ಕೋಲಾರ

ಮಾಲೂರಲ್ಲಿ ಹನುಮ ಜಯಂತಿ

Published On :

ಮಾಲೂರು: ಹನುಮ ಜಯಂತಿ ಪ್ರಯುಕ್ತ ಪಟ್ಟಣದ ರೈಲ್ವೇ ಸೇತುವೆ ಬಳಿಯ ವಾಲ್ಮೀಕಿ ವೃತ್ತದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ವಿಶೇಷ ಅಲಂಕಾರ ಪೊಜೆ ಹಮ್ಮಿಕೊಳ್ಳಲಾಗಿತ್ತು.
 ಬೆಳಿಗ್ಗೆ ಮುಖ್ಯ ಆರ್ಚಕ ವೇಣುಗೋಪಾಲ್‌ಚಾರ್ ಪ್ರಧಾನಾಚಾರ್ಯತ್ವದಲ್ಲಿ ಹನುಮಾನ್ ಸುಪ್ರಭಾತ,ಶ್ರೀ ರಾಮ ಸುಪ್ರಭಾತ, ಪಂಚಾಮೃತ ಅಭಿಷೇಕ,ಪವಮಾನ ಹೋಮ, ವಡಮಾಲೆ ಸೇವೆ ನಡೆಯಿತು. ಹನುಮ ಸ್ವಾಮಿಗೆ ವಜ್ರಕವಚ ಅಲಂಕಾರ ಮಾಡಲಾಗಿತ್ತು. ಸಂಜೆ ಸ್ವಾಮಿಯ ಹೂವಿನ ಪಲ್ಲಕ್ಕಿ ಉತ್ಸವಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ದೂರದರ್ಶನ ಕಲಾವಿದರಾದ ಎಸ್.ಎಂ. ವೆಂಕಟಾಚಲ, ಹೆಚ್.ಎನ್. ಮುರಳಿ ತಂಡದವರಿಂದ ನಾದಸ್ವರ ಕಾರ್ಯಕ್ರಮ ನಡೆಯಿತು.
 ದೇವಾಲಯ ಸಮಿತಿ ಅಧ್ಯಕ್ಷ ಪಿ.ಶಾಮಣ್ಣ, ನಾರಾಯಣಪ್ಪ, ಕೆ. ದಿನೇಶ್‌ಬಾಬು, ಮಾ.ಬಾ. ಅಮರ್‌ಸಿಂಗ್, ಪ್ರದೀಪ್ ರೆಡ್ಡಿ, ಆಂಜಿನಪ್ಪ, ತಿಮ್ಮರಾಯಪ್ಪ, ಎ. ರಾಮಪ್ಪ, ಲಕ್ಷ್ಮಿನಾರಾಯಣ, ವೆಳ್ಳಪ್ಪ, ಕೆ.ಎಲ್. ನಾಗರಾಜ್, ರಘುನಾಥ್ ಚಾರ್, ಗೋವರ್ಧನ್ ರೆಡ್ಡಿ, ರಾಮಾನಂಜಪ್ಪ, ಎಸ್.ವಿ. ಶ್ರೀನಾಥ್, ಸುರೇಶ್‌ಬಾಬು ಇದ್ದರು.
ಕಚೇರಿಗೆ ಬೆಂಕಿ: ತನಿಖೆಗೆ ಆಗ್ರಹ
ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಗ್ರಾಪಂ ಕಚೇರಿಗೆ ಬೆಂಕಿ ಬಿದ್ದ ಪ್ರಕರಣವನ್ನು ಸಿಒಡಿ ತನಿಖೆಗೆ ವಹಿಸಬೇಕೆಂದು ತಾಲೂಕು ದಸಂಸ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂಘಟನೆಯ ಪದಾಧಿಕಾರಿಗಳು ಪ್ರಕರಣದಲ್ಲಿ ಅನಗತ್ಯವಾಗಿ ಕೆಲ ಸಂಘಟನೆಗಳ ಮುಖಂಡರು, ಕಾರ್ಯನಿರ್ವಹಣಾಧಿಕಾರಿ ಇಂದ್ರೇಶ್ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಕೆಲ ಚುನಾಯಿತ ಪ್ರತಿನಿಧಿಗಳ ಆಕ್ರಮಕ್ಕೆ ಸಹಕರಿಸಲಿಲ್ಲವೆಂಬ ಕಾರಣಕ್ಕೆ ಶೋಷಿತ ಜನಾಂಗದ ಅಧಿಕಾರಿಯ ಮೇಲೆ ಕ್ಷುಲ್ಲಕ ಆರೋಪ ಹೊರಿಸುವುದು ಸಲ್ಲ ಎಂದು ಒತ್ತಾಯಿಸಿದರು.
ಕೇವಲ ಒಂದು ಕೋಮಿನ ನಾಯಕತ್ವಕ್ಕೆ ಬೆಂಬಲ ನೀಡುತ್ತಿರುವ ವ್ಯಕ್ತಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆ ಬಿಟ್ಟು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿ. ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬಂದರೆ ತಾವು ಮಾಡಿದ ಅಕ್ರಮಗಳು ಬಯಲಿಗೆ ಬರುವ ಭೀತಿಯಿಂದ ಹಲವು ಸದಸ್ಯರು ಹಾಗೂ ಗುತ್ತಿಗೆದಾರರು ಅಧಿಕಾರಿ ಮೇಲೆ ಗೂಬೆ ಕೂರಿಸಿ ತಮ್ಮನ್ನು ರಕ್ಷಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಆರೋಗ್ಯ ಶಿಬಿರ ಸದುಪಯೋಗವಾಗಲಿ: ಶಾಸಕ ಕೃಷ್ಣಾರೆಡ್ಡಿ
ಚಿಂತಾಮಣಿ: ಗ್ರಾಮೀಣ ಪ್ರದೇಶದ ಜನರು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಉಪಯೋಗ ಪಡೆದುಕೊಂಡು ಆರೋಗ್ಯವಂತರಾಗಲು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನುಡಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ದೇವರಾಜ್ ಅರಸು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ ಹಾಗೂ ಕೋಮಲ್ ನಂದಿನ ಹಾಲು ಉತ್ಪಾದಕರ ಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ
ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಬಡಜನರು ತಪಾಸಣೆಗಾಗಿ ಹೋದಾಗ ಕನಿಷ್ಠ ರು.500 ರಿಂದ 600 ವರೆಗೂ ತಪಾಸಣಾ ಶುಲ್ಕವನ್ನು ನೀಡಬೇಕಾಗಿರುವ ಪರಿಸ್ಥಿತಿ ತಪ್ಪಿಸಲು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಗ್ರಾಮೀಣ ಪ್ರದೇಶ ಜನರು ಸದುಪಯೋಗ ಪಡಿಸಿಕೊಂಡು ಆರೋಗ್ಯದ ಕಡೆಗೆ ಹೆಚ್ಚು ಒಲವು ತೋರಬೇಕೆಂದು ನುಡಿದರು. ತಾಲೂಕು ದಂಡಾಧಿಕಾರಿ ಕೆ.ಟಿ.ಕೃಷ್ಣಸ್ವಾಮಿ, ಪ್ರಾಂಶುಪಾಲರಾದ ಜಯತೀರ್ಥ, ಶಂಕರ್, ಮುನಿನಾರಾಯಣಪ್ಪ ಡಿ.ಸಾದಪ್ಪ, ಪ್ರಕಾಶ್,ನಟರಾಜ್, ವೆಂಕಟರವಣಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಹನುಮ ಜಯಂತಿ
ಟೇಕಲ್: ಹನುಮ ಜಯಂತಿ ಪ್ರಯುಕ್ತ ಮುಂಜಾನೆಯಿಂದಲೇ ದೇವಾಲಯದಲ್ಲಿ ಆಂಜನೇಯ, ಗಣಪತಿ, ಲಕ್ಷ್ಮೀ ವೆಂಕಟರಮಣಸ್ವಾಮಿ, ಗ್ರಾಮ ದೇವತೆಗಳ ಹೋಮಗಳು ನಡೆದು ವಿಶೇಷವಾಗಿ ದಾನಿಗಳು ನೀಡಿದ್ದ ಆಂಜನೇಯಸ್ವಾಮಿ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯನ್ನು ಆಗಮೋಕ್ಯ ವಿದ್ವಾಂಸರಾದ ವೆಂಕಟನಾರಾಯಣರವರ ನೇತೃತ್ವದಲ್ಲಿ ನೆರವೇರಿತು. ಹನುಮಂತರಾಯಸ್ವಾಮಿಗೆ ಅಭಿಷೇಕ ಮಾಡಿ, ಪುಷ್ಪಾಲಂಕಾರ ಮಾಡಲಾಯಿತು. ಸೇವಾ ಸಮಿತಿಯಿಂದ ನುಮಾನ್ ಚಾಲೀಸ್, ಹನುಮಾನ್ ಅಷ್ಟೋತ್ತರ ಪಠಿಸಲಾಯಿತು.
 ಹನುಮಂತರಾಯಸ್ವಾಮಿ ಟ್ರಸ್ಟ್‌ನ ಜೆ.ಎನ್. ನರಸಿಂಹಮೂರ್ತಿ, ಆರ್.ನಾಗರಾಜ್‌ರಾವ್, ವಿ.ಎನ್.ರಾಮರಾವ್, ಆರ್.ಎಸ್.ಗುಂಡೂರಾವ್, ದೇವಾಲಯದ ಪ್ರಧಾನ ಅರ್ಚಕರಾದ ವಿ.ಎನ್.ರಾಧಾಕೃಷ್ಣರಾವ್ ಹಾಗೂ ಉಳ್ಳೇರಹಳ್ಳಿ ಗ್ರಾಮಸ್ಥರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
'ಯುವಶಕ್ತಿ ಸಂಘಟಿತರಾದರೆ  ಬಿಜೆಪಿಗೆ ಅಧಿಕಾರ'
ಶಿಡ್ಲಘಟ್ಟ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಯುವ ಜನತೆ ಸಂಘಟಿತರಾಗಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ತಾಯಪ್ಪ  ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಗರ ಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ಪಧಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದ ಯುಪಿಎ ಸರ್ಕಾರ ಭ್ರಷ್ಟಾಚಾರದ ಫಲವಾಗಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕ್ಕಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಯಕತ್ವ ಬೆಂಬಲಿಸಿ ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದರು.
ಯುವ ಘಟಕಕ್ಕೆ ಆಯ್ಕೆ: ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷರಾಗಿ ಕೆ.ಸಿ.ಯೋಗಾನಂದ್, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಕೆ.ನಾರಾಯಣಸ್ವಾಮಿ, ಎಸ್.ವಿ.ರಾಜಶೇಖರ್, ಉಪಾಧ್ಯಕ್ಷರನ್ನಾಗಿ ಶ್ರೀನಿವಾಸ್, ಮಂಜುನಾಥ್ ಆಯ್ಕೆ ಮಾಡಲಾಯಿತು.
'ಯುಪಿಎ ಸಾಧನೆ ಜಾಗೃತಿ ಮೂಡಿಸಿ'
ಶಿಡ್ಲಘಟ್ಟ: ಕೇಂದ್ರ ಯುಪಿಎ ಸರಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಿಳಿಸುವಂತಹ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಕರೆ ನೀಡಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕೆಂದು ಕರೆ ನೀಡಿದರು.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಯಲುಸೀಮೆ  ತಾಲೂಕುಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದ ಅವರು, ನೀರಾವರಿ ತಜ್ಞ ಡಾ.ಪರಮಶಿವಯ್ಯ ನೀಡಿರುವ ವರದಿ  ಅನ್ವಯ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಮನಸ್ಸಿನ ಕೊಳೆ ನಾಶವಾದಲ್ಲಿ ಜ್ಞಾನಾಭಿವೃದ್ಧಿ: ಗುರೂಜಿ
ಕೋಲಾರ: ವಿದ್ಯಾರ್ಥಿಗಳ ಏಕಾಗ್ರತೆಯಿಂದ ಓದಿ ಉತ್ತಮ ಫಲಿತಾಂಶ ಮತ್ತು  ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕಾದರೆ ಮನಸ್ಸಿನಲ್ಲಿರುವ ಕೊಳೆ ತೆಗೆಯುವುದು ಅತ್ಯವಶ್ಯಕ ಎಂದು ಬೆಂಗಳೂರಿನ ಸ್ಪಿರಿಚುಯಲ್ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಗುರೂಜಿ ತಿಳಿಸಿದರು.
ತಾಲೂಕಿನ ವೇಮಗಲಲ್ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ವ್ಯಕ್ತಿತ್ವ ವಿಕಸನ ಮತ್ತು ಯೋಗ ತರಬೇತಿ ಶಿಬಿರವನ್ನು ಅವರು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ವರದರಾಜ್ ಮಾತನಾಡಿದರು. ಪ್ರೊ. ವೇಣುಗೋಪಾಲ್, ಕೃಷ್ಣಪ್ಪ, ಬಿ.ಸೊಣ್ಣೇಗೌಡ, ಮುನಿರಾಜು, ಕುಮಾರಸ್ವಾಮಿ, ವಿ.ಎನ್. ಶ್ರೀನಿವಾಸ್, ಎನ್‌ಎಸ್‌ಎಸ್ ಅಧಿಕಾರಿ ವೆಂಕಟರವಣಪ್ಪ, ಭಾರತ ಸೇವಾದಳ ಸಂಘಟಕ ವಿ. ಮಂಜುನಾಥ  ಮತ್ತಿತರರು ಇದ್ದರು.
ರಾಜ್ಯಮಟ್ಟಕ್ಕೆ ಆಯ್ಕೆ
ಟೇಕಲ್: ಕೋಲಾರ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಯ ಗಾಯನ ಸ್ಪರ್ಧೆಯಲ್ಲಿ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ. ಅಶೋಕ್ ಪ್ರಥಮಸ್ಥಾನ ಪಡೆದು ತುಮಕೂರಿನಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಸಭೆ ನಾಳೆ
ಚಿಕ್ಕಬಳ್ಳಾಪುರ: ನೂತನ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಡಿ.16 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಆಯೋಜಿಸಲಾಗಿದೆ. ಜಿಪಂ ಅಧ್ಯಕ್ಷ ಎಸ್.ಎಂ.ಚಿನ್ನಪ್ಪ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲ್ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಬಾಕು ನಿಷೇಧ ಕಾರ್ಯಾಗಾರ
ಕೋಲಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಡಿ.17ರಂದು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ತಂಬಾಕು ನಿಷೇಧ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಹೆಚ್‌ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಾಯಿನಾಥರ ಪಲ್ಲಕ್ಕಿ ಉತ್ಸವ
ಮಾಲೂರು: ಸ್ಥಳೀಯ ಶ್ರೀ ಶಿರಡಿ ಸಾಯಿ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ದತ್ತಾತ್ರೇಯ ಜಯಂತಿ ಅಂಗವಾಗಿ ದತ್ತಾವತಾರ ಸಾಯಿನಾಥರ ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.    ಸೋಮವಾರ ಬೆಳಿಗ್ಗೆ ಪಟ್ಟಣ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಸ್ವಾಮಿಗಳಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.ನಂತರ ದೇವಾಲಯದ ಆವರಣದಲ್ಲಿರುವ ಸಾಯಿಭಜನಾ ಮಂದಿರದಲ್ಲಿ ಭಕ್ತಾಧಿಗಳಿಂದ ವಿಶೇಷ ಸಾಯಿ ಭಜನೆ ಹಾಗೂ ಮಧ್ಯಾಹ್ನ ಶಿರಡಿ ಪಂಚಾರತಿ ನಡೆಯಲಿದೆ. ನಂತರ ಪಟ್ಟಣದ ಹೂರವಲಯದಲ್ಲಿರುವ ನಂದಾ ದೀಪ ಬುದ್ದಿ ಮಾಂಧ್ಯ ವಸತಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ ಅನ್ನ ಸಂತರ್ಪಣೆ ನಂತರ ಸಂಜೆ 4 ಗಂಟೆಗೆ ಅದ್ಧೂರಿ ಸಾಯಿನಾಥರ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಟ್ರಸ್ಟ್‌ನ ನರಸಿಂಹಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ, ಪುಸ್ತಕಗಳ ವಸ್ತು ಪ್ರದರ್ಶನ
ಮಾಲೂರು: ಬೆಂಗಳೂರಿನ ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕರು ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಕೃಷಿ, ಗೃಹೋಪಯೋಗಿ ವಾಹನಗಳ ಮತ್ತು ಪುಸ್ತಕಗಳ ಉತ್ಸವದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ.
  ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳ ಸಹಕಾರದೊಂದಿಗೆ ಗೃಹಪಯೋಗಿ ವಸ್ತುಗಳು, ವಾಹನಗಳ ಮತ್ತು ಪುಸ್ತಕಗಳ ಪ್ರದರ್ಶನದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಸಂಸ್ಥೆಯ 57 ನೇ ವಸ್ತು ಪ್ರದರ್ಶನವಾಗಿದ್ದು, ವಿಶೇಷ ಆಕರ್ಷಣೆಯಾಗಿ ತಾಂತ್ರಿಕ ಮಾಹಿತಿ ವಿಭಾಗವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.