ಶಿಕ್ಷಕರ ನವೆಂಬರ್ ವೇತನ ಇಂದು ವಿಲೇವಾರಿ
ಕ.ಪ್ರ.ವಾರ್ತೆ ಕೋಲಾರ ಡಿ.26
ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಳೆದ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಬೇಕಾಗಿದ್ದ ವೇತನದ ಚೆಕ್ಕುಗಳನ್ನು ಶುಕ್ರವಾರ ಬೆಳಿಗ್ಗೆ ವಿಲೇವಾರಿ ಮಾಡುವುದಾಗಿ ಜಿಲ್ಲಾ ಖಜಾನಾಧಿಕಾರಿ ಜಿ.ಎಂ. ರುಕ್ಮಣಿಯಮ್ಮ ಶಿಕ್ಷಕರ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.
ಪ್ರಾಥಮಿಕ ಶಿಕ್ಷಕರ ವೇತನ ವಿಳಂಬ ಕುರಿತು ಡಿ.26ರ ಕನ್ನಡಪ್ರಭದಲ್ಲಿ ಪ್ರಕಟವಾಗಿದ್ದ ವರದಿಯ ಹಿನ್ನಲೆಯಲ್ಲಿ ಶಿಕ್ಷಕರ ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿದ ಜಿಲ್ಲಾ ಖಜಾನೆಯ ಅಧಿಕಾರಿ ಎಚ್.ಆರ್.ಎಂ.ಎಸ್ ಕಾರ್ಯನಿರ್ವಹಣೆಯಲ್ಲಿ ಉಂಟಾದ ತೊಂದರೆಯಿಂದ ವೇತನ ವಿಲೇವಾರಿ ವಿಳಂಬವಾಗಿದ್ದು ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ತಿಳಿಸಿದ್ದಾರೆ.
ಕಳೆದ ಐದಾರು ತಿಂಗಳಿಂದ ಕೋಲಾರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದ ಚೆಕ್ಕುಗಳ ವಿಲೇವಾರಿ ಕೋಲಾರ ಜಿಲ್ಲಾ ಖಜಾನೆಯಲ್ಲಿ ತುಂಬಾ ವಿಳಂಬವಾಗುತ್ತಿದ್ದು ಶಿಕ್ಷಕರು ವೇತನ ಸಕಾಲಕ್ಕೆ ಕೈಸೇರದೆ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ, ತಡವಾಗಿ ಚೆಕ್ಕುಗಳ ವಿಲೇವಾರಿ ಅಗುತ್ತಿರುವ ಸಮಸ್ಯೆಯನ್ನು ಬಗೆಹರಿಸಿ ಶೀಘ್ರವಾಗಿ ವೇತನ ಶಿಕ್ಷಕರ ಕೈ ಸೇರುವಂತೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ನಿಯೋಗ ಮನವಿ ಮಾಡಿದ್ದರಿಂದ ಇದಕ್ಕೆ ಸ್ಪಂದಿಸಿದ ಜಿಲ್ಲಾ ಖಜಾನಾಧಿಕಾರಿಗಳು ಎಚ್.ಆರ್.ಎಂ.ಎಸ್ ಕಾರ್ಯನಿರ್ವಹಣೆಯಲ್ಲಿ ತೊಂದರೆ ಉಂಟಾಗಿರುವುದರಿಂದ ಹಾಗೂ ಖಜಾನೆಯಲ್ಲಿ ಅಂತರ್ಜಾಲ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ತಡವಾಗಿದೆ. ನವೆಂಬರ್ ತಿಂಗಳ ವೇತನ ಚೆಕ್ಕುಗಳನ್ನು ಶುಕ್ರವಾರ ಬೆಳಿಗ್ಗೆ 10.30ಕ್ಕೆ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪ್ರತಿ ತಿಂಗಳು 25ನೇ ತಾರೀಖಿನಂದು ವೇತನದ ಬಿಲ್ಲುಗಳು ಜಿಲ್ಲಾ ಖಜಾನೆಗೆ ತಲುಪಿಸಿದರೆ ನಾವು 31ನೇ ತಾರೀಖಿನೊಳಗೆ ಚೆಕ್ಕುಗಳನ್ನು ಸಿದ್ಧಪಡಿಸಿ 31 ರಂದೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯ ಎಂ. ನಾಗರಾಜ್, ಜಂಟಿ ಕಾರ್ಯದರ್ಶಿ ಎಂ.ಎನ್. ಶ್ರೀನಿವಾಸಮೂರ್ತಿ ಉಪಾಧ್ಯಕ್ಷ ಕೆ.ಟಿ. ನಾಗರಾಜ್, ಸಾಂಸ್ಕೃತಿಕ ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಬೆಟ್ಟದ ನಾರಾಯಣಸ್ವಾಮಿ, ವೆಂಕಟೇಶ್, ಖಾದರ್ ಇಲಾಹಿ, ಹೋಳೂರು ನಾಗರಾಜ್. ಸಿ.ಬಿ. ವಿಜಯ್ ಕುಮಾರ್, ವೇಮಗಲ್ ಮುನಿರಾಜು, ವಿ.ಎನ್.ಶ್ರೀನಿವಾಸ್, ಸೋಮಶೇಖರ್, ಭದ್ರೇಗೌಡ ಇದ್ದರು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟಶಿವಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

