ಕೋಲಾರ

ಭೂ ಪರಿಹಾರ; ಅಧಿಕಾರಿಗಳಿಗೆ ದಿಗ್ಬಂಧನ

Published On :

ಕ.ಪ್ರ.ವಾರ್ತೆ ,  ಚಿಕ್ಕಬಳ್ಳಾಪುರ  ,  ಡಿ. 13
ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ವಿತರಿಸಬೇಕಾದ ಭೂ ಪರಿಹಾರದ ಬಗ್ಗೆ ಚರ್ಚಿಸಬೇಕಾದ ಸಭೆಗೆ ಇಲಾಖೆಯ ಹಿರಿಯ ಅಧಿಕಾರಿ ಆಗಮಿಸುವವರೆಗೂ ಸಂಬಂಧಪಟ್ಟ ಕಿರಿಯ ಅಧಿಕಾರಿಗಳನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡಿರುವ ಕುತೂಹಲಕಾರಿ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯೆ ಹಾದು ಹೋಗಿರುವ ಎನ್.ಹೆಚ್.7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ 2007 ರಲ್ಲಿ ಬಾಗೇಪಲ್ಲಿ, ಗುಡಿಬಂಡೆ, ಚಿಕ್ಕಬಳ್ಳಾಪುರ ತಾಲೂಕಿನ ರೈತರ ಕೃಷಿ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡು ಸುಸಜ್ಜಿತವಾದ ರಸ್ತೆಯನ್ನೇನು ನಿರ್ಮಾಣ ಮಾಡಿದೆ. ಆದರೆ, ರೈತರಿಗೆ ಸಮರ್ಪಕವಾಗಿ ಭೂ ಪರಿಹಾರ ನೀಡಿಲ್ಲ. ಭೂಮಿ ಸ್ವಾಧೀನ ಸಂದರ್ಭದಲ್ಲಿ ರೈತರು ಗಲಾಟೆ ಮಾಡಿದಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿತ್ತು. ಇದರಿಂದ ರೈತರು ಸಮಾಧಾನಗೊಂಡು ತಮ್ಮ ಭೂಮಿ ಬಿಟ್ಟು ಕೊಟ್ಟಿದ್ದರು. ಈ ನಡುವೆ ರಸ್ತೆ ತ್ವರಿತವಾಗಿ ನಿರ್ಮಾಣವಾದರೂ ಕೆಲ ರೈತರಿಗೆ ಮಾತ್ರವೇ ಭೂ ಪರಿಹಾರ ನ್ಯಾಯಯುತವಾಗಿ ಸಿಕ್ಕಿದ್ದು ಇನ್ನೂ ಕೆಲವರಿಗೆ ಹಣ ಕೊಟ್ಟಿಲ್ಲ. ಇದು ಸಹಜವಾಗಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮೊದಲು ಎಕರೆಗೆ ತಲಾ 20 ಲಕ್ಷ ರು. ಪರಿಹಾರ ನೀಡುತ್ತೇವೆ ಎಂದು ಹೇಳಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು ಭರವಸೆಯಂತೆ ಅನೇಕ ರೈತರಿಗೆ ಭೂ ಪರಿಹಾರ ನೀಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆಗಳು ಅನೇಕ ಪ್ರತಿಭಟನೆ, ಹೋರಾಟಗಳನ್ನು ಕೈಗೊಳ್ಳುತ್ತ ಬಂದಿದ್ದು ಇತ್ತೀಚೆಗೆ ಜಾನುವಾರು ಸಮೇತ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಿದ್ದ ರೈತರು ಆಹೋರಾತ್ರಿ ಧರಣಿ ನಡೆಸಿದ್ದರು. ಇದರಿಂದ ಜಿಲ್ಲಾಧಿಕಾರಿ ವಿಶಾಲ್ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತಮ್ಮ ಕಚೇರಿಯಲ್ಲಿ ರೈತರ ಸಭೆ ಕರೆದಿದ್ದರು.
ಮುಗಿಯದ ರಾದ್ಧಾಂತ: ಭೂ ಪರಿಹಾರಕ್ಕಾಗಿ ಕಾಯುತ್ತಿರುವ ರೈತರ ಹೋರಾಟಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಶಾಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರನ್ನು ಸಭೆಗೆ ಖುದ್ದು ಹಾಜರಾಗಬೇಕೆಂದು ಮನವಿ ಮಾಡಿದ್ದರು. ಆದರೆ, ಶುಕ್ರವಾರ ನಡೆದ ಸಭೆಗೆ ಮೂವರು ಕಿರಿಯ ಅಧಿಕಾರಿಗಳು ಬಂದಿದ್ದು ಅವರ ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಲಿಲ್ಲ. ಅಲ್ಲದೇ ರೈತರು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ನಕಾರತ್ಮಾಕ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ. ಇದರಿಂದ ಹಿರಿಯ ಅಧಿಕಾರಿಗಳು ಬರುವವರೆಗೂ ಸಭೆಗೆ ಬಂದಿರುವ ಕಿರಿಯ ಅಧಿಕಾರಿಗಳನ್ನು ಬಿಡಲಾಗಲಿಲ್ಲ.
ಇತ್ತ ರಾಷ್ಟ್ರೀಯ ಹೆದ್ದಾರಿ 7 ರ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಅಗಲೀಕರಣಕ್ಕೆ ಭೂಮಿ ಕಳೆದುಕೊಂಡಿರುವ ರೈತರ ಆಕ್ರೋಶ. ಅತ್ತ ಸಭೆಗೆ ಹಾಜರಾಗುವಂತೆ ಸೂಚನೆ ನೀಡುತ್ತಿದ್ದರೂ ನಿರ್ಲಕ್ಷ್ಯ ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು. ಇದರ ನಡುವೆ ಜಿಲ್ಲಾಡಳಿತ ನಲುಗುತ್ತಿದೆ.
ರೈತರ ಆಕ್ರೋಶ: ಈಗ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಜಿಲ್ಲೆಯಲ್ಲಿ 1 ಎಕರೆ ಜಮೀನು 1 ಕೋಟಿ ರೂ ಬೆಲೆ ಬಾಳುತ್ತಿದ್ದು ಸಮರ್ಪಕವಾಗಿ ಮಾರಾಟಕ್ಕೆ ಭೂಮಿಯೇ ಸಿಗುತ್ತಿಲ್ಲ. ಹೀಗಿರುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಎಕರೆಗೆ ತಲಾ 20 ಲಕ್ಷ ನೀಡಲು ಹಿಂದೇಟು ಹಾಕಿ ರೈತರನ್ನು ಬೀದಿಪಾಲು ಮಾಡುತ್ತಿದೆ.
6 ವರ್ಷಗಳಿಂದ ಭೂಮಿಯನ್ನು ಕಳೆದುಕೊಂಡ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗದೇ, ಮಾಡಿರುವ ಸಾಲಗಳನ್ನು ತೀರಿಸಲಾಗದೇ ಪರದಾಡುತ್ತಿದ್ದಾರೆ. ಪ್ರಾಧಿಕಾರ ನೀಡುತ್ತಿರುವ ಹಣದಲ್ಲಿ ಈಗ ಭೂಮಿ ಕೊಂಡುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದ್ದು ಒಂದು ಕಾಲದಲ್ಲಿ ಕೃಷಿ ಭೂಮಿಯಲ್ಲಿ ರೈತರಾಗಿದ್ದ ಹಲವರು ಇದೀಗ ಕೂಲಿ ಕಾರ್ಮಿಕರಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಕೊಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಭೂಮಿಯನ್ನು ಕಳೆದುಕೊಂಡಿರುವ ರೈತರ ಒತ್ತಡ ಹೆಚ್ಚಾಗಿದ್ದು ಬೇಗ ಸಮಸ್ಯೆ ಬಗೆಹರಿಸಬೇಕಾಗಿದೆ. ಆದರೆ, ಸಭೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಆಗಮಿಸದೇ ಕಿರಿಯ ಅಧಿಕಾರಿಗಳು ಬಂದಿದ್ದಾರೆ. ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಿರಿಯ ಅಧಿಕಾರಿಗಳು ಬರಲಿ ಅಂತಾ ಎದುರುನೋಡುತ್ತಿದ್ದೇವೆ.
 -ಆರ್. ವಿಶಾಲ್, ಜಿಲ್ಲಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.