ಮಠಗಳು ಕೆಡಕು ಮಾಡಬಾರದು: ಮಾಧವ ತೀರ್ಥ
ಕೋಲಾರ: ಯಾವುದೇ ಮಠಗಳು ಧರ್ಮದ ಮುಖವಾಡ ಧರಿಸಿ ಕೆಟ್ಟ ಕೆಲಸ ಮಾಡಬಾರದು ಎಂದು ಕೋಲಾರ ತಾಲೂಕಿನ ಶ್ರೀಮನ್ ಮಾಧವ ತೀರ್ಥರ ಶ್ರೀಮಠದ ಪೀಠಾಧಿಪತಿ 108 ವಿದ್ಯಾ ಸಾಗರ ಮಾಧವ ತೀರ್ಥರು ತಿಳಿಸಿದರು.
ಶ್ರೀಮಠದ ಈ ಹಿಂದಿನ ಪೀಠಾಧಿಪತಿಗಳಾದ 108 ಪ್ರಸನ್ನಶೂರ ಮಾಧವ ತೀರ್ಥರ ಮೂರನೇ ಮಹಾ ಸಮಾರಾಧನೆಯ ಅಂಗವಾಗಿ ಭಾನುವಾರ ತಂಬಿಬಳ್ಳಿಯ ಮಠದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ವೆಂಕಟನಾರಾಯಣರವರಿಗೆ ಪತ್ರಿಕೋಧ್ಯಮ ಭಾಸ್ಕರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮಠದ ಈ ಹಿಂದಿನ ಗುರುಗಳಾಗಿದ್ದ ಪ್ರಸನ್ನಶೂರ ಮಾಧವ ತೀರ್ಥರು ಪೂರ್ವಶ್ರಮದಲ್ಲಿ ಪತ್ರಕರ್ತರಾಗಿ, ಪತ್ರಿಕೋಧ್ಯಮಿಯಾಗಿ ಸೇವೆ ಸಲ್ಲಿಸಿದ್ದಾರೆ, ಗುರುಗಳ ಆಶಯದಂತೆ ಮತ್ತು ಅವರು ಸಂತೋಷ ಪಡುವ ರೀತಿಯಲ್ಲಿ ಮಠದಲ್ಲಿಂದು ಹಿರಿಯ ಪತ್ರಕರ್ತ ವೆಂಕಟನಾರಾಯಣ ಅವರನ್ನು ಗೌರವಿಸುತ್ತಿರುವುದಾಗಿ ಹೇಳಿದರು.
ಸಂಪತ್ತಿನಿಂದ ಯಾರೂ ದೊಡ್ಡವರಲ್ಲ, ಸ್ವಯಂ ಕೃಷಿಯಿಂದ ಪಡೆಯುವ ಸ್ಥಾನ-ಮಾನ ದೊಡ್ಡದು, ಇದಕ್ಕೆ ಕಿಮ್ಮತ್ತು ಇದೆ. ಕೇವರು ಏನೂ ಸಾಧನೆ ಮಾಡದಿದ್ದರೂ ಸನ್ಮಾನಕ್ಕೆ ಅರ್ಜಿ ಹಾಕಿಕೊಳ್ಳುತ್ತಾರೆ, ಅಂತಹವರಿಗೆ ಸನ್ಮಾನ, ಪ್ರಶಸ್ತಿ ನೀಡುವುದಕ್ಕಿಂತ ವೃತ್ತಿ ಜೀವನದಲ್ಲಿ ಗುರುತರವಾದ ಸಾಧನೆ ಹಾಗೂ ಸೇವೆ ಸಲ್ಲಿಸುವವರನ್ನು ನಾವೇ ಗುರುತಿಸಿ ಗೌರವ ನೀಡಬೇಕೆಂಬ ಉದ್ದೇಶದಿಂದ ವೆಂಕಟನಾರಾಯಣ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಗುರುಗಳ ಇಚ್ಚೆಯನ್ನು ಪೂರೈಸಲಾಗಿದೆ ಎಂದರು.
ಧರ್ಮಪೀಠಗಳು ಧರ್ಮಕ್ಕೆ ಮಾನ್ಯತೆ ಕೊಡಬೇಕು, ಗುರುಗಳು ತೋರಿದ ಮಾರ್ಗದಲ್ಲಿ ಒಳ್ಳೆಯ ಕೆಲಸ ಮಾಡುವುದು ಮಠಗಳ ಕೆಲಸ.
ಆದರೆ, ಇಂದು ಕೆಲ ಮಠಗಳು ಧರ್ಮದ ಮುಖವಾಡ ಧರಿಸಿ ಕೆಟ್ಟದ್ದು ಮಾಡುವ ಮೂಲಕ ಮಠಗಳ ಮೇಲೆ ಜನರಿಗೆ ಇರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ತರುತ್ತಿದ್ದಾರೆ, ಪಾಪಗಳನ್ನು ಮಾಡಿ ಜೈಲಿಗೆ ಹೋಗಿ ಬರುತ್ತಿದ್ದಾರೆಂದು ಯಾವುದೇ ಮಠದ ಹೆಸರು ಹೇಳದೆ ಬೇಸರ ವ್ಯಕ್ತಪಡಿಸಿದರು.
ಆನಂದ ಎಂದು ಹೆಸರಿಟ್ಟುಕೊಂಡು ಕೆಟ್ಟ ಕೆಲಸ ಮಾಡಿದರೆ ಮಠಗಳ ಮೇಲೆ ಇರುವ ಗೌರವ ಹಾಳಾಗುತ್ತದೆ, ಮಠಗಳಿಗೆ ಇರುವ ಕಿಮ್ಮತ್ತು ಕಡಿಮೆ ಆಗುತ್ತದೆ, ಮಠಗಳು ಯಾವುದೇ ಇರಲಿ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ, ವಲ್ಲಭಾಚಾಯರ ಆದರ್ಶಗಳನ್ನು ಪಾಲಿಸುವುದು ಸೂಕ್ತ, ಸಮಾಜದ ಬದಲಾವಣೆ ಹಾಗೂ ಅಭಿವೃದ್ಧಿಯ ವಿಚಾರದಲ್ಲಿ ಧರ್ಮ ಪೀಠಗಳು ಎಚ್ಚರ ತಪ್ಪಿದರೆ ಕೆಟ್ಟ ಹೆಸರು ಬರುತ್ತದೆ, ನಮ್ಮ ಮಠದ ಆಶಯಗಳು ಉತ್ತಮ ಸಮಾಜ ನಿರ್ಮಾಣ ಹಾಗೂ ಒಳತಿಗಾಗಿ ಶ್ರಮಿಸುವುದಾಗಿದೆ ಎಂದು ತಿಳಿಸಿದರು.
ಐಶ್ವರ್ಯದಿಂದ ಮಠಕ್ಕೆ ಹೆಸರು ಬಾರಬಾರದು, ಒಳ್ಳೆಯ ಕೆಲಸಗಳು ಹೆಸರು ತಂದುಕೊಡಬೇಕೆಂದ ವಿದ್ಯಾಸಾಗರ ಮಾಧವ ತೀರ್ಥರು, ನಮ್ಮ ಮಠ ಪ್ರಸನ್ನಶೂರ ಮಾಧವ ತೀರ್ಥರ ಪರಿಶ್ರಮ, ಸಾಧನೆ ಹಾಗೂ ಸೇವಾ ಕಾರ್ಯಗಳ ಮೂಲಕ ಬೆಳೆಯುತ್ತಿದೆಯೇ ಹೊರತು ಐಶ್ವರ್ಯದಿಂದ ಅಲ್ಲವೆಂದು ಪ್ರತಿಪಾದಿಸಿದರು.
ಪತ್ರಕರ್ತ ವೆಂಕಟನಾರಾಯಣ ಅವರಿಗೆ ಗುರುಗಳ ಸಂಸ್ಮರಣೆಯ ನೆನಪಿನಲ್ಲಿ ಪತ್ರಿಕೋಧ್ಯಮ ಭಾಸ್ಕರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಟನಾರಾಯಣ ಅವರು, ಕನ್ನಡ ಪ್ರಭ ಸೇರಿದಂತೆ ವಿವಿಧ ರಾಜ್ಯ ಮಟ್ಟದ ಪತ್ರಿಕೆಯಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿನ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶ್ರೀ ವಿದ್ಯಾಸಾಗರ ಮಾಧವ ತೀರ್ಥರು ಬರೆದಿರುವ ದಾಸರ ಪದಗಳನ್ನು ಗಾಯನ ರೂಪದಲ್ಲಿ ಹಾಡಿರುವ ಕಿರಣ್ಮಯಿ ಧ್ವನಿಸುರಳಿಯನ್ನು ವೆಂಕಟನಾರಾಯಣ ಬಿಡುಗಡೆ ಮಾಡಿದರು.
ಮಠದ ಭಕ್ತರಾದ ಕಂಬಾಲೂರು ಸಮೀರಾಚಾರ್ ಸ್ವಾಗತಿಸಿ, ನಿರೂಪಿಸಿದರು, ಪ್ರಹ್ಲಾದರಾವ್, ಸುರೇಂದ್ರ ಹಾಗೂ ಆನಂದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

