ಕೋಲಾರ

ಗುರು ಸಂಸ್ಮರಣೆಯಲ್ಲಿ ನೀರಿನ ದಾಹದ ಪ್ರತಿಧ್ವನಿ

Published On :

ಚಿಕ್ಕಬಳ್ಳಾಪುರ: ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆಯನ್ನು ನೀಡುತ್ತಿರುವ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಯವರ ನೆನೆಯುವ ಸಲುವಾಗಿ ಭಾನುವಾರ ನಡೆದ ಗುರು ಸಂಸ್ಮರಣೆ ಮತ್ತು ಭಕ್ತರ ಸಂಗಮ ಅದ್ಧೂರಿ ಕಾರ್ಯಕ್ರಮದಲ್ಲಿ ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ಪರದಾಡುತ್ತಿರುವ ಬಯಲುಸೀಮೆಯ ಜನರ ನೀರಿನ ದಾಹವನ್ನು ತೀರಿಸಲು ಮುಂದಾಗಬೇಕಿದ್ದರ ಬಗ್ಗೆ ಧ್ವನಿ ಎತ್ತಲಾಯಿತು. ಅಲ್ಲದೇ ಮಠದ ಹಾಲಿ ಪೀಠಾಧಿಪತಿಗಳಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳೂ ಶಾಶ್ವತ ನೀರಾವರಿ ಹೋರಾಟದ ನಾಯಕತ್ವವನ್ನು ವಹಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾದವು.
ನಗರದ ಹೊರ ವಲಯದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಹಿಂಭಾಗ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು ಸೇರಿದಂತೆ ಅನೇಕ ಮುಖಂಡರುಗಳು ಪಕ್ಷಾತೀತವಾಗಿ ಭಾಗವಹಿಸಿದ್ದರು. ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರೀ ಆದಿಚುಂಚಗಿರಿ ಮಠವು ಅನೇಕ ವರ್ಷಗಳಿಂದ ಸಮಾಜಕ್ಕೆ ನೀಡುತ್ತ ಬಂದಿರುವ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಯಲ್ಲಿಯೇ ಈ ಭಾಗಕ್ಕೆ ಅಗತ್ಯವಾಗಿ ಬೇಕಾಗಿರುವ ಶಾಶ್ವತ ನೀರಾವರಿ ಸೌಲಭ್ಯದ ಬಗ್ಗೆಯೂ ಒತ್ತಿ ಹೇಳಲಾಯಿತು.
ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಿಕೊಂಡು ಬರುತ್ತಿರುವ ಈ ಭಾಗದ ಜನರಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಬೇರೆ ಕಡೆ ಇಂತಹ ವಾತಾವರಣವಿದ್ದಿದ್ದರೆ ಅದರ ಕತೆಯೇ ಬೇರೆ ರೀತಿಯಲ್ಲಿರುತ್ತಿತ್ತು. ಆದರೆ, ಇಲ್ಲಿನ ಜನರು ತಾಳ್ಮೆ, ಸಹನೆಯಿಂದ ಸಮಸ್ಯೆಯನ್ನು ನುಂಗಿಕೊಂಡು ಹೋಗುತ್ತಿದ್ದಾರೆ. ತೀವ್ರ ಕುಸಿಯುತ್ತಿರುವ ಅಂತರ್ಜಲದ ಸಮಸ್ಯೆಯ ನಡುವೆಯೂ ತರಕಾರಿ, ರೇಷ್ಮೆ, ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ರಾಜ್ಯದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದ್ದಾರೆ. ಆದರೆ, ವಾತಾವರಣವು ಈಗ ಬದಲಾಗಿದೆ. ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸುವ ಕೆಲಸ ತ್ವರಿತವಾಗಿ ನಡೆಯಬೇಕೆಂದು ಒತ್ತಾಯಿಸಿ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದು ದಿನೇ ದಿನೇ ಸಮಸ್ಯೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಚಿಕ್ಕಬಳ್ಳಾಪುರ ಶಾಖಾ ಮಠದ ಅಭಿವೃದ್ಧಿಗೆ ಶ್ರಮಿಸಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಇಲ್ಲಿನ ಜನರೊಂದಿಗೆ ಆತ್ಮೀಯವಾಗಿ ಬೆರೆತು ಹೋಗಿದ್ದು ಈ ಭಾಗದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು.ಜನರ ಪ್ರಮುಖ ಸಮಸ್ಯೆಯಾದ ನೀರಿನ ದಾಹವನ್ನು ತೀರಿಸಲು ಶ್ರಮಿಸಬೇಕೆಂದು ಒತ್ತಾಯಿಸಿದರು.
ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡಿ, ಆದಿಚುಂಚಗಿರಿ ಮಠವು ನೀಡಿರುವ ಕೊಡುಗೆಯೂ ಮಹತ್ತರವಾದದು.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಶೈಕ್ಷಣಿಕ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದರು. ಈಗ ಇಲ್ಲಿನ ಜನರ ಸಮಸ್ಯೆ ದೂರವಾಗಲು ದೊಡ್ಡ ಹೋರಾಟವಾಗಬೇಕಾಗಿದೆ.ಶಾಶ್ವತ ನೀರಾವರಿ ಸೌಲಭ್ಯವನ್ನು ಜನರಿಗೆ ಒದಗಿಸಬೇಕಾದ ಜವಾಬ್ದಾರಿಯು ಜನಪ್ರತಿನಿಧಿಗಳ ಮೇಲಿದ್ದು ಶ್ರೀಗಳು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಬೇಕು. ಶ್ರೀಗಳ ಮನವಿಯನ್ನು ಯಾರೂ ತಳ್ಳಿ ಹಾಕುವುದಿಲ್ಲ. ಖಂಡಿತವಾಗಿ ಸರ್ಕಾರವೂ ತಲೆ ಬಾಗಿ ಜನರ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತದೆ ಎಂದರು.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮಾತನಾಡಿ, ಹುಟ್ಟಿದ ಮೇಲೆ ಏನೂ ಸಾಧನೆ ಮಾಡಿದ್ದೇವೆ ಎನ್ನುವುದು ಮುಖ್ಯವೇ ಹೊರತು ಎಷ್ಟು ವರ್ಷ ಬದುಕಿದೇವು ಎನ್ನುವುದಲ್ಲ. ಇದನ್ನು ಈಗಾಗಲೇ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಅಪಾರ ಕೊಡುಗೆಗಳ ಮೂಲಕ ತಿಳಿಸಿದ್ದಾರೆ. ಈಗ ಮುನ್ನಡೆಸಿಕೊಂಡು ಹೋಗಬೇಕಾದ ಜವಾಬ್ದಾರಿಯು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಮೇಲಿದೆ. ನೀರಿಗಾಗಿ ಪರಿತಪಿಸುತ್ತಿರುವ ರೈತರು ಸೇರಿದಂತೆ ಈ ಭಾಗದ ಜನರ ಉತ್ತಮ ಭವಿಷ್ಯಕ್ಕಾಗಿ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಬೇಕಾಗಿದ್ದು ಇದನ್ನು ಪಡೆಯುವ ಸಲುವಾಗಿ ಹೋರಾಟ ನಡೆಸಲು, ಸಮಾಜ ಸೇವೆಯನ್ನು ಕೈಗೊಳ್ಳಲು ಜನರು ಮಠಕ್ಕೆ ಶಕ್ತಿಯನ್ನು ಕೊಡಬೇಕೆಂದು ಮನವಿ ಮಾಡಿದರು.

ಶಾಶ್ವತ ನೀರಾವರಿ ಬೇಕೇ ಬೇಕು:ಶ್ರೀಗಳ ಒತ್ತಾಯ
ಚಿಕ್ಕಬಳ್ಳಾಪುರ:
ತಮ್ಮ ನೆಚ್ಚಿನ ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಮಾತನಾಡಿದ ಅದಿಚುಂಚಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಈ ಭಾಗಕ್ಕೆ ಶಾಶ್ವತ ನೀರಾವರಿ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಒತ್ತಿ ಹೇಳಿದರು. ಈ ಭಾಗದಲ್ಲಿ ಸಿಗುತ್ತಿರುವ ನೀರು ಕುಡಿಯಲು ಯೋಗ್ಯವಿಲ್ಲ.ಹಿಂದೆ ಹಿರಿಯ ಸ್ವಾಮಿಗಳು ಇಲ್ಲಿ ದೊರೆಯುವ ನೀರಿನ ಸರ್ವೆ ಮಾಡಿಸಿದ್ದರು. ಇದರಿಂದ ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗುಡಿಬಂಡೆ ಸೇರಿದಂತೆ ಜಿಲ್ಲೆಯಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಹೆಚ್ಚಳವಾಗಿದೆ.ಇದನ್ನು ಸೇವಿಸಿ ಯುವ ಜನರು ವೃದ್ಧಾಪ್ಯದ ಬಾಧೆಯನ್ನು ಅನುಭವಿಸುತ್ತಿದ್ದಾರೆ. ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ ಎನ್ನುವುದು ತಿಳಿದುಕೊಂಡು ಈ ಭಾಗಕ್ಕೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು.ಅದರಂತೆ ರಾಜ್ಯ ಸರ್ಕಾರ ಯೋಜನೆಗೆ ಹಣವನ್ನು ಮೀಸಲಿಟ್ಟು ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದು ಇದು ಕೆಲಸದಲ್ಲಿ ತ್ವರಿತಗತವಾಗಿ ನಡೆಯಬೇಕೆಂದರು. ಶಾಶ್ವತ ನೀರಾವರಿ ಒದಗಿಸದಿದ್ದಲ್ಲಿ ಈ ಭಾಗದ ಜನರು ಬೇರೆ ಕಡೆಗೆ ಗುಳೆ ಹೋಗಬೇಕಾಗುತ್ತದೆ. ಇಲ್ಲಿ ಜೀವನ ನಡೆಸಲು ಪರದಾಡಬೇಕಾದಂತಹ ವಾತಾವರಣ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೇಂದ್ರ ಸಚಿವರಾದ ಕೆ.ಹೆಚ್. ಮುನಿಯಪ್ಪ, ಎಂ. ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವಿಧಾನಸಭೆಯ ಉಪಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ಶಾಸಕರಾದ ಡಾ. ಕೆ. ಸುಧಾಕರ್, ರಮೇಶ್ಕುಮಾರ್, ರಾಜಣ್ಣ, ಡಿ.ಎಸ್. ವೀರಯ್ಯ, ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕರಾದ ವಿ.ಮುನಿಯಪ್ಪ, ಕೆ.ಪಿ. ಬಚ್ಚೇಗೌಡ, ಎಂ.ಸಿ.ಸುಧಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಆಂಜಿನಪ್ಪ ಉಪಸ್ಥಿತರಿದ್ದರು.

ದಿಢೀರ್ ಶೋಕಾಚರಣೆ
ಚಿಕ್ಕಬಳ್ಳಾಪುರ:
ಗುರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಅತಿಥಿಗಳು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರನೇ ದು:ಖಕರ ಸಂಗತಿ ಕೇಳಿ ಬಂತು. ಕಾರ್ಯಕ್ರಮದಲ್ಲಿ ವಂದನಾರ್ಪಣೆ ನೆರವೇರಿಸಿ ಕೊಡಬೇಕಾಗಿದ್ದ ತುಮಕೂರು ಶಾಖಾ ಮಠದ ಶಿವಕುಮಾರಾನಂದನಾಥ ಸ್ವಾಮೀಜಿಯವರು ಕಾರ್ಯಕ್ರಮಕ್ಕೆ ಆಗಮಿಸುವ ರಸ್ತೆ ಮಾರ್ಗ ಮಧ್ಯೆ ಕಾರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ಕಾರ್ಯಕ್ರಮದಲ್ಲಿ ನೆರೆದಿದ್ದವರನ್ನು ಶೋಕ ಸಾಗರದಲ್ಲಿ ಮುಳುಗಿಸಿತು. ಸಡಗರದ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಎರಡು ನಿಮಿಷ ಮೌನ ಆಚರಿಸಿ ನಿಧನರಾದ ಶ್ರೀಗಳಿಗೆ ಗೌರವ ಸಲ್ಲಿಸಿದ ನಂತರ ನಿರ್ಮಲಾನಂದನಾಥ ಸ್ವಾಮೀಜಿ ಕೆಲ ನಿಮಿಷ ಮಾತನಾಡಿ ಕಾರ್ಯಕ್ರಮಕ್ಕೆ ತೆರೆ ಎಳೆದರು. ಬೆಳ್ಳಿ ಕಿರೀಟ ತಂದು ಭಕ್ತರು ಅದ್ದೂರಿ ಸನ್ಮಾನ ಮಾಡಲು ಬಂದಾಗ ನಿರಾಕರಿಸಿದರು.ನಂತರ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳಿಗಾಗಿ ಊಟದ ವ್ಯವಸ್ಥೆ ಒದಗಿಸಲಾಯಿತು.  

ಕಳ್ಳರ ಕೈ ಚಳಕ
ಚಿಕ್ಕಬಳ್ಳಾಪುರ:
ಜನರಿಂದ ತುಂಬಿ ತುಳುಕಾಡುತ್ತಿದ್ದ ಗುರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಕಳ್ಳರು ಕೈ ಚಳಕ ತೋರಿಸಿದ ಘಟನೆಯೂ ನಡೆದಿದೆ. ಜನರು ಕಾರ್ಯಕ್ರಮವನ್ನು ವೀಕ್ಷಿಸಲು ಗುಂಪು ಗುಂಪಾಗಿ ಓಡಾಡುತ್ತಿದ್ದು ವೇದಿಕೆ ಕಾರ್ಯಕ್ರಮದ ಬಳಿ ಸಂಚಾರ ಕೆಲ ಸಮಯ ಸ್ಥಗಿತಗೊಂಡಿತ್ತು. ಇದರಿಂದ ಮುಂದೆ ಹೋಗಲು ಪರದಾಡುತ್ತಿದ್ದ ಜನರ ನಡುವೆ ಸೇರಿಕೊಂಡ ಕಳ್ಳರು ಕೆಲವರ ಜೇಬಿನಿಂದ ಹಣ ಕದ್ದು ಪರಾರಿಯಾದರು. ಗೌರಿಬಿದನೂರು ತಾಲೂಕಿನ ವ್ಯಕ್ತಿಯೊಬ್ಬರು 9 ಸಾವಿರ ರು. ರಾಜಕೀಯ ಮುಖಂಡರೊಬ್ಬರು 4 ಸಾವಿರ ರು. ಮತ್ತು ಸುದ್ದಿ ಛಾಯಾಗ್ರಾಹಕರೊಬ್ಬರು 2 ಸಾವಿರ ರು. ಕಳೆದುಕೊಂಡಿದ್ದು ಹಲವರು ತಮ್ಮ ಜೇಬಿನಲ್ಲಿ ಹಣ ಮಾಯವಾಗಿರುವುದರ ಬಗ್ಗೆ ಅಳಲು ತೋಡಿಕೊಂಡರು.

ಸಹಸ್ರಾರು ಭಕ್ತರ ಸಮ್ಮುಖ ಬಾಲಗಂಗಾಧರನಾಥ ಸ್ವಾಮೀಜಿ ಪ್ರತಿಮೆ ಅನಾವರಣ
ಚಿಕ್ಕಬಳ್ಳಾಪುರ:
ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಆದಿಚುಂಚನಗಿರಿ ಪೀಠಾಧಿಪತಿಗಳಾಗಿದ್ದ  ಬಾಲಗಂಗಾಧರನಾಥ ಸ್ವಾಮೀಜಿಯವರ ಪ್ರತಿಮೆ ಅನಾವರಣ ಮತ್ತು  ನಿರ್ಮಲಾನಂದನಾಥ ಸ್ವಾಮೀಜಿಯವರ ಮೆರವಣಿಗೆ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ನಡೆಯಿತು.
ಆದರೆ,ಆದಿಚುಂಚನಗಿರಿ ಮಠದ ತುಮಕೂರು ಶಾಖೆಯ ಶ್ರೀಗಳ ನಿಧನವು ಸಂಭ್ರಮದಲ್ಲಿದ್ದ ಕಾರ್ಯಕ್ರಮವನ್ನು ಶೋಕಾಚರಣೆಯಲ್ಲಿ ಮುಳುಗಿಸಿತು. ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ತೊಡಿಸಿ
ಸನ್ಮಾನಿಸಲು ಮುಂದಾಗಿದ್ದ ಭಕ್ತರನ್ನು ನಿರಾಶೆಗೆ ತಳ್ಳಿತು.
ಇದಕ್ಕೂ ಮೊದಲು ನಗರದ ಮರಳು ಸಿದ್ದೇಶ್ವರನಾಥ ಸ್ವಾಮಿ ದೇವಾಲಯದ ಆವರಣದಿಂದ ಶ್ರೀಗಳ ಮೆರವಣಿಗೆ ಪ್ರಾರಂಭವಾಯಿತು. ಸಹಸ್ರಾರು ಮಂದಿ ಭಕ್ತಾದಿಗಳು ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.ಮುತ್ತಿನ ಪಲ್ಲಕ್ಕಿಯಲ್ಲಿ ಶ್ರೀಗಳಿಬ್ಬರನ್ನು ಕೂರಿಸಿ ಎಂ.ಜಿ.ರಸ್ತೆ, ಬಿ.ಬಿ.ರಸ್ತೆಯ ಮೂಲಕ ನಗರದ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯದವರೆಗೂ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು.ಭಕ್ತಾದಿಗಳು ಜೈಕಾರದ ಘೋಷಣೆಗಳೊಂದಿಗೆ ಹೆಜ್ಜೆ ಹಾಕಿದರು.
ಮತ್ತೊಂದೆಡೆ ಅದ್ದೂರಿ ಕಾರ್ಯಕ್ರಮ ನಡೆಯುವ ವೇದಿಕೆ ಮತ್ತು ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಕ್ತರು ತುಂಬಿ ತುಳುಕಾಡುತ್ತಿದ್ದರು.ಎಲ್ಲಿ ನೋಡಿದರೂ ಜನಸಂದಣಿ ದೊಡ್ಡ ಪ್ರಮಾಣದಲ್ಲಿತ್ತು.ಇನ್ನೂ ಮೆರವಣಿಗೆ ಮುಗಿಯುತ್ತಿದ್ದಂತೆ ವೀರಾಂಜನೇಯಸ್ವಾಮಿಗೆ ಪೂಜೆ ಸಲ್ಲಿಸಿದ ಶ್ರೀಗಳು ಮತ್ತು ಭಕ್ತರು ವೇದಿಕೆಗೆ ಆಗಮಿಸಿದರು.
ಮೆಚ್ಚುಗೆ ಸುರಿಮಳೆ: ಗುರುಸಂಸ್ಮರಣೆ ಮತ್ತು ಭಕ್ತರ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳು ಆದಿಚುಂಚನಗಿರಿ ಮಠದ ಅಪಾರ ಕೊಡುಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ,ಮಠದ ಸಾಧನೆಯನ್ನು ಎಷ್ಟು ಕೊಂಡಾಡಿದರೂ ಸಹ ಸಾಲದು.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಅಕ್ಷರ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆ ಮಾಡಿದ್ದಾರೆ.ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಶ್ರೀಗಳು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಲಿಲ್ಲ. ಎಲ್ಲಾ ವರ್ಗದ ಜನರ ಧ್ವನಿಯಾಗಿದ್ದುಕೊಂಡು ಜನರ ಸೇವೆಗೆ ಶ್ರಮಿಸಿದರು.ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡು ಹೋಗಬೇಕೆಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾತನಾಡಿ,ಜನರ ಆಶಯಗಳನ್ನು ತಿಳಿದುಕೊಂಡು ಕ್ರಾಂತಿಯನ್ನು ಮಾಡಿದ ಶ್ರೀಗಳು ಎಂದೆಂದಿಗೂ ನಮ್ಮೊಡನೆ ಇರುತ್ತಾರೆ.ಆದಿಚುಂಚನಗಿರಿ ಮಠದ ಕೊಡುಗೆಗಳು ಅನನ್ಯವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.