ಕೋಲಾರ

ಸುದ್ದಿ ಸಂಕ್ಷೇಪ

Published On :

ಮನೆಯಲ್ಲಿ ಚಿನ್ನಾಭರಣ ಕಳವು
ಮಾಲೂರು: ಮನೆ ಬಾಗಿಲನ್ನು ಮೀಟಿ ಒಳ ನುಗ್ಗಿದ ಕಳ್ಳರ ತಂಡ ಕೋಣೆಯ ಬೀರುವಿನಲ್ಲಿದ್ದ 2ಲಕ್ಷ ರು. ನಗದು ಸೇರಿದಂತೆ 2 ಕೆ.ಜಿ. ಬೆಳ್ಳಿ ಹಾಗೂ ಚಿನ್ನ ದೋಚಿರುವ ಘಟನೆ ಗುರುವಾರ ರಾತ್ರಿ ಇಲ್ಲಿನ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಮಾರುತಿ ಬಡಾವಣೆಯ ಮಂಜುನಾಥ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, 10 ಗ್ರಾಂ ಚಿನ್ನದ ಓಲೆ ಸೇರಿದಂತೆ 2 ಕೆ.ಜಿ. ಬೆಳ್ಳಿ ಹಾಗೂ 2 ಲಕ್ಷ ರು.ನಗದು ಕಳ್ಳತನವಾಗಿರುವುದಾಗಿ ಮನೆ ಮಾಲೀಕ ಮಂಜುನಾಥ್ ತಿಳಿಸಿದ್ದಾರೆ. ಮನೆ ಮಾಲೀಕ ಸ್ಥಳೀಯ ಠಾಣೆಗೆ ಕಳ್ಳತನ ಬಗ್ಗೆ ದೂರು ನೀಡಿದ್ದಾರೆ.
ಆರ್‌ಟಿಇ ಕಾರ್ಯಕ್ರಮದ ಹಣ ಪಾವತಿಗೆ ಒತ್ತಾಯ
ಕೋಲಾರ: ಖಾಸಗಿ ಶಾಲೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ 25 ಸೀಟುಗಳು ಮೀಸಲಿಡುವ ಕೇಂದ್ರ ಸರ್ಕಾರದ ಆರ್.ಟಿ.ಇ ಕಾರ್ಯಕ್ರಮದಡಿ ಬಡ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸುತ್ತಿರುವ ಖಾಸಗಿ ಶಾಲೆಗಳಿಗೆ ಸಲ್ಲಬೇಕಾದ ಹಣವನ್ನು ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕರು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಮನವಿ ಸಲ್ಲಿಸಿದರು. ಶುಕ್ರವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಭರವಸೆ ನಂಬಿ ಆರ್.ಟಿ.ಇ ಕಾರ್ಯಕ್ರಮದಡಿಯಲ್ಲಿ ಬಡ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಹಣ ಪಾವತಿ ಆಗದಿರುವುದರಿಂದ ಶಿಕ್ಷಕರಿಗೆ ವೇತನ ನೀಡಲು ತೊಂದರೆಯಾಗಿದೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾಧ್ಯಕ್ಷ ಮುನಿಯಪ್ಪ ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಪ್ರತಿ ವಿದ್ಯಾರ್ಥಿಗೆ 11,848 ರು. ನೀಡಲು ಸರ್ಕಾರ ಮಹತ್ವದ ಯೋಜನೆ ಜಾರಿಗೊಳಿಸಿದೆ. ಆದರೆ, ಪ್ರಾರಂಭದ ವರ್ಷದಲ್ಲಿ ಹಣ ಪಾವತಿಸಿದ ಸರ್ಕಾರ ಪ್ರಸ್ತುತ ಸಾಲಿನಲ್ಲಿ ಇನ್ನೂ ಶಿಕ್ಷಣ ಸಂಸ್ಥೆಗಳಿಗೆ ಹಣ ಸಂದಾಯ ಮಾಡಿಲ್ಲ. ಮುಂದಿನ ಶೈಕ್ಷಣಿಕ ಸಾಲಿಗೆ ದಾಖಲಾತಿಗಳನ್ನು ಪ್ರಾರಂಭಿಸಿಕೊಳ್ಳಲು ಜ.6ರಿಂದ ಅರ್ಜಿಗಳನ್ನು ವಿಲೇವಾರಿ ಮಾಡಲು ಸರ್ಕಾರ ಮುಂದಾಗಿದೆ. ಈ ಹಿಂದಿನ ಸಾಲಿನ ಹಣ ಪಾವತಿಯಾಗದೆ ಇರುವುದರಿಂದ ಮುಂದಿನ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸೀಟು ನೀಡಲು ಚಿಂತನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ, ಕಾಡುಗುರು ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾಗಭೂಷಣ್, ಬಾಬಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ  ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ಜಗದೀಶ್, ಸೈನಿಕ್ ಪಬ್ಲಿಕ್ ಶಾಲಾ ಕಾರ್ಯದರ್ಶಿ ಮುನೇಗೌಡ, ತಾಲೂಕು ಅಧ್ಯಕ್ಷ ಜೊಸೆಫ್, ಉಪಾಧ್ಯಕ್ಷ ಹರಿಪ್ರಸಾದ್, ಪ್ರಭಾಕರ್ ಹಾಗೂ ಕೆಜಿಎಫ್ ಪದಾಧಿಕಾರಿಗಳು ಇದ್ದರು.
ತಿರುಪತಿ ಫಾಸ್ಟ್ ಪ್ಯಾಸೆಂಜರ್ ಮತ್ತೆ ನಿಲುಗಡೆ
ಟೇಕಲ್: ಕನ್ನಡಪ್ರಭ ವರದಿಗೆ ಸ್ಪಂದಿಸಿದ ರೈಲ್ವೆ ಇಲಾಖೆ, ಟೇಕಲ್‌ನಲ್ಲಿ ಜ.1 ರಿಂದ ತಿರುಪತಿ ಪಾಸ್ಟ್ ಪ್ಯಾಸೆಂಜರ್ ನಿಲುಗಡೆ ನೀಡುವುದಾಗಿ ತಿಳಿಸಿದೆ. ಬಹು ನಿರೀಕ್ಷಿತವಾಗಿದ್ದ ಈ ರೈಲು ನಿಲುಗಡೆ ಜನವರಿ ಒಂದರಿಂದ ಇಲ್ಲವೆಂದು ಟೇಕಲ್ ರೈಲು ನಿಲ್ದಾಣದಲ್ಲಿ ಇಲಾಖಾ ಸೂಚನಾ ಫಲಕದಲ್ಲಿ ಹಾಕಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಇದನ್ನು ಮನಗಂಡ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಟೇಕಲ್‌ನಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ತಿರುಪತಿ ಎಕ್ಸ್‌ಪ್ರೆಸ್‌ನ್ನು ಜ. 1 ರಿಂದ ಮತ್ತೆ ಟೇಕಲ್‌ನಲ್ಲಿ ನಿಲುಗಡೆ ಮಾಡಲಾಗುತ್ತಿದೆ ಎಂದು ಅವರ ಕಾರ್ಯಾಲಯ ಮಾಹಿತಿ ತಿಳಿಸಿದೆ. ಈ ಬಗ್ಗೆ ಕನ್ನಡಪ್ರಭದಲ್ಲಿ ಸುದ್ದಿ ಪ್ರಕಟವಾಗಿತ್ತು. ಅದೇ ರೀತಿ ತಿರುಪತಿ ಪ್ಯಾಸೆಂಜರ್ ವೇಳೆ ಬದಲಾಗಿದ್ದು, ಮುಂಜಾನೆ 4.40 ಕ್ಕೆ ಟೇಕಲ್ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ರಾತ್ರಿ ಮಾಮೂಲಿ ವೇಳೆಗೆ ಅಂದರೆ 10 ಗಂಟೆಗೆ ಟೇಕಲ್ ರೈಲು ನಿಲ್ದಾಣದ ಸೂಚನಾ ಫಲಕದಲ್ಲಿ ಹಾಕಲಾಗಿದೆ. ಇದರಿಂದ ಪ್ರಯಾಣಿಕರು ಇಲಾಖೆಗೆ ಹಾಗೂ ಸಂಸದರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.