ಸಕ್ಕರೆ ಕಾರ್ಖಾನೆ ಮರಗಳ ಮಾರಣಹೋಮ
ವಿ.ಡಿ. ಗಣೇಶ್
ಗೌರಿಬಿದನೂರು: ಗೌರಿಬಿದನೂರಿನ ಎಚ್ಎಸ್ಎಲ್ ಷುಗರ್ಸ್ ಮತ್ತು ತುಂಗಭದ್ರಾ ಲಿಮಿಟೆಡ್ನವರು ಹೈಕೋರ್ಟ್ ಆದೇಶ ಧಿಕ್ಕರಿಸಿ ಸುಮಾರು 175 ಎಕರೆ ಜಮೀನಿನಲ್ಲಿ ಬೆಳೆದಿರುವ ಕೋಟ್ಯಂತರ ರುಪಾಯಿ ಬೆಲೆಬಾಳುವ ವಿವಿಧ ಮರಗಳನ್ನು ಅಕ್ರಮವಾಗಿ ಕಡಿದು ಕಳ್ಳ ಸಾಗಾಣಿಕೆ ಮಾಡುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿರುವ ಘಟನೆ ಬೆಳಕಿಗೆ ಬಂದಿದೆ.
ಸಿರುಗುಪ್ಪ ಷುಗರ್ಸ್ ಮತ್ತು ಕೆಮಿಕಲ್ಸ್ ಸಕ್ಕರೆ ಕಾರ್ಖಾನೆಯವರು ರೈತರ ಬಾಕಿ ತೀರಿಸಿದ್ದರೂ, ಷೇರು ಹಣದ ಪ್ರಕರಣ ನ್ಯಾಯಾಲಯದಲ್ಲಿ ಇದ್ದರೆ, ಕಾರ್ಖಾನೆಯ ಕಾರ್ಮಿಕರಿಗೆ ಕೊಡಬೇಕಾಗಿರುವ ಹಣ ಕಾರ್ಮಿಕ ನ್ಯಾಯಾಲದಲ್ಲಿ ಐಡಿಎನ್ಒ 155, 20011ರಂತೆ ಬಾಕಿ ಇರುವುದರಿಂದ ಪ್ರಕರಣದ ತೀರ್ಮಾನ ಆಗುವವರೆವಿಗೂ ಸರ್ಕಾರದ ಅನುಮತಿ ಇಲ್ಲದೆ ಕಾರ್ಖಾನೆಯ ಸ್ಥಿರ ಮತ್ತು ಚರ ಆಸ್ತಿಗಳನ್ನು ಮಾರಾಟ ಮಾಡಕೂಡದು ಎಂದು ಸ್ಪಷ್ಟ ನಿರ್ದೇಶನವಿದ್ದರೂ ಅದನ್ನು ಗಾಳಿಗೆತೂರಿ ಸಾಗಾಣಿಕೆ ಮಾಡುತ್ತಿದ್ದಾರೆ.
ನಿರಂತರವಾಗಿ ಅಕ್ರಮ ಮಾರಾಟ: ಈ ಸಂಬಂಧ ಗೌರಿಬಿದನೂರು ತಹಸೀಲ್ದಾರ್ ಅವರ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯಾಲಯದ ಆದೇಶದಂತೆ ಕಾರ್ಖಾನೆಯ ಆಸ್ತಿಯನ್ನು ಪರಬಾರೆ ಮಾಡಬಾರದು ಎಂದು ಸೂಚಿಸಿದ್ದರೂ ನಿರಂತರವಾಗಿ ಅಕ್ರಮ ಮಾರಾಟ ಸಾಗಿದೆ.
ಅಧಿಕಾರಿಗಳು ಕಣ್ಣುಮುಚ್ಚಿಕುಳಿತಿರುವುದರಿಂದ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಿ ಗೌರಿಬಿದನೂರು ಸಕ್ಕರೆ ಕಾರ್ಖಾನೆ ರೈತ ಸಂಘದ ಅಧ್ಯಕ್ಷ ಸಿ.ಎಸ್. ಮೋಹನ್ ಅವರ ನೇತೃತ್ವದಲ್ಲಿ ರೈತರ ಕಾಲ್ನಡಿಗೆ ಜಾಥಾ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಮನವಿಯನ್ನು ಶಾಸಕ ಶಿವಶಂಕರರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನಕಾರ್ಯದರ್ಶಿ, ಸಹಕಾರ ಇಲಾಖೆಯ ಪ್ರಧಾನಕಾರ್ಯದರ್ಶಿ, ಸಕ್ಕರೆ ನಿರ್ದೇಶಕರು, ಆಯುಕ್ತರು, ಸಮಾಪನಾಧಿಕಾರಿ ಜಿಎಸ್ಎಸ್ಕೆ ಲಿಮಿಟೆಡ್, ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ, ತಹಸೀಲ್ದಾರ್ ಗೌರಿಬಿದನೂರು, ಅರಣ್ಯಾಧಿಕಾರಿಗಳು ಗೌರಿಬಿದನೂರು ಅವರಿಗೆ ಸಲ್ಲಿಸಿದೆ.
ಅರಣ್ಯ ಇಲಾಖೆ ಶಾಮೀಲು: ಈ ಹಿಂದೆ ಸರ್ಕಾರದ ಅಧೀನದಲ್ಲಿದ್ದ ಸಕ್ಕರೆ ಕಾರ್ಖಾನೆಯ ಸುಮಾರು 175 ಎಕರೆ ಜಮೀನಿನಲ್ಲಿ ಅರಣ್ಯ ಇಲಾಖೆ ಸರ್ಕಾರದಿದಂದ ಅನುದಾನ ಪಡೆದು ಉಚಿತವಾಗಿ ನೀಲಗಿರಿ ಸಸ್ಯಗಳನ್ನು ನಾಟಿ ಮಾಡಿ ಮರ ಬೆಳೆಸಿ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡಿ ಕಾರ್ಖಾನೆಯವರಿಂದ ಒಪ್ಪಂದ ಮಾಡಿಕೊಂಡು ನೀಲಗಿರಿ ಮರಗಳ ಮಾರಾಟದ ಹಣದಲ್ಲಿ ಅರಣ್ಯ ಇಲಾಖೆಗೆ ಅರ್ಧ ಭಾಗ ಮತ್ತು ಕಾರ್ಖಾನೆಗೆ ಅರ್ಧಭಾಗದಂತೆ ಹಣಪಡೆಯುವಂತೆ ಒಪ್ಪಂದವಾಗಿತ್ತು ಎನ್ನಲಾಗಿದೆ. ಈ ಒಪ್ಪಂದದ ಕಡತವನ್ನು ಸದರಿ ಆಡಳಿತ ಮಂಡಳಿಯವರೊಡನೆ ಶಾಮೀಲಾಗಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಕಡತ ನಾಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳನ್ನು ವಿಚಾರಿಸಿದರೆ ಸದರಿ ಕಡತವನ್ನು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ತೇಗದ ಮರಗಳನ್ನು ಕಡಿಯಬೇಕಾದರೆ ಅರಣ್ಯಾಧಿಕಾರಿಗಳಿಂದ ಮುಂಚಿತವಾಗಿ ಪರವಾನಗಿ ಪಡೆಯಬೇಕಾಗಿದೆ. ಇಲ್ಲಿಯೂ ಅರಣ್ಯ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದ್ದು ಈ ಸಂಬಂಧ ಅರಣ್ಯ ಇಲಾಖೆಯ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಪ್ರಕರಣ ದಾಖಲಿಸಿಲ್ಲ. ಸರ್ಕಾರ ನಿದ್ರಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಹಾಗೂ ಕೋಟ್ಯಂತರ ರುಪಾಯಿ ಹಗರಣವನ್ನು ತನಿಖೆ ನಡೆಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

