ಕೋಲಾರ

ಜಿಲ್ಲೆಗೆ 318.87 ಕೋಟಿ ಪರಿಹಾರ ನೀಡಿ

Published On :

ಕ.ಪ್ರ.ವಾರ್ತೆ ,  ಕೋಲಾರ ,  ಡಿ.23
ನೀರು...ನೀರು...ನೀರು...
ಜಿಲ್ಲೆಯ ಬರಪೀಡಿತ ಪ್ರದೇಶದ ಜನತೆಯ ಗೋಳಿನ ಮಂತ್ರ ಇದು.
ರಾಜ್ಯ ಸರ್ಕಾರ ಜಿಲ್ಲೆಯ ಬಂಗಾರಪೇಟೆ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಬೆನ್ನಲೇ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ಸೋಮವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿದಾಗ ತಂಡದ ಸದಸ್ಯರಿಗೆ ಕಂಡದ್ದು, ಕೇಳಿ ಬಂದದ್ದು ಕುಡಿಯುವ ನೀರಿನ ಸಮಸ್ಯೆ ಹಾಗೂ ಅಂತರ್ಜಲ ಕುಸಿತದಿಂದ ಆಗಿರುವ ಬೆಳೆ ನಷ್ಟ.
ಆದರೆ, ಜಿಲ್ಲೆಗೆ ಭೇಟಿ ನೀಡಿದ್ದ ಕೇಂದ್ರ ಬರ ಅಧ್ಯಯನ ತಂಡದ ನಾಯಕರಾದ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಆರ್.ಬಿ. ಸಿನ್ನ ಹಾಗೂ ನಿರ್ದೇಶಕ ಜಿ.ಕೆ. ಚೌದರಿ ಅವರು ಯಾವುದೇ ಕೃಷಿ ಭೂಮಿಗೆ ಭೇಟಿ ನೀಡಲಿಲ್ಲ, ರೈತರ ಜೊತೆ ಸಂವಾದ ಕೂಡ ನಡೆಸಲಿಲ್ಲ, ಕೇವಲ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಣೆ ಮಾಡಿ ಪ್ರವಾಸ ಮುಕ್ತಾಯಗೊಳಿಸಿದರು.
ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸತ್ತಿರುವ ರಾಸುಗಳಿಗೆ 150 ಲಕ್ಷ ಪರಿಹಾರ ನೀಡಬೇಕಾಗಿದೆ. ಕುಡಿಯುವ ನೀರಿಗಾಗಿ 5964.44 ಲಕ್ಷ ರು. ಅನುದಾನ ಬೇಕು, ಮಳೆ ಇಲ್ಲದೆ ಬತ್ತ, ರಾಗಿ, ನೆಲಗಡಲೆ, ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದು ಇದರಿಂದ ರೈತರಿಗೆ 25772.34 ಲಕ್ಷ ನಷ್ಟವಾಗಿದ್ದು ಬರ ಪರಿಹಾರ ನಿಧಿಯಡಿ 318.87 ಕೋಟಿ ರು.ಗಳನ್ನು ಕೇಂದ್ರದಿಂದ ಬಿಡುಗಡೆ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪ್ರವಾಸಕ್ಕೆ ಮುನ್ನ ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮನವಿ ಮಾಡಿದರು.
ಜಿಲ್ಲಾ ಆಡಳಿತದಿಂದ ಸಮಗ್ರ ಮಾಹಿತಿ ಪಡೆದ ತಂಡದ ನಾಯಕ ಆರ್.ಬಿ. ಸಿನ್ನ, ಬೆಳೆ ಸಾಲದ ಬಗ್ಗೆ ಸಧ್ಯಕ್ಕೆ ತೀರ್ಮಾನ ಕೈಗೊಳ್ಳಲಾಗುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ, ಕನಿಷ್ಟ ಇನ್ನು 5 ತಿಂಗಳು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಿ, ಇದಕ್ಕೆ ಬೇಕಾದ ಅಗತ್ಯ ಅನುದಾನವನ್ನು ಕೇಂದ್ರ ಸರ್ಕಾರದ ಮೂಲಕ ಬಿಡುಗಡೆ ಪ್ರಯತ್ನಿಸುವುದಾಗಿ ತಿಳಿಸಿದರು.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಗಂಗಮ್ಮನ ಪಾಳ್ಯಕ್ಕೆ ಭೇಟಿ ನೀಡಿದ ತಂಡಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.
ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ, ನಮಗೆ ಯಾವುದೇ ನದಿ ನಾಲೆಗಳು ಇಲ್ಲ, ಕುಡಿಯುವ ನೀರಿನ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಹಣ ಕೊಡಿಸಿ, ಸರ್ಕಾರಕ್ಕೆ ಜಿಲ್ಲೆಯ ವಸ್ತುಸ್ಥಿತಿ ತಿಳಿಸಿ ಜನತೆಯನ್ನು ಕಾಪಾಡಿ ಎಂದರು.
ನಂತರ ಬಡಮಾಕನಹಳ್ಳಿಯಲ್ಲಿ ನೀರಿನ ಅಭಾವ, ಟಿ. ಗೊಲ್ಲಹಳ್ಳಿ ಕೆರೆ, ನತ್ತ, ಊರುಕುಂಟೆ ಮಿಟ್ಟೂರು,ಬಲ್ಲಾ ಹಾಗೂ  ಕಾಶೀಪುರ ಗ್ರಾಮಗಳಲ್ಲಿನ ನೀರಿನ ಅಭಾವದ ಬಗ್ಗೆ ಸಾರ್ವಜನಿಕರಿಂದ ಮಾಹಿತಿಯನ್ನು ಸಂಗ್ರಹಿಸಿದರು.
ಬಡಮಾಕನಹಳ್ಳಿಯಲ್ಲಿ ಕಳೆದ ಮೂರು ವರ್ಷದಿಂದ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ, ಗ್ರಾಮದಲ್ಲಿ 3 ಸಾವಿರ ಜನರಿದ್ದಾರೆ, ಕೊಳವೆ ಬಾವಿ ಕೊರೆಸಲು ಅನುಮತಿ ಕೊಡಿಸಿ ಎಂದು ಹುನಕುಂದ ಗ್ರಾಪಂ ಉಪಾಧ್ಯಕ್ಷೆ ಮಂಜುಳ, ಗ್ರಾಪಂ ಸದಸ್ಯ ವೆಂಕಟೇಶ್ ತಂಡಕ್ಕೆ ಮನವಿ ಮಾಡಿದರು.
ನತ್ತ ಗ್ರಾಮದಲ್ಲೂ ನೀರಿಗಾಗಿ ಜನತೆ ಒತ್ತಾಯಿಸಿರದಲ್ಲದೆ ಒಂದು ವರ್ಷದಿಂದ ಸರಿಯಾಗಿ ನೀರು ಸಿಗುತ್ತಿಲ್ಲವೆಂದು ದೂರಿದರು. ಎಲ್ಲಾ ಕಡೆ ಕುಡಿಯುವ ನೀರಿಗಾಗಿ ಜನತೆ ಬೇಡಿಕೆ ಸಲ್ಲಿಸಿದರು, ಕೆಲ ಗ್ರಾಮಗಳಲ್ಲಿ ನೀರಿನ ಟ್ಯಾಂಕರ್ ನಿಲ್ಲಿಸಿ ಹೆಂಗಸರು, ಮಕ್ಕಳು, ವೃದ್ಧರು ಬಿಂದಿಗೆಗಳನ್ನು ಹಿಡಿದು ನೀರಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದರು.
ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅರ್.ಬಿ. ಸಿನ್ನ ಪ್ರವಾಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರಕ್ಕೆ ರಾಜ್ಯದಿಂದ ಕ್ರೊಢೀಕೃತ ನಷ್ಟದ ಅಂಕಿ ಅಂಶಗಳು ಬಂದ ಕೂಡಲೇ ಪರಿಹಾರ ಮಂಜೂರು ಮಾಡಲಾಗುವುದು. ಬರ ಅಧ್ಯಯನಕ್ಕಾಗಿ ರಾಜ್ಯಕ್ಕೆ ನಾಲ್ಕು ತಂಡಗಳು ಬಂದಿವೆ. ಡಿ.26ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ನಂತರ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಝುಲ್ಫಿಖಾರ್ ಉಲ್ಲಾ, ಕೋಲಾರ ಉಪವಿಭಾಗಾಧಿಕಾರಿ ಮಂಜುನಾಥ್, ಜಿಪಂ ಇಇ ದೇವರಾಜ್, ನೀರಾವರಿ ಇಲಾಖೆಯ ಇಇ ಕೃಷ್ಣಪ್ಪ, ರೇಷ್ಮೆ ಇಲಾಖೆಯ ಡಿಡಿ ತುಪ್ಪದ್, ಕೃಷಿ ಇಲಾಖೆಯ ಜೆಡಿ ಚಿಕ್ಕಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರ್‌ಗಳು ಇದ್ದರು.
ಹೆಚ್ಚಿನ ಅನುದಾನ ಮಂಜೂರು ಮಾಡಲು ಕೇಂದ್ರ ತಂಡಕ್ಕೆ ಶಾಸಕರ ಮನವಿ
ಬಂಗಾರಪೇಟೆ: ತಾಲೂಕನ್ನು ಕಳೆದ ಮೂರು ವರ್ಷಗಳಿಂದ ಬರ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆಯಾದರೂ ಇದುವರೆಗೂ ಒಂದು ರು. ನಷ್ಟು ಬರ ಕಾಮಗಾರಿಗಳನ್ನು ಕೈಗೊಂಡಿಲ್ಲ. ಈಗ ಮತ್ತೆ ಬರಪೀಡಿತ ಎಂದು ಘೋಷಿಸಲಾಗಿದೆ.
ಈ ಬಾರಿಯಾದರೂ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವಂತೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಬರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಸೋಮವಾರ ತಾಲೂಕಿನಲ್ಲಿ ಬರ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲು ವಿ.ಆರ್. ಸಿನ್ಹಾ ನೇತೃತ್ವದ ತಂಡ ಪಟ್ಟಣಕ್ಕೆ ಭೇಟಿ ನೀಡಿದಾಗ ಇಲ್ಲಿನ ಜನರು ಪ್ರತಿದಿನ ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ಹೋಗಿ ತರಬೇಕು ಅಂತರ್ಜಲ ಕುಸಿದಿದೆ.2000ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ ಸಿಕ್ಕರೂ ಅದರಲ್ಲಿ ಫ್ಲೋರೈಡ್ ಅಂಶವಿದೆ ಇದನ್ನೇ ವಿಧಿಯಿಲ್ಲದೆ ಜನರು ಕುಡಿದು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಸಮಸ್ಯೆಗಳನ್ನು ತಂಡಕ್ಕೆ ಶಾಸಕರು ವಿವರಿಸಿದರು.ಇದಕ್ಕೆ ಉತ್ತರಿಸಿದ ಬರ ಅಧ್ಯಯನ ತಂಡ ಕಳೆದ ವರ್ಷ ನಾವು ನೀಡಿದ ವರದಿಗೆ ಕೇಂದ್ರ ಸರ್ಕಾರ 600ಕೋಟಿ ರಾಜ್ಯ ಸರ್ಕಾರಕ್ಕೆ ಬಿಡುಗಡೆ ಮಾಡಿದೆ ಒಂದು ರೂಪಾಯಿ ಮಂಜೂರು ಮಾಡಿಲ್ಲ ಎಂದರೆ ಹೇಗೆ ಎಂದು ಶಾಸಕರನ್ನು ಪ್ರಶ್ನಿಸಿದರು.
ಜಾನುವಾರುಗಳಿಗೆ ಮೇವು ಬ್ಯಾಕು,ಬರ ಕಾಮಗಾರಿಗಳನ್ನು ಕೈಗೊಳ್ಳಬೇಕು, ನೀರಿನ ಸಮಸ್ಯೆ ಇರುವ ಕಡೆ ಅದನ್ನು ಪೂರೈಸಬೇಕು. ಇದೇ ನಮ್ಮ ಉದ್ದೇಶ ಮತ್ತು ಅಧ್ಯಯನ ಮಾಡುವುದೂ ಇದಕ್ಕೆ ಆದರೆ ಇಲ್ಲಿ ಅಂತಹದೇನೂ ನಡೆದಿಲ್ಲ ಎಂದರೆ ಜಿಲ್ಲಾಧಿಕಾರಿಗಳನ್ನು ಕೇಳಿ ಮಾಹಿತಿ ಪಡೆಯಿರಿ ಎಂದಷ್ಟೇ ಹೇಳಿ ನಿರ್ಗಮಿಸಿದರು. ಗಂಗಮ್ಮನಪಾಳ್ಯದಲ್ಲಿ ಖಾಸಗಿ ವ್ಯಕ್ತಿಗಳಿಂದ ಸರಬರಾಜು ಆಗುತ್ತಿದ್ದ ನೀರನ್ನು ಹಿಡಿಯಲು ಮಹಿಳೆಯರು ಮುಗಿ ಬೀಳುತ್ತಿದ್ದ ದೃಶ್ಯವನ್ನು ಬರ ತಂಡ ಕಣ್ಣಾರೆ ಮೋಡಿ ಆಶ್ಚರ್ಯಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.