ಜೀವ ಕಳೆದುಕೊಂಡ ಆಸ್ಪತ್ರೆ ಜೀಪು
ಕೋಲಾರ: ಇದು ತಳ್ಳೋ ಮಾಡಲ್ ಜೀಪು. ಕೆಟ್ಟು ಮೂಲೆ ಸೇರಿದೆ, ಪರ್ಯಾಯ ವ್ಯವಸ್ಥೆ ಇಲ್ಲದೆ ವೈದ್ಯರು ಮತ್ತು ಸಿಬ್ಬಂದಿಗೆ ತಲೆ ಬಿಸಿಯಾಗಿದೆ, ಜನತೆಯ ಟೀಕೆಗೆ ಗ್ರಾಸವಾಗಿದೆ.
ಕರ್ನಾಟಕ-ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ತಾಯಲೂರು ಗ್ರಾಮ ಮುಳಬಾಗಿಲು ತಾಲೂಕಿನ ಅತಿ ದೊಡ್ಡಗ್ರಾಮಗಳಲ್ಲಿ ಒಂದು.
ಸುಮಾರು 60 ಹಳ್ಳಿಗಳ 15 ಸಾವಿರಕ್ಕೂ ಹೆಚ್ಚು ಜನರ ಅನುಕೂಲಕ್ಕಾಗಿ ತಾಯಲೂರಿನಲ್ಲಿ ಅನೇಕ ವರ್ಷಗಳ ಹಿಂದೆಯೇ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು.
ಜನಸಂಖ್ಯೆಯ ಹೆಚ್ಚಳ, ಬೇಡಿಕೆಗಳಿಗೆ ಅನುಗುಣವಾಗಿ 2012ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಸುಸಜ್ಜಿತವಾದ ಈ ಆಸ್ಪತ್ರೆಯ ಉದ್ಘಾಟನೆಯನ್ನು ಅದ್ಧೂರಿಯಾಗಿ ನೆರವೇರಿಸಿದರೂ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿಲ್ಲ.
ಇವರ ಹೆಸರಿಲ್ಲವೆಂದು ಸ್ಥಳೀಯ ಜನಪ್ರತಿನಿಧಿಗಳು ತಕರಾರು ಮಾಡುವುದರಿಂದ ಸಮಸ್ಯೆ ಎದುರಾಗಬಹುದೆಂಬ ಕಾರಣಕ್ಕೆ ಈ ಹಿಂದಿನ ಡಿಎಚ್ಒ ಸಾಹೇಬರ ಸೂಚನೆ ಮೇರೆಗೆ 2013ರ ಮೇ ತಿಂಗಳಲ್ಲಿ ನೂತನ ಕಟ್ಟಡದಲ್ಲಿ ರೋಗಿಗಳ ಸೇವೆಗೆ ಚಾಲನೆ ನೀಡಲಾಗಿದೆ.
ತಾಯಲೂರು ಗ್ರಾಮದಲ್ಲಿನ ಈ ಆಸ್ಪತ್ರೆ ವ್ಯಾಪ್ತಿಯ ಗ್ರಾಮಗಳಿಗೆ ಆರೋಗ್ಯ ತಪಾಸಣೆಗಾಗಿ ವೈದ್ಯರು ಮತ್ತು ಸಿಬ್ಬಂದಿ ಹೋಗಬೇಕಾದರೆ ಖಾಸಗಿ ವಾಹನ ಬಳಕೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ತಳ್ಳೋ ಮಾಡೆಲ್ ಗಾಡಿ: ಕಾರಣ, ಆಸ್ಪತ್ರೆಯ ಜೀಪು ಕೆಟ್ಟು ಮೂಲೆ ಸೇರಿದೆ. ಇತ್ತ ದುರಸ್ತಿಯೂ ಇಲ್ಲದೆ, ಅತ್ತ ಹೊಸ ವಾಹನವೂ ಇಲ್ಲದೆ ಆಸ್ಪತ್ರೆಯವರು ಮಾತ್ರವಲ್ಲದೆ ಜನತೆ ಸಂಕಷ್ಟ ಎದುರಿಸುವಂತಾಗಿದೆ. ತಳ್ಳೋ ಮಾಡಲ್ ಗಾಡಿಯನ್ನು ಹಿಂದಕ್ಕೆ ಪಡೆದು ಹೊಸ ವಾಹನ ನೀಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಇದೇ ರೀತಿ ಮುಳಬಾಗಲು ತಾಲೂಕಿನ ರಾಜೇಂದ್ರನ ಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ನೂರೆಂಟು ವಿಘ್ನ ಎದುರಾಗಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯವರು ಸಿದ್ಧರಿದ್ದಾರೆ.
ರಾಜಕಾರಣಿಗಳ ಕುಮ್ಮಕ್ಕಿನಿಂದ: ಆದರೆ, ಆಸ್ಪತ್ರೆಯ ನಿರ್ಮಾಣಕ್ಕೆ ನಿಗದಿಯಾಗಿರುವ 3 ಎಕರೆ 30 ಗುಂಟೆ ಜಾಗದಲ್ಲಿ ಕೆಲವರು ರಾಜಕಾರಣಿಗಳ ಕುಮ್ಮಕ್ಕಿನಿಂದ ಒತ್ತುವರಿ ಮಾಡಿಕೊಂಡು ಗುಡಿಸಲು ನಿರ್ಮಿಸಿರುವುದರಿಂದ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಹಿನ್ನಡೆ ಉಂಟಾಗಿದೆ.
ಈ ವಿವಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಮಕ್ಷಮ ಈ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿದ್ದರೂ ಸಮಸ್ಯೆ ನಿವಾರಣೆ ಆಗಿಲ್ಲ.
ರಾಜೇಂದ್ರನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಇರುವ ಸಮಸ್ಯೆಗೆ ಸಂಬಂಧಿಸಿದಂತೆ ಅಲ್ಲಿನ ವೈದ್ಯ ಡಾ.ಪುಣ್ಯಮೂರ್ತಿಯವರು ಸಹ ಅಸಹಾಯಕರಾಗಿದ್ದಾರೆನ್ನಲಾಗಿದೆ.
ಮುಳಬಾಗಿಲು ಶಾಸಕ ಕುತ್ತೂರು ಮಂಜುನಾಥ್ ಅವರಿಗೆ ಗುಡಿಸಲು ನಿವಾಸಿಗಳನ್ನು ಎದುರಾಕಿಕೊಳ್ಳುವುದಕ್ಕೆ ಸಾಧ್ಯವಾಗದೆ ತಾವೇ ಆಸ್ಪತ್ರೆಗಾಗಿ ಸ್ವಂತವಾಗಿ ಒಂದು ಎಕರೆ ಜಮೀನು ನೀಡುವುದಾಗಿ ಹೇಳಿದ್ದಾರೆ.
ಇದಕ್ಕೆ ಶಾಸಕರ ವಿರೋಧಿ ಬಣದವರು ಒಪ್ಪುತ್ತಿಲ್ಲ. ಉದ್ದೇಶಿತ ಜಾಗದಲ್ಲೇ ಕಟ್ಟಡ ನಿರ್ಮಾಣವಾಗಲಿ ಎಂಬುದು ಜಿಪಂ ಉಪಾಧ್ಯಕ್ಷ ಅಲುವೇಲಮ್ಮ ಹಾಗೂ ಇವರ ಪತಿ ರಾಜಗೋಪಾಲ್ ಅವರ ಪಟ್ಟಾಗಿರುವುದರಿಂದ ಸಮಸ್ಯೆ ಬಿಡಿಸಲಾಗದ ಕಗ್ಗಂಟಾಗಿದೆ.
ವಿವಾದ ಜೀವಂತ: ಮುಳಬಾಗಲು ತಾಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್ ಅವರು ಆಸ್ಪತ್ರೆಗೆ ನಿಗದಿ ಆಗಿರುವ ಜಾಗದ ಸರ್ವೆ ಕಾರ್ಯ ಮಾಡಿಸಿ ವರದಿ ನೀಡುವಂತೆ ಮುಳಬಾಗಿಲು ತಹಸೀಲ್ದಾರ್ ಅವರಿಗೆ ಪತ್ರ ಬರೆದು ಒಂದುವರೆ ತಿಂಗಳಾದರೂ ಸರ್ವೆಯರ್ಗಳು ಇಲ್ಲವೆಂದು ನೆಪವೊಡ್ಡಿ ವಿವಾದ ಜೀವಂತವಾಗಿರಿಸಲಾಗಿದೆ.
ಈ ತಿಂಗಳ 26 ಮತ್ತು 27 ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡು ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ಮಾಡಲಿರುವ ಸಚಿವ ಯು.ಟಿ.ಖಾದರ್, ತಾಯಲೂರು ಆಸ್ಪತ್ರೆಗೆ ಹೊಸ ಜೀಪು ಮಂಜೂರು ಹಾಗೂ ರಾಜೇಂದ್ರನಹಳ್ಳಿ ಆಸ್ಪತ್ರೆಯ ಭೂಮಿ ವಿವಾದ ಇತ್ಯರ್ಥ ಮಾಡಲಿ ಎಂಬುದು ಹಳ್ಳಿ ಜನರ ಆಸೆಯಾಗಿದೆ.
ವೈದ್ಯಾಧಿಕಾರಿ ಹೇಳಿದ್ದು
ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಜೀಪು ಕೆಟ್ಟು ಮೂಲೆ ಸೇರಿರುವುದು ನಿಜ. ಹಳೆ ವಾಹನವನ್ನು ವಿಲೇವಾರಿ ಮಾಡುವ ಸಂಬಂಧ ಪ್ರಾದೇಶಿಕ ಸಾರಿಗೆ ಸಂಸ್ಥೆಯ ತಜ್ಞರಿಂದ ಪರಿಶೀಲನೆ ಮಾಡಿಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ತಾವು ಈಗಾಗಲೇ ಡಿಹೆಚ್ಒ ಕಚೇರಿಗೆ ಪತ್ರ ಬರೆದಿದ್ದೇನೆ. ಇನ್ನು ತಾಯಲೂರು ಆಸ್ಪತ್ರೆಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡುವ ಸಂಬಂಧ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕಾಗಿದೆ. ಸಧ್ಯಕ್ಕೆ ಹೊಸ ಕಟ್ಟಡದಲ್ಲಿ ಆರೋಗ್ಯ ಸೇವೆ ನಡೆಯುತ್ತಿದೆ
- ಡಾ.ಪ್ರಕಾಶ್, ತಾಲೂಕು ವೈದ್ಯಾಧಿಕಾರಿ, ಮುಳಬಾಗಿಲು
ನನ್ನ ಗಮನಕ್ಕೆ ಬಂದಿಲ್ಲ
ನಾನು ಡಿಎಚ್ಒ ಆಗಿ ಜಿಲ್ಲೆಗೆ ಹೊಸದಾಗಿ ಬಂದಿದ್ದೀನೆ. ಹಾಗಾಗಿ ತಾಯಲೂರು ಆಸ್ಪತ್ರೆಯ ಉದ್ಘಾಟನೆ ವಿಚಾರ ಗಮನಕ್ಕೆ ಬಂದಿಲ್ಲ. ಮುಳಬಾಗಿಲು ತಾಲೂಕು ವೈದ್ಯಾಧಿಕಾರಿಯಿಂದ ಮಾಹಿತಿ ತರಿಸಿಕೊಂಡು ಆರೋಗ್ಯ ಸಚಿವರೊಂದಿಗೆ ಚರ್ಚಿಸುತ್ತೇನೆ.
- ಡಾ.ಪೈಯಾಜ್ಖಾನ್, ಡಿಎಚ್ಒ, ಕೋಲಾರ
-ಪಾ.ಶ್ರೀ.ಅನಂತರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

