ಕೋಲಾರ

ಪುರಸಭೆ ನಿರ್ಲಕ್ಷ್ಯ; ಪಾಳು ಬಿದ್ದ ಗ್ರಂಥಾಲಯ

Published On :


ರಾಜೇಂದ್ರ ವೈದ್ಯ
ಮಾಲೂರು: ಇಲ್ಲಿನ ಆದರ್ಶ ನಗರದ ಡಾ. ಕುವೆಂಪು ಉದ್ಯಾನವನ ಹಾಗೂ ಗ್ರಂಥಾಲಯ ಪುರಸಭೆ ನಿರ್ಲಕ್ಷ್ಯದಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಶೌಚಾಲಯವಾಗಿ ಮಾರ್ಪಟ್ಟಿರುವುದನ್ನು ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದಾರೆ.
ಪುರಸಭೆ ಒಂದಡೆ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ಯೋಜನೆಯಡಿ ಲಕ್ಷಾಂತರ ರು.ಗಳನ್ನು ವಿನಿಯೋಗಿಸುತ್ತಿದೆ. ಆದರೆ ಇನ್ನೂಂದಡೆ ಲಕ್ಷಾಂತರ ಹಣ ವಿನಿಯೋಗಿಸಿ ಜ್ಞಾನಾರ್ಜನೆಗಾಗಿ ನಿರ್ಮಿಸಿರುವ ಗ್ರಂಥಾಲಯ ಹಾಗೂ ಉದ್ಯಾನವನ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಪಟ್ಟಣದ ಅರಳೇರಿ ರಸ್ತೆಯಲ್ಲಿರುವ ರಾಷ್ಟ್ರಕವಿ ಡಾ. ಕುವೆಂಪು ಅವರ ಪುತ್ಥಳಿ ಇರುವ ಉದ್ಯಾನವನವನ್ನು ಈ ಹಿಂದಿನ ಪುರಸಭೆ ಆಡಳಿತದಲ್ಲಿ 3 ಲಕ್ಷ ರು.ಗಳಿಗೂ ಹೆಚ್ಚು ಹಣ ವಿನಿಯೋಗಿಸಿ ನಿರ್ಮಿಸಲಾಗಿತ್ತು. ಅಂದಿನ ವಾರ್ಡ್ ಸದಸ್ಯ ಪ್ರದೀಪ್ರೆಡ್ಡಿ ವಿಶೇಷ ಆಸಕ್ತಿವಹಿಸಿ ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ ಗ್ರಂಥಾಲಯ ನಿರ್ಮಾಣಕ್ಕೆ ಒತ್ತು ನೀಡಿದ್ದರು. ತಂಗುದಾಣವಾಗಿದ್ದ ಹಳೇ ಕಟ್ಟಡವನ್ನು ನವೀಕರಿಸಿ ನಿರ್ಮಾಣಗೊಂಡ ಗ್ರಂಥಾಲಯಕ್ಕೆ 5 ಸಾವಿರ ರು.ಮೌಲ್ಯದ ಪುಸ್ತಕಗಳನ್ನು ನೀಡಿದ್ದರು. ಆದರೆ ಪುರಸಭೆಯ ನಿರ್ವಹಣೆ ವಿಫಲತೆ ಇಂದು ಆಟೋ ನಿಲ್ಧಾಣದ ಮಧ್ಯೆ ಕರಗಿಹೋಗಿರುವ ಗ್ರಂಥಾಲಯ ಸಾರ್ವಜನಿಕರ ಶೌಚಾಲಯವಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪುರಸಭೆ ಸದಸ್ಯ ಪ್ರದೀಪ್ರೆಡ್ಡಿ, ವೈಟ್ ಗಾರ್ಡ್ನ್ವುಳ್ಳ ಅರಳೇರಿ ರಸ್ತೆಯಲ್ಲಿ ಪ್ರತಿ ದಿನ ಮುದುಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಾಕ್ ಮಾಡುತ್ತಿದ್ದು, ವಾಕ್ ಮುಗಿಸಿದ ನಂತರ ವಿಶ್ರಾಂತಿ ಪಡೆಯಲು ಉದ್ಯಾನವನ ಹಾಗೂ ದಿನಪತ್ರಿಕೆ ಓದಲಿ ಎಂದು ಸಣ್ಣ ಗ್ರಂಥಾಲಯ ಪ್ರಾರಂಭಿಸಿಲು ಉದ್ದೇಶಿಸಿ ಅಂದಿನ ಪುರಸಭೆ ಆಡಳಿತದ ಸಹಕಾರದಲ್ಲಿ 3ಲಕ್ಷ ರು.ಗಳಲ್ಲಿ ಗ್ರಂಥಾಲಯ ಕಟ್ಟಡ ನವೀಕರಣ ಹಾಗೂ ಉದ್ಯಾನವನದಲ್ಲಿ ಮಕ್ಕಳ ಆಟದ ವಸ್ತುಗಳನ್ನು ನಿರ್ಮಿಸಿ ಸುತ್ತ ಕಬ್ಬಿಣದ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಒಂದು ಉತ್ತಮ ಉದ್ದೇಶವನ್ನೇ ಹಾಳುಗೆಡುವಿದೆ ಎನ್ನುತ್ತಾರೆ.
ಗ್ರಂಥಾಲಯ ಕಟ್ಟಡ ಉದ್ಘಾಟನೆಯಾಗಿ 20 ತಿಂಗಳಾದರೂ ಇದುವರೆಗೂ ಗ್ರಂಥಾಲಯ ತೆರೆಯದಿರುವುದನ್ನು ಖಂಡಿಸಿರುವ ಮಾಜಿ ಸದಸ್ಯ ಪ್ರದೀಪ್ರೆಡ್ಡಿ ಇನ್ನಾದರೂ ಪುರಸಭೆಯವರು ಗ್ರಂಥಾಲಯ ಹಾಗೂ ಉದ್ಯಾನವನವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಪುರಸಭೆ ಇಚ್ಚಿಸಿದಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ರೇಣುಕಾ ಈ ಸಂಬಂಧ ಮಾತನಾಡಿ, ಕಳೆದ ಎರಡು ವರ್ಷದ ಹಿಂದೆ ನಡೆದಿರುವ ಈ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ನೀಡುವಂತೆ ಕೇಳಲಾಗಿದ್ದು, ಗ್ರಂಥಾಲಯ ಹಾಗೂ ಕುವೆಂಪು ಉದ್ಯಾನವನವನ್ನು ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲಾಗುವುದು. ಸಂಘ-ಸಂಸ್ಥೆಗಳು ಮುಂದೆ ಬಂದಲ್ಲಿ ಗ್ರಂಥಾಲಯವನ್ನು ಅವರ ಉಸ್ತುವಾರಿಗೆ ನೀಡುವ ಚಿಂತನೆ ಮಾಡಲಾಗುತ್ತಿದೆ ಎಂದಿದ್ದಾರೆ.






Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.