ಕೋಲಾರ

ಸದಸ್ಯರ ಮಾತಿನ ಚಕಮಕಿ, ಆಕ್ರೋಶ

Published On :

ಚಿಕ್ಕಬಳ್ಳಾಪುರ: ಇದು ಜಿ.ಪಂ. ಸಾಮಾನ್ಯ ಸಭೆ ಎನ್ನುವುದನ್ನೇ ಮರೆತು ಹೋದ ಜಿ.ಪಂ. ಸದಸ್ಯರು ಪರಸ್ಪರ ಏಕವಚನ, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಹೊಡೆದಾಡಿಕೊಳ್ಳುವ ಹಂತದವರೆಗೂ ಹೋಗಿ ಕೆಲ ಸಮಯ ಇಡೀ ಸಭೆಯನ್ನು ಗಲಿಬಿಲಿಗೊಳಿಸಿದರು. ಅದು ಮಹಿಳಾ ಸದಸ್ಯರು ಮತ್ತು ಪುರುಷ ಸದಸ್ಯರ ನಡುವೆ ಕೆಲ ಸಮಯ ನಡೆದ ಮಾತಿನ ಗಲಾಟೆಯಲ್ಲಿ ಅಸಭ್ಯ ಮಾತುಗಳೂ ಕೇಳಿ ಬಂದು ಎಲ್ಲರ ಆಕ್ರೋಶಕ್ಕೆ ಕಾರಣವಾಯಿತು.
ಇಷ್ಟಕ್ಕೆಲ್ಲಾ ಕಿಡಿ ಹೊತ್ತಿಸಿದ್ದು ಮಾತ್ರ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾ.ಪಂ.ಕಚೇರಿಗೆ ಬೆಂಕಿ ಬಿದ್ದು ಕಡತಗಳು ಸುಟ್ಟು ಹೋದ ದುರ್ಘಟನೆ. ನೂತನ ಜಿಲ್ಲಾಡಳಿತ ಭವನದಲ್ಲಿನ ಜಿ.ಪಂ. ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಸೋಮೇನಹಳ್ಳಿ ಗ್ರಾಮಸ್ಥರು ಆಗಮಿಸಿ ಸಭಾಂಗಣದ ಬಾಗಿಲು ಮುಂದೆ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಭೆಯಲ್ಲಿದ್ದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಸಮಾಧಾನಪಡಿಸಲು ಯತ್ನಿಸಿದರು. ಆಗ ಪ್ರತಿಭಟನಾಕಾರರೊಂದಿಗೆ ಸೇರಿಕೊಂಡು ಧ್ವನಿಗೂಡಿಸಿದ ಬಾಗೇಪಲ್ಲಿ ಜಿ.ಪಂ. ಕ್ಷೇತ್ರದ ಸದಸ್ಯೆ ಸಾವಿತ್ರಮ್ಮ, ಕಚೇರಿಗೆ ಬೆಂಕಿ ಬಿದ್ದು ಮೂರ್ನಾಲ್ಕು ದಿನಗಳು ಕಳೆದರೂ ನೀವು ಸ್ಥಳಕ್ಕೆ ಏಕೆ ಭೇಟಿ ಕೊಡಲಿಲ್ಲ ಎಂದು ಸಿಇಓರವರನ್ನು ಪ್ರಶ್ನಿಸಿದರು. ಅಲ್ಲದೇ ಬೆಂಕಿ ಬಿದ್ದಿರುವುದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಶ್ನಿಸಿದಾಗ ಮಧ್ಯೆ ಪ್ರವೇಶಿಸಿದ ಸೋಮೇನಹಳ್ಳಿ ಜಿ.ಪಂ.ಸದಸ್ಯ ಎಂ.ವಿ. ಕೃಷ್ಣಪ್ಪ ಸಾವಿತ್ರಮ್ಮರವರೊಂದಿಗೆ ಏಕವಚನದಲ್ಲಿ ಮಾತನಾಡಿದ್ದು ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.
ನನ್ನಿಷ್ಟ, ನನ್ನ ಕ್ಷೇತ್ರ:  ನೇರವಾಗಿ ಸಭೆಗೆ ಬಂದ ಸಾವಿತ್ರಮ್ಮ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗಳನ್ನು ಸಮಜಾಯಿಷಿ ಕೇಳುತ್ತಿದ್ದರೆ ಕೃಷ್ಣಪ್ಪರವರು ಮಧ್ಯೆ ಬಂದು ಮಹಿಳಾ ಸದಸ್ಯೆ ಎಂದು ಗೌರವ ಕೊಡದೇ ಜನರ ಮುಂದೆ ಏಕವಚನದಲ್ಲಿ ಮಾತನಾಡಿದ್ದಾರೆ.ಒಬ್ಬ ಮಹಿಳಾ ಸದಸ್ಯೆಗೆ ಗೌರವವಿಲ್ಲವೇ ಭ್ರಷ್ಟಾಚಾರ ಹೊರಗೆ ಬರುತ್ತದೆ ಎಂಬ ಭೀತಿಯಲ್ಲಿ ಕಚೇರಿಗೆ ಬೆಂಕಿ ಹಾಕಿರುವುದನ್ನು ಪ್ರಶ್ನಿಸಬಾರದೇ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ನನ್ನ ಕ್ಷೇತ್ರ, ನನ್ನಿಷ್ಟ, ನನ್ನ ಸೋಮನೇಹಳ್ಳಿ ಕ್ಷೇತ್ರದ ಬಗ್ಗೆ ಮಾತನಾಡಲು ನೀನ್ಯಾರು ಎಂದು ಕೃಷ್ಣಪ್ಪ ಮಾತಿನ ಚಕಮಕಿ ನಡೆಸಿದರು. ಇಲ್ಲಿ ಸದಸ್ಯರು ಬೆದರಿಕೆ, ಅವಾಚ್ಯ ಶಬ್ದಗಳಿಂದ ಹದ್ದು ಮೀರಿ ಪರಸ್ಪರ ವರ್ತಿಸಿದರು. ಒಂದು ಹಂತದಲ್ಲಿ ಸಾವಿತ್ರಮ್ಮ ಕುಳಿತಿದ್ದ ಚೇರಿನ ಬಳಿಗೆ ಮುನ್ನುಗ್ಗಿ ಬಂದ ಕೃಷ್ಣಪ್ಪರವರನ್ನು ಸಹ ಸದಸ್ಯರು ತಡೆದರೂ ವಾಗ್ವಾದ ನಿಲ್ಲಲಿಲ್ಲ. ಜಿ.ಪಂ.ಅಧ್ಯಕ್ಷ ಚಿನ್ನಪ್ಪ, ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಸದಸ್ಯರನ್ನು ಸಮಾಧಾನಪಡಿಸಲು ಹರಸಾಹಸ ಮಾಡಬೇಕಾಯಿತು. ಸಭೆಯಲ್ಲಿ ಗೌರವದಿಂದ ನಡೆದುಕೊಂಡು ಮಾನ ಮರ್ಯಾದೆ ಕಾಪಾಡಬೇಕೆಂಬ ಎಚ್ಚರಿಕೆಯನ್ನು ನೀಡಿ ಶಾಸಕ ಎಂ. ರಾಜಣ್ಣ ಗಲಾಟೆಯನ್ನು ತಣ್ಣಗಾಗಿಸಿದರು. ಈ ನಡುವೆ ಏಕವಚನದ ಬೈಗುಳಗಳಿಗೆ ತುತ್ತಾದ ಸಾವಿತ್ರಮ್ಮನವರ ಪರವಾಗಿ ಜಿ.ಪಂ. ಸದಸ್ಯೆ ಮಂಜುಳಾ ಹೊರತುಪಡಿಸಿ ಉಳಿದ ಮಹಿಳಾ ಸದಸ್ಯರ್ಯಾರು ಬೆಂಬಲವಾಗಿ ನಿಲ್ಲಲಿಲ್ಲ. ಮಹಿಳಾ ಸದಸ್ಯರೊಬ್ಬರನ್ನು ಏಕವಚನದಲ್ಲಿ ನಿಂದಿಸುತ್ತಿದ್ದನ್ನು ಖಂಡಿಸಲು, ಪ್ರಶ್ನಿಸಲು ಮುಂದಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.