸೆಯನ್ನು ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿನ ಅನೇಕ ಚರಂಡಿಗಳು ಹೂಳು, ಗಿಡಗಂಟಿಗಳಿಂದ ಮುಚ್ಚಿಹೋಗಿವೆ, ಕೋಲಾರಮ್ಮ ಕೆರೆಗೆ ಮಳೆ ನೀರು ಹರಿಯಲು ಅನೇಕ ವರ್ಷಗಳ ಹಿಂದೆಯೇ ನಿರ್ಮಿಸಿರುವ ಕಾಲುವೆಗಳು ಬಂದ್ ಆಗಿವೆ, ಜಿಲ್ಲಾ ಸರ್ಜನ್ ಅವರು ತಮ್ಮ ದೈನಿಂದಿನ ಕಾರ್ಯಚಟುವಟಿಕೆಗಳ ಜೊತೆಗೆ ಆಸ್ಪತ್ರೆಯ ಪರಿಸರ ಕಾಪಾಡಲು ವಿಶೇಷ ಗಮನ ನೀಡಬೇಕು, ಆಸ್ಪತ್ರೆಯ ಮುಂಭಾಗದ ಕಾರಂಜಿಯಲ್ಲಿ ಹಾಕಿರುವ ಕಸವನ್ನು ವಿಲೇವಾರಿ ಮಾಡಿ ಹೂವಿನ ಗಿಡಗಳು ಮತ್ತು ಆರೋಗ್ಯಕ್ಕೆ ಪೂರಕವಾದ ಬೇವು ಇನ್ನಿತರ ಗಿಡಗಳನ್ನು ಬೆಳೆಸಿದಲ್ಲಿ ರೋಗಿಗಳಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಆಸ್ಪತ್ರೆಯ ಹಳೆ ಕಟ್ಟದ ಕಿಟಕಿಗಳು ಹಾಳಾಗಿವೆ. ಕಿಟಕಿ ಗಾಜುಗಳು ಒಡೆದು ಹೋಗಿರುವುದರಿಂದ ಬಟ್ಟೆಗಳಿಂದ ಕಿಟಕಿಯನ್ನು ಮುಚ್ಚಲಾಗಿದ್ದು ಚಳಿ, ಗಾಳಿ, ಮಳೆಯಿಂದ ರೋಗಿಗಳು ತೊಂದರೆ ಪಡುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಮನಸ್ಸಿದ್ದರೆ ಮಾರ್ಗ
ಜಿಲ್ಲಾಸ್ಪತ್ರೆಗೆ ಒಳ್ಳೆಯ ಸರ್ಜನ್ ಬಂದಿದ್ದಾರೆ, ಆಸ್ಪತ್ರೆಯ ಅಭಿವೃದ್ಧಿಗೆ ಕಾರ್ಯ ವೇಗ ಹೆಚ್ಚಾಗಬೇಕು, ಆಸ್ಪತ್ರೆಯ ಆವರಣದಲ್ಲಿ ಪರಿಸರ ಕಾಪಾಡಬೇಕು, ಪಾರ್ಥೇನಿಯಂ ಗಿಡಗಳು ಇರುವ ಕಡೆ ಆರೋಗ್ಯ ಸುಧಾರಣೆ ಆಗಲ್ಲ, ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ಕೆ ಮುಂದಾದರೆ ಜನತೆಯ ಸಹಕಾರ ಖಂಡಿತ ಸಿಗುತ್ತದೆ. ಮನಸ್ಸಿದ್ದರೆ ಮಾರ್ಗ ಖಂಡಿತ ಉಂಟು.
- ತ್ಯಾಗರಾಜ್, ನಗರಸಭೆ ಮಾಜಿ ಸದಸ್ಯ, ಕೋಲಾರ
ಕ್ರಮೇಣ ಸುಧಾರಣೆ
ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿ ಒಂದೇ ಸಾರಿ ಆಗಲಾರದು, ಸಿಬ್ಬಂದಿ ಕೊರತೆ ಇದೆ, ನಾ ಬಂದ ಮೇಲೆ ಸುಧಾರಣೆ ಆಗುತ್ತಿದೆ, ಪರಿಸರ ಕಾಪಾಡುವುದು ಸೇರಿದಂತೆ ರೋಗಿಗಳ ಹಿತ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ವಚ್ಛತೆ ಕಾಪಾಡಲು ಜನತೆಯ ಸಹಕಾರ ಅತಿ ಮುಖ್ಯ
- ಡಾ. ರಮೇಶ್ ಬಾಬು, ಜಿಲ್ಲಾ ಸರ್ಜನ್, ಕೋಲಾರ
-ಪಾ.ಶ್ರೀ. ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

