ಕೋಲಾರ

ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ಕೋಲಾರ, ಡಿ.17
ಲೋಡ್ ಶೆಡ್ಡಿಂಗ್ ನೆಪದಲ್ಲಿ ಬೆಸ್ಕಾಂ ಅಧಿಕಾರಿಗಳು ರೈತರ ಜೀವನ ಜತೆ ಚಲ್ಲಾಟವಾಡುತ್ತಿರುವುದನ್ನು ತಪ್ಪಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಮಂಗಳವಾರ ನಗರದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಬೆಸ್ಕಾಂಭೂತ ದಹನ ಮಾಡಿ ಅಸಮರ್ಪಕವಾದ ವಿದ್ಯುತ್ ಪೂರೈಕೆ ಖಂಡಿಸಿ ದರು.
ದಿನಕ್ಕೆ ಕೇವಲ 2 ಗಂಟೆ ವಿದ್ಯುತ್ ನೀಡುತ್ತಿರುವುದರಿಂದ ರೈತರು ವ್ಯವಸಾಯ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಜಿಲ್ಲೆಗೆ ಎಷ್ಟು ಮೆಗಾವ್ಯಾಟ್ ವಿದ್ಯುತ್ ಸರಬರಾಜು ಆಗುತ್ತಿದೆ, ಬೇಡಿಕೆ ಎಷ್ಟಿದೆ, ಕೊರತೆ ನಿವಾರಿಸಲು ಕೈಗೊಂಡ ಕ್ರಮಗಳೇನು ಎಂಬುದನ್ನು ಜನರಿಗೆ ತಿಳಿಸದೆ ಅಧಿಕಾರಿಗಳು ಬೇಜಾಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ರೈತರು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಮಳೆಯಿಲ್ಲದಿದ್ದರೂ ಕೊಳವೆ ಬಾವಿಗಳಲ್ಲಿ ಇರುವ ಅಲ್ಪಸ್ವಲ್ಪ ನೀರಿನಿಂದ ರೈತರು ಬೆಳೆಗಳನ್ನು ಬೆಳೆಯುತ್ತಿದ್ದರೆ. ಬೆಸ್ಕಾಂ ಇಲಾಖೆಯವರು ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತಗೊಳಿಸುತ್ತಿರುವುದರಿಂದ ಬೆಳೆಗಳನ್ನು ಉಳಿಸಿಕೊಳ್ಳುವುದಕ್ಕೆ ಕಷ್ಯವಾಗುತ್ತಿದೆ ಎಂದು ತಿಳಿಸಿದರಲ್ಲದೆ, ವಿದ್ಯುತ್ ಸಮಸ್ಯೆ ನಿವಾರಣೆ ಮಾಡದಿದ್ದರೆ ಜಿಲ್ಲಾಧ್ಯಂತ ಪ್ರತಿಭಟನೆ ನಡೆಸುವುದಾಗಿ ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸರ್ಕಾರ ನಿಗದಿಪಡಿಸಿರುವ ವೇಳಾಪಟ್ಟಿಯಂತೆ 3ಪೇಸ್ 8 ಗಂಟೆ ಸಿಂಗಲ್ ಫೇಸ್ 6 ಗಂಟೆ ವಿದ್ಯುತ್ ನೀಡದೇ ತಮಗೆ ಇಷ್ಟ ಬಂದ ಹಾಗೆ ಪೂರೈಸಲು ಮುಂದಾಗಿರುವುದು ಬೆಸ್ಕಾಂ ಇಲಾಖೆಯ ರೈತ ವಿರೋಧಿ ಧೋರಣೆಯಾಗಿದೆ ಎಂದು ಟೀಕಿಸಿದರು. ಕಾರ್ಯಾಧ್ಯಕ್ಷ ನೀಲ್ಟೂರು ರಮೇಶ್ ಮಾತನಾಡಿ ಬೆಸ್ಕಾಂಗೆ ಸಂಬಂಧಿಸಿದ ದೂರು ನೀಡಲು ಸಹಾಯವಾಣಿಯನ್ನು ಸಂಪರ್ಕಿಸಿದರೆ ಪ್ರತಿಕ್ರಿಯೆ ಸಿಗುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ಮಳೆಯಾಗಿ ಜಲಾಶಯಗಳು ತುಂಬಿ ವಿದ್ಯುತ್ ಉತ್ಪಾದನೆಗೆ ಪೂರಕವಾದ ವಾತಾವರಣವಿದ್ದರೂ ಸರ್ಕಾರ ಗಮನ ನೀಡುತ್ತಿಲ್ಲವೆಂದರು. ರೈತ ಸಂಘದ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಹೂಹಳ್ಳಿ ನಾಗರಾಜ್, ಹುಲ್ಕೂರು ಹರಿಕುಮಾರ್, ಬಂಗವಾದಿ ನಾಗರಾಜ್ ಗೌಡ, ನೀಲಕಂಠಪುರ ಮುನೇಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ನರಸಾಪುರ ಪುರುಷೋತ್ತಮ್, ತೇರನಹಳ್ಳಿ ಆಂಜಿನಪ್ಪ, ವೆಂಕಿ, ಮಾಸ್ತಿ ಬಾಬು, ಉದಯ್, ಕಾರಿ ವಿಶ್ವನಾಥ್, ಸುಬ್ರಮಣಿ, ಹೆಚ್.ವಿ ಚಂದ್ರಪ್ಪ, ಈಕಂಬಳ್ಳಿ  ಮಂಜುನಾಥ್, ಗೊಟ್ಟಿಕುಂಟೆ ಕೃಷ್ಣ, ರಾಜೇಶ್, ಶಾಮ್‌ನಾಯಕ್, ಸೈಯದ್, ಅಮರನಾರಾಯಣಸ್ವಾಮಿ, ಗಣೇಶ್, ಮಂಜುನಾಥ್ ರೆಡ್ಡಿ, ಮುಂಜುನಾಥ್ ಇದ್ದರು.
ಬೆಸ್ಕಾಂ ಅಧಿಕಾರಿ ಕೃಷ್ಣಪ್ಪ ಮನವಿ ಸ್ವೀಕರಿಸಿ 15 ದಿನಗಳೊಳಗಾಗಿ ಸಮರ್ಪಕ ವಿದ್ಯುತ್ ನೀಡಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.