ಪಾಳು ಬಿದ್ದ ಬೃಹತ್ ನೀರಿನ ಟ್ಯಾಂಕ್‌ಗಳು
ಕೆಜಿಎಫ್: ಪಟ್ಟಣದ ಹಲವು ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶದ ಕಾಲೋನಿಗಳಲ್ಲಿ ಬೃಹತ್ ಗಾತ್ರದ, ಸುಮಾರು 120 ವರ್ಷಗಳ ಪುರಾತನವಾದ ಕಬ್ಬಿಣದ ನೀರಿನ ಟ್ಯಾಂಕ್‌ಗಳು ಇಂದಿಗೂ ಗಮನ ಸೆಳೆಯುತ್ತಿವೆ.
ಹಿಂದೆ ಬಿಜಿಎಂಎಲ್ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಿನ್ನದ ಗಣಿಗಳ ಮಿಲ್‌ನೊಳಗೆ ಇಂತಹ ಬೃಹತ್ ಗಾತ್ರದ ಕಬ್ಬಿಣದ ಟ್ಯಾಂಕ್‌ಗಳನ್ನು ಚಿನ್ನದ ಅದಿರು ಕರಗಿಸುವ ಮಿಲ್‌ಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಸುಮಾರು 70 ವರ್ಷಗಳ ಹಿಂದೆ 1925-28ರ ಮಧ್ಯೆ ಈ ಪ್ರದೇಶದಲ್ಲಿ ವ್ಯಾಪಕ ಬರಗಾಲ ಬಂದ ಕಾರಣ ಸುಮಾರು 50 ಸಾವಿರ ಗಣಿ ಕಾರ್ಮಿಕರು ವಾಸಿಸುತ್ತಿದ್ದ ಕಾಲೋನಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಅಂದಿನ ಬ್ರಿಟಿಷರ ಗಣಿ ಆಡಳಿತ ಹಿರಿಯ ಅಧಿಕಾರಿಗಳು ಇಂತಹ ಬೃಹತ್ ಗಾತ್ರದ ಕಬ್ಬಿಣದ ಟ್ಯಾಂಕ್‌ಗಳನ್ನು ಗಣಿ ಕಾರ್ಮಿಕರ ಕಾಲೋನಿಗಳಲ್ಲಿ ಅಳವಡಿಸಿ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡುತ್ತಿದ್ದರು. ಅಂದಿನಿಂದ ಇಂತಹ ಬೃಹತ್ ಗಾತ್ರದ ಟ್ಯಾಂಕ್‌ಗಳು ಹಾಗೆಯೇ ಕುಡಿಯುವ ನೀರು ಸರಬರಾಜಿಗೆ ಉಪಯೋಗವಾಗುತ್ತಾ ಬಂದಿತ್ತು.
ಈ ಟ್ಯಾಂಕ್‌ಗಳಲ್ಲಿ ವಿವಿಧ ಪಂಪ್ ಹೌಸ್‌ಗಳಿಂದ ನೀರು ತುಂಬಿಸಿ ಹಿಂದೆ ವಿವಿಧ ಕಾರ್ಮಿಕ ಕಾಲೋನಿಗಳಿಗೆ ಸುಸಜ್ಜಿತ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ 2001ರಲ್ಲಿ ಚಿನ್ನದ ಗಣಿ ಮುಚ್ಚಿದ ನಂತರ ಪ್ರತಿ ಕಾಲೋನಿಗಳಲ್ಲಿ ಕುಡಿಯುವ ನೀರು ಸಮಸ್ಯೆ ವ್ಯಾಪಕವಾಗಿದೆ. ಅದೇ ರೀತಿ ಚಿನ್ನದ ಗಣಿಗಳು ಮುಚ್ಚಿದ ನಂತರ ಕಳ್ಳರು ಇಂತಹ ಹಲವು ಟ್ಯಾಂಕ್‌ಗಳನ್ನು ಕಳವು ಮಾಡಿದ್ದಾರೆ. ಈ ಟ್ಯಾಂಕ್‌ಗಳಿಗೆ ಸಂಪರ್ಕವಿದ್ದ ಕೊಳವೆ ಮಾರ್ಗದ ಪೈಪ್‌ಗಳು ಮತ್ತು ಗಣಿಗಾರಿಕೆ ಪ್ರದೇಶದ ಪಂಪ್ ಹೌಸ್‌ಗಳ ಮೋಟಾರುಗಳು ಕಳ್ಳಕಾಕರ ಪಾಲಾಗಿದ್ದ ಕಾರಣ ಈ ಬೃಹತ್ ಗಾತ್ರದ ಕಬ್ಬಿಣದ ನೀರಿನ ಟ್ಯಾಂಕ್‌ಗಳು ಉಪಯೋಗಕ್ಕೆ ಬಾರದೆ ಉಳಿದಿದೆ.
ಬಿಜಿಎಂಎಲ್ ಚಿನ್ನದ ಗಣಿ ಕಾಲೋನಿಗಳ ನಿವಾಸಿಗಳು ಈ ಟ್ಯಾಂಕ್‌ಗಳನ್ನು ದುರಸ್ತಿ ಮಾಡಿ ನೀರು ಸರಬರಾಜಿಗೆ ಉಪಯೋಗಿಸುತ್ತಿದ್ದಾರೆ. ಈ ಬೃಹತ್ ಗಾತ್ರದ ಕಬ್ಬಿಣದ ನೀರಿನ ಟ್ಯಾಂಕ್‌ಗಳು ಸುಮಾರು 4 ಟನ್‌ನಿಂದ 7 ಟನ್ ತೂಕದಿಂದ ನಿರ್ಮಿಸಿರುವುದು ವಿಶೇಷ. ಸ್ಥಳೀಯ ನಗರಸಭೆ ಅಥವಾ ಕರ್ನಾಟಕ ನೀರು ಸರಬರಾಜು ಮಂಡಳಿ ಇಂತಹ ಟ್ಯಾಂಕ್‌ಗಳನ್ನು ನೀರು ಸರಬರಾಜಿಗೆ ಉಪಯೋಗಿಸದೇ ಕೇವಲ ಕೊಳವೆ ಬಾವಿ ಕೊರೆದು ಪೈಪ್ ಲೈನ್ ಹೆಸರಲ್ಲಿ ಕ್ಯೋಟ್ಯಂತರ ಹಣ ದುರುಪಯೋಗವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಉಪಯೋಗಕ್ಕೆ ಬಾರದ ಬೃಹತ್ ಗಾತ್ರದ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಿದ್ದರೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತಿತ್ತು. ಈ ಟ್ಯಾಂಕ್‌ಗಳಿಗೆ ನಾಗಾವಾರ, ಪಾಲಘಾಟ್, ಕೃಷ್ಣಾವರಂ ಪ್ರದೇಶಗಳಲ್ಲಿ ಅತ್ಯಂತ ಕಡಿಮೆ ಭೂಮಿ ಆಳದಲ್ಲಿ ನೀರು ದೊರೆಯುತ್ತಿದ್ದು ಸುಮಾರು 50-150 ಅಡಿ ಮಟ್ಟದಲ್ಲಿ ಈ ಪ್ರದೇಶದಲ್ಲಿ ನೀರು ದೊರೆಯುತ್ತಿದೆ. ಸರ್ಕಾರ ನಗರದಲ್ಲಿ ನೀರಿನ ಸಮಸ್ಯೆಗಳಿರುವ ಪ್ರದೇಶದಲ್ಲಿ ವೋವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸುವುದರ ಜೊತೆಗೆ ಇಂತಹ ಕಬ್ಬಿಣದ ಟ್ಯಾಂಕ್‌ಗಳಿಗೆ ನೀರು ಹರಿಸಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಿದ್ದರೆ ಬಹುತೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಂತಹ ಭಾರಿ ಗಾತ್ರದ ನೀರಿನ ಟ್ಯಾಂಕ್‌ಗಳನ್ನು ಉಪಯೋಗಿಸಿ ಜನತೆಯ ನೀರಿನ ಹಾಹಾಕಾರ ನಿವಾರಿಸಲು ಮುಂದಾಗುವರೇ ಎಂದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

