ಕೋಲಾರ

ರೈತರಿಗೆ ಮಾಹಿತಿ ನೀಡಲು ಸಭೆ: ಸ್ಪಷ್ಟನೆ

Published On :

ಗೌರಿಬಿದನೂರು: ಪಟ್ಟಣದ ಸಮೀಪದ ರೇಮಂಡ್ಸ್ ಕಾರ್ಖಾನೆ ಬಳಿಯ ಕೋಳಿಂಫಾರಂ ಬಳಿಯಿಂದ ಎಪಿಎಂಸಿ ಯಾರ್ಡ್ ಮೂಲಕ ಹಿರೇಬಿದನೂರುವರೆಗೆ 7ಕಿಮೀ ಬೈಪಾಸ್ ಬೈಪಾಸ್ ರಸ್ತೆಗೆ ಸುಮಾರು 120 ಅಡಿಗಳಷ್ಟು ವಿಸ್ತಾರಕ್ಕಾಗಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಯ ಪ್ರತಿನಿಧಿ ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ರೈತರಿಗೆ ನೀಡಲಾಗುವ ಪರಿಹಾರವು ವಿಶ್ವ ಬ್ಯಾಂಕ್ ಯೋಜನೆಯಾಗಿರುವುದರಿಂದ ಜಿಲ್ಲಾಧಿಕಾರಿಯನ್ನೊಳಗೊಂಡ ಸಮಿತಿ ಅಥವಾ ಸ್ವಯಂ ಸೇವಾಸಂಸ್ಥೆಯ ಮೂಲಕ ರೈತರ ಸಮಸ್ಯೆಗಳನ್ನು ಚರ್ಚಿಸಿ, ಸೂಕ್ತ ಹಾಗೂ ಸಮರ್ಪಕ ಪರಿಹಾರ ನೀಡಲಿದೆ ಎಂದು ತಿಳಿಸಿದರು.
ಗೌರಿಬಿದನೂರು ಪಟ್ಟಣದ ಮಾನಸ ಆಸ್ಪತ್ರೆಯ ಬಳಿ ಇರುವ ಪುರಸಭೆ ಸಮುದಾಯ ಭವನದಲ್ಲಿ ನಡೆದ ರೈತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರೈತರ ಸಭೆಯು ಯಾವುದೇ ರೀತಿಯ ಭೂಸ್ವಾಧೀನಕ್ಕಾಗಿ ಅಲ್ಲ. ನಾವು ಕೇವಲ ರೈತರ ಅನುಮಾನ ಪರಿಹರಿಸಲು ಕರೆದಿರುವ ಸಭೆ. ಸ್ವಾಧೀನ ಪ್ರಕ್ರಿಯೆಗೆ ಮುನ್ನ ರೈತರಿಗೆ ಸಂಪೂರ್ಣ ಮಾಹಿತಿ ನೀಡಿ ಮನವರಿಕೆ ಮಾಡಬೇಕಿರುವುದರಿಂದ ಮಾಹಿತಿ ನೀಡುತ್ತಿದ್ದೇವೆ ಎಂದರು.
ಜಿಲ್ಲಾಧಿಕಾರಿಗಳನ್ನೊಳಗೊಂಡ ಸಮಿತಿಯು ನೀಡುವ ಶಿಫಾರಸ್ಸಿನ ಬೆಲೆಯನ್ನು ರೈತರು ಒಪ್ಪಿದಲ್ಲಿ ತಕ್ಷಣವೇ ನೇರವಾಗಿ ಜಿಲ್ಲಾಧಿಕಾರಿಗಳಿಂದ ಪರಿಹಾರ ನೀಡುತ್ತೇವೆ. ಒಪ್ಪದಿದ್ದಲ್ಲಿ ಶಾಸಕರು,   ಜಿಲ್ಲಾಧಿಕಾರಿ, ತಹಸೀಲ್ದಾರ್, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ  ಸ್ವಯಂ ಸೇವಾಸಂಸ್ಥೆಯನ್ನೊಳಗೊಂಡ ಸಮಿತಿ ಮಾಡಿ ಅವರಿಂದ ರೈತರ ಸಭೆ ನಡೆಸಿ ತಂದ ವರದಿ ಆಧಾರದ ಮೇಲೆ ಪರಿಹಾರ ನೀಡುತ್ತೇವೆ. ವಿಶ್ವಬ್ಯಾಂಕ್ ನೆರವಾಗಿರುವುದರಿಂದ ರೈತರಿಗೆ ಉತ್ತಮ ಪರಿಹಾರ ಸಿಗಲಿದೆ. 20 ವರ್ಷ ಗಮನದಲ್ಲಿಟ್ಟುಕೊಂಡು ಈಗ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ 4ಪಥ ರಸ್ತೆಗೆ ವಿಸ್ತರಿಸಬಹುದಾಗಿದೆ. ಒಟ್ಟು 165 ಕಿಮೀ ರಸ್ತೆ ಅಭಿವೃದ್ಧಿಯಾಗಲಿದೆ ಎಂದರು.
2004- 2005ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಭೂಸ್ವಾಧೀನವಾದಾಗ ಅದಕ್ಕೆ ಪರಿಹಾರವಾಗಿ ಕೇವಲ 1 ವರ್ಷದಲ್ಲಿ ರೈತರ ಮನೆ ಬಾಗಿಲಿಗೆ ಪರಿಹಾರ ನೀಡಿದ್ದೇವೆ. ವರದಿಯ ಆಧಾರದ ಮೇಲೆ ಕನಿಷ್ಠ 15 ಲಕ್ಷದಿಂದ 40ಲಕ್ಷದವರೆಗೂ ಪರಿಹಾರ ಸಿಗಲಿದೆ. ಕೆಲವರಿಗೆ ಬದಲಿ ಜಮೀನನ್ನು ನೀಡುವ ವ್ಯವಸ್ಥೆಯಿದೆ. ಅದಕ್ಕೆ ರೈತರು ಒಪ್ಪಬೇಕು. ಬಡ ರೈತರಿಗೆ ಎರಡೂವರೆ ಗುಂಟೆ ಜಮೀನಿದ್ದರೆ ಅಂತಹ ರೈತರಿಗೆ ಪರಿಹಾರದ ಜೊತೆಗೆ ತಕ್ಷಣವೇ 750 ದಿನಗಳ ದಿನಗೂಲಿ ನೀಡಲಾಗುವುದು ಎಂದರು.
ವಿಲ್ಬರ್ ಮಿತ್ ಸಂಸ್ಥೆ ಅಧಿಕಾರಿ ದಿಲ್‌ಖುಶ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.