ವೃತ್ತಿಪರ ಶಿಕ್ಷಣ ಕಾಯ್ದೆ ತಿದ್ದುಪಡಿಗೆ ಮೊಯ್ಲಿ ವಿರೋಧ
ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟಿನಡಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಅವಕಾಶ ಕಳೆದುಕೊಳ್ಳುವಂತೆ ಮಾಡುತ್ತದೆ ಎನ್ನಲಾಗುವ ಕರ್ನಾಟಕ ವೃತ್ತಿಪರ ಶಿಕ್ಷಣ 2006 ಕಾಯ್ದೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವುದಕ್ಕೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಕೀಲರ ಭವನವನ್ನು ಭಾನುವಾರ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಪಾರದರ್ಶಕವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಗೆ ದೊರಕಿಸುವ ದೃಷ್ಟಿಯಿಂದ ಸಿಇಟಿ ನಡೆಸುವ ವ್ಯವಸೆ ಜಾರಿಗೆ ತರಲಾಗಿತ್ತು ಎಂದರು.
ಇದೀಗ ರಾಜ್ಯ ಸರ್ಕಾರ 2014-15ನೇ ಸಾಲಿನಿಂದ ಕರ್ನಾಟಕ ವೃತ್ತಿಪರ ಶಿಕ್ಷಣ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗುತ್ತಿರುವುದರಿಂದ ಸರ್ಕಾರಿ ಕೋಟಾದಡಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸುಗಳಿಗೆ ಸೇರಿಕೊಳ್ಳಲು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಅಲ್ಲದೆ, ಕಾಮೆಡ್- ಕೆ ಪ್ರತ್ಯೇಕವಾಗಿ ನಡೆಸುವ ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾತಿ ನೀಡಲಾಗುವುದು ಎಂಬ ಹೇಳಿಕೆ ಕೂಡ ಸರಿಯಲ್ಲ. ಇದರಿಂದ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದು ತಪ್ಪುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಸ್ತಾವನೆಯೇ ಇಲ್ಲ: ಅಡಕೆ ಬೆಳೆ ನಿಷೇಧದ ಪ್ರಸ್ತಾವನೆ ಕೇಂದ್ರದ ಮುಂದೆ ಬಂದೇ ಇಲ್ಲ. ಇನ್ನು ಅಡಕೆ ಬೆಳೆ ನಿಷೇಧ ಮಾಡುವ ಮಾತೆಲ್ಲಿ ಎಂದು ಹೇಳಿದರು.
ಕೇಂದ್ರ ಸರ್ಕಾರ ರೈತರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ. ಏಕಾಏಕಿ ಆತುರದ ನಿರ್ಧಾರ ಕೈಗೊಂಡು ರೈತರಿಗೆ ಅನ್ಯಾಯ ಮಾಡುವುದಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರದ ಅಡಕೆ ಬೆಳೆ ನಿಷೇಧದ ಬಗ್ಗೆ ಚಿಂತನೆಯನ್ನೇ ನಡೆಸಿಲ್ಲ. ಕೇವಲ ನಿಷೇಧದ ಬಗ್ಗೆ ವದಂತಿಯನ್ನು ತೇಲಿ ಬಿಡಲಾಗಿದೆ. ಆಧಾರವಿಲ್ಲದ ಚರ್ಚೆಗೆ ಮನ್ನಣೆ ಕೊಡಬೇಕಾಗಿರುವುದರ ಅವಶ್ಯಕತೆ ಇಲ್ಲ ಎಂದರು.
ಲೋಕಪಾಲ್ ಜಾರಿ ಅವಶ್ಯ
ಭ್ರಷ್ಟಾಚಾರವನ್ನು ದೂರ ಮಾಡುವ ಸಲುವಾಗಿ ಪ್ರಬಲ ಲೋಕಪಾಲ್ ಮಸೂದೆಯನ್ನು ಜಾರಿಗೆ ತರಬೇಕೆನ್ನುವುದು ಜನರ ಬಹುಮುಖ್ಯವಾದ ಆಶಯ. ಇದನ್ನರಿತುಕೊಂಡಿರುವ ಕೇಂದ್ರ ಸರ್ಕಾರ ಮಸೂದೆಯನ್ನು ಜಾರಿಗೆ ತರಲು ಬದ್ಧವಾಗಿದೆ. ಈಗಾಗಲೇ ದೇಶದೆಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದ್ದು ಈ ಅಧಿವೇಶನದಲ್ಲಿಯೇ ಮಂಡನೆಯಾಗಿ, ಮಸೂದೆ ಖಂಡಿತವಾಗಿ ಕಾರ್ಯರೂಪಕ್ಕೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನವೇ ಬೇಡ ಎಂದು ಸ್ಪಷ್ಟಪಡಿಸಿದರು.
ಎಚ್ಡಿಕೆ ವಿರುದ್ಧ ಆಕ್ರೋಶ
ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ಎತ್ತಿನಹೊಳೆ ಯೋಜನೆಯಲ್ಲಿ ಪೈಪ್ಲೈನ್ ಅಳವಡಿಸಲು ಕಂಪನಿಯೊಂದಿಗೆ ಮೊಯ್ಲಿ ವ್ಯವಹಾರ ಕುದುರಿಸಿಕೊಂಡು, ಅದರ ಕಮೀಷನ್ ಹಣದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪಕ್ಕೆ ಮೊಯ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ಯರ ತೇಜೋವಧೆ ಮಾಡುವ ಹೇಳಿಕೆಗಳಿಂದ ರಾಜಕೀಯ ಮೆರಗು ಹೆಚ್ಚಿಸಿಕೊಳ್ಳಲು ಮುಂದಾಗುವವರಿಗೆ ಜನರು ಬೆಲೆ ಕೊಡುವುದಿಲ್ಲ. ಅದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದ ಅವರು, ಮೊದಲಿನಿಂದಲೂ ಪ್ರತಿಯೊಂದು ಕೆಲಸಕ್ಕೆ ಕಮೀಷನ್ ಪಡೆಯುವ ಪ್ರವೃತ್ತಿ ಅವರದ್ದಾಗಿದೆಯೇ ಹೊರತು ನಮ್ಮದಲ್ಲ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

