ತರಾತುರಿಯಲ್ಲಿ ಅಧ್ಯಯನ ನಡೆಸಿದ ತಂಡ
ಚಿಕ್ಕಬಳ್ಳಾಪುರ: ಅಂತರ್ಜಲ ಮಟ್ಟ ಕುಸಿದು ನೀರಾವರಿ ಸೌಲಭ್ಯದ ಕೊರತೆಯನ್ನು ಎದುರಿಸುತ್ತಿರುವ ಜಿಲ್ಲೆಯಲ್ಲಿ ಅಸಮರ್ಪಕ ಮಳೆಯ ಹಿನ್ನೆಲೆಯಲ್ಲಿ ಉದ್ಭವಿಸಿದ ಬರದ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆತುರಾತುರವಾಗಿಯೇ ಪರಿಶೀಲನೆ ಕಾರ್ಯ ನಡೆದಿದ್ದು ಮಾತ್ರ ಸ್ಥಳೀಯರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ನಿಖರವಾದ ಸಮಯ ಬಗ್ಗೆ ಮಾಹಿತಿ ಇರಲಿಲ್ಲ. ಅಧ್ಯಯನ ತಂಡ ಆಗಮಿಸುತ್ತದೆ ಎಂದು ಕಾಯಬೇಕಾಯಿತು. ಮೊದಲಿಗೆ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕಿನಲ್ಲಿ ಬರ ಪರಿಶೀಲನೆ ನಡೆಸಿದ ತಂಡ ಚಿಕ್ಕಬಳ್ಳಾಪುರಕ್ಕೆ ಸಂಜೆ 5.30 ಗಂಟೆಗೆ ಆಗಮಿಸಿತು. ನೂತನ ಜಿಲ್ಲಾಡಳಿತ ಭವನಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ಹಿಂತಿರುಗಿತು.
ನೂತನ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿ ಮಾತನಾಡಿದ ಕೇಂದ್ರ ಬರ ಅಧ್ಯಯನ ತಂಡದ ಜಂಟಿ ಕಾರ್ಯದರ್ಶಿ ಆರ್.ವಿ. ಸಿನ್ಹಾ, ಯಾವುದೇ ಜಿಲ್ಲೆಯಾಗಲಿ ಬರ ಪರಿಸ್ಥಿತಿ ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಿದರೆ ಬರಪರಿಸ್ಥಿತಿಯನ್ನೂ ಸುಲಭವಾಗಿ ಸುಧಾರಿಸಬಹುದೆಂದು ತಿಳಿಸಿದರು.
ನಾವು ನಮ್ಮ ಬೆಳೆ ಪದ್ಧತಿಗಳನ್ನು ಸುಧಾರಿಸಿಕೊಳ್ಳಬೇಕಿದೆ. ಈ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರ ಬಗ್ಗೆ ತಿಳಿದು ಬಂದಿದ್ದು, ಸದ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಿ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಅಲ್ಲದ ನಾವು ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿ ಮಳೆ ನೀರು ಶೇಖರಣೆಗೆ ಗಮನ ಕೊಡಬೇಕಾಗಿದೆ ಎಂದರು. ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಸರಾಸರಿ 578.9 ಮಿ.ಮೀ. ಮಳೆಯಾಗಿದ್ದು, ಸಾಧಾರಣ ಮಳೆಗಿಂತ ಶೇ.23 ರಷ್ಟು ಕೊರತೆ ಉಂಟಾಗಿದೆ. ಜಿಲ್ಲೆಯಲ್ಲಿ ಮೇವಿನ ದಾಸ್ತಾನು ಇದ್ದು, ರೈತರಿಗೆ ಮಿನಿ ಕಿಟ್‌ಗಳನ್ನು ವಿತರಿಸಲಾಗಿದೆ. ಕಾಲುಬಾಯಿ ರೋಗದಿಂದ ಸತ್ತ ರಾಸುಗಳ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಈ ಬಾರಿ ಬರ ಪರಿಹಾರ ಮೊತ್ತವು ಜಿಲ್ಲೆಗೆ ಬಂದಿದ್ದು, 2013-14 ರಲ್ಲಿ 190 ಲಕ್ಷ ಬಿಡುಗಡೆಯಾಗಿದ್ದು. ಜಿಲ್ಲೆಯಲ್ಲಿ ಹಿಂದಿನ ಉಳಿಕೆ ಹಣ 577.05 ಲಕ್ಷಗಳಾಗಿದ್ದು, ಇದರಲ್ಲಿ ಕುಡಿಯುವ ನೀರು ಇತರ ರಿಪೇರಿ ವೆಚ್ಚ, ಮೇವು, ಮಿನಿಕಿಟ್‌ಗಳು, ಔಷಧಿಗಳಿಗೆ ಒಟ್ಟು 479 ಲಕ್ಷ ರು. ಖರ್ಚಾಗಿದೆ. ಜಿಲ್ಲೆಯಲ್ಲಿ ಇನ್ನೂ ಬರಪರಿಸ್ಥಿತಿ ಇದ್ದು ಇದನ್ನು ಎದುರಿಸಲು ಕೇಂದ್ರದಿಂದ ನೆರವು ಬೇಕಿದೆ ಎಂದವರು ತಿಳಿಸಿದರು. ಸಭೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡದ ನಿರ್ದೇಶಕ ಜಿ.ಕೆ. ಚೌಧರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

