ಕೋಲಾರ

ಮನೆಯಲ್ಲಿ ಬೆಂಕಿ; ವೃದ್ದೆ ಸಾವು

Published On :

ಬಂಗಾರಪೇಟೆ: ದೀಪ ಬಿದ್ದು ಗುಡಿಸಲು ಮನೆಗೆ ಬೆಂಕಿ ತಾಕಿ ಗುಡಿಸಲಲ್ಲಿದ್ದ ವೃದ್ದೆಯೊಬ್ಬಳು ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಬೆಲೆ ಗ್ರಾಮದಲ್ಲಿ ನಡೆದಿದೆ. ಮೃತ ವೃದ್ದೆಯನ್ನು ಚೆನ್ನಮ್ಮ (90) ಎಂದು ಗುರುತಿಸಲಾಗಿದೆ. ಈಕೆ ಅನಾಥೆಯಾಗಿದ್ದು ಗುಡಿಸಲಲ್ಲಿ ವಾಸವಾಗಿದ್ದರು, ಕಳೆದ ರಾತ್ರಿ ಸೀಮೆಣ್ಣೆ ದೀಪವಿಟ್ಟು ಮಲಗಿದ್ದಳು. ಅದು ಕೆಳಗೆ ಬಿದ್ದು ಗುಡಿಸಲಿಗೆ ತಾಕಿ ಗುಡಿಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ ಗುಡಿಸಲಲ್ಲಿದ್ದ ವೃದ್ದೆ ಸಹ ಬೆಂಕಿಗೆ ಆಹುತಿಯಾಗಿದ್ದಾಳೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಸುತ್ತಮುತ್ತಲಿನ ನಿವಾಸಿಗಳು ಬೆಂಕಿಯನ್ನು ನಂದಿಸಲು ಮುಂದಾದರೂ ಫಲ ನೀಡಲಿಲ್ಲ. ಘಟನೆ ನಡದ ಬಳಿಕ ಅಗ್ನಿಶಾಮಕ ವಾಹನ ಬಂತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಸಮರ್ಪಕ ವಿದ್ಯುತ್: ನಾಗರಿಕರ ಪರದಾಟ
ಶ್ರೀನಿವಾಸಪುರ: ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಪಟ್ಟಣದಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ತಾಲೂಕನ್ನು ಸರ್ಕಾರ ಬರ ಪೀಡಿತ ಪಟ್ಟಿಗೆ ಸೇರಿಸಿದೆ. ಬೇಸಿಗೆ ಬರುವುದಕ್ಕಿಂತ ಮುಂಚಿತವಾಗಿಯೇ ವಿದ್ಯುತ್ ಕಣ್ಣು ಮುಚ್ಚಾಲೆ ಪ್ರಾರಂಭವಾಗಿದೆ. ಇದರಿಂದ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಎದುರಿಸುವಂತಾಗಿದೆ. ಈ ಬಗ್ಗೆ ಪುರಸಭೆಯವರನ್ನು ಕೇಳಿದರೆ ಕರೆಂಟ್ ಇಲ್ಲ ಎನ್ನುತ್ತಾರೆ. ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ 3 ಪೇಸ್ ವಿದ್ಯುತ್ 6 ರಿಂದ 9 ಗಂಟೆ ನೀಡಬೇಕೆಂದು  ಬೆಸ್ಕಾಂ ಇಲಾಖೆಗೆ ನಾಗರಿಕರು ಮನವಿ ಮಾಡಿದ್ದಾರೆ.
ಅಂಗಡಿಗಳು ಭಸ್ಮ
ಕಳೆದ ರಾತ್ರಿ ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಬಳಿಯಿರುವ ಸಿ.ಡಿ. ಅಂಗಡಿಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಇದ ಬೆಂಕಿ ಪಕ್ಕದ ಇತರೇ ಎರಡು ಅಂಗಡಿಗಳಿಗೆ ತಾಕಿ ಒಟ್ಟು ಮೂರು ಅಂಗಡಿಗಳು ಸಂಪೂರ್ಣವಾಗಿ ಬೆಂಕಿಗೆ ಬೆಂದು ಹೋಗಿದೆ.ಚೋಟು ಎಂಬುವರ ಸಿಡಿ ಅಂಗಡಿಯಲ್ಲಿ ಶಾರ್ಟ್‌ಸರ್ಕ್ಯೂಟ್ ಕಾಣಿಸಿಕೊಂಡು ನಂತರ ಪಕ್ಕದಲ್ಲಿದ್ದ ರಫಿಕ್ ಎಂಬುವರ ಚಪ್ಪಲಿ ಅಂಡಿ ಮತ್ತು ಶ್ರೀನಿವಾಸ್ ಅವರ ಚಿಲ್ಲರೆ ಅಂಗಡಿಯೂ ಬೆಂಕಿಗೆ ಭಸ್ಮವಾಗಿದೆ. ಈ ಘಟನೆ ಸೋಮವಾರ ಬೆಳಗಿನ ಜಾನ ಸಂಭವಿಸಿದ್ದು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಅಗ್ನಿಶಾಮಕ ವಾಹನಕ್ಕೆ ಮಾಹಿತಿ ನೀಡಿದರು. ಅವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ನಷ್ಟವನ್ನು ನಿವಾರಿಸಿದ್ದಾರೆ. ಈ ಘಟನೆಯಿಂದ ಒಟ್ಟು 50 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಅಂಗವಿಕಲರ ದಿನಾಚರಣೆ
ಶಿಡ್ಲಘಟ್ಟ: ಅಂಗವಿಕಲರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಅಧಿಕಾರಿಗಳು ಸಹಕಾರ ನೀಡಬೇಕೆಂದು ವಿಶ್ವ  ಶಾಸಕ ರಾಜಣ್ಣ ಹೇಳಿದ್ದಾರೆ.
ಪಟ್ಟಣದಲ್ಲಿ ವಿಶ್ವ ಅಂಗವಿಕಲರ ದಿನ ಆಚರಣೆ ಸಮಾರಂಭವನ್ನು ಶಾಸಕರು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಂಗವಿಕಲರು ಸಹ ಮನುಷ್ಯರೇ, ಅವರಿಗೆ ಅನುಕಂಪ ಬೇಡ, ಅವರನ್ನು ಬಿಡಿ, ಅವರಿಗೆ ಬದುಕಲು ಅವಕಾಶ ಮಾಡಿಕೊಡಿ ಎಂದರು. ಹೊಸ ವರ್ಷದಿಂದ ಪ್ರತಿ 3 ತಿಂಗಳಿಗೊಮ್ಮೆ ಅಂಗವಿಕಲರ ಸಭೆ ಕರೆದು ಕುಂದುಕೊರತೆಗಳನ್ನು ವಿಚಾರಿಸಿ ನಿವಾರಣೆ ಮಾಡುವುದಾಗಿ, ಸ್ವಾಮಿ ವಿವೇಕಾನಂದ ಅಂಗವಿಕರ ಕ್ಷೇಮಾಭಿವೃದ್ಧಿ ಸಂಸ್ಥೆಗೆ ನಿವೇಶನವನ್ನು ಮಂಜೂರು ಮಾಡುವುದಾಗಿ ಹಾಗೂ ಭವನ ಕಟ್ಟಲು ಸಹಾಯ ಮಾಡುವುದಾಗಿ ಹೇಳಿದರು. ತಾ.ಪಂ. ಅಧ್ಯಕ್ಷ ಯರಬಚ್ಚಪ್ಪ, ತಾಲೂಕು ದಂಡಾಧಿಕಾರಿ ನಾರಾಯಣಸ್ವಾಮಿ ಮಾತನಾಡಿದರು.
ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ: ಮೊಯ್ಲಿ
ಮಂಗಳೂರು: ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು. ತಮ್ಮ ಮಗ ಹರ್ಷ ಮೊಯ್ಲಿ 1980ರಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿದ್ದಾನೆ. ನಾನು ಮಗನನ್ನು ಪ್ರಮೋಟ್ ಮಾಡುವ ಪ್ರಶ್ನೆಯೇ ಇಲ್ಲ. ಅವನಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅರ್ಹತೆ ಇದೆ. ಟಿಕೆಟ್ ಕೊಡುವುದು ಬಿಡುವುದು ಪಕ್ಷಕ್ಕೆ ಸೇರಿದೆ ಎಂದರು. ಪದೇ ಪದೇ ಇಲ್ಲಿಗೆ ಬರುವುದು ಸ್ಪರ್ಧೆಗೆ ಎಂದು ತಿಳಿಯುವುದು ಬೇಡ ಎಂದರು.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯನ್ನು ಬಲಿಷ್ಟಗೊಳಿಸಲು ಸಮುದಾಯದ ಪ್ರತಿಯೊಬ್ಬರೂ ಕೈ ಜೋಡಿಸಬೇಕೆಂದು ಸಮಿತಿ ರಾಜ್ಯಾಧ್ಯಕ್ಷ ಎಂ. ಶಂಕರಪ್ಪ ಕೋರಿದರು. ತಾಲೂಕಿನ ಮುಂಗಾನಹಳ್ಳಿಯಲ್ಲಿ ಹೋಬಳಿ ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಮಾತನಾಡಿದರು. ನೂತನ ಪದಾಧಿಕಾರಿಗಳ ವಿವರ ಮುಂಗಾನಹಳ್ಳಿ  ಹೋಬಳಿ ಅಧ್ಯಕ್ಷರಾಗಿ ಕೊಂಡ್ಲಿಗಾನಹಳ್ಳಿ ಕೆ.ಎಂ. ವೆಂಕಟರವಣಪ್ಪ, ಉಪಾಧ್ಯಕ್ಷರಾಗಿ ಮಾದಮಂಗಳ ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬಿಲ್ಲಾಂಡ್ಲಹಳ್ಳಿ ಓಬಳೇಶ್, ಜಂಟಿ ಕಾರ್ಯದರ್ಶಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ನರಸಿಂಹಪ್ಪ, ಖಜಾಂಚಿ ಬಿ.ವಿ. ಮಂಜುನಾಥ, ಸಹಕಾರ್ಯದರ್ಶಿ ಮಂಜುನಾಥ, ಗೌರವಾಧ್ಯಕ್ಷರಾಗಿ ಶ್ರೀರಾಮಪ್ಪ, ಗಂಗುಲಪ್ಪರನ್ನು ಆಯ್ಕೆ ಮಾಡಲಾಯಿತು.
ಚುಟುಕು ಚಿಂಥನ-ಮಂಥನ ಕಾರ್ಯಕ್ರಮ
ಮಾಲೂರು: ಚುಟುಕುಗಳು ನಿತ್ಯ ಜೀವನದ ರೂಪಕಗಳಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವಂತಿರಬೇಕು ಎಂದು ಸಾಹಿತಿ ಎಚ್.ಎಸ್. ಸತ್ಯನಾರಾಯಣ್ ಹೇಳಿದರು. ಪಟ್ಟಣದ ಕೃಷಿಕ ಸಮಾಜದಲ್ಲಿ ಆಯೋಜಿಸಿದ್ದ ಚುಟುಕು ಚಿಂಥನ-ಮಂಥನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ವೇಣುಗೋಪಾಲ್ ವಹ್ನಿ, ಚುಟುಕಗಳನ್ನು ಕೇವಲ ಪ್ರಾಸಕ್ಕಾಗಿ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದ್ದು,ಪ್ರಾಸಕ್ಕಿಂತ ವಿಷಯದ ಹೂತ್ತಿಗೆ-ಸಮಾಜದ ಡೊಂಕುಗಳನ್ನು ತಿದ್ದುವ ಕಿಡಿಗಳಾಗಬೇಕಾಗಿದೆ ಎಂದರು. ಕುಂ. ಚಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂಧರ್ಭದಲ್ಲಿ ಬಂಟಹಳ್ಳಿಯ ಲೆಫ್ಟಿನೆಂಟ್ ಸರ್ವೆಶ್‌ರನ್ನು ಸನ್ಮಾನಿಲಾಯಿತು. ಹಲವು ಮಂದಿ ಕವಿಗಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.