ಕೊಳವೆ ಬಾವಿ ದುರಸ್ತಿ ಮಾಡಿಸಿ
ಕೋಲಾರ ನಗರದ 2ನೇ ವಾರ್ಡಿಗೆ ಸೇರಿದ ಗಾಂಧಿಗರದ 1ನೇ ಮುಖ್ಯ ರಸ್ತೆಯಲ್ಲಿನ ಭದ್ರಾಚಾರಿ ಎಂಬುವರ ಮನೆ ಮುಂದಿನ ಆವರಣದಲ್ಲಿರುವ ಕೊಳವೆ ಬಾವಿ ಕೆಟ್ಟು ಬಹಳ ದಿನಗಳಾಗಿದ್ದು ಜನತೆ ನೀರಿಗಾಗಿ ಪರದಾಡುತ್ತಿರುವುದರಿಂದ ನಗರಸಭೆಯವರು ಕೂಡಲೇ ಕೊಳವೆ ಬಾವಿ ದುರಸ್ತಿ ಮಾಡಿಸಿ ಸಮಸ್ಯೆ ನಿವಾರಣೆ ಮಾಡಬೇಕು. ಕೊಳವೆಬಾವಿ ಕೆಟ್ಟು 20 ದಿನಗಳಾದರೂ ದುರಸ್ತಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ದಿನಕ್ಕೊಮ್ಮೆ ಒಂದು ಮನೆಗೆ 10 ಬಿಂದಿಗೆಯಂತೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದು, ಕೇವಲ ಎರಡು ಟ್ಯಾಂಕರ್ನಲ್ಲಿ ಮಾತ್ರ ನೀರು ಪೂರೈಸಲಾಗುತ್ತಿರುವುದರಿಂದ ಜನತೆಗೆ ಅಗತ್ಯವಿರುವಷ್ಟು ನೀರು ದೊರಕುತಿಲ್ಲ. ವಾರ್ಡಿನ ಸದಸ್ಯರಿಗೂ ಜನತೆ ದೂರು ನೀಡಿದ್ದಾರೆ. ನಗರಸಭೆಗೆ ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿರುವುದರಿಂದ ಕೂಡಲೇ ಸಮಸ್ಯೆ ನಿವಾರಣೆ ಮಾಡಬೇಕು.
ನಾರಾಯಣಸ್ವಾಮಿ, ಶ್ರೀನಿವಾಸ್, ಗಿರಿಜಮ್ಮ, ಲಕ್ಷ್ಮಮ್ಮ,ಶಂಕರ್, ನವೀನ್, ರಮೇಶ್, ಸುನೀಲ್, ಪ್ರಸನ್ನ. ಗಾಂಧಿನಗರ ನಿವಾಸಿಗಳು.
ಕೊಳವೆ ಬಾವಿಗೆ ದುಂದು ವೆಚ್ಚ
ಕೋಲಾರ ನಗರದ 14ನೇ ವಾರ್ಡಿನ 2ನೇ ರಸ್ತೆಯಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ ನೀರು ಸಿಗದೆ ವಿಫಲವಾಗಿದ್ದರೂ ನಗರಸಭೆಯ ಅಧಿಕಾರಿಗಳು ಕೈ ಪಂಪು ದುರಸ್ತಿ ಮಾಡಲಾಗಿದೆ ಎಂದು 11,840 ರು. ಬಿಲ್ ಮಾಡಿದ್ದಾರೆ. ಗುತ್ತಿಗೆದಾರರ ಜೊತೆ ಸೇರಿ ನಕಲಿ ಬಿಲ್ಲು ಮಾಡುವುದನ್ನು ಕರಗತ ಮಾಡಿಕೊಂಡಿರುವ ಅಧಿಕಾರಿಗಳು ಸಮಸ್ಯೆ ಇರುವ ಕಡೆ ಗಮನ ನೀಡುತ್ತಿಲ್ಲ. ರಸ್ತೆಯಲ್ಲಿ ಕೊರೆಸಲಾಗಿದ್ದ ಕೊಳವೆ ಬಾವಿ ವಿಫಲವಾಗಿದ್ದು ಇದನ್ನು ವಿಲೇವಾರಿ ಮಾಡಿ ರಸ್ತೆಯಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಎಚ್ಚರ ವಹಿಸಬೇಕಾಗಿದ್ದ ಅಧಿಕಾರಿಗಳು ದುರಸ್ತಿ ನೆಪದಲ್ಲಿ ಜನತೆಯ ತೆರಿಗೆ ಹಣವನ್ನು ದುರುಪಯೋಗ ಮಾಡಿದ್ದು, ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಎಸ್.ಆರ್. ಮುರಳಿಗೌಡ, ನಗರಸಭೆ ಸದಸ್ಯ, ಕೋಲಾರ.
ಯಾರಿಗಾಗಿ ಈ ರಸ್ತೆ?
ಕೋಲಾರದ 11ನೇ ವಾರ್ಡಿನ ಕಾನ್ಸರ್ವನ್ಸಿ(ಸಂಧಿಸ್ಥಳಗಲ್ಲಿ)ಯಲ್ಲಿ ಕೆಲವು ತಿಂಗಳ ಹಿಂದೆ ಸಾವಿರಾರು ರು.ಖರ್ಚು ಮಾಡಿ ಸಿಮೆಂಟ್ರಸ್ತೆ ಮಾಡಿಸಲಾಗಿದೆ. ವಾಸ್ತವವಾಗಿ ಈ ರಸ್ತೆಯಲ್ಲಿ ಜನರಾಗಲಿ, ವಾಹನಗಳಾಗಲಿ ಓಡಾಡುವುದಿಲ್ಲ, ಸಂಧಿಸ್ಥಳದ ಅಜುಬಾಜಿನಲ್ಲಿ ಇರುವ ಮನೆಯವರು, ಅಂಗಡಿ ಮಾಲೀಕರು ಕಸ ಹಾಕುವುದಕ್ಕೆ ಬಳಕೆ ಮಾಡುತ್ತಿದ್ದ ರಸ್ತೆಗೆ ಕಾಂಕ್ರಿಟ್ ಹಾಕುವ ಬದಲು ಇದೇ ವಾರ್ಡಿನ ಕೆ. ಪಟ್ಟಾಭಿರಾಮನ್ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದರೆ ತೆರಿಗೆದಾರರ ಹಣ ಸದ್ವಿನಿಯೋಗವಾಗುತ್ತಿತ್ತು. ಅನಗತ್ಯವಾಗಿ ಗಲ್ಲಿಗೆ ಸಿಮೆಂಟ್ ಹಾಕಿ ಹಣ ಪೋಲು ಮಾಡಲಾಗಿದೆ. ರಸ್ತೆಯನ್ನು ಸದುಪಯೋಗ ಮಾಡಿಕೊಳ್ಳುವ ಬದಲು ಮತ್ತೆ ಅದೇ ರಸ್ತೆಯಲ್ಲಿ ಕಸ ಸುರಿಯುವ ಮೂಲಕ ಪರಿಸರ ಹಾಳು ಮಾಡಲಾಗುತ್ತಿದೆ. ಈ ಭಾಗದ ನಗರಸಭೆ ಸದಸ್ಯರು ಅಲ್ಲಿನ ಸುತ್ತಮುತ್ತಲ ಜನರೊಂದಿಗೆ ಚರ್ಚಿಸಿ ಸಿಮೆಂಟ್ ರಸ್ತೆಯಲ್ಲಿ ಕಸ ಸುರಿಯುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಬೇರೆ ಕಡೆಯೂ ಜನತೆ ಕಸ ವಿಲೇವಾರಿಗೆ ಸಿಮೆಂಟ್ ಇಲ್ಲವೇ ಟಾರು ರಸ್ತೆಗಳನ್ನು ಬಳಕೆ ಮಾಡಬಹುದು.
ಅನು ಶಮ್ಗರ್, ಕೋಲಾರ
ಉಪಯೋಗಕ್ಕೆ ಬಾರದ ಶೌಚಾಲಯ
ಕೋಲಾರ ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅನೇಕ ಕಡೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ನಿರ್ಮಲ ಶೌಚಾಲಯಗಳನ್ನು ಕಟ್ಟಲಾಗಿದೆ. ಆದರೆ, ಈ ಶೌಚಾಲಯಗಳಿಗೆ ನೀರು, ವಿದ್ಯುತ್ ಇನ್ನಿತರ ಮೂಲ ಸೌಕರ್ಯಗಳು ಕಲ್ಪಿಸದಿರುವುದರಿಂದ ಉದ್ಘಾಟನೆ ಭಾಗ್ಯವೂ ಕಾಣಲಾಗಿಲ್ಲ. ಕೋಲಾರದ ಕೆಇಬಿ ಸಮುದಾಯ ಭವನದ ಮುಂದೆ ಏಳೆಂಟು ವರ್ಷಗಳ ಹಿಂದೆ ಕಟ್ಟಿರುವ ಶೌಚಾಲಯ ಕೆಲಸಕ್ಕೆ ಬಾರದೆ ಬೆದರು ಗೊಂಬೆಯಾಗಿದೆ. ಇದೇ ರೀತಿ ಕುರುಬರ ಪೇಟೆಯಲ್ಲೂ ಕೋಲಾರಮ್ಮ ಕೆರೆಯ ಅಂಚಿನಲ್ಲಿ ಕಟ್ಟಿರುವ ಶೌಚಾಲಯ ಧನದ ಕೊಟ್ಟಿಗೆಯಾಗಿದೆ. ಈ ಶೌಚಾಲಯಗಳನ್ನು ಅದಷ್ಟು ಬೇಗನೆ ಸಾರ್ವಜನಿಕರ ಅನುಕೂಲಕ್ಕೆ ನೀಡಬೇಕು, ಸಿನಿಮಾ ವಾಲ್ಫೋಸ್ಟ್ ಅಂಟಿಸಲು, ಸಿಗಣಿಯನ್ನು ತಟ್ಟಲು ಕಟ್ಟಡ ಬಳಕೆ ಮಾಡುತ್ತಿರುವುದರಿಂದ ಕಟ್ಟಡದ ಸೌಂದರ್ಯ ಹಾಳುಗೇಡವಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನೀರಿನ ವ್ಯವಸ್ಥೆ ಹಾಗೂ ನಿರ್ವಹಣೆಗಾಗಿ ಸಿಬ್ಬಂದಿ ನೇಮಕ ಮಾಡಿ ಶೌಚಾಲಯ ಬಳಕೆಗೆ ಅನುವು ಮಾಡಿಕೊಡಬೇಕು.
ಬೆಳ್ಳಂಬರಿ ನಾಗರಾಜ್, ಕೋಲಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

