ಕೋಲಾರ

ಕ್ಯಾಲೆಂಡರ್ ಜೊತೆಗೆ ಜನರ ಬದುಕೂ ಬದಲಾಗಬೇಕು..

Published On :

ಪಾ.ಶ್ರೀ. ಅನಂತರಾಮ್
ಕೋಲಾರ: ಪ್ರತಿವರ್ಷದಂತೆ ಹೊಸ ವರ್ಷಕ್ಕೆ ಸ್ವಾಗತಿಸುವ, ಸಂಭ್ರಮಿಸುವ ದಿನವಿಂದು.
ಕ್ಯಾಲೆಂಡರ್ ಬದಲಾದರೆ ಸಾಲದು, ಜನರ ಬದುಕು ಹಸನಾಗಬೇಕು. ಈ ನಿಟ್ಟಿನಲ್ಲಿ ಪ್ರಜೆಗಳು, ಪ್ರಭುಗಳು, ಪರಿಚಾರಕರು ಅಂದರೆ ಅಧಿಕಾರಿಶಾಹಿಗಳು ಸಂಘಟಿತರಾಗಿ ಒಟ್ಟಾರೆ ಮಾನವ ಕುಲದ ಉದ್ಧಾರಕ್ಕೆ ಪ್ರಯತ್ನಿಸುತ್ತಿದ್ದಾರೆಯೇ ಎಂಬುದು ಮನನ ಮಾಡಿಕೊಳ್ಳುವುದು ಒಳ್ಳೆಯದು. ಈ ಕೆಲಸ ಆಗದಿದ್ದರೆ ಹೊಸ ವರ್ಷ ಎಂಬುದು ಕೇವಲ ಮೋಜು-ಮಸ್ತಿನ ಕೂಟವಾಗುತ್ತದೆ ಅಷ್ಟೆ.
ಇಡೀ ಕರ್ನಾಟಕದ ವ್ಯವಸ್ಥೆ ಬಗ್ಗೆ ಚಿಂಥನ-ಮಂಥನ ಮಾಡುವುದು ರಾಜಧಾನಿಯಲ್ಲಿ ಕುಳಿತ ಪ್ರಜಾ ಪ್ರಭುಗಳ ಕರ್ತವ್ಯ. ಕೋಲಾರ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಸುಮಾರು 13 ಲಕ್ಷ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ, ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದಾರೆಯೇ, ಈ ವ್ಯಕ್ತಿಗಳನ್ನು ನಮ್ಮ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಜನರು ತಮ್ಮ ಹಕ್ಕು-ಬಾಧ್ಯತೆ, ಕರ್ತವ್ಯಗಳನ್ನು ಸರಿಯಾಗಿ ನಿಬಾಯಿಸುತ್ತಿದ್ದಾರೆಯೇ ಎಂಬುದು ಸಹ ಮಂಥನವಾದಲ್ಲಿ ಮಾತ್ರ ನಿಜವಾದ ಹೊಸತನ ಕಾಣಲು ಸಾಧ್ಯವಾಗುತ್ತದೆ.
ಕೋಲಾರ ಜಿಲ್ಲೆ 2008ರಲ್ಲಿ ವಿಭಜನೆಯಾದ ಬಳಿಕ ಪ್ರತ್ಯೇಕ ಅವಿಭಜಿತ ಚಿಕ್ಕಬಳ್ಳಾಪುರ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಸಾಧಿಸಿ ಪ್ರಗತಿ ಪಥದತ್ತ ಮುನ್ನುಗ್ಗುತ್ತಿದೆ. ಆದರೆ, ಕೋಲಾರ ಜಿಲ್ಲೆ ಮಾತ್ರ ದೊಡ್ಡ ಹಳ್ಳಿಯಂತೆ ಕಾಣುತ್ತಿದ್ದು ಈ ಹಿಂದಿನ ತಪ್ಪುಗಳು ಮುಂದುವರೆದಲ್ಲಿ ಎಷ್ಟೇ ಕ್ಯಾಲೆಂಡರ್ಗಳು ಬದಲಾದರು ಬಡವರ, ಶೋಷಿತರ ಜೀವನ ಮಟ್ಟ ಸುಧಾರಣೆ ಆಗುವುದು ಕಷ್ಟ.
ಜೀವಂತ ಶವ: ಕೋಲಾರ ಜಿಲ್ಲೆಯ ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತಿವರ್ಷ ಜಿಲ್ಲೆಗೆ ನೂರಾರು ಕೋಟಿ ರು. ಸರ್ಕಾರದಿಂದ ಬಿಡುಗಡೆಯಾದಿ ಖರ್ಚು ಆಗುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅಂತರ್ಜಲ ಕುಸಿದಿದ್ದರೂ ಭೂಗರ್ಭವನ್ನು ಬಗೆದು ಜನರಿಗೆ ಫ್ಲೋರೈಡ್ ನೀರನ್ನು ಕೊಟ್ಟು ಜೀವಂತ ಶವಗಳನ್ನಾಗಿ ಮಾಡಲಾಗುತ್ತಿದೆಯೇ ಹೊರತು ಕೆರೆಗಳ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿಗಾಗಿ ರಚನಾತ್ಮಕ ಯೋಜನೆಗಳನ್ನು ಜಾರಿ ತರಲಾಗುತ್ತಿಲ್ಲ.
2004ರಿಂದಲೂ ಡಾ. ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿ ಬಗ್ಗೆ ಹೇಳಿಕೆಗಳು, ಪ್ರತಿ ಹೇಳಿಕೆಗಳು ಜನರ ಕವಿಯ ಮುಂದೆ ಝೆಂಖರಿಸುತ್ತಿದೆಯೇ ಹೊರತು ಜನಪ್ರತಿನಿಧಿಗಳು ಸರ್ಕಾರದ ಜುಟ್ಟು ಹಿಡಿದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುವ ಧೈರ್ಯ ತೋರುತ್ತಿಲ್ಲ, ಚುನಾವಣೆ ಸಂದರ್ಭದಲ್ಲಿ ಪಡೆಯುವ ಟಿಪ್ಸ್, ಗಿಫ್ಟ್ಗಳಿಂದಾಗಿ ಮತದಾರರು ಸಹ ಅಸಹಾಯಕರಂತೆ ವರ್ತಿಸುತ್ತಿರುವುದರಿಂದ ರಾಜಕಾರಣಿಗಳು ಜನತೆಯ ದೌರ್ಬಲ್ಯವನ್ನು ನಯವಾಗಿ ವಿನಿಯೋಗಿಸಿಕೊಂಡು ಟ್ಯಾಂಕರ್ ಮಾಫಿಯಾ, ಮರಳು ದಂದೆ, ಕಲ್ಲು ಗಣಿ, ರೀಯಲ್ ಎಸ್ಟೆಟ್ ವ್ಯವಹಾರಗಳ ಮೂಲಕ ಜನರ ದನಿಪಟ್ಟಿಗೆಗೆ ಬೀಗ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಒಂದೊಂದು ಸರ್ಕಾರ ಬಂದಾಗ ಒಂದೊಂದು ಯೋಜನೆ ಪ್ರಕಟಿಸಿ ಸಕಾಲಕ್ಕೆ ಯೋಜನೆ ಕೈಗೆತ್ತಿಕೊಂಡು ಜಿಲ್ಲೆಯನ್ನು ಉಳಿಸಲು ಪ್ರಯತ್ನಿಸದೆ ನೀರಿನ ರಾಜಕಾರಣ ಮಾಡುತ್ತಿರುವುದರಿಂದ ಜಿಲ್ಲೆಯ ಜನತೆ ಫ್ಲೋರೈಡ್ ನೀರು ಕುಡಿದು ಅಂಗವಿಕಲರಾಗುತ್ತಿದ್ದಾರೆ, ಮೂಳೆ ಕ್ಯಾನ್ಸರ್ನಿಂದ ಬಳುತ್ತಿದ್ದಾರೆ, ಚರ್ಮ ರೋಗದಿಂದ ಸೌಂದರ್ಯಕ್ಕೆ ಧಕ್ಕೆ ತಂದುಕೊಳ್ಳುತ್ತಿದ್ದಾರೆ.
ಜನತೆ ನಮಗೆ ಇಂತಹದ್ದೇ ಯೋಜನೆಯಿಂದ ನೀರು ಕೊಡಿ ಎಂದು ಅಂಗಲಾಚುತ್ತಿಲ್ಲ, ಪ್ರತಿನಿತ್ಯ ಒಬ್ಬ ವ್ಯಕ್ತಿಗೆ ಕನಿಷ್ಟ 50 ರಿಂದ 60 ಲೀಟರ್ ಶುದ್ಧವಾದ ನೀರು ಕೊಡಿ ಎಂದು ಬೇಡುತ್ತಿದ್ದಾರೆ, ದೆಹಲಿ ಸರ್ಕಾರದಂತೆ 700 ಲೀಟರ್ ಉಚಿತ ನೀರು ಕೊಡಲಾಗದಿದ್ದರೂ ಕೋಲಾರ ಜನರಿಗೆ ದಿನಕ್ಕೆ 300 ರಿಂದ 350 ಲೀಟರ್ ನೀರು ಕೊಟ್ಟರೆ ಜನಪ್ರತಿನಿಧಿಗಳನ್ನು, ಸರ್ಕಾರವನ್ನು  ಹೆಗಲ ಮೇಲೆ ಹೊತ್ತು ದಿಬ್ಬಣ ಮಾಡುವುದಕ್ಕೆ ಸಿದ್ಧರಿದ್ದಾರೆ. ಆದರೆ ಇದಕ್ಕೆ ಬೇಕಾಗಿರುವುದು ಇಚ್ಚಾಶಕ್ತಿಯ ಆಡಳಿತದಿಂದ ಮಾತ್ರ ಸಾಧ್ಯ.
ಪರಮಶಿವಯ್ಯ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಲು ಕಷ್ಟವೆಂಬ ಕಾರಣದಿಂದ ಎತ್ತಿನ ಹೊಳೆ ಯೋಜನೆ ಜಾರಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ವಿಚಾರದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು ಒಂದಿಷ್ಟು ಆಸಕ್ತಿ ತೋರಿದ್ದಾರೆ. ಸದ್ಯಕ್ಕೆ ಯಾವುದೋ ಒಂದು ಯೋಜನೆಯಿಂದ ನೀರು ಸಿಗಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಯೋಜನೆ ಅದಷ್ಟು ಬೇಗನೆ ಜಾರಿಗೆ ಬರದಿದ್ದರೆ ಲೋಕಸಭಾ ಚುನಾವಣೆ ನೆಪದಲ್ಲಿ ಇನ್ನಷ್ಟು ದಿನಗಳು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಚುನಾವಣೆ ಫಲಿತಾಂಶ ಏರುಪೇರು ಆದಲ್ಲಿ ಆಡಳಿತ ನಡೆಸುವ ಜನರ ಮನಸ್ಥಿತಿ ಬದಲಾಗಬಹುದು, ಇಷ್ಟು ದಿನ ಜಾಣ ಕುರುಡರಂತೆ ವರ್ತಿಸಿರುವ ಆಡಳಿತ ಯಂತ್ರ ಹೊಸ ವರ್ಷದಲ್ಲಿಯಾದರೂ ಚುರುಕಿನಿಂದ, ಜನರ ಮೇಲಿನ ಕಾಳಿಜಿಯಿಂದ ವೇಗವಾಗಿ ಕೆಲಸ ಮಾಡಿಸದಿದ್ದರೆ ನೀರಿಗಾಗಿ ಜನತೆಯ ಸಹನೆ ಕಳಚಿಕೊಂಡು ದೊಡ್ಡ ಯುದ್ಧವಾಗುವ ಸಾಧ್ಯತೆಗಳಿರುವುದರಿಂದ ಸರ್ಕಾರ ನಿಧಾನ ಮಾಡದೆ ಯೋಜನೆ ಜಾರಿಗೆ ಸಂಕಲ್ಪ ಮಾಡಿದಾಗ ಮಾತ್ರ ಕೋಲಾರ ಜಿಲ್ಲೆಯ ಜನರಿಗೆ ಹೊಸ ವರ್ಷದ ಆಶಯಗಳು ಸಕಾರಗೊಳಿಸಿದಂತಾಗುತ್ತದೆ.
ಎತ್ತಿನ ಹೊಳೆ: ಎತ್ತಿನ ಹೊಳೆ ಯೋಜನೆಯ ಜೊತೆಗೆ ವರ್ತೂರ್ ಕೆರೆ ನೀರು ಬಳಕೆ, ಸಮುದ್ರ ಪಾಲು ಆಗುತ್ತಿರುವ ನೀರಿನ ಸದ್ಬಳಕೆ ಹಾಗೂ ಕೆರೆಗಳ ಪುನಶ್ಚೇತನ, ಕಲ್ಯಾಣಿಗಳ ಸಮಗ್ರ ಅಭಿವೃದ್ಧಿ, ಸುಮಾರು 1500 ಹೆಚ್ಚು ಕೆರೆಗಳ ಪುನಶ್ಚೇತನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರೋಪಾದಿಯಲ್ಲಿ ಅನುದಾನ ಬಿಡುಗಡೆ ಮಾಡಿ ಲೋಕಸಭಾ ಚುನಾವಣೆಗೆ ಮುನ್ನ ಕಾಮಗಾರಿಗಳು ಆರಂಭವಾಗದಿದ್ದರೆ ಶಾಶ್ವತ ನೀರಾವರಿ ಎಂಬುದು ಮರೀಚಿಕೆ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ವಸತಿ ಯೋಜನೆ ಅನುಷ್ಠಾನದಲ್ಲೂ ಜಿಲ್ಲೆಯ ಪ್ರಗತಿ ತೃಪ್ತಿದಾಯಕವಾಗಿಲ್ಲ. ಬಸವ ವಸತಿ ಯೋಜನೆಯಡಿ 2010-11ನೇ ಸಾಲಿನಿಂದ ಈವರೆಗೆ 45014 ಮನೆಗಳು ನಿಗದಿಯಾಗಿ 36795 ಮನೆಗಳು ಹಂಚಿಕೆ ಮಾಡಲು ನಿರ್ಧರಿಸಲಾಗಿತ್ತು, ಈ ಪೈಕಿ 13283 ಮನೆಗಳು ಕಾರಣಾಂತರಗಳಿಂದ ರದ್ದು ಆಗಿದ್ದು 20392 ಮನೆಗಳು ಹಂಚಿಕೆ ಮಾಡಬೇಕಾಗಿತ್ತಾದರೂ 14890 ಮನೆಗಳು ವಿವಿಧ ಹಂತದಲ್ಲಿರುವುದರಿಂದ ಸರ್ಕಾರದ ಸವಲತ್ತು ನಿಗದಿತ ವೇಳೆಗೆ ಸಿಗದಂತಾಗಿದೆ.
2013-14ನೇ ಸಾಲಿನಲ್ಲಿ ಗುರಿ ತಲುಪಲು ಸಾಧ್ಯವೇ ಆಗಿಲ್ಲ. ಇದೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆಯಲ್ಲಿ 3504 ಮನೆಗಳು ನಿಗದಿಯಾಗಿದ್ದರೂ ಮನೆಗಳ ನಿರ್ಮಾಣವಾಗಿಲ್ಲ.2012-13ನೇ ಸಾಲಿನಲ್ಲಿ 2753 ಮನೆಗಳ ಪೈಕಿ 651 ರದ್ದು ಆಗಿದ್ದು 2010 ಮನೆಗಳಲ್ಲಿ 1433 ಮನೆಗಳು ವಿವಿಧ ಹಂತದಲ್ಲಿದೆ. 2011-12ನೇ ಸಾಲಿನಲ್ಲಿ ಮಂಜೂರಾದ ಮನೆಗಳು ಸಹ ಪೂರ್ಣಗೊಂಡಿಲ್ಲ. 2279 ಮನೆಗಳ ಪೈಕಿ 978 ಮನೆಗಳು ವಿವಿಧ ಹಂತದಲ್ಲಿದೆ. 2005ರಿಂದ 2010ನೇ ಸಾಲಿನಲ್ಲೂ ಇಂದಿರಾ ಆವಾಸ್ ಮನೆಗಳ ನಿರ್ಮಾಣದಲ್ಲಿ ನಿರೀಕ್ಷಿತ ಗುರಿ ಸಾಧನೆ ಆಗಿದಿರುವುದರಿಂದ ಜಿಲ್ಲಾ ಆಡಳಿತವು ಹೊಸ ವರ್ಷದಲ್ಲಾದರೂ ವಸತಿ ಹೀನರ ಪಾಲಿಗೆ ಆಶ್ರಯದಾತರಾಗಬೇಕಾಗಿದೆ.
ಶೌಚದ ಜಾಗೃತಿಗೆ ವಿಫಲ: ಜಿಲ್ಲೆಯಲ್ಲಿ ಕಳೆದ ವರ್ಷ 50 ಸಾವಿರಕ್ಕೂ ಹೆಚ್ಚು ಶೌಚಾಲಯಗಳು ನಿರ್ಮಿಸಬೇಕಾಗಿತ್ತು, ಗ್ರಾಪಂ ಅಧಿಕಾರಿಗಳ ಅಸಡ್ಡೆ ಮತ್ತು ಜನತೆಯಲ್ಲಿ ಸ್ವಂತ ಶೌಚಾಲಯಗಳ ಬಗ್ಗೆ ಅರಿವು ಮೂಡಿಸಲು ವಿಫಲವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಯಲು ಮಲ-ಮೂತ್ರ ವಿಸರ್ಜನೆ ಮುಂದುವರೆಯುವಂತಾಗಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳು ಜನತೆಯ ಮಾನ ಹಾಗೂ ಆರೋಗ್ಯ ಕಾಪಾಡಲು ಸಂಕಲ್ಪದೊಂದಿಗೆ ಕೆಲಸ ಮಾಡಬೇಕಾಗಿದೆ.
ಕೋಲಾರ-ಚಿಕ್ಕಬಳ್ಳಾಪುರ ರೈಲು ಓಡುತ್ತಿದೆ. ರೈತರು, ವಿದ್ಯಾರ್ಥಿಗಳು, ಕಾರ್ಮಿಕ ವರ್ಗಕ್ಕೆ ಅನುಕೂಲವಾಗುವ ವೇಳಾಪಟ್ಟಿ ಅಗತ್ಯ, ಜಿಲ್ಲೆಗೆ ಸಾಕಷ್ಟು ಕಾರ್ಖಾನೆಗಳು ಬರುತ್ತಿವೆ, ಕೌಶಲ್ಯ ತರಬೇತಿ ನೀಡುವ ಮೂಲಕ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದು ಜಿಲ್ಲಾ ಆಡಳಿತದ ಕರ್ತವ್ಯವಾಗಿದೆ. ಉದ್ಯೋಗ ಮೇಳದಲ್ಲಿ ಕೇವಲ 1560 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದ್ದು ಇದರಲ್ಲೂ ಅನೇಕರು ಇನ್ನು ಕೆಲಸಕ್ಕೆ ಹಾಜರಾಗಿಲ್ಲ, ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಹಾಜರಾಗಿದ್ದ ಬೃಹತ್ ಉದ್ಯೋಗ ಮೇಳ ನಿರೀಕ್ಷೆಯಂತೆ ಯಶಸ್ಸು ಕಂಡಿಲ್ಲ, ಮುಂದೆ ತಾಲೂಕು ಮಟ್ಟದಲ್ಲಿ ಮೇಳಗಳನ್ನು ನಡೆಸಿ ಉತ್ತಮ ಅವಕಾಶಗಳು ಕಲ್ಪಿಸುವುದು ಸಹ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಹಾಗೂ ಅಧಿಕಾರಗಳ ಕರ್ತವ್ಯವಾಗಿದ್ದು, 2013ರಲ್ಲಿನ ಲೋಪ-ತಾಪಗಳನ್ನು ವಿಮರ್ಷೆ ಮಾಡಿ, ಆತ್ಮಾವಲೋಕನೆಯೊಂದಿಗೆ ಹೊರ ಮನ್ವಂತರಕ್ಕೆ ಸಾಗೋಣ ಎಂಬುದೇ ಈ ವರ್ಷದ ಸಂಕಲ್ಪವಾದಲ್ಲಿ ಮಾತ್ರ ಹೊಸ ಕ್ಯಾಲೆಂಡರ್ಗೆ ಕಿಮ್ಮತ್ತು ಸಿಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.