ಮೂವರು ನೌಕರರ ಸಸ್ಪೆಂಡ್
ಕೋಲಾರ: ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ವಿದ್ಯಾರ್ಥಿ ನಿಲಯಗಳ ಅಡುಗೆ ಸಿಬ್ಬಂದಿ ಹೆಸರಿನಲ್ಲಿ ಲಕ್ಷಾಂತರ ರು.ಗುಳುಂ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಚೆಕ್‌ಗಳ ಸೃಷ್ಟಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲು ಆಗಿರುವ ಆರೋಪದ ಮೇಲೆ ಜಿಲ್ಲಾ ಖಜಾನೆಯ ಮೂವರು ಗುಮಾಸ್ತರನ್ನು ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಜಿಲ್ಲಾ ಖಜಾನೆಯಲ್ಲಿ ಕೆಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಮಹಮ್ಮದ್ ಶಫಿ, ಸುಲ್ತಾನ್ ಬೇಗಾಗ್ ಹಾಗೂ ಮಹಮ್ಮದ್ ಖಾನ್ ಎಂಬುವರೇ ಅಮಾನತುಗೊಂಡ ಸಿಬ್ಬಂದಿ.
ಕಳೆದ ನವೆಂಬರ್ 23 ರಂದು ಜಿಲ್ಲಾ ಲೋಕಾಯುಕ್ತ ಪೊಲೀಸರು ತಮಗೆ ಸಿಕ್ಕ ಖಚಿತ ಮಾಹಿತಿ ಆಧರಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ನಚಿಕೇತನ ವಿದ್ಯಾರ್ಥಿ ನಿಲಯದ ವಾರ್ಡನ್, ಡಿ ಗ್ರೂಪ್ ನೌಕರ, ಜಿಲ್ಲಾ ಖಜಾನೆ ದ್ವಿತೀಯ ದರ್ಜೆ ಗುಮಾಸ್ತ ಹಾಗೂ ಚಿಂತಾಮಣಿಯ ವೇದಾ ಸೌಹಾರ್ದ ಸಹಕಾರ ಸೊಸೈಟಿಯ ಅಧ್ಯಕ್ಷ ಸೇರಿದಂತೆ ಐವರ ಮನೆಗಳ ಮೇಲೆ ದಾಳಿ ಮಾಡಿ ಸಮಾಜ ಕಲ್ಯಾಣ ಇಲಾಖೆಯ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಿದ್ದರು.
ಲೋಕಾಯುಕ್ತರ ವರದಿ ಆಧರಿಸಿ ಅಮಾನತು: ಈ ಘಟನೆ ನಂತರ ಆರೋಪಿಗಳಲ್ಲಿ ಒಬ್ಬರಾದ ಜಿಲ್ಲಾ ಖಜಾನೆಯ ಗುಮಾಸ್ತ ವೆಂಕಟೇಶ್ ಎಂಬುವರ ಬೆದರಿಕೆಯಿಂದಾಗಿ ಖಜಾನೆಯ ಸಿಬ್ಬಂದಿ ಮುಳಬಾಗಿಲು ತಾಲೂಕಿನ ದೊಡ್ಡಗಾನಹಳ್ಳಿಯ ಹರಿಕೃಷ್ಣದನಂ ಎಂಬುವರು ಡಿ.6 ರಂದು ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದಾಗಿ ಲೋಕಾಯುಕ್ತ ಪೊಲೀಸರು ಮತ್ತೆ ಜಿಲ್ಲಾ ಖಜಾನೆಗೆ ಭೇಟಿ ನೀಡಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ಹಣ ದುರುಪಯೋಗ ಪ್ರಕರಣದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಫರೂಕಾ ಸುಲ್ತಾನ್, ನಚಿಕೇತನ ವಿದ್ಯಾರ್ಥಿ ನಿಲಯದ ವಾರ್ಡನ್ ಆಗಿದ್ದ ಅಜೀಂ, 'ಡಿ' ಗ್ರೂಪ್ ನೌಕರ ಮಂಜುನಾಥ್, ಜಿಲ್ಲಾ ಖಜಾನೆಯ ದ್ವಿತೀಯ ದರ್ಜೆ ಗುಮಾಸ್ತ ಎನ್. ವೆಂಕಟೇಶ್ ಹಾಗೂ ಚಿಂತಾಮಣಿಯ ವೇದಾ ಸೌಹಾರ್ದ ಸಹಕಾರ ಸೊಸೈಟಿಯ ಅಧ್ಯಕ್ಷ ವೇಣುಗೋಪಾಲರೆಡ್ಡಿ ಅವರು ಮಾತ್ರವಲ್ಲದೆ ನಕಲಿ ಚೆಕ್ ಸಿದ್ಧಪಡಿಸಿರುವ ಕಾರ್ಯದಲ್ಲಿ ಜಿಲ್ಲಾ ಖಜಾನೆಯ ಸಿಬ್ಬಂದಿ ಮಹಮ್ಮದ್ ಶಫಿ, ಸುಲ್ತಾನ್ ಬೇಗ್ ಹಾಗೂ ಮಹಮ್ಮದ್ ಖಾನ್ ಅವರ ಕೈವಾಡವಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಈ ಮೂವರನ್ನು ಅಮಾನತ್ತಿನಲ್ಲಿಟ್ಟು ಹೆಚ್ಚಿನ ವಿಚಾರಣೆಗೆ ಆದೇಶ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

