ಕೋಲಾರ

ಅನುವಂಶೀಯ ವಿವಾಹದಿಂದ ಅಂಗವೈಕಲ್ಯ

Published On :


ಶ್ರೀನಿವಾಸಪುರ: ವಿವಾಹವಾಗುವಾಗ ಅನುವಂಶಿಯತೆಯನ್ನು ಅನುಸರಿಸುತ್ತಿರುವಿರಿಂದಲೇ ಹೆಚ್ಚು ವಿಕಲಚೇತನರು ಹುಟ್ಟುವುದಕ್ಕೆ ಕಾರಣ ಎಂದು ತಾಪಂ ಅಧ್ಯಕ್ಷ ಬಿ. ವಿ. ಕೃಷ್ಣಾರೆಡ್ಡಿ ಹೇಳಿದರು. ವಿಶ್ವವಿಕಲಚೇತನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳಲ್ಲಿ ವಿಕಲಚೇತನರಿಗೆ ಶೇ.3 ರಷ್ಟು ಮೀಸಲಿಡುವುದಾಗಿ ಮತ್ತು ಪಂಚಾಯ್ತಿಗಳಲ್ಲಿ ಶೇ.5 ರಷ್ಟು ಮನೆಗಳನ್ನು ಮೀಸಲಿಡಲು ಅಧಿಕಾರಿಗಳ ಮೇಲೆ ಒತ್ತಡ ಏರಿ ವಿಕಲ ಚೇತನರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ವೈ.ವಿ. ಶ್ರೀನಿವಾಸಗೌಡ ಮಾತ್ತನಾಡಿ, ತಾಲೂಕಿನಲ್ಲಿ 9,048 ಮಂದಿ ವಿಕಲಚೇತನರಿದ್ದು, 6,000 ಮಂದಿ ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ನೀಡಲಾಗಿದೆ. ತಿಂಗಳ ಅಂಗವಿಕಲ ಮಾಶಾಸನಗಳು ಒದಗಿಸಲಾಗುತ್ತಿದೆ ಎಂದರು. ಶಂಕರಪ್ಪ, ಟಿ.ಕೆ. ರಾಘವೇಂದ್ರ, ಎಚ್.ಸಿ. ನಾಗಮಣಿ, ಆನಂದ್, ಗುರುಮೂರ್ತಿ ಮಾತನಾಡಿದರು.


ಗಣಕೀಕೃತ ಆರ್ಟಿಸಿ ಫಹಣಿಯಿಂದ ರೈತರ ಪರದಾಟ



ಶ್ರೀನಿವಾಸಪುರ: ತಾಲೂಕಿನ ರೈತರ ಗಣಕೀಕೃತ ಆರ್ಟಿಸಿ ಫಹಣಿಗಳಲ್ಲಿ ತಪ್ಪುಗಳ ತಿದ್ದುಪಡಿ ಮಾಡಲು ನೂರಾರು ರೈತರು ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದಿದ್ದರೂ ಈವರೆಗೆ ಒಂದೇ ಒಂದು ಅರ್ಜಿ ವಿಲೇವಾರಿಯಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ. ಗಣಕೀಕೃತ ಆರ್ಟಿಸಿ ಫಹಣಿ ಜಾರಿಯಾಗುವ ಮೊದಲು ಗ್ರಾಮಲೆಕ್ಕಾಧಿಕಾರಿ ಕೈ ಬರಹದಲ್ಲಿ ನೀಡುತ್ತಿದ್ದಾಗ ಎಲ್ಲವೂ ಸರಿ ಇತ್ತು. ಆದರೆ ಕಂಪ್ಯೂಟರ್ ಆರ್ಟಿಸಿಗಳಲ್ಲಿ ನಾನಾ ರೀತಿಯ ದೋಷಗಳುಂಟಾಗಿ ಕೆಲ ಖಾತೆದಾರರ ಹೆಸರು ಹಾಗೂ ಅವರ ತಂದೆ ತಾಯಿ ಹೆಸರು ಅದಲುಬದಲಾಗಿ ಬಂದಿದ್ದು ಈ ತಪ್ಪನ್ನು ಅರಿಯದ ರೈತರು ಈಗ ಪರದಾಡುವಂತಾಗಿದೆ. ಈ ಬಗ್ಗೆ ಸರ್ಕಾರ ಕಳೆದ 10 ವರ್ಷಗಳಿಂದ ಆರ್ಟಿಸಿಗಳಲ್ಲಿನ ತಿದ್ದುಪಡಿಗಳನ್ನು ಮಾಡಲು ಆಯಾ ತಾಲೂಕಿನ ತಹಸೀಲ್ದಾರರಿಗೆ ಆದೇಶ ನೀಡಿದೆ ಎಂದು ಹೇಳುತ್ತಿದೆ. ಆದರೂ ತಹಸೀಲ್ದಾರರು ತಿದ್ದುಪಡಿಯ ಅರ್ಜಿಗಳನ್ನು ಜಿಲ್ಲಾ ಉಪವಿಭಾಗಾಧಿಕಾರಿಗಳೂ ಮಾಡುತ್ತಿಲ್ಲ. ಈ ಇಬ್ಬರ ಮಧ್ಯೆ ರೈತರು ಬಲಿಪಶುಗಳಾಗುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸರ್ಕಾರವೇ ತಕ್ಕ ಉತ್ತರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.


ಭಕ್ತಿ ಪರಂಪರೆಯಲ್ಲಿ ಚೈತನ್ಯರಿಗೆ ವಿಶೇಷ ಸ್ಥಾನ


ಮುಳಬಾಗಲು: ಬ್ರಹ್ಮಚೈತನ್ಯ ಮಹರಾಜರು ವಿಶೇಷವಾದ ಸ್ಧಾನ ಪಡೆದಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹ.ರಾ. ನಾಗರಾಜಾಚಾರ್ಯ ಹೇಳಿದರು. ಪಟ್ಟಣದ ಮುತ್ಯಾಲಪೇಟೆಯ ಬ್ರಹ್ಮಚೈತನ್ಯ ಮಂದಿರದಲ್ಲಿ ಶುಕ್ರವಾರ ನಡೆದ ಚೈತನ್ಯ ಮಹಾರಾಜರ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮನಾಮದ ಮಹಿಮೆಯನ್ನು ಅವರು ಸಾರಿದರು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಜಿ. ಮಂಜುನಾಥ್, ತಹಸೀಲ್ದಾರ್ ಡಿ.ವಿ. ರಾಮಮೂರ್ತಿ, ಉಪ ತಹಸೀಲ್ದಾರ್ ವೆಂಕಟೇಶಯ್ಯ, ಎಸ್. ರಘುನಂದನರಾವ್, ಬಂಗಾರುಪೇಟೆ ರವಿ, ಅಲಂಗೂರು ಗುರುಶಂಕರ್, ಮಂಜುನಾಥ್ ಇದ್ದರು.



ಆರಾಧನಾ ಮಹೋತ್ಸವ

ಚಿಂತಾಮಣಿ ಶ್ರೀ ಬ್ರಹ್ಮಚೈತನ್ಯ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ 100 ನೇ ವಾರ್ಷಿಕ ಆರಾಧನಾ ಮಹೋತ್ಸವದಲ್ಲಿ ಭಕ್ತಾಧಿಗಳು ಭಾಗವಸಿದ್ದರು.

ಜಿಎಸ್ಎಸ್ಗೆ ನುಡಿ ನಮನ

ಚಿಂತಾಮಣಿ: ಕನ್ನಡ ಸಾಹಿತ್ಯ ಲೋಕದ ಹಿರಿಯ ಚೇತನ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ನಿಧನದಿಂದಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ ಕಂಬನಿ ಮಿಡಿದಿವೆ. ಇಲ್ಲಿನ ಅಂಜನಿ ಬಡಾವಣೆಯ ಚುಸಾಪ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚುಸಾಪ ಅಧ್ಯಕ್ಷ ಕಾಗತಿ ವಿ. ವೆಂಕಟರತ್ನಂ ಮಾತನಾಡಿ, ಜಿ.ಎಸ್. ಶಿವರುದ್ರಪ್ಪನವರು ಸಮಾಜ ಮುಖಿ ಕವಿಯಾಗಿದ್ದು ಕನ್ನಡಿಗರ ಹೃದಯ ಗೆದ್ದ ಹೈದಯವಂತರಾಗಿದ್ದರೆಂದರು. ರಾಯಲ್ ಶಿ.ಮಾ. ಮಂಜುನಾಥ್, ನೂರುಲ್ಲಾ ಇದ್ದರು.

ನಗರಸಭೆ ವಿರುದ್ಧ ವರ್ತಕರ ಪ್ರತಿಭಟನೆ

ಚಿಂತಾಮಣಿ: ನಗರಸಭೆ ಟ್ರೇಡಿಂಗ್ ಲೈಸೆನ್ಸ್ ಹೆಸರಿನಲ್ಲಿ ವ್ಯಾಪಾರಸ್ಥರಿಂದ ದೌರ್ಜನ್ಯವಾಗಿ ವಸೂಲಿಗೆ ಮುಂದಾಗಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ನಗರಸಭೆ ಕೆಲವು ಉದ್ಯಮಿಗಳಿಗೆ ಮಾತ್ರ ಟ್ರೇಡಿಂಗ್ ಲೈಸೆನ್ಸ್ ನೀಡಿ ತೆರಿಗೆ ವಿದಿಸುತ್ತಿತ್ತು. ಆದರೆ ನಗರಸಭಾ ಅಧಿಕಾರಿಗಳು ಅಂಗಡಿಗಳ ಮುಂದೆ ಬಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿ ವ್ಯಾಪಾರಸ್ಥರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು. ತೆರಿಗೆ ವಸೂಲಿ ಮಾಡುವಾಗ ಹಲವು ನಗರಸಭಾ ಅಧಿಕಾರಿಗಳು ಕಾನೂನು ಗಾಳಿಗೆ ತೂರಿ, ಒಬ್ಬೊಬ್ಬರಿಗೆ ಒಂದೊಂದು ನ್ಯಾಯವೆಂಬಂತೆ ವರ್ತಿಸುತ್ತಿದ್ದಾರೆಂದು ಆರೋಪಿಸಿದರು.
ಮಾತಿನ ಚಕಮುಖಿ: ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಆಯುಕ್ತರು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದಾಗ ಆಗಮಿಸಿದ ಪ್ರಭಾರ ನಗರಸಭಾ ಆಯುಕ್ತ ಗಂಗಣ್ಣ ಹಾಗೂ ಹಲವು ಅಧಿಕಾರಿಗಳ ವಿರುದ್ಧ ಪ್ರತಿಭಟನಾಗಾರರು ವಾಗ್ವಾದಕ್ಕಿಳಿದರು. ತಕ್ಷಣ ನಗರಠಾಣೆಯ ಸಬ್ಇನ್ಸ್ಪೆಕ್ಟರ್ ಮುರಳಿ ಮಧ್ಯೆ ಪ್ರವೇಶಿಸಿ ಪ್ರಿಸ್ಥಿತಿ ತಿಳಿಗೊಳಿಸಿದರು. ಎನ್.ವಿ. ರತ್ನಮ್, ಡಾ. ಶಿವಣ್ಣ, ನಾಮಾ ನಾಗೇಂದ್ರ ಇದ್ದರು.


ಇಂದು ವಿಚಾರ ಸಂಕಿರಣ



ಮಾಲೂರು: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಸ್ಮರಣಾರ್ಥ ಪಟ್ಟಣದ ಪತ್ರಕರ್ತರ ಭವನದಲ್ಲಿ ಭಾನುವಾರ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಕುವೆಂಪು ಬದುಕು ಬರಹ ಸಂಬಂಧ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ಲೇಖಕ ಹಾಗೂ ಚಿಂತಕ ಕೋಲಾರದ ಕೆ. ರಾಜಕುಮಾರ್ ಉಪನ್ಯಾಸ ನೀಡಲಿದ್ದಾರೆ. ಕಸಾಪದ ಮಾಜಿ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ್ ಉದ್ಘಾಟಿಸಲಿರುವ ಈ ವಿಚಾರ ಸಂಕಿರಣದಲ್ಲಿ ಭುವನೇಶ್ವರಿ ಕಾಲಾ ಸಂಘದ ಸಂಸ್ಥಾಪಕ ಎಂ.ವಿ. ಹನುಮಂತಯ್ಯ, ಕಸಾಪ ಗೌರವ ಕಾರ್ಯದರ್ಶಿ ಎ. ಅಶ್ವಥ್ ರೆಡ್ಡಿ, ಕವಿ ಜ.ಮು. ಚಂದ್ರ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂ. ಚಂದ್ರಪ್ಪ ಭಾಗವಹಿಸಲಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ರವಿ ಕುಮಾರ್ ತಿಳಿಸಿದ್ದಾರೆ.


ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ



ಮಾಲೂರು: ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅನಾಹುತವೂಂದು ತಪ್ಪಿರುವ ಘಟನೆ ಪಟ್ಟಣದ ಪದವಿ ಪೂರ್ವ ಕಾಲೇಜಿನ ಮುಂಭಾಗ ಶನಿವಾರ ನೆಡೆದಿದೆ. ಇಲ್ಲಿನ ಕೈಗಾರಿಕಾ ಪ್ರಾಂಗಾಣದಿಂದ ಶೀಟ್ಗಳನ್ನು ಹೊತ್ತು ಹೋಗುತ್ತಿದ್ದ ಕ್ಯಾಂಟರ್ ಕಾಲೇಜು ಮುಂಭಾಗದ ಉಬ್ಬುವಿನ ಮೇಲೆ ಚಲಿಸುವಾಗ 4 ಟನ್ ಪ್ಲಾಸ್ಟಿಕ್ ಶೀಟ್ಗಳು ಹಿಂದೆ ಸರಿದು ಕ್ಯಾಂಟರ್ ಮುಂಭಾಗ ಮೇಲಕ್ಕೆ ಹೋಗಿತ್ತು. ಈ ಸಂಧರ್ಭದಲ್ಲಿ ಚಾಲಕ ವಾಹನವನ್ನು ಚಾಕಚಾಕ್ಯತೆಯಿಂದ ನಿಯಂತ್ರಿಸಿದ ಪರಿಣಾಮ ಭಾರಿ ಅನಾಹುತ ತಪ್ಪಿದೆ. ಈ ಅಪಘಾತ ನಡೆದಾಗ ಶಾಲೆಗಳು ಬಿಟ್ಟಿದ್ದು, ಮಕ್ಕಳು ಶಾಲೆಗಳಿಂದ ಸೈಕಲ್ ನಿಂದ ಹೂರ ಬರುತ್ತಿದ್ದರು. ಒಂದು ವೇಳೆ ಕ್ಯಾಂಟರ್ ಉರಳಿದ್ದರೆ ಭಾರಿ ಅನಾಹುತವಾಗುವ ಸಂಭವವಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಬಂಧ ಪಟ್ಟ ಕಾರ್ಖಾನೆಯವರು ಕ್ರೇನ್ ತರಿಸಿ ವಾಹನವನ್ನು ತೆರವುಗೊಳಿಸಿದರು. ಇದರಿಂದ ಹೂಸೂರು-ಕೋಲಾರ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.



ಕ್ಷಯ ರೋಗಿಗಳಿಗೆ ಸಹಾಯ ಧನ



ಮುಳಬಾಗಲು: ತಾಲೂಕಿನಲ್ಲಿ ಕ್ಷಯರೋಗದಿಂದ ನರಳುತ್ತಿರುವವರಿಗೆ ಆರೋಗ್ಯದ ದೃಷ್ಟಿಯಿಂದ ಪೌಷ್ಠಿಕ ಆಹಾರ ಪಡೆಯಲು ಪ್ರತಿ ತಾಲೂಕಿನ ಪ್ರತಿ ಕ್ಷಯರೋಗಿಗೂ ತಲಾ ಒಂದು ಸಾವಿರ ರುಪಾಯಿಗಳನ್ನು ಶಾಸಕ ಕೊತ್ತೂರು ಮಂಜುನಾಥ್ ಪ್ರತಿ ತಿಂಗಳು ನೀಡುತ್ತಿರುವುದು ಶ್ಲಾಘನೀಯ ಎಂದು ತಾಪಂ ಾರ್ಯನಿರ್ವಹಣಾಧಿಕಾರಿ ಟೆ.ಕೆ. ಅರುಣಕುಮಾರ್ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಾಲೂಕಿನ  185 ಕ್ಷಯ ರೋಗಿಗಳಿಗೆ ತಲಾ ಒಂದು ಸಾವಿರ ರು.ಗಳ ಸಹಾಯಧನವನ್ನು ವಿತರಿಸಿ ಮಾತನಾಡಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಾರಾಯಣಸ್ವಾಮಿ ಮಾತನಾಡಿ ಕ್ಷಯ ರೋಗಿಗಳು ತಪ್ಪದೇ 6 ರಿಂದ 8 ತಿಂಗಳ ಕಾಲ ಟೆ.ಬಿ. ಕೇಂದ್ರದವರು ನೀಡುವ ಉಚಿತವಾದ ಮಾತ್ರೆಗಳನ್ನು ಸೇವಿಸಬೇಕು. ತಪ್ಪಿದಲ್ಲಿ ಎಂಡಿಆರ್ಟಿಬಿಗೊಳಗಾದರೇ 24 ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.


ಪರಿಹಾರದ ಚೆಕ್ ವಿತರಣೆ


ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತಪಟ್ಟ ವಿದ್ಯಾರ್ಥಿ ಮೊಹಮ್ಮದ್ ಸಲಾವುದ್ದೀನ್ ಕುಟುಂಬಕ್ಕೆ ಕರ್ನಾಟಕ ವಸತಿ ಶಿಕ್ಷಣ ಸಂಘಗಳ ಸಂಸ್ಥೆ ವತಿಯಿಂದ ನೀಡಲಾದ ಲಕ್ಷ ರು. ಪರಿಹಾರ ಚೆಕ್ ಅನ್ನು ಶಾಸಕ ಡಾ. ಕೆ.ಸುಧಾಕರ್ ವಿತರಿಸಿದರು.


ಅಪಘಾತ ತಡೆಯಲು ಕ್ರಮಕ್ಕೆ ಒತ್ತಾಯ



ಕೋಲಾರ: ಮಾಲೂರಿನಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಮಾಡುವ ಮೂಲಕ ವಾಹನ ದಟ್ಟಣೆ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಮುಖಂಡರ ನಿಯೋಗ ಎಎಸ್ಪಿ ಜಮೀಲ್ ಅವರನ್ನು ಭೇಟಿಯಾಗಿ ಮಾಲೂರು ಪಟ್ಟಣದಲ್ಲಿ ಸಂಚಾರ ದಟ್ಟಣೆ ತಡೆಯಲು ಸಂಚಾರಿ ದೀಪಗಳನ್ನು ಅಳವಡಿಸಬೇಕು ಮತ್ತು ಸಂಚಾರಿ ಪೊಲೀಸರನ್ನು ನೇಮಿಸಬೇಕೆಂದು ಆಗ್ರಹಿಸಿತು.  ಲಕ್ಕೂರು ಹೋಬಳಿ ವ್ಯಾಪ್ತಿಯ ಲಕ್ಕೂರು ಹೊರಠಾಣೆಯನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಅಶ್ವಥ್ರೆಡ್ಡಿ ಮನವಿ ಮಾಡಿದರು. ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಮಾತನಾಡಿ, ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯಲ್ಲಿ ಅಕ್ರಮ ಮರಳು ಧಂದೆ ನಡೆಯುತ್ತಿದ್ದು, ನಿಯಂತ್ರಣ ಕಷ್ಟವಾಗುತ್ತಿದೆ ಎಂದು ಆರೋಪಿಸಿದರು. ತೆರ್ನಹಳ್ಳಿ ವೆಂಕಟೇಶ್ ಗೌಡ, ಸಿ.ವಿ. ಪ್ರಭಾಕರ್, ವೆಂಕಟಾಚಲಪತಿ, ಗುಡ್ನಹಳ್ಳಿ ವೆಂಕಟೇಶ್ ಇದ್ದರು.



ಇಂದು ಮದನಹಳ್ಳಿಯಲ್ಲಿ ಕುವೆಂಪು ಸ್ಮರಣೆ



ಕೋಲಾರ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮದನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಸಂಸ್ಮರಣೆ ಕಾರ್ಯಕ್ರಮವನ್ನು ಡಿ. 29ರ ಭಾನುವಾರ ಬೆಳಗ್ಗೆ 10.30ಕ್ಕೆ ಮದನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೆಜಿಎಫ್ ಜೈನ್ ಕಾಲೇಜ್ ಉಪನ್ಯಾಸಕ ಪ್ರೊ. ಶ್ರೀನಿವಾಸ ಪ್ರಸಾದ್ ಕುವೆಂಪು ಕುರಿತು ಉಪನ್ಯಾಸ ನೀಡಲಿದ್ದಾರೆ. ವಸತಿ ಶಾಲೆಯ ಪ್ರಾಂಶುಪಾಲ ಜಿ.ಆರ್. ಶಂಕರೇಗೌಡ ಅಧ್ಯಕ್ಷತೆ ವಹಿಸಲಿದ್ದು, ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಪ್ರೌಢಶಾಲಾ ಮುಖ್ಯೋಪಾಧ್ಯಾರ ಸಂಘದ ಕಾರ್ಯದರ್ಶಿ ಕೆ. ಗೋಪಾಲ್ರೆಡ್ಡಿ, ಕಸಾಪ ಕೋಶಾಧ್ಯಕ್ಷ ಎಚ್.ಎ. ಪುರುಷೋತ್ತಮ ರಾವ್, ಟಿ. ಚಂದ್ರಪ್ಪ ಮತ್ತಿತರರು ಭಾಗವಹಿಸುವರು ಎಂದು ತಾಲೂಕು ಕಸಾಪ ಅಧ್ಯಕ್ಷ ನಾರಾಯಣಪ್ಪ ತಿಳಿಸಿದ್ದಾರೆ.


ಆರೋಪ ಪ್ರತ್ಯಾರೋಪದಲ್ಲೇ ಸಭೆ ಅಂತ್ಯ



ಮುಳಬಾಗಲು: ಆರೋಪ ಮತ್ತು ಪ್ರತ್ಯಾರೋಪ ಮಾಡುವುದು ಬಿಟ್ಟು ಜ.15ರೊಳಗೆ ತಾಲೂಕಿನ 30 ಗ್ರಾಪಂಗಳ ವ್ಯಾಪ್ತಿಯ ಕುಡಿಯುವ ನೀರು ಸರಬರಾಜು ಮಾಡಲು ಶಾಸಕ ಕೊತ್ತೂರು ಮಂಜುನಾಥ್ ತಾಖೀತು ಮಾಡಿದರು. ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಪರಿಶೀಲನೆ ಸಭಯಲ್ಲಿ ಮಾತನಾಡಿ, ಕೊಳವೆ ಬಾವಿ ಹಾಗೂ ಪಂಪ್ಸೆಟ್ ಆಥವಡಿಕೆ ಜಿಪಂ ಎಇಇ ಮುಂದಾಗಬೇಕು. ಕುಡಿಯುವ ನೀರು ಪೂರೈಕೆ ಗೆ ಸರ್ಕಾರ ಕೋಟ್ಯಂತರ ರುಪಾಯಿಗಳು ಮೀಸಲಿಟ್ಟಿದೆ. ಸಮಾಜ ಕಲ್ಯಾಣ ಇಲಾಖೆ ಹಾಸ್ಯಲ್ಗಳ ನಿರ್ವಹಣೆ ಕಳಪೆಯಿಂದ ಕೂಡಿದೆ. ತ್ಯಾಗರಾಜಕಾಲೋನಿಯ ಸರ್ಕಾರಿ ಮೆಟ್ರೆಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಕಸ್ತೂರಿ ಬಾಯಿ ಕಾರ್ಯವೈಖರಿಯ ಬಗ್ಗೆ ಜಿಪಂ ಉಪಾಧ್ಯಕ್ಷೆ ಅಲುವೇಲಮ್ಮ ಬೇಸರ ವ್ಯಕ್ತಪಡಿಸಿದರು. ಮೇಲ್ವಿಚಾರಕಿಯನ್ನು ಸಭೆಗೆ ಕರೆಸಿ  ಛೀಮಾರಿ ಹಾಕಿ, ಹಾಸ್ಟಲ್ ಪರಿಸ್ಥಿತಿ ಸರಿಪಡಿಸಿ ಎಂದು ಒತ್ತಾಯಿಸಿದರು. ತಾಪಂ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ರಾಜಪ್ಪ, ಸದಸ್ಯೆ ಲಕ್ಷ್ಮಿದೇವಮ್ಮ, ತಾಪಂ ಅಧಿಕಾರಿ ಅರುಣಕುಮಾರ್ ಇದ್ದರು.



ಮಾಂಸದ ಅಂಗಡಿಗಳಿಂದ ನಾಗರಿಕರಿಗೆ ತೊಂದರೆ



ಬಂಗಾರಪೇಟೆ: ಪಟ್ಟಣದಲ್ಲಿ ನಾಯಿ ಕೊಡೆಗಳಂತೆ ಮಾಂಸದ ಅಂಗಡಿಗಳು ತಲೆ ಎತ್ತಿದ್ದು ಇದರಿಂದ ಹೊರ ಬರುವ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲೇ ಬಿಸಾಡುತ್ತಿದ್ದರೂ ಪುರಸಭೆ ನಿರ್ಲಕ್ಷ್ಯವಹಿಸಿ ನಾಗರಿಕರು ದುರ್ವಾಸನೆ ಸೇವಿಸುವಂತಾಗಿದೆ. ಪುರಸಭೆಯಿಂದ ಪರವಾನಿಗೆ ಪಡೆಯದೆ ಜನ ಬೀಡಿತ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ.ಪುರಸಭೆಯಲ್ಲಿ ಪರವಾನಿಗೆ ಪಡೆದವರು ಕೇವಲ ಬೆರಳೆಣಿಕೆಷ್ಟು ಮಂದಿ ಮಾತ್ರ ಇದ್ದರೆ ಅನಧಿಕೃತವಾಗಿ 50ಕ್ಕೂ ಹೆಚ್ಚು ಮಂದಿ ತೆರೆದಿದ್ದಾರೆ. ಕಳೆದ ಪುರಸಭೆ ಆಡಳಿತ ಮಂಡಳಿ ಸದಸ್ಯರು ಅನಧಿಕೃತವಾಗಿ ತಲೆ ಎತ್ತಿರುವ ಮಾಂಸದ ಅಂಗಡಿಗಳನ್ನು ಎತ್ತಂಗಡಿ ಮಾಡಿಸಬೇಕು ಎಂದು ಆಗ್ರಹಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ. ಪುರಸಭೆ ಕೆಲವು ಅಧಿಕಾರಿಗಳು ಮಾಂಸದ ಅಂಗಡಿಗಳ ಮಾಲೀಕರ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಎಲ್ಲೆಡೆ ತೆಲೆ ಎತ್ತಲು ಕಾರಣವಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.


ನಾಳೆ ಬಂಗಾರಪೇಟೆಯಲ್ಲಿ ಯುವಜನ ಮೇಳ



ಕೋಲಾರ: ಬಂಗಾರಪೇಟೆ ತಾಲೂಕು ಮಟ್ಟದ ಯುವಜನ ಮೇಳ ಡಿ.30ರಂದು ಬೆಳಿಗ್ಗೆ 10 ಗಂಟೆಗೆ ಬಂಗಾರಪೇಟೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ. ಈ ಯುವಜನ ಮೇಳಕ್ಕೆ ಆಸಕ್ತ ಯುವಕ ಯುವತಿಯರು ಹಾಗೂ ಮಹಿಳಾ ಸಂಘದ ಸದಸ್ಯರು ಸಂಘ ಸಂಸ್ಥೆಗಳು ಹಾಗೂ ಜಾನಪದ ಕಲಾ ತಂಡಗಳು ಭಾಗವಹಿಸಬಹುದಾಗಿದೆ. ಭಾವಗೀತೆ, ಗೀಗೀ ಪದಗಳು, ಲಾವಣಿ, ಕೋಲಾಟ, ಜಾನಪದ ನಣತ್ಯ, ವೀರಗಾಸೆ, ರಾಗಿ ಬೀಸುವ ಪದ, ರಂಗಗೀತೆ, ಸೋಬಾನೆ ಪದಗಳು, ಭಜನೆ, ಜಾನಪದ ಗೀತೆ, ಏಕಪಾತ್ರಾಭಿನಯ, ಡೊಳ್ಳುಕುಣಿತ, ಚರ್ಮ ವಾದ್ಯ ಮೇಳ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 15 ರಿಂದ 35ವರ್ಷದೊಳಗಿನವರು ಡಿ.30ರಂದು ಸ್ಪರ್ಧಾ ಸ್ಥಳಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು, ವಿಜೇತರಿಗೆ ಬಹುಮಾನಗಳು ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಯುವಜನ ಸೇವಾಧಿಕಾರಿ ಬಿ. ರುದ್ರಪ್ಪ ತಿಳಿಸಿದ್ದಾರೆ.


ಕನ್ನಡ ನಾಮಫಲಕಕ್ಕೆ ಆಗ್ರಹ



ಕೋಲಾರ: ನಗರದ ವಾಣಿಜ್ಯ ಮಳಿಗೆಗಳ ಮಾಲೀಕರು ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ನಾಮಫಲಕಗಳಲ್ಲಿ ಕನ್ನಡಭಾಷೆಗೆ ಆದ್ಯತೆ ನೀಡದಿರುವ ಆಂಗ್ಲ ಭಾಷೆ ಫಲಕಗಳಿಗೆ ಮಸಿ ಬಳಿಯಲಾಗುವುದೆಂದು ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಾವಿದ ವಿಷ್ಣು ಎಚ್ಚರಿಸಿದ್ದಾರೆ. ಈಚೆಗೆ ಕೋಲಾರ ನಗರದಲ್ಲಿ ಬೃಹತ್ ವಾಣಿಜ್ಯ ಮಳಿಗೆಗಳು, ಗ್ಯಾಸ್ ಮತ್ತು ಪೆಟ್ರೋಲ್ ಬಂಕ್ಗಳು ನಾಯಿ ಕೊಡೆಗಳಂತೆ ತಲೆ ಎತ್ತುತಿದ್ದು, ಅವುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ದೂರಿದ್ದಾರೆ.  ಸರ್ಕಾರಿ ಆದೇಶದ ಪ್ರಕಾರ ನಾಮಫಲಕಗಳಲ್ಲಿ ಸ್ಥಳೀಯ ಕನ್ನಡ ಭಾಷೆಗೆ ಶೇ. 80 ರಷ್ಟು ಪ್ರಥಮ ಆದತೆ ಕೊಡಬೇಕಾಗಿದೆ. ಹೀಗಿದ್ದರೂ ವಾಣಿಜ್ಯ ಮಳಿಗೆ ಮಾಲೀಕರು ನಾಮಫಲಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಕಾನೂನು ಉಲ್ಲಂಘಿಸಿದ್ದಾರೆಂದು ಆರೋಪಿಸಿದ್ದಾರೆ.  ಮಹಾತ್ಮಗಾಂಧಿ ರಸ್ತೆ, ದೊಡ್ಡಪೇಟೆ ಸೇರಿದಂತೆ ನಗರದ ವಿವಿಧೆಡೆ ತಲೆ ಎತ್ತಿರುವ ವಾಣಿಜ್ಯ ಮಳಿಗೆಗಳು ಕನ್ನಡ ಭಾಷೆ ಬಳಸದೆ ಆಂಗ್ಲಕ್ಕೆ ಮಣೆ ಹಾಕಿರುವುದು ಸ್ಪಷ್ಟ ನಿದರ್ಶನವಾಗಿದೆ. ಜಿಲ್ಲಾಧಿಕಾರಿ ಡಿ.ಕೆ. ರವಿ ರವರು ಕನ್ನಡ ವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.



ಇಂದು ಕೃತಿಗಳ ಲೋಕಾರ್ಪಣೆ



ಚಿಂತಾಮಣಿ: ತಾಲೂಕು ಕಸಾಪ ಹಾಗೂ ಚುಟುಕು ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಡಿ.29ರ ಮಧ್ಯಾಹ್ನ 2.30ಕ್ಕೆ ಇಲ್ಲಿನ ನಗರಸಭೆ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮ ದಿನಾಚರಣೆ ಹಾಗೂ ಕನ್ನಡ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾಲೂಕು ಕಸಾಪ ಅಧ್ಯಕ್ಷ ಎ.ಎಸ್.ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವೈ.ಎಲ್.ಹನುಮಂತರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಚುಸಾಪ ಗೌರವಾಧ್ಯಕ್ಷ ಎಂ.ಆರ್.ನಾಗರಾಜರಾವ್ ಹಾಗೂ ಕೋಲಾರ ಜಿಲ್ಲಾ ಚುಸಾಪ ಗೌರವಾಧ್ಯಕ್ಷರಾದ ಡಾ. ಎಂ.ಕೆ.ಮೌನಿ ಕೃತಿಗಳ ಲೋಕಾರ್ಪಣೆ ಮಾಡುವವರು. ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಕುವೆಂಪು ಕುರಿತು ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಆಯ್ದ ಗಾಯಕರಿಂದ ಕುವೆಂಪು ಕುರಿತಾದ ಭಾವಗೀತೆಗಳ ಗಾಯನ ನಡೆಯಲಿದೆ.


ಬರದ ನಾಡಿನ ಬಾವಿಯಲ್ಲಿ ನೀರು


ಟೇಕಲ್: ಕೆ.ಜಿ. ಹಳ್ಳಿ ಸಂತೆ ಮೈದಾನದ ಪಕ್ಕದಲ್ಲಿರುವ ಓಂ ಶಕ್ತಿ ದೇವಾಲಯದ ಬಳಿ ವಿಸ್ಮಯ ರೀತಿಯಿಂದ ನೀರು ಬರುತ್ತಿರುವ ಸ್ಥಳ.


ಅವರು  ಹೇಳಿದ್ದು

ವಿಧಾನಸೌಧ ಮಾಲ್ ಆಗಿಬಿಟ್ಟಿದೆ. ಅಲ್ಲಿ ಈಗ ಏನನ್ನು ಬೇಕಾದರೂ ಕ್ರಯ ಮಾಡಬಹುದು, ಏನನ್ನು ಬೇಕಾದರೂ ಮಾರಾಟ ಮಾಡಬಹುದು.
ಟಿ ವಿಶ್ವನಾಥ್, ಸಂಸದ



ಒಳಮರ್ಮ


ವಿಧಾನಸೌಧದಲ್ಲಿ ಕುಳಿತು ಏನೇ ಡೀಲ್ ಮಾಡಿದ್ರೂ ಯಾರೂ ಕೇಳಂಗಿಲ್ಲ. ಏಕೆಂದರೆ ಅದು 'ಮಾಲ್' ಎಂದು ಹೇಳುತ್ತಿದ್ದಾರೆ.




ಪ್ರಧಾನ ಸಂಪಾದಕರಿಗೆ ಟ್ವೀಟ್ ಮಾಡಿ
ಅಗ್ಝಝಢಿಜಝಢಿಝ್ಠಇಛಡಿ


ನಮ್ಮ ಕಚೇರಿ ವಿಳಾಸ


ಮನೆ ನಂ.1456, 'ಶ್ರೀನಿವಾಸ' 4ನೇ ಕ್ರಾಸ್,  ಪಿ.ಸಿ. ಬಡಾವಣೆ, ಕೋಲಾರ-563101 ಮೊ: 99869-32985, 08152- 401635


ಓದುಗರಲ್ಲಿ ಮನವಿ


ನೀವು ಕನ್ನಡಪ್ರಭ ಪತ್ರಿಕೆಗೆ ಚಂದಾದಾರರಾಗಬೇಕೆ? ಸಂಪರ್ಕಿಸಿ ದೂರವಾಣಿ
9483515456

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.