ಕೋಲಾರ

ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ

Published On :

ಕೋಲಾರ: ನಗರದ ದಾನಮ್ಮ ಚನ್ನಬಸವಯ್ಯ ಮಹಿಳಾ ಸಮಾಜದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜಿ.ಕೆ.ಅನುಪಮಾ (17) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೊಲ್ಲಕುಂಟೆ ಗ್ರಾಮದ ಕದಿರಪ್ಪ ಎಂಬುವರ ಪುತ್ರಿ ಅನುಪಮಾ ತನ್ನ ಅಕ್ಕ ಬಿಕಾಂ ವಿದ್ಯಾರ್ಥಿನಿ ಅಶ್ವಿನಿಯೊಂದಿಗೆ ನಗರದ ಕೋರ್ಟ್ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗಿ ಬರುತ್ತಿದ್ದಳು.
ಶುಕ್ರವಾರ ರಾತ್ರಿ ಹಾಸ್ಟೆಲ್‌ನಲ್ಲಿ ಉಳಿದ ಸ್ನೇಹಿತರೊಂದಿಗೆ ಚೆನ್ನಾಗಿಯೇ ಇದ್ದಳು. ಶನಿವಾರ ಬೆಳಿಗ್ಗೆ 5.30ರಲ್ಲಿ ರೂಂನಿಂದ ಹೊರ ಬಂದ ಅನುಪಮಾ ಹಾಸ್ಟೆಲ್ ಹೊರಗಡೆಯ ಪ್ಯಾಸೇಸ್‌ನಲ್ಲಿ ಓದುತ್ತಿದ್ದಳು. ತದನಂತರ ಏಕಾಏಕಿ ಖಾಲಿ ಇರೋ ಪಕ್ಕದ ರೂಂಗೆ ಹೋಗಿ ಪ್ಯಾನ್‌ಗೆ ಚೂಡಿದಾರ್ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಕ್ಕ ಅಶ್ವಿನಿ ಮತ್ತು ಹಾಸ್ಟೆಲ್‌ನಲ್ಲಿರುವ ಇನ್ನಿತರ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.
ಅನುಪಮಾ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಅನುಪಮಾ ಪಿಯುಸಿಯಲ್ಲೂ ಹೆಚ್ಚು ಅಂಕ ಗಳಿಸಬೇಕೆಂಬ ಆಸೆಯಿಂದ ಈ ಬಾರಿಯೂ ಚನ್ನಾಗಿ ಓದುವಂತೆ ಅಕ್ಕ ಅಶ್ವಿನಿ ಕಿವಿಮಾತು ಹೇಳಿದ್ದರು.
ಮನೆ ಕಡೆ ಮತ್ತು ಸ್ನೇಹಿತರ ಬಗ್ಗೆ ಚಿಂತೆ ಮಾಡದೆ ಕಷ್ಟಪಟ್ಟು ಓದುವಂತೆ ಸಲಹೆ ನೀಡುತ್ತಿದ್ದರು, ಅನುಪಮಾಗೆ ಹಾಸ್ಟೆಲ್‌ನಲ್ಲಿ ಬೇರೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಸಹಪಾಠಿಗಳು ಪೊಲೀಸರಿಗೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.ಒಳ್ಳೆಯ ಹುಡುಗಿ: ಕಾಲೇಜಿಗೆ ಪ್ರತಿದಿನ ಹಾಜರಾಗುತ್ತಿದ್ದಳು ಮಾತ್ರವಲ್ಲ, ಒಳ್ಳೆಯ ಹುಡುಗಿಯಾಗಿದ್ದಳು. ಓದಿನಲ್ಲೂ ಪರವಾಗಿಲ್ಲ. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಸ್ಯೆ ಅವಳಿಗೇನಿತ್ತು ಎಂಬುದು ತಿಳಿಯದಾಗಿದೆ ಎಂದು ಕಾಲೇಜು  ಪ್ರಾಂಶುಪಾಲ ನವೀನ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಮಗಳ ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ ಹಳ್ಳಿಯಿಂದ ಧಾವಿಸಿ ಬಂದ ತಂದೆ ಕದಿರಪ್ಪ ಗೋಳಾಡಿದರು. ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದರೆ ಡಾಕ್ಟರ್ ಮಾಡಿಸುವೆ ಎಂದು ಹೇಳಿದ್ದೆ, ನನ್ನ ಆಸೆ ಪೂರೈಸಿದೆ ಹೋಗಿದ್ದಾಳೆ ಎಂದು ಕಂಬನಿ ಮೀಡಿದ ತಂದೆಯನ್ನು ದೊಡ್ಡ ಮಗಳು ಅಶ್ವಿನಿ ಸಂತೈಸಿದರು.
ನಗರದ ಗಲ್ಲಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ವಿದ್ಯಾರ್ಥಿ ಅನುಪಮಾ ಸಾವಿನ ಹಿನ್ನಲೆಯಲ್ಲಿ ಮಹಿಳಾ ಸಮಾಜ ಕಾಲೇಜಿನಲ್ಲಿ ಸಂತಾಪ ಸೂಚಿಸಿ ತರಗತಿಗಳಿಗೆ ರಜೆ ಘೋಷಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.