ಕೋಲಾರ

ಮಹಿಳಾ ಕಾಲೇಜಿಗೆ ಕುಡಿಯುವ ನೀರಿನ ವ್ಯವಸ್ಥೆ

Published On :

ಕೋಲಾರ: ನಗರದ ಸರಕಾರಿ ಮಹಿಳಾ ಕಾಲೇಜು ಮತ್ತು ಸರಕಾರಿ ಬಾಲಕರ ಕಾಲೇಜುಗಳ ಹೆಚ್ಚುವರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಶಾಸಕ ವರ್ತೂರು ಪ್ರಕಾಶ್ ಗುರುವಾರ ಶಂಕು ಸ್ಥಾಪನೆ ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದರು. ಈ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ 1.5 ಕೋಟಿ ರು. ಬಿಡುಗಡೆಯಾಗಿದ್ದು, ಪ್ರಯೋಗಾಲಯಕ್ಕೆ 60 ಲಕ್ಷ, ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರು. ಗಳನ್ನು ಈ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಪ್ರಕಟಿಸಿದರು. ಪ್ರಭಾರ ಪ್ರಾಂಶುಪಾಲ ಸಿ.ಕೇಶವರೆಡ್ಡಿ, ಡಾ.ಎ.ಸಿ.ಕೋಮಲ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನಡುಪಳ್ಳಿ ಕೃಷ್ಣಮೂರ್ತಿ, ಅಪ್ಪಿ ನಾರಾಯಣಸ್ವಾಮಿ, ಕೆ.ಜನಾರ್ದನ್, ಗುತ್ತಿಗೆದಾರ ಕೆ.ಎಲ್.ಮಂಜುನಾಥ್ ಇದ್ದರು.

ಕಾಲ್ ಸೆಂಟರ್ ತರಬೇತಿಗೆ ಅರ್ಜಿ
ಕೆಜಿಎಫ್:
ಕೋಲಾರ ಜಿಲ್ಲೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗಾಗಿ ಉಚಿತ ಕಾಲ್ ಸೆಂಟರ್ ಮತ್ತು ಬಿಪಿಒ ತರಬೇತಿಯನ್ನು ನೀಡಲಾಗುವುದು. ಎಸ್‌ಎಸ್‌ಎಲ್‌ಸಿ ಅಥವಾ ಐಟಿಐ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಗೆ ಮೂರು ತಿಂಗಳ ತರಬೇತಿ ಮತ್ತು ತರಬೇತಿ ಅವಧಿಯಲ್ಲಿ ಸ್ಟೈಫಂಡ್ ನೀಡಲಾಗುತ್ತದೆ. ಅರ್ಜಿಗಳನ್ನು ಇದೇ ತಿಂಗಳು 31ರೊಳಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಅಥವ ಎಸಿಸಿಪಿಎಲ್ ಟ್ರೈನಿಂಗ್ ತರಬೇತಿ ವಿಭಾಗ, ಫರ್‌ಫೆಕ್ಟ್ ಇನ್ಸ್‌ಸ್ಟಿಟ್ಯೂಟ್ ಆಫ್ ಕಂಪ್ಯೂಟರ್, ರೂಪ ಕಾಂಪ್ಲೆಕ್ಸ್ ಕೆಜಿಎಫ್‌ಗೆ ಸಲ್ಲಿಸಬಹುದು. ವಿವರಗಳಿಗೆ 9141896930, 08153-271231 ದೂರವಾಣಿ ಸಂಖ್ಯೆ ಸಂಪರ್ಕಿಸಲು ಸೂಚಿಸಲಾಗಿ

ಸಿಇಟಿ ವಿದ್ಯಾರ್ಥಿಗಳ ಪ್ರತಿಭಟನೆ
ಚಿಕ್ಕಬಳ್ಳಾಪುರ:
ಕರ್ನಾಟಕ ವೃತ್ತಿ ಶಿಕ್ಷಣ 2006 ಕಾಯ್ದೆ ಅನುಷ್ಠಾನದ ನಂತರ ಸರ್ಕಾರಿ ಖೋಟಾದಡಿ ವಿದ್ಯಾರ್ಥಿಗಳಿಗೆ ಖಾಸಗೀ ವೃತ್ತಿಪರ ತರಬೇತಿ ಕಾಲೇಜುಗಳಿಗೆ ದಾಖಲಾಗಲು ಅವಕಾಶ ನೀಡುವುದಿಲ್ಲ ಎನ್ನುವುದಾದರೆ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಮುಂದೇನು ಮಾಡಬೇಕು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪೆಟ್ಟು ನೀಡುವಂತಹ ಕಾಯ್ದೆಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರಕ್ಕಿರುವ ಕಾಳಜಿ ಇದೇನಾ. ಇವು ನಗರದ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಎಬಿವಿಪಿ ನೇತೃತ್ವದಲ್ಲಿ ಕರ್ನಾಟಕ ವೃತ್ತಿ ಶಿಕ್ಷಣ  ಕಾಯ್ದೆ ಜಾರಿಯನ್ನು ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳು ತಾಲೂಕು ಆಡಳಿತದ ಮೂಲಕ ಸರ್ಕಾರವನ್ನು  ಕೇಳಿದ ಪ್ರಶ್ನೆಗಳು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಬಂದ ತಹಸೀಲ್ದಾರ್ ನಟೇಶ್ ಅವರನ್ನು ವಿದ್ಯಾರ್ಥಿಗಳು, ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯ ಬಗ್ಗೆ ನ್ಯಾಯವನ್ನು ಕೇಳಿದರು. ವಿಜಯ ಚೇತನ ಕಾಲೇಜಿನ ವಿದ್ಯಾರ್ಥಿನಿ ನಯನ ಮಾತನಾಡಿ, ಖಾಸಗೀ ಕಾಲೇಜುಗಳ ಮಾಲೀಕರ ಲಾಬಿಗೆ ಮಣಿದು ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದರೆ ನೋಡುತ್ತ ಕೂರಲಿಕ್ಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಳು. ಪ್ರಸ್ತುತ ಜಾರಿಗೆ ತಂದಿರುವ ಕಾಯ್ದೆಯಿಂದ ವಿದ್ಯಾರ್ಥಿಗಳು ಖಾಸಗೀ ವೃತ್ತಿತರಬೇತಿ ಕೋರ್ಸುಗಳಿಗೆ ಕಡ್ಡಾಯವಾಗಿ ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಸರ್ಕಾರದ ಸಿಇಟಿ ಲೆಕ್ಕಕ್ಕಿಲ್ಲ.ಇದು ವಿದ್ಯಾರ್ಥಿಗಳಿಗೆ ಮಾರಕವಾದ ಕಾಯ್ದೆ ಎಂದು ಹೇಳಿದಳು. ತಹಸೀಲ್ದಾರ್ ಮನವಿ ಪತ್ರ ಸ್ವೀಕರಿಸಿ ವಿದ್ಯಾರ್ಥಿಗಳ ಬೇಡಿಕೆಯನ್ನು ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಲಕ್ಷ್ಮೀನಾರಾಯಣ ಗುಪ್ತ, ಎಬಿವಿಪಿ ಮುಖಂಡರಾದ ಕಿರಣ್, ಅರುಣ್, ಮಂಜುನಾಥ್ ಭಾಗವಹಿಸಿದ್ದರು.  

ಎಬಿವಿಪಿಯಿಂದ ಪ್ರತಿಭಟನೆ
ಮಾಲೂರು:
ರಾಜ್ಯ ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾರಕವಾಗುವ ವೃತ್ತಿ ಶಿಕ್ಷಣ 2006 ರ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದನ್ನು ಖಂಡಿಸಿ ಇಲ್ಲಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಿನಿ ವಿಧಾನ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.
ತಾಲೂಕು ಸಂಚಾಲಕ ರೋಹಿತ್ ಮಾತನಾಡಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟು ನೀಡದೆ ಖಾಸಗಿಯವರಿಗೆ ಮನಸೋಇಚ್ಛೆ ಶುಲ್ಕ ವಿಧಿಸಬಹುದಾಗಿದ್ದ ಕಾಯ್ದೆಯನ್ನು ತಂದು ದಲಿತ ಹಿಂದುಳಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚುತ್ತಿರುವುದು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಭರತ್‌ಭೂಷಣ್,ನಗರ ಸಂಚಾಲಕ ದಾನಯ್ಯ,ಕೀರ್ತಿ,ಅನಿಲ್,ದೇವರಾಜ್,ಮಂಜುನಾಥ್,ನವೀನ್,ಅಖಿಲೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.